ಲಖನೌ: ಅಧಿಕಾರ ದುರುಪಯೋಗ ಸೇರಿದಂತೆ ಹಲವು ಆರೋಪಗಳಲ್ಲಿ ಮಾಜಿ ಸಚಿವ ಮೊಹಮದ್ ಅಜಂ ಖಾನ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಉತ್ತರಪ್ರದೇಶ ರಾಜ್ಯಪಾಲ ರಾಮ್ ನಾಯಕ್ ಪತ್ರ ಬರೆದಿದ್ದಾರೆ.
೧೪ ಅಂಶಗಳನ್ನು ಪಟ್ಟಿ ಮಾಡಿರುವ ರಾಜ್ಯಪಾಲರು, ಇವುಗಳ ಆಧಾರದ ಮೇಲೆ ಹಿರಿಯ ಸಮಾಜವಾದಿ ಪಕ್ಷದ ಮುಖಂಡ ಮತ್ತು ಮಾಜಿ ಸಂಸದೀಯ ವ್ಯವಹಾರಗಳ ಹಾಗು ನಗರಾಭಿವೃದ್ಧಿ ಸಚಿವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೋರಿದ್ದಾರೆ.
ಕಳೆದ ಅಖಿಲೇಶ್ ಯಾದವ್ ಅವರ ಸರ್ಕಾರದಲ್ಲಿ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ವಕ್ಫ್ ಸಮಿತಿ ಆಸ್ತಿಯನ್ನು ಕಾನೂನುಬಾಹಿರವಾಗಿ ಕಬಳಿಸಿರುವ ಆರೋಪವನ್ನು ಸಮಾಜವಾದಿ ಪಕ್ಷದ ಮುಖಂಡನ ವಿರುದ್ಧ ಹೊರಿಸಲಾಗಿದೆ.
ಖಾಸಗಿ ವಿಶ್ವವಿದ್ಯಾಲಯದಲ್ಲಿ ಅತಿಥಿ ಗೃಹವೊಂದನ್ನು ಕಟ್ಟಲು ಸಾರ್ವಜನಿಕ ಹಣವನ್ನು ಬಳಸಿರುವ ಆರೋಪವನ್ನು ಕೂಡ ರಾಂಪುರ್ ಶಾಸಕ ಎದುರಿಸುತ್ತಿದ್ದಾರೆ.
ಕೇಂದ್ರ ವಕ್ಫ್ ಸಮಿತಿ ಮಾಜಿ ಸಚಿವ ಅಜಂ ಖಾನ್ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿ ಸಿದ್ಧಪಡಿಸಿರುವ ೪೨ ಪುಟಗಳ ವರದಿಯನ್ನು ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಕಳುಹಿಸಿಕೊಡಲಾಗಿದೆ. ಅಜಂ ಖಾನ್ ಅವರ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಕಾಂಗ್ರೆಸ್ ಮುಖಂಡ ಫೈಸಲ್ ಲಾಲಾ ಕೂಡ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.