ನವದೆಹಲಿ: ರಾಷ್ಟ್ರದ ರಾಜಧಾನಿಯಲ್ಲಿ ಮುನ್ಸಿಪಲ್ ಚುನಾವಣೆಗಳಿಗೂ ಮುಂಚಿತವಾಗಿ, ಆಮ್ ಆದ್ಮಿ ಸರ್ಕಾರದ ಯೋಜನೆಗಳನ್ನು ಪ್ರಚಾರ ಮಾಡುವಾಗ 'ಆಮ್' ಪದ ಕೈಬಿಡಬೇಕು ಎಂದು ಚುನಾವಣಾ ಆಯೋಗ ನಿರ್ದೇಶನ ನೀಡಿದೆ.
ಯಾವುದೇ ಭಿತ್ತಿಚಿತ್ರ, ಬ್ಯಾನರ್, ಜಾಹಿರಾತು, ಆಮ್ ಆದ್ಮಿ ಮೊಹಲ್ಲ ಕ್ಲಿನಿಕ್, ಆಮ್ ಆದ್ಮಿ ಬೈಪಾಸ್ ಎಕ್ಸ್ಪ್ರೆಸ್ ಸೇವೆ ಅಥವಾ ದೆಹಲಿ ಸರ್ಕಾರದ ಪರಿಧಿಯೊಳಗೆ ಬರುವ ಮತ್ಯಾವುದೇ ಯೋಜನೆಯ ಪ್ರಚಾರದಲ್ಲಿ 'ಆಮ್' ಪದವನ್ನು ಕೈಬಿಡಬೇಕು ಎಂದು ಸೋಮವಾರ ದೆಹಲಿ ಮುಖ್ಯ ಕಾರ್ಯದರ್ಶಿ ಮತ್ತು ನಗರದ ಮೂವರು ಮುನ್ಸಿಪಲ್ ಕಮಿಷನರ್ ಗಳಿಗೆ ಚುನಾವಣಾ ಆಯೋಗ ಪತ್ರ ಬರೆದಿದೆ.
ಮಂಗಳವಾರ ಈ ಪತ್ರ ಸಾರ್ವಜನಿಕವಾಗಿ ಲಭ್ಯವಾಗಿದೆ. ಹಾಗೆಯೇ ೪೮ ಘಂಟೆಗಳೊಳಗೆ ಇದನ್ನು ಅನುಸರಿಸಿರುವುದಕ್ಕೆ ವರದಿ ನೀಡುವಂತೆ ಆಗ್ರಹಿಸಿದೆ.
ಆಮ್ ಆದ್ಮಿ ಮೊಹಲ್ಲಾ ಕ್ಲಿನಿಕ್ ಮತ್ತು ಆಮ್ ಆದ್ಮಿ ಬೈಪಾಸ್ ಎಕ್ಸ್ಪ್ರೆಸ್ ಸೇವೆ ಸೇರಿದಂತೆ ಮತ್ತಿತರ ಸರ್ಕಾರಿ ಯೋಜನೆಗಳಿಂದ 'ಆಮ್ ಆದ್ಮಿ' ಪದಗಳನ್ನು ಕೈಬಿಡಬೇಕು ಎಂದು ಕೋರಿ ಚುನಾವಣಾ ಆಯೋಗಕ್ಕೆ ಬಿಜೆಪಿ ಶಾಸಕ ವಿಜೇಂದರ್ ಗುಪ್ತ ಮಾರ್ಚ್ ೧೮ ರಂದು ಅರ್ಜಿ ಸಲ್ಲಿಸಿದ್ದರು.
ಉತ್ತರ, ಪೂರ್ವ ಮತ್ತು ದಕ್ಷಿಣ ದೆಹಲಿ ನಗರಸಭಾ ಚುನಾವಣೆಗಳು ಏಪ್ರಿಲ್ ೨೨ ರಂದು ನಡೆಯಲಿದ್ದು, ಏಪ್ರಿಲ್ ೨೫ ಕ್ಕೆ ಫಲಿತಾಂಶ ಘೋಷಿಸಲಾಗುತ್ತದೆ. ಮಾರ್ಚ್ ೧೪ರಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ.
ಮಾರ್ಚ್ ೩೧ ರಿಂದ ತೀವ್ರ ಪ್ರಚಾರ ಕೈಗೊಳ್ಳಲು ಆಮ್ ಆದ್ಮಿ ಪಕ್ಷ ಸಜ್ಜಾಗಿದೆ. ಚುನಾವಣೆಗಳಲ್ಲಿ ಮತ ಕೇಳಲು ದೆಹಲಿಯಾದ್ಯಂತ ಹಲವು ಸಾರ್ವಜನಿಕ ಸಮಾರಂಭಗಳನ್ನುದ್ದೇಶಿಸಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾತನಾಡಲಿದ್ದಾರೆ.