ಪ್ರವಾಸ-ವಾಹನ

ಬೆಂಗಳೂರಿನಿಂದ ಆಡಿಸ್ ಅಬಾಬಾ ಸೇರಿ 6 ನಗರಗಳಿಗೆ ಹೊಸ ವಿಮಾನ ಸೌಲಭ್ಯ ಶೀಘ್ರ

Raghavendra Adiga

ಬೆಂಗಳೂರು: ಚಳಿಗಾಲದ ಋತು ಪ್ರಾರಂಭವಾಗುತ್ತಿದ್ದು ಪ್ರವಾಸ ಪ್ರಿಯರಿಗಾಗಿ ಇಲ್ಲೊಂದು ಸಿಹಿಸುದ್ದಿ ಇದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎ) ನಿಂದ ದೇಶದ ಐದು ಹೊಸ ನಗರಗಳಿಗೆ ಹಾಗೂ ಒಂದು ಅಂತರಾಷ್ಟ್ರೀಯ ನಗರಕ್ಕೆ ನೇರ ವಿಮಾನಯಾನ ಸೇವೆ ಶೀಘ್ರದಲ್ಲಿ ಪ್ರಾರಂಭಗೊಳ್ಳಲಿದೆ.

BIAL ಬಿಡುಗಡೆಗೊಳಿಸಿದ ಪ್ರಕಟಣೆಯಂತೆ ಬೆಂಗಳೂರಿನಿಂದ ಜೈಸಲ್ಮೇರ್, ಜೋಧ್ ಪುರ, ಜರ್ಸುಗುಡ, ಬೀದರ್ ಮತ್ತು ಟಿಟಿಕುರಿನ್ ನಗರಗಳಿಗೆ ನೇರ  ವಿಮಾನ ಸೇವೆ ಲಭ್ಯವಾಗಲಿದೆ. ಇನ್ನು ಇಥಿಯೋಪಿಯಾದ ಆಡಿಸ್ ಅಬಾಬಾ ಗೆ ಸಹ ಕೆಐಎನಿಂದ ನೇರ ಸಂಪರ್ಕ ಸಿಗಲಿದೆ. ಇದರೊಡನೆ ಜೆಟ್ ಏರ್ವೇಸ್ ಸೇವೆ ಸ್ಥಗಿತಗೊಂಡ ನಂತರ ಕೊನೆಗೊಂಡ ಆಮ್ಸ್ಟರ್ ಡ್ಯಾಮ್ ಕಡೆಗಿನ ವೈಮಾನಿಕ ಸೇವೆ ಸಹ ಶೀಘ್ರವೇ ಪುನಾರಂಭವಾಗಲಿದೆ. ಕೆಎಲ್‌ಎಂ ರಾಯಲ್ ಡಚ್ ಮತ್ತು ಇಥಿಯೋಪಿಯನ್ ಏರ್‌ಲೈನ್ಸ್ ಸಂಸ್ಥೆಗಳು ಕೆಐಎನಿಂದ ಹಾರಾಟ ನಡೆಸಲು ಸಿದ್ದವಾಗಿದೆ.

ಇಥಿಯೋಪಿಯನ್ ಏರ್ಲೈನ್ಸ್ ಆಡಿಸ್ ಅಬಾಬಾಗೆ ನಾಲ್ಕು ಸಾಪ್ತಾಹಿಕ ತಡೆರಹಿತ ವಿಮಾನ ಹಾರಾಟ ನಡೆಸಲಿದೆ., ಇದನ್ನು ಆಫ್ರಿಕಾದ ಹೆಬ್ಬಾಗಿಲು ಎಂದು ಪರಿಗಣಿಸಲಾಗುತ್ತದೆ, ಇನ್ನು ಕೆಎಲ್ಎಂ ರಾಯಲ್ ಡಚ್ ಮೂರು ಸಾಪ್ತಾಹಿಕ ವಿಮಾನಗಳು ಆಮ್ಸ್ಟರ್ ಡ್ಯಾಮ್ ಗೆ ಸಂಚಾರ ನಡೆಸಲಿದೆ. ಇದರೊಡನೆ ಬೆಂಗಳೂರಿನಿಂದ 25 ಅಂತರರಾಷ್ಟ್ರೀಯ ವಿಮಾನಗಳನ್ನು ಒಳಗೊಂಡಂತೆ 82 ತಾಣಗಳನ್ನು ಸಂಪರ್ಕಿಸಲು ಸಾಧ್ಯವಾಗಲಿದೆ.

ಚಳಿಗಾಲದ ಆರಂಭದಲ್ಲಿ, ವಿಮಾನ ನಿಲ್ದಾಣವು ದಿನಕ್ಕೆ ಸುಮಾರು 700 (611 ದೇಶೀಯ ಮತ್ತು 89 ಅಂತರರಾಷ್ಟ್ರೀಯ) ವಿಮಾನ ಸಂಚಾರವನ್ನು (ಆಗಮನ-ನಿರ್ಗಮನ ಸೇರಿ) ಕಾಣುವ ನಿರೀಕ್ಷೆ ಇದೆ. ಇವು ಮುಂದಿನ ದಿನಗಳಲ್ಲಿ 727 (635 ದೇಶೀಯ ಮತ್ತು 92 ಅಂತರರಾಷ್ಟ್ರೀಯ) ಕ್ಕೆ ತಲುಪುವ ನಿರೀಕ್ಷೆ ಇದೆ.

SCROLL FOR NEXT