ಜೋಧಪುರ್; 1998ರಲ್ಲಿ ಕೃಷ್ಣ ಮೃಗ ಭೇಟಿಯಾಡಿದ ಅಕ್ರಮ ಶಸ್ತ್ರಾಸ್ತ್ರ ಪ್ರಕರಣ ಸಂಬಂಧ ಜೋಧ್ಪುರ ನ್ಯಾಯಾಲಯ ಬುಧವಾರ ಅಂತಿಮ ತೀರ್ಪು ಪ್ರಕಟಿಸಲಿದ್ದು, ಒಂದು ವೇಳೆ ನಟ ಸಲ್ಮಾನ ಖಾನ್ ವಿರುದ್ಧದ ಆರೋಪ ಸಾಬೀತಾಗಿದ್ದೇ ಅದರೆ, 7 ವರ್ಷ ಜೈಲು ಶಿಕ್ಷೆಯಾಗಲಿದೆ.
1998ರಲ್ಲಿ ಹಮ್ ಸಾಥ್ ಸಾಥ್ ಹೈ ಸಿನಿಮಾ ಶೂಟಿಂಗ್ ವೇಳೆ ಜೋಧ್‍ಪುರದ ಬಳಿಯಲ್ಲಿರುವ ಕಂಕಣಿ ಗ್ರಾಮದಲ್ಲಿ ಸಲ್ಮಾನ್ ಖಾನ್ ಕೃಷ್ಣಮೃಗ ಬೇಟೆಯಾಡಿದ್ದರು. ರಕ್ಷಿತ ಅರಣ್ಯ ಪ್ರದೇಶದಲ್ಲಿ ಕೃಷ್ಣಮೃಗ ಬೇಟೆಯಾಡಿದ್ದ ಸಲ್ಮಾನ್ ಖಾನ್ ವಿರುದ್ಧ ಅರಣ್ಯ ಇಲಾಖೆ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿತ್ತು. ಈ ಪ್ರಕರಣಕ್ಕೆ ಸಂಬಂಧಸಿದಂತೆ ಸಲ್ಮಾನ್ ಖಾನ್ 2006 ರ ಏಪ್ರಿಲ್ ಮತ್ತು 2007ರ ಆಗಸ್ಟ್ನಲ್ಲಿ ಎರಡು ಬಾರಿ ಜೈಲುವಾಸ ಅನುಭವಿಸಿದ್ದಾರೆ.
ಜನವರಿ 9 ರಂದು ನಡೆದ ವಿಚಾರಣೆಯ ದಿನದಂದು ಎಲ್ಲಾ ರೀತಿಯ ವಾದ ಹಾಗೂ ಪ್ರತಿವಾದಗಳು ಅಂತ್ಯಗೊಂಡಿತ್ತು. ಈ ಹಿನ್ನಲೆಯಲ್ಲಿ ನ್ಯಾಯಾಲಯವು ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣದ ತೀರ್ಪನ್ನು ಜನವರಿ 18ಕ್ಕೆ ಪ್ರಕಟಿಸುವುದಾಗಿ ತಿಳಿಸಿತ್ತು. ಅಲ್ಲದೆ, ನಟ ಸಲ್ಮಾನ್ ಖಾನ್ ಅವರು ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚನೆ ನೀಡಿತ್ತು.
ಇದರಂತೆ ಇಂದು ನ್ಯಾಯಾಲಯ ಪ್ರಕರಣ ಸಂಬಂಧ ಅಂತಿಮ ತೀರ್ಪವನ್ನು ಪ್ರಕಟಿಸಲಿದ್ದು, ಸಲ್ಮಾನ್ ಗಿಂದು ಅಗ್ನಿ ಪರೀಕ್ಷೆಯ ದಿನವಾಗಲಿದೆ. ಒಂದು ವೇಳೆ ಸಲ್ಮಾನ್ ಅವರ ವಿರುದ್ಧ ತೀರ್ಪು ಪ್ರಕಟಗೊಂಡಿದ್ದೇ ಆದರೆ, 7 ವರ್ಷ ಜೈಲು ಶಿಕ್ಷೆಯನ್ನು ಅನುಭವಿಸಲಿದ್ದಾರೆ.
ನ್ಯಾಯಾಲಯದ ತೀರ್ಪು ಹಿನ್ನಲೆಯಲ್ಲಿ ಸಲ್ಮಾನ್ ಅವರೊಂದಿಗೆ ಒಪ್ಪಂದ ಮಾಡಿಕೊಂಡಿರುವ ನಿರ್ಮಾಪಕರ ತಲೆ ಕೂಡ ಬಿಸಿಯಾಗತೊಡಗಿದೆ. ಸಲ್ಮಾನ್'ಗೆ ಜೈಲು ಶಿಕ್ಷೆಯಾಗಿದ್ದೇ ಆದರೆ, ಇದು ಬಾಲಿವುಡ್ ಮೇಲೆ ಪರಿಣಾಮ ಬೀರಲಿದೆ. ಪ್ರಸಕ್ತ ವರ್ಷದಲ್ಲಿ ಸಲ್ಮಾನ್ ಅವರು ಭಾರೀ ಬಜೆಟ್ ಗಳ ಚಿತ್ರವೆಂದೇ ಹೇಳಲಾಗುತ್ತಿರುವ ಟ್ಯೂಬ್ ಲೈಟ್, ಟೈಗಲ್ ಜಿಂದಾ ಹೇ ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದು, ಈಗಾಗಲೇ ಟ್ಯೂಬ್ ಲೈಟ್ ಚಿತ್ರದ ಚಿತ್ರೀಕರಣ ಅಂತಿಮ ಘಟ್ಟವನ್ನು ತಲುಪಿದೆ. ಇನ್ನು ಟೈಗರ್ ಜಿಂದಾ ಹೇ ಚಿತ್ರದ ಚಿತ್ರೀಕರಣ ಮುಂದುವರೆಯುತ್ತಿದ್ದು, ನ್ಯಾಯಾಲಯದ ತೀರ್ಪು ಹಿನ್ನಲೆಯಲ್ಲಿ ಚಿತ್ರದ ನಿರ್ಮಾಪಕರು ಕಂಗಾಲಾಗುವಂತಹ ಪರಿಸ್ಥಿತಿ ಎದುರಾಗಿದೆ.
ಇನ್ನು ಖಾಸಗಿ ಚಾನೆಲ್ ವೊಂದರ ಬಿಗ್ ಬಾಸ್ ರಿಯಾಲಿಟಿ ಶೋನಲ್ಲೂ ಸಲ್ಮಾನ್ ಅವರು ಕಾರ್ಯನಿರ್ವಹಿಸುತ್ತಿದ್ದು, ಕಾರ್ಯಕ್ರಮ ಈಗಾಗಲೇ ಅಂತಿಮ ಹಂತಕ್ಕೆ ಬಂದು ನಿಂತಿದೆ. ನ್ಯಾಯಾಲಯ ತೀರ್ಪು ನೀಡುತ್ತಿರುವ ಹಿನ್ನಲೆಯಲ್ಲಿ ತಲೆಕೆಡೆಸಿಕೊಂಡಿರುವ ಕಾರ್ಯಕ್ರಮದ ನಿರ್ಮಾಪಕರು ಈಗಾಗಲೇ ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದ್ದಾರೆಂದು ಮೂಲಗಳು ತಿಳಿಸಿವೆ.
ಸಲ್ಮಾನ್ ವಿರುದ್ಧ ಆರೋಪ ಸಾಬೀತಾಗಿದ್ದೇ ಅದರೆ, ಸಲ್ಮಾನ್ ಅವರಿಗೆ ಭಾರೀ ಆರ್ಥಿಕ ನಷ್ಟ ಎದುರಾಗಲಿದ್ದು, ಭವಿಷ್ಯದ ಯೋಜನೆಗಳ ಮೇಲೆ ಇದು ಪರಿಣಾಮ ಬೀರಲಿದೆ. ಪ್ರಸ್ತುತ ಸಲ್ಮಾನ್ ಅವರು, ಸುಜುಕಿ, ಯಾತ್ರಾ, ರೆವಿತಲ್, ಹುಲ್ಸ್ ವೀಲ್, ಮತ್ತು ಡಿಕ್ಸ್ ಸಿ ಸ್ಕಾಟ್ ಗಳಿಗೆ ರಾಯಭಾರಿಯಾಗಿ ಕೆಲಸ ಮಾಡುತ್ತಿದ್ದಾರೆ.