ನವದೆಹಲಿ: ಪಿಡಬ್ಲ್ಯೂಡಿ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಂಬಂಧಿಕರ ವಿರುದ್ಧ ದೂರು ನೀಡಿದ್ದ ರಾಹುಲ್ ಶರ್ಮಾ ಮೇಲೆ ಗುಂಡಿನ ದಾಳಿ ನಡೆದಿದೆ.
ಬೈಕ್ ನಲ್ಲಿ ಬಂದ ಇಬ್ಬರು ಅರಿಚಿತರು ರಾಹುಲ್ ಶರ್ಮಾ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಅದೃಷ್ಟವಶಾತ್ ರಾಹುಲ್ ಶರ್ಮಾ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಎನ್ಜಿಒವೊಂದರ ಮುಖ್ಯಸ್ಥರಾಗಿದ್ದ ರಾಹುಲ್ ಶರ್ಮಾ, ಕೇಜ್ರಿವಾಲ್ ಸಂಬಂಧಿ ಸುರೇಂದರ್ ಕುಮಾರ್ ಬನ್ಸಾಲ್ ಸೇರಿದಂತೆ ಮೂವರ ವಿರುದ್ಧ 2015ರಲ್ಲಿ ಎಸಿಬಿಗೆ ದೂರು ನೀಡಿದ್ದರು. ಹೀಗಾಗಿ ದುಷ್ಕರ್ಮಿಗಳು ನಿನ್ನೆ ಸಂಜೆ ಶರ್ಮಾ ಅವರ ಹತ್ಯೆಗೆ ಯತ್ನಿಸಿದ್ದು ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ದೂರು ದಾಖಲಾಗಿದೆ.
ನಾನು ಘಜಿಯಾಬಾದ್ಗೆ ಹೊರಟಾಗ ಮಧ್ಯಾಹ್ನ ಸುಮಾರು 12 ಗಂಟೆಗೆ ಗೌರ್ ಸಿಟಿಯಲ್ಲಿ ಸುಮಾರು 500-600 ಮೀಟರ್ ದೂರದಲ್ಲಿರುವ ಗೌರ್ ಇಂಟರ್ ನ್ಯಾಷನಲ್ ಶಾಲೆ ಬಳಿ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಬೈಕ್ ಮೇಲೆ 2 ಪುರುಷರು ನನ್ನ ಕಾರು ಅಡ್ಡಗಟ್ಟಿದರು. ಅವರು ಹೆಲ್ಮೆಟ್ ಧರಿಸಿದ್ದು, ನನಗೆ ಗುರುತು ಸಿಗಲಿಲ್ಲ ಎಂದು ಶರ್ಮಾ ಹೇಳಿದ್ದಾರೆ.