ಪ್ರಧಾನ ಸುದ್ದಿ

ಭಾರತಕ್ಕೆ ದೊಡ್ಡ ಜಯ: ಕುಲಭೂಷಣ್ ಜಾಧವ್ ಗಲ್ಲು ಶಿಕ್ಷೆಗೆ ಅಂತರಾಷ್ಟ್ರೀಯ ಕೋರ್ಟ್ ತಡೆ

Lingaraj Badiger
ಹೇಗ್: ಪಾಕಿಸ್ತಾನ ಸೇನಾ ಕೋರ್ಟ್ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ ವಿಧಿಸಿರುವ ಗಲ್ಲು ಶಿಕ್ಷೆಗೆ ಗುರುವಾರ ಅಂತರಾಷ್ಟ್ರೀಯ ಕೋರ್ಟ್ ತಡೆಯಾಜ್ಞೆ ವಿಧಿಸಿದೆ. ಇದರೊಂದಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ದೊಡ್ಡ ಗೆಲುವು ಸಿಕ್ಕಂತಾಗಿದೆ.
ಕುಲಭೂಷಣ್ ಜಾಧವ್ ಗಲ್ಲು ಶಿಕ್ಷೆಗೆ ಸಂಬಂಧಿಸಿದಂತೆ ಭಾರತದ ಮನವಿಯನ್ನು ಎತ್ತಿಹಿಡಿದಿರುವ 11 ನ್ಯಾಯಮೂರ್ತಿಗಳನ್ನೊಳಗೊಂಡ ಅಂತರಾಷ್ಟ್ರೀಯ ಪೀಠ, ಅಂತಿಮ ತೀರ್ಪಿನವರೆಗೂ ಗಲ್ಲು ಶಿಕ್ಷೆಗೆ ತಡೆಯಾಜ್ಞೆ ವಿಧಿಸಿದೆ.
ಕಳೆದ ಸೋಮವಾರ ಕುಲಭೂಷಣ್ ಜಾಧವ್ ಗಲ್ಲು ಶಿಕ್ಷೆಗೆ ಸಂಬಂಧಿಸಿದಂತೆ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ನ್ಯಾಯಾಲಯದ ಮುಂದೆ ತಮ್ಮ ವಾದ ಮಂಡಿಸಿದ್ದವು. ವಾದ-ಪ್ರತಿ ವಾದ ಆಲಿಸಿದ ಕೋರ್ಟ್ ಇಂದು ಅಂತಿಮ ತೀರ್ಪು ಪ್ರಕಟಿಸಿದೆ. 
ಕುಲಭೂಷಣ್ ಜಾಧವ್ ಜೀವಕ್ಕೆ ಅಪಾಯವಿದೆ ಎಂಬ ಭಾರತದ ವಾದವನ್ನು ಪುರಷ್ಕರಿಸಿದ ಕೋರ್ಟ್, ಅಂತಿಮ ತೀರ್ಪು ಬರುವವರೆಗೆ ಜಾಧವ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಹಾಗೂ ತೆಗೆದುಕೊಂಡಿರುವ ಎಲ್ಲಾ ಕ್ರಮಗಳ ಬಗ್ಗೆ ನಮಗೆ ಮಾಹಿತಿ ನೀಡಬೇಕು ಎಂದು ನ್ಯಾಯಮೂರ್ತಿ ರೋನಿ ಅಬ್ರಹಂ ಅವರು ಪಾಕಿಸ್ತಾನಕ್ಕೆ ಸೂಚಿಸಿದ್ದಾರೆ. ಅಲ್ಲದೆ ಜಾಧವ್ ರಾಜತಾಂತ್ರಿಕ ಸಂಪರ್ಕಕ್ಕೆ ಅವಕಾಶ ನೀಡುವಂತೆ ಪಾಕ್ ಗೆ ಆದೇಶಿಸಿದ್ದಾರೆ.
ಭಾರತದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಹರೀಶ್ ಸಾಳ್ವೆ ಅವರು, ವಿಚಾರಣೆ ಮುಗಿಯುವ ಮೊದಲೇ ಪಾಕಿಸ್ತಾನ ಕುಲಭೂಷಣ್ ಯಾದವ್ ರನ್ನು ಗಲ್ಲಿಗೇರಿಸುವ ಸಾಧ್ಯತೆಯೂ ಇದೆ ಎಂದು ಆತಂಕ ವ್ಯಕ್ತಪಡಿಸಿದರು. ಮಾತ್ರವಲ್ಲ ಪಾಕಿಸ್ತಾನ ವಿಯೆನ್ನಾ ಘೋಷಣೆಯನ್ನು ಉಲ್ಲಂಘಿಸಿದೆ. ಜಾಧವ್ ಸಂಪರ್ಕಿಸಲು ಭಾರತ 16 ಬಾರಿ ಪ್ರಯತ್ನಪಟ್ಟರೂ ಅವಕಾಶ ನೀಡಿಲ್ಲ. ಜತೆಗೆ ಅವರ ತಾಯಿ ಕೇಳಿದಾಗಲೂ ಭೇಟಿಗೆ ನಿರಾಕರಿಸಲಾಗಿದೆ. ಪರಿಸ್ಥಿತಿ ತೀರಾ ಕಳವಳಕಾರಿಯಾಗಿದೆ ಮತ್ತು ತುಂಬಾ ತುರ್ತಿನದಾಗಿದೆ ಎಂದು ಹೇಳಿದ್ದರು.
SCROLL FOR NEXT