ಬೆಂಗಳೂರು: ಬುಡಕಟ್ಟು ಜನಾಂಗಕ್ಕೆ ಸೇರಿದ ಕೊರಗ ಮತ್ತು ಜೇನು ಕುರುಬ ಸಮುದಾಯದ ವಿದ್ಯಾರ್ಥಿಗಳಿಗೆ ಫೆಬ್ರವರಿಯಿಂದ ಅವರು ನೌಕರಿ ಪಡೆಯುವವರೆಗೆ ಶಿಷ್ಯ ವೇತನ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಕೊರಗ ಮತ್ತು ಜೇನು ಕುರುಬ ಎರಡೂ ಸಮುದಾಯದ ಜನಸಂಖ್ಯೆ ಕ್ಷಿಣಿಸುತ್ತಿದ್ದು, ಈ ಸಮುದಾಯದಲ್ಲಿ ಶಿಕ್ಷಣ ಪಡೆಯುತ್ತಿರುವ ಸಂಖ್ಯೆಯೂ ತೀರಾ ಕಡಿಮೆಯಾಗುತ್ತಿದೆ. ಹೀಗಾಗಿ ಅವರಿಗೆ ಪ್ರೋತ್ಸಾಹ ನೀಡಲು ರಾಜ್ಯ ಸರ್ಕಾರ ಮುಂದಿನ ತಿಂಗಳಿಂದ ಶಿಷ್ಯ ವೇತನ ನೀಡಲು ನಿರ್ಧರಿಸಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರು ಹೇಳಿದ್ದಾರೆ.
ಎಸ್ಎಸ್ಎಲ್ ಸಿ ಯ ನಂತರ ಕಾಲೇಜ್ ಶಿಕ್ಷಣಕ್ಕೆ ಸೇರಿಕೊಳ್ಳುವ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 2 ಸಾವಿರ ರುಪಾಯಿ ಹಾಗೂ ಪದವಿ ವಿದ್ಯಾರ್ಥಿಗಳಿಗೆ 2,500 ರುಪಾಯಿ ಶಿಷ್ಯ ವೇತನ ಪಡೆಯಲಿದ್ದಾರೆ. ಇನ್ನು ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ 3.500 ಹಾಗೂ ಸ್ನಾತಕೋತ್ತರ ಪದವಿ ಮುಗಿಸಿದ ವಿದ್ಯಾರ್ಥಿಗಳು ತಿಂಗಳಿಗೆ 4,500 ರುಪಾಯಿ ಪಡೆಯಲಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.
ಇದೇ ವೇಳೆ ಗೌಡ್ಲು ಮತ್ತು ಹಸಲೂರು ಬಡುಕಟ್ಟು ಸಮುದಾಯಕ್ಕೆ ಸೇರಿದ ಜನಕ್ಕೆ ಉಚಿತವಾಗಿ ರೇಷನ್ ನೀಡಲಾಗುತ್ತಿದ್ದು, ಈ ಎರಡು ಯೋಜನೆಗಳು ಫೆಬ್ರವರಿ 1ರಿಂದ ಜಾರಿಗೆ ಬರಲಿವೆ ಎಂದು ಆಂಜನೇಯ ಹೇಳಿದ್ದಾರೆ.