ಪ್ರಧಾನ ಸುದ್ದಿ

ಬಿಹಾರದಲ್ಲಿ ಏಳು ಅನಧಿಕೃತ ಕಸಾಯಿಖಾನೆಗಳಿಗೆ ಬೀಗ

Guruprasad Narayana
ಪಾಟ್ನಾ: ಬಿಹಾರದಲ್ಲಿ ತಲೆಯೆತ್ತುತ್ತಿರುವ ಅನಧಿಕೃತ ಕಸಾಯಿಖಾನೆಗಳನ್ನು ಮುಚ್ಚಬೇಕು ಎಂದು ವಿರೋಧಪಕ್ಷ ಬಿಜೆಪಿ ಆಗ್ರಹಿಸಿದ ಒಂದು ವಾರದ ನಂತರ ರೊಹ್ತಾಸ್ ಜಿಲ್ಲೆಯಲ್ಲಿಯೇ ಏಳು ಅನಧಿಕೃತ ಕಸಾಯಿಖಾನೆಗಳಿಗೆ ಬೀಗ ಜಡಿಯಲಾಗಿದೆ ಎಂದು ಅಧಿಕಾರಿಗಳು ಶನಿವಾರ ಹೇಳಿದ್ದಾರೆ. 
ಪಾಟ್ನಾದ ಹಿರಿಯ ಅಧಿಕಾರಿಗಳಿಂದ ಅನುಮತಿ ಸಿಕ್ಕಿದ ಮೇಲೆ, ಉತ್ತರಪ್ರದೇಶ ಗಡಿಯಲ್ಲಿರುವ ಈ ಜಿಲ್ಲೆಯಲ್ಲಿ ವರ್ಷಗಳಿಂದ ನಡೆಯುತ್ತಿರುವ ಈ ಅನಧಿಕೃತ ಕಸಾಯಿಖಾನೆಗಳಿಗೆ ನಿರ್ಬಂಧ ಹೇರಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. 
ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕ್ರಮ ತೆಗೆದುಕೊಂಡಿರುವಂತೆ ಬಿಹಾರ ಸರ್ಕಾರ ಕೂಡ ಮುಂದಿನ ದಿನಗಳಲ್ಲಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಅಧಿಕಾರಿ ಹೇಳಿದ್ದಾರೆ. 
ಆರು ವಾರಗಳಲ್ಲಿ ಅನಧಿಕೃತ ಕಸಾಯಿಖಾನೆಗಳಿಗೆ ಬೀಗ ಹಾಕಬೇಕು ಎಂದು ಪಾಟ್ನಾ ಹೈಕೋರ್ಟ್ ಆದೇಶ ನೀಡಿದ ನಂತರ ರೊಹ್ತಾಸ್ ಜಿಲ್ಲಾ ಅಧಿಕಾರಿಗಳು ಈ ಕ್ರಮ ತೆಗೆದುಕೊಂಡಿದ್ದಾರೆ. ಈ ಕಸಾಯಿಖಾನೆಗಳು ಪರವಾನಗಿ ಶುಕ್ರವಾರಕ್ಕೆ ಅಂತ್ಯಗೊಂಡಿದೆ. 
ಬಿಹಾರದ ವಿಧಾನಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದ ವಿರೋಧ ಪಕ್ಷದ ಅಧ್ಯಕ್ಷ ಪ್ರೇಮ್ ಕುಮಾರ್, ರಾಜ್ಯದಲ್ಲಿ ಪರವಾನಗಿ ನೀಡಿರುವ ಎಲ್ಲ ಕಸಾಯಿಖಾನೆಗಳ ಪರವಾನಗಿ ರದ್ದು ಪಡಿಸಬೇಕು ಎಂದು ಆಗ್ರಹಿಸಿ, ಬಿಹಾರವನ್ನು ಗೋಮಾಂಸ ಮುಕ್ತ ರಾಜ್ಯವನ್ನಾಗಿಸುವತ್ತ ಬಿಜೆಪಿ ಪಕ್ಷ ಚಿತ್ತ ಹರಿಸಿದೆ ಎಂದಿದ್ದರು. "ಮಹಾರಾಷ್ಟ್ರದಂತೆ ಬಿಹಾರವನ್ನು ಗೋಮಾಂಸಮುಕ್ತವನ್ನಾಗಿಸಬೇಕು" ಎಂದು ಕೂಡ ಅವರು ಹೇಳಿದ್ದರು. 
ಅಧಿಕಾರಿಗಳು ತಿಳಿಸುವಂತೆ ೧೯೫೫ರ ಕಾನೂನಿನ ಪ್ರಕಾರ ಬಿಹಾರದಲ್ಲಿ ಗೋಹತ್ಯೆ ನಿಷೇಧಿಸಲಾಗಿದೆ. ಆದರೆ ೧೫ ವರ್ಷದ ಮೇಲ್ಪಟ್ಟ, ಮುದಿ ಅಥವಾ ರೋಗದಿಂದ ನರಳುತ್ತಿರುವ ಗೋವುಗಳನ್ನು ಕೊಲ್ಲುವುದಕ್ಕೆ ಅವಕಾಶ ಇರುವುದರಿಂದ ಗೋಮಾಂಸ ಮಾರಾಟ ಎಗ್ಗಿಲ್ಲದೆ ಸಾಗುತ್ತಿದೆ ಎಂದಿದ್ದಾರೆ. 
ಕಾನೂನು ಉಲ್ಲಂಘಿಸಿದವರಿಗೆ ಆರು ತಿಂಗಳ ಜೈಲು ಶಿಕ್ಷೆ ಮತ್ತು ೧೦೦೦ ರೂ ದಂಡ ವಿಧಿಸುವ ಅವಕಾಶ ಕೂಡ ಕಾನೂನಿನಲ್ಲಿದೆ. 
SCROLL FOR NEXT