ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ಬಸ್
ಬೆಂಗಳೂರು: ಬೆಂಗಳೂರು, ಗದಗ, ವಿಜಯಪುರ, ಬಾಗಲಕೋಟೆ ಹಾಗೂ ಬಳ್ಳಾರಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾನುವಾರ ಬಿರುಗಾಳಿ ಸಹಿತ ಭಾರಿ ಮಳೆಯಾಗಿದ್ದು, ಸಿಡಿಲು ಬಡಿದು ನಾಲ್ವರು ಮೃತಪಟ್ಟಿರುವ ಘಟನೆ ನಡೆದಿದೆ.
ಬರದಿಂದ ಕಂಗೆಟ್ಟಿದ್ದ ವಿಜಯಪುರ ಜಿಲ್ಲೆ ವರುಣನ ಆರ್ಭಟಕ್ಕೆ ತತ್ತರಿಸಿ ಹೋಗಿದ್ದು ಜಿಲ್ಲೆಯ ಮುದ್ದೆಬಿಹಾಳ ತಾಲೂಕಿನ ಬನವಾಸಿ, ಗೋನಾಳ, ಸರೂರು, ತಂಗಡಗಿ, ಬಿಸಲಕೋಡ, ಗದ್ದಲಮರಿ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗಿದೆ. ಗದಗದಲ್ಲಿ ನೀರಿನ ರಭಸಕ್ಕೆ ಕೆಎಸ್ ಆರ್ ಟಿಸಿ ಬಸ್ ಕೊಚ್ಚಿ ಹೋದ ಘಟನೆ ಸಂಭವಿಸಿದೆ. ತಾಳಿಕೋಟೆ ಪಟ್ಟಣ ಹಾಗೂ ಸುತ್ತಮುತ್ತಲ ಪ್ರದೇಶ ಸಂಪೂರ್ಣ ಜಲಾವೃತಗೊಂಡಿದೆ. ಮೈಲೇಶ್ವರದಲ್ಲಿ ಭಾರೀ ಮಳೆಗೆ ನಿರ್ಮಾಣ ಹಂತದಲ್ಲಿದ್ದ ರಸ್ತೆ ಕೊಚ್ಚಿ ಹೋಗಿ, ಗ್ರಾಮದೊಳಕ್ಕೆ ನೀರು ನುಗ್ಗಿದೆ. ಇದರಿಂದಾಗಿ ಗ್ರಾಮದ ಜನರು ರಾತ್ರಿಯಿಡೀ ಜಾಗರಣೆ ಮಾಡುವಂತಾಗಿದೆ ಎಂದು ಖಾಸಗಿ ವಾಹಿನಿಗಳು ವರದಿ ಮಾಡಿವೆ.
ಇನ್ನು ವಿಜಯಪುರದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಆಲ್ಟೋ ಕಾರೊಂದು ನೀರಿನಲ್ಲಿ ಕೊಚ್ಚಿ ಹೋಗಿದೆ. ಗೋನಾಳ ಗ್ರಾಮದಲ್ಲಿ ಮರಗಳು ಧರೆಗುರುಳಿ ಬಿದ್ದಿರುವುದಾಗಿ ವರದಿ ತಿಳಿಸಿದೆ.
ಸಿಡಿಲು ಬಡಿದು ಗರ್ಭಿಣಿ ಸೇರಿ ನಾಲ್ವರು ಸಾವು
ಸಿಡಿಲು ಬಡಿದು 22 ವರ್ಷದ ಸೂಫಿಯಾ ಎಂಬ ಗರ್ಭಿಣಿ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಭಟ್ಕಳ ತಾಲೂಕಿನ ಪಿರ್ದೋಸ್ ನಗರದಲ್ಲಿ ನಡೆದಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗದಗ ಜಿಲ್ಲೆಯಲ್ಲಿ ಸಿಡಿಲಿನ ಅಬ್ಬರಕ್ಕೆ ಪಕೀರವ್ವ (೫೦) ಎನ್ನುವ ಮಹಿಳೆ ಬಲಿಯಾಗಿದ್ದಾರೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸುರಿದ ಭಾರೀ ಮಳೆ, ಸಿಡಿಲಿಗೆ ಬೀಬಿ ಸೂಫಿಯಾ (೨೨) ಎನ್ನುವ ಮಹಿಳೆ ಮೃತಪಟ್ಟಿದ್ದು, ಮೊಹ್ಮದ್ (೧೯), ಮುಬಾರಕ್ (೬) ಎನ್ನುವವರಿಗೆ ತೀವ್ರ ಗಾಯಗಳಾಗಿದ್ದು, ಬಾಗಲಕೋಟೆಯಲ್ಲಿ ಭಾರೀ ಗಾಳಿ ಮಳೆಗೆ ಮನೆಯ ಮೇಲಿನ ತಗಡು ಹಾಗೂ ಕಲ್ಲು ಮೈಮೇಲೆ ಬಿದ್ದು ದೀಪಾ ಕಡೆಮನೆ ಎಂಬ 9 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ.
ಭಾರೀ ಮಳೆಗೆ ಮನೆ ಮೇಲೆ ಗುಡ್ಡದ ಮೇಲಿದ್ದ ಬಂಡೆ ಕುಸಿದು ಬಿದ್ದು 12 ವರ್ಷದ ಭೀಮ ಎಂಬ ಬಾಲಕ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬಳ್ಳಾರಿಯ ನಾಗಲಕೆರೆ ಎಂಬಲ್ಲಿ ನಡೆದಿದೆ.
ರಾಜ್ಯದಲ್ಲಿ ಇನ್ನೂ ಐದು ದಿನ ಭಾರಿ ಮಳೆ
ರಾಜ್ಯದಲ್ಲಿ ಮುಂದಿನ ಐದು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಇದು ಮುಂಗಾರು ಮಳೆಯಲ್ಲ. ಬೇಸಿಗೆಯ ಮಳೆಯಾಗಿದೆ. ಮುಂಗಾರು ಜೂನ್ 1 ಅಥವಾ 2ರ ಬಳಿಕ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸುಂದರ್ ಮೇತ್ರಿ ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos