ಪ್ರವಾಸ-ವಾಹನ

ನುಗು ವನ್ಯಜೀವಿ ಅಭಯಾರಣ್ಯದಲ್ಲಿ ಸಫಾರಿ ಪ್ರಾರಂಭಿಸುವ ಯೋಜನೆಗೆ ತಡೆ

Srinivas Rao BV

ಬೆಂಗಳೂರು: ನುಗು ವನ್ಯಜೀವಿ ಅಭಯಾರಣ್ಯದಲ್ಲಿ ಸಫಾರಿ ಪ್ರಾರಂಭಿಸಿರುವ ಯೋಜನೆಗೆ ತಾತ್ಕಾಲಿಕವಾಗಿ ತಡೆ ನೀಡಲಾಗಿದೆ. 

ಅ.30 ರಂದು ಸಫಾರಿ ಪ್ರಾರಂಭವಾಗಬೇಕಿತ್ತು. ಆದರೆ ಅಜಯ್ ಮಿಶ್ರಾ, ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಹಾಗೂ ಅರಣ್ಯಗಳು, ಪರಿಸರ ಮತ್ತು ಪರಿಸರ ವಿಜ್ಞಾನದ ಅಧಿಕಾರಿ ಸಂದೀಪ್ ದವೆ, ಯೋಜನೆಯ ವಿವರಗಳನ್ನು ಕೂಲಂಕುಷವಾಗಿ ಪರಿಶೀಲಿಸುವವರೆಗೂ ಸಫಾರಿಯ ಯೋಜನೆಯನ್ನು ಸ್ಥಗಿತಗೊಳಿಸುವಂತೆ ಸೂಚನೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಸಂಬಂಧಪಟ್ಟ ಕಡತಗಳನ್ನು ಬೆಂಗಳೂರಿಗೆ ಕಳಿಸಲು ತಿಳಿಸಲಾಗಿದೆ.

ಅ.30 ರಿಂದ ಸಫಾರಿ ಪ್ರಾರಂಭವಾಗಲಿದೆ ಎಂದು ಯೋಜನೆಯನ್ನು ಪೂರ್ಣವಾಗಿ ಚರ್ಚಿಸಿ ಅಂತಿಮಗೊಳಿಸುತ್ತಿದ್ದಾಗಲೇ ಪಾಂಪ್ಲೆಟ್ ಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಲಾಗಿತ್ತು. ಬೆಳಿಗ್ಗೆ 7:30 ಹಾಗೂ 8:30 ರಿಂದ ಮೊದಲ ಬ್ಯಾಚ್, 8:30 ರಿಂದ 10 ವರೆಗೆ ಎರಡನೇ ಬ್ಯಾಚ್ ಮಧ್ಯಾಹ್ನ 3-5 ವರೆಗೆ ಮೊದಲ ಬ್ಯಾಚ್ ಸಂಜೆ 5 ರಿಂದ 6:30 ವರೆಗೆ ಎರಡನೇ ಬ್ಯಾಚ್ ನ ಸಫಾರಿಯನ್ನು ಪ್ರಾರಂಭಿಸಲಾಗುತ್ತದೆ ಎಂದು ಪ್ರಚಾರ ಮಾಡಲಾಗಿತ್ತು.

ಸಫಾರಿ ಶುಲ್ಕವನ್ನು ತಲಾ 350 ರೂಪಾಯಿ (ಕ್ಯಾಮರಾಗೆ ಹೆಚ್ಚುವರಿ ಶುಲ್ಕ) 10 ವರ್ಷದ ಮಕ್ಕಳಿಗೆ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ 175 ರೂಪಾಯಿ ಶುಲ್ಕ ನಿಗದಿಪಡಿಸಲಾಗಿತ್ತು. ನುಗುವನ್ನು 1998 ರ ಮಾ.09 ರಂದು ವನ್ಯಜೀವಿ ಅಭಯಾರಣ್ಯ ಎಂದು ಘೋಷಿಸಿ, ಬಂಡಿಪುರ ಹುಲಿ ಮೀಸಲು ಪ್ರದೇಶದ ಆಡಳಿತಕ್ಕೆ ಒಳಪಡಿಸಲಾಗಿತ್ತು.

ಪರೀಕ್ಷಾರ್ಥವಾಗಿಯಷ್ಟೇ ಸಫಾರಿಯನ್ನು ನುಗು ಅಭಯಾರಣ್ಯ ಪ್ರದೇಶದಲ್ಲಿ ಯೋಜಿಸಲಾಗಿತ್ತು. ಅಧಿಕೃತವಾಗಿ ಯಾವುದೇ ಪಾಂಪ್ಲೆಟ್ ಅಥವಾ ಪ್ರಚಾರವನ್ನೂ ಮಾಡಲಾಗಿರಲಿಲ್ಲ. ಈ ಯೋಜನೆಯನ್ನು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ನಿರ್ಧರಿಸಬೇಕು ನುಗು ಬಂಡೀಪುರ ಸಫಾರಿ ಜೋನ್ ವ್ಯಾಪ್ತಿಗೆ ಒಳಪಟ್ಟಿಲ್ಲ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿರುವ ಬಿಟಿಆರ್ ನ ನಿರ್ದೇಶಕ ಟಿ.ಬಾಲಚಂದ್ರ ತಿಳಿಸಿದ್ದಾರೆ.

ನುಗು ವನ್ಯಜೀವಿ ಅಭಯಾರಣ್ಯ ಬಿಟಿಆರ್ ನ ಗುರುತಿಸಲಾಗಿರುವ ಬಫರ್ ಜೋನ್ ಆಗಿದೆ. 2012 ರಿಂದ ಈ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯವನ್ನಾಗಿ ಘೋಷಣೆ ಮಾಡಲಾಗಿದೆ. ಆದ್ದರಿಂದ ಮತ್ತೊಂದು ಸಫಾರಿ ಜೋನ್ ಎಂದರೆ ಮತ್ತಷ್ಟು ಜನ ಸಂಚಾರ ಹೆಚ್ಚಲಿದೆ ಇದರಿಂದಾಗಿ ಇಎಸ್ ಝೆಡ್ ನ ನಿಯಮ ಉಲ್ಲಂಘನೆಯಾಗಲಿದೆ ಎಂದು ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

SCROLL FOR NEXT