ನವದೆಹಲಿ: ವಿವಿಧ ರಾಷ್ಟ್ರೀಯ ಬ್ಯಾಂಕ್ ಗಳಿಂದ ಸಾವಿರಾರು ಕೋಟಿ ರುಪಾಯಿ ಸಾಲ ಪಡೆದು ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರನ್ನು ಹಸ್ತಾಂತರಿಸುವಂತೆ ಭಾರತ ಮಾಡಿದ್ದ ಮನವಿಯನ್ನು ಬ್ರಿಟನ್ ಸರ್ಕಾರ ಪುರಸ್ಕರಿಸಿದ್ದು, ಈ ಸಂಬಂಧ ಲಂಡನ್ ಕೋರ್ಟ್ ಮಲ್ಯ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸಲಿದೆ ಎಂದು ಶುಕ್ರವಾರ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಕಳೆದ ಫೆಬ್ರವರಿಯಲ್ಲಿ ವಿಜಯ್ ಮಲ್ಯ ಅವರನ್ನು ಹಸ್ತಾಂತರಿಸುವಂತೆ ಭಾರತ ಮಾಡಿದ್ದ ಮನವಿಯನ್ನು ಬ್ರಿಟಿಷ್ ಸರ್ಕಾರ ಪುರಷ್ಕರಿಸಿದ್ದು, ಅದನ್ನು ವೆಸ್ಟ್ ಮಿನಿಸ್ಟರ್ಸ್ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ರವಾನಿಸಿದೆ. ಈಗ ವಿಜಯ್ ಮಲ್ಯ ವಿರುದ್ಧ ಬಂಧನ ವಾರಂಟ್ ಹೊರಡಿಸುವ ಬಗ್ಗೆ ಜಿಲ್ಲಾ ನ್ಯಾಯಾಧೀಶರು ನಿರ್ಧರಿಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಗೋಪಾಲ್ ಬಗ್ಲಾಯ್ ಅವರು ಹೇಳಿದ್ದಾರೆ.
ಭಾರತ–ಬ್ರಿಟನ್ ನಡುವಣ ಪರಸ್ಪರ ಕಾನೂನು ನೆರವು ಒಪ್ಪಂದ(ಎಂಎಲ್‌ಎಟಿ)ದ ಅಡಿಯಲ್ಲಿ ಮಲ್ಯ ಅವರನ್ನು ಹಸ್ತಾಂತರಿಸುವಂತೆ ಬ್ರಿಟನ್‌ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಧಿಕೃತವಾಗಿ ಮನವಿ ಮಾಡಿತ್ತು. ಅದನ್ನು ಬ್ರಿಟನ್ ಸರ್ಕಾರ ಈಗ ಪುರಷ್ಕರಿಸಿದ್ದು, ಮಲ್ಯ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸುವ ಬಗ್ಗೆ ಲಂಡನ್ ಕೋರ್ಟ್ ತೀರ್ಮಾನ ತೆಗೆದುಕೊಳ್ಳಲಿದೆ.
2016 ರ ಏಪ್ರಿಲ್‍ನಿಂದ ಬ್ರಿಟನ್‍ನಲ್ಲಿ ನೆಲೆಸಿರುವ ಮಲ್ಯ ಅವರಿಗೆ ಈಗ ಬಿಸಿ ತಟ್ಟಲಾರಂಭಿಸಿದ್ದು, ತಮ್ಮನ್ನು ದೇಶದಿಂದ ಬಲವಂತವಾಗಿ ಹೊರದಬ್ಬಲಾಗಿದೆ ಎಂದು ವಾದಿಸುತ್ತಿದ್ದಾರೆ.