ಪ್ರಧಾನ ಸುದ್ದಿ

ಫೆ.1ರಂದೇ ಸಾಮಾನ್ಯ ಬಜೆಟ್ ಮಂಡನೆ, ಚುನಾವಣೆಯಿರುವ 5 ರಾಜ್ಯಗಳಿಗೆ ಯಾವುದೇ ಘೋಷಣೆ ಇಲ್ಲ

Lingaraj Badiger
ನವದೆಹಲಿ: ಪ್ರತಿಪಕ್ಷಗಳ ವಿರೋಧವನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಕೇಂದ್ರ ಸರ್ಕಾರ, ಫೆಬ್ರವರಿ 1ರಂದೇ 2017-18ನೇ ಸಾಲಿನ ಸಾಮಾನ್ಯ ಬಜೆಟ್ ಮಂಡಿಸುತ್ತೇವೆ. ಆದರೆ ಚುನಾವಣೆ ಇರುವ ಐದು ರಾಜ್ಯಗಳಿಗೆ ಬಜೆಟ್ ನಲ್ಲಿ ಯಾವುದೇ ಯೋಜನೆಗಳನ್ನು ಘೋಷಿಸುವುದಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ಬುಧವಾರ ಸ್ಪಷ್ಟಪಡಿಸಿದೆ.
ಒಂದು ತಿಂಗಳು ಮುಂಚಿತವಾಗಿಯೇ ಬಜೆಟ್ ಮಂಡಿಸುವ ತನ್ನ ನಿರ್ಧಾರವನ್ನು ಆಯೋಗದ ಮುಂದೆ ಸಮರ್ಥಿಸಿಕೊಂಡಿರುವ ಸರ್ಕಾರ, ಏಪ್ರಿಲ್ 1ರಂದು ಹಣಕಾಸು ವರ್ಷದ ಮೊದಲ ದಿನದಿಂದಲೇ ಹೂಡಿಕೆಯ ಪ್ರಕ್ರಿಯೆ ಆರಂಭವಾಗಲಿ ಎಂಬ ಉದ್ದೇಶದಿಂದ ಫೆ.1ರಂದು ಬಜೆಟ್ ಮಂಡಿಸಲಾಗುತ್ತಿದೆ. ಆದರೆ ಈ ವೇಳೆ ವಿಧಾನಸಭಾ ಚುನಾವಣೆ ಎದುರಿಸುತ್ತಿರುವ ಐದು ರಾಜ್ಯಗಳಿಗೆ ಸಂಬಂಧಿಸಿದಂತೆ ಬಜೆಟ್‌ನಲ್ಲಿ ಯಾವುದೇ ನಿರ್ದಿಷ್ಟ ಯೋಜನೆಗಳನ್ನು ಪ್ರಕಟಿಸುವುದಿಲ್ಲ ಎಂದು ಹೇಳಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ,
ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳು ಸನ್ನಿಹಿತವಾಗಿರುವುದರಿಂದ ಕೇಂದ್ರ ಸರ್ಕಾರ ಅದಕ್ಕೆ ಮುನ್ನ ಜನಪ್ರಿಯ ಬಜೆಟ್‌ ಮಂಡಿಸಿ ರಾಜಕೀಯ ಲಾಭ ಪಡೆಯುವ ಸಾಧ್ಯತೆ ಇರುವುದರಿಂದ ಚುನಾವಣೆಯ ಬಳಿಕವೇ ಬಜೆಟ್‌ ಮಂಡಿಸುವಂತೆ ಕಾಂಗ್ರೇಸ್ ಸೇರಿದಂತೆ ಹಲವು ಪ್ರತಿಪಕ್ಷಗಳು ಚುನಾವಣಾ ಆಯೋಗಕ್ಕೆ ಒತ್ತಾಯಿಸಿದ್ದವು.
ಐದು ರಾಜ್ಯಗಳೆಂದರೆ ಇಡೀ ದೇಶವಲ್ಲ; ಆದುದರಿಂದ ಕೇವಲ ಮೂರ್ಖರು ಮಾತ್ರವೇ ಬಜೆಟ್‌ ಮಂಡನೆಯನ್ನು ಮುಂದಕ್ಕೆ ಹಾಕಬೇಕೆಂದು ಹೇಳುತ್ತಾರೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಪ್ರತಿಪಕ್ಷಗಳನ್ನು ಲೇವಡಿ ಮಾಡಿದ್ದರು. 
ಸಾಮಾನ್ಯವಾಗಿ ಪೆ.28ರಂದು ಕೇಂದ್ರ ಬಜೆಟ್‌ ಮಂಡಿಸುವುದು ವಾಡಿಕೆ; ಆದರೆ ಈ ಬಾರಿ ಅದನ್ನು ಫೆ.1ರಂದೇ ಮಂಡಿಸಲು ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಮುಂದಾಗಿದೆ.
SCROLL FOR NEXT