ಪ್ರಧಾನ ಸುದ್ದಿ

ಮರೀನಾ ಬೀಚ್ ನಲ್ಲಿ 3ನೇ ದಿನಕ್ಕೆ ಕಾಲಿಟ್ಟ ಜಲ್ಲಿಕಟ್ಟು ಪ್ರತಿಭಟನೆ!

Srinivasamurthy VN

ಚೆನ್ನೈ: ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟು ಮೇಲೆ ಹೇರಲಾಗಿರುವ ನಿರ್ಭಂಧವನ್ನು ತೆರವುಗೊಳಿಸುವಂತೆ ಕಳೆದ 2 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಚೆನ್ನೈನ ಮರೀನಾ ಬೀಚ್ ಪ್ರತಿಭಟನೆಯ ಕೇಂದ್ರ ಬಿಂದುವಾಗಿ ಮಾರ್ಪಟ್ಟಿದೆ.

ವಿವಿಧ ವಿದ್ಯಾರ್ಥಿ ಸಂಘಟನೆಗಳು ಹಾಗೂ ತಮಿಳುಪರ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ಸತತ ಮೂರನೇ ದಿನವೂ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಈ ವೇಳೆ ಕೇಂದ್ರ ಸರ್ಕಾರ ಹಾಗೂ ಪೇಟಾ ಸಂಘಟನೆಯ ವಿರುದ್ಧ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗುತ್ತಿದ್ದು, ಪೇಟಾ ಸಂಘಟನೆಯನ್ನು ದೇಶದಿಂದ ನಿಷೇಧಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಇನ್ನು ವಿದ್ಯಾರ್ಥಿಗಳ ಹಾಗೂ ತಮಿಳುಪರ ಸಂಘಟನೆಗಳ  ಪ್ರತಿಭಟನೆಗೆ ತಮಿಳುನಟರು ಕೂಡ ಬೆಂಬಲ ವ್ಯಕ್ತಪಡಿಸಿದ್ದು, ತಮಿಳಿನ ಕೆಲ ಕಿರುತೆರೆ ನಟನಟಿಯರೂ ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

ದಿನಗಳೆದಂತೆ ಪ್ರತಿಭಟನೆ ವ್ಯಾಪಕ ಸ್ವರೂಪ ಪಡೆಯುತ್ತಿದ್ದು,  ಮಧುರೈ, ಕೊಯಮತ್ತೂರು, ತಿರುಚಿರಪಲ್ಲಿ ಸೇರಿದಂತೆ ಇಡೀ ತಮಿಳುನಾಡಿನಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ. ಚೆನ್ನೈನ ಮರೀನಾ ಬೀಚ್ ಪ್ರತಿಭಟನೆಯ  ಕೇಂದ್ರ ಬಿಂದುವಾಗಿದ್ದು, ಸುಮಾರು 5 ಸಾವಿರಕ್ಕೂ ಅಧಿಕ ಪ್ರತಿಭಟನಾಕಾರರು ಕಳೆದೆರಡು ದಿನಗಳಿಂದ ಆಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಇಂದು ಸಿಎಂ ಪನ್ನೀರ್ ಸೆಲ್ವಂ, ಪ್ರಧಾನಿ ಭೇಟಿ
ಇನ್ನು ಜಲ್ಲಿಕಟ್ಟು ಕ್ರೀಡೆಯ ಮೇಲಿನ ನಿಷೇಧವನ್ನು ಸುಗ್ರೀವಾಜ್ಞೆ ಹೊರಡಿಸುವ ಮೂಲಕ ತೆರವುಗೊಳಿಸಬೇಕು ಎಂಬ ಮನವಿಯೊಂದಿಗೆ ಸಿಎಂ ಪನ್ನೀರ್ ಸೆಲ್ವಂ ಅವರು ದೆಹಲಿ ಪ್ರಯಾಣ ಬೆಳೆಸಿದ್ದು, ಅಲ್ಲಿ ಪ್ರಧಾನಿ ನರೇಂದ್ರ  ಮೋದಿ ಅವರನ್ನು ಭೇಟಿ ಮಾಡಿ ತಮ್ಮ ಮನವಿ ಸಲ್ಲಿಸಲಿದ್ದಾರೆ. ಅಂತೆಯೇ ರಾಜ್ಯದಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಪ್ರಧಾನಿ ಮೋದಿ ಅವರಿಗೆ ಮನವರಿಕೆ ಮಾಡಿಕೊಡಲಿದ್ದಾರೆ ಎಂದು ತಿಳಿದುಬಂದಿದೆ.

ಈ ನಡುವೆ ದೆಹಲಿಗೆ ತೆರಳುವುದಕ್ಕೂ ಮುನ್ನ ಸಿಎಂ ಪನ್ನೀರ್ ಸೆಲ್ವಂ ಅವರು ತಮ್ಮ ಕ್ಯಾಬಿನೆಟ್ ಸಚಿವರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದು, ಸಭೆಯಲ್ಲಿ ಮಂತ್ರಿಗಳಾದ ಜಯಕುಮಾರ್ ಹಾಗೂ ಪಾಂಡಿರಾಜನ್ ಅವರಿಂದ  ರಾಜ್ಯದ ಪ್ರಸ್ತುತ ಪರಿಸ್ಥಿತಿಗಳ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.

SCROLL FOR NEXT