ವಿದೇಶ ಪ್ರವಾಸ ಎಂದರೆ ಹೊಸ ಸ್ಥಳ, ಹೊಸ ಅನುಭವ, ಹೊಸ ಸಂಸ್ಕೃತಿ. ಆದರೆ, ಇದೇ ಉತ್ಸಾಹದಲ್ಲಿ ನಾವು ಮಾಡುವ ಕೆಲವು ಸಾಮಾನ್ಯ ತಪ್ಪುಗಳು ಅಲ್ಲಿನ ಕಾನೂನಿನ ಪ್ರಕಾರ ಅಪರಾಧವಾಗಬಹುದು. ಮನೆಯಲ್ಲಿ ಯಾರೂ ತಲೆಕೆಡಿಸಿಕೊಳ್ಳದ ಸಣ್ಣಪುಟ್ಟ ಸಂಗತಿಗಳೇ ವಿದೇಶದಲ್ಲಿ ಭಾರೀ ದಂಡ ಅಥವಾ ಕಾನೂನು ಸಂಕಷ್ಟಕ್ಕೆ ಕಾರಣವಾಗಬಹುದು.
ಮಾದಕ ವಸ್ತುಗಳನ್ನು ಸಾಗಿಸಬಾರದು, ಪುರಾತನ ಸ್ಮಾರಕಗಳನ್ನು ಹಾನಿಗೊಳಿಸಬಾರದು, ಖಾಸಗಿ ಪ್ರದೇಶಗಳಿಗೆ ಪ್ರವೇಶಿಸಬಾರದು ಎಂಬಂತಹ ಸಾಮಾನ್ಯ ನಿಯಮಗಳು ಬಹುತೇಕ ಪ್ರವಾಸಿಗರಿಗೆ ಗೊತ್ತಿರುತ್ತವೆ. ಆದರೆ, ಕೆಲ ದೇಶಗಳಲ್ಲಿ ಜಾರಿಯಲ್ಲಿರುವ ವಿಚಿತ್ರ ಹಾಗೂ ಸ್ಥಳೀಯ ನಿಯಮಗಳ ಬಗ್ಗೆ ತಿಳಿಯದೇ ಹೋದರೆ ರಜೆಯ ಮಜಾ ಕ್ಷಣಾರ್ಧದಲ್ಲಿ ಕಹಿಯಾಗಬಹುದು.
ಸಿಂಗಾಪುರಕ್ಕೆ ಹೋಗುವಾಗ ಚ್ಯೂಯಿಂಗ್ ಗಮ್ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಸಿಂಗಾಪುರದಲ್ಲಿ ಚ್ಯೂಯಿಂಗ್ ಗಮ್‌ನ್ನು ಆಮದು ಮಾಡಿಕೊಳ್ಳುವುದಕ್ಕೆ ನಿರ್ಬಂಧವಿದೆ. ಅನುಮೋದಿತ ದಂತ ಮತ್ತು ಔಷಧೀಯ ಚ್ಯೂಯಿಂಗ್ ಗಮ್‌ಗಳಿಗೆ ಕೆಲವು ವಿನಾಯಿತಿಗಳಿವೆ. ಹೀಗಾಗಿ ಮನೆಯಿಂದ ಹೊರಡುವಾಗ ಬ್ಯಾಗ್‌ಗೆ ಕೆಲವು ಪ್ಯಾಕೆಟ್ ಚ್ಯೂಯಿಂಗ್ ಗಮ್ ಹಾಕಿಕೊಂಡು ಹೋಗುವ ಮುನ್ನ ಎಚ್ಚರ ವಹಿಸಿ.
ಇ-ಸಿಗರೇಟ್ ಹಾಗೂ ವೇಪ್‌ಗಳ ವಿಚಾರದಲ್ಲೂ ಇದೇ ಎಚ್ಚರಿಕೆ ಅಗತ್ಯ. ಸಿಂಗಾಪುರದಲ್ಲಿ ಎಲೆಕ್ಟ್ರಾನಿಕ್ ಸಿಗರೇಟ್ ಮತ್ತು ವೇಪರೈಸರ್‌ಗಳನ್ನು ನಿಷೇಧಿತ ತಂಬಾಕು ಉತ್ಪನ್ನಗಳಾಗಿ ಪರಿಗಣಿಸಲಾಗುತ್ತದೆ.
ಥಾಯ್ಲೆಂಡ್‌ನಲ್ಲೂ ಇ-ಸಿಗರೇಟ್‌ಗಳ ಮೇಲೆ ಕಟ್ಟುನಿಟ್ಟಿನ ನಿರ್ಬಂಧಗಳಿವೆ. ಹೀಗಾಗಿ ಸ್ವದೇಶದಲ್ಲಿ ಜೇಬಿನಲ್ಲಿ ಇಟ್ಟುಕೊಂಡು ಓಡಾಡುವ ಸಾಧನವೇ ವಿದೇಶದ ಗಡಿಯಲ್ಲಿ ಗಂಭೀರ ಸಮಸ್ಯೆಗೆ ಕಾರಣವಾಗಬಹುದು.
ಸಿಂಗಾಪುರದ ಮತ್ತೊಂದು ನಿಯಮ ಪ್ರವಾಸಿಗರಿಗೆ ಅಚ್ಚರಿ ಮೂಡಿಸಬಹುದು. ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವಿಸುವುದಕ್ಕೆ ನಿರ್ದಿಷ್ಟ ಸಮಯದಲ್ಲಿ ನಿರ್ಬಂಧವಿದೆ. ಲಿಕ್ಕರ್ ಕಂಟ್ರೋಲ್ ವಲಯಗಳ ಹೊರಗೆ ರಾತ್ರಿ 10.30ರಿಂದ ಬೆಳಗ್ಗೆ 7ರವರೆಗೆ ಸಾರ್ವಜನಿಕವಾಗಿ ಮದ್ಯ ಸೇವಿಸುವುದಕ್ಕೆ ನಿರ್ಬಂಧವಿದೆ. ಕೆಲವು ನಿರ್ದಿಷ್ಟ ವಲಯಗಳಲ್ಲಿ ನಿಯಮಗಳು ಇನ್ನಷ್ಟು ಕಠಿಣವಾಗಿರಬಹುದು. ಹೀಗಾಗಿ ರಾತ್ರಿ ವೇಳೆ ಉದ್ಯಾನವನ ಅಥವಾ ಸಾರ್ವಜನಿಕ ಸ್ಥಳದಲ್ಲಿ ಕುಳಿತು ಪಾನೀಯ ಸೇವಿಸುವುದು ಅಷ್ಟು ಸರಳ ವಿಚಾರವಾಗಿರದೇ ಇರಬಹುದು.
ಇಟಲಿಯ ವೆನಿಸ್‌ನಲ್ಲಂತೂ ಪ್ರವಾಸಿಗರ ವರ್ತನೆಗೆ ಸಂಬಂಧಿಸಿದ ನಿಯಮಗಳ ಪಟ್ಟಿ ಸಾಕಷ್ಟು ಉದ್ದವಾಗಿದೆ. ಪಾರಿವಾಳಗಳು ಅಥವಾ ಸೀಗಲ್‌ಗಳಿಗೆ ಆಹಾರ ನೀಡಿದರೆ 25ರಿಂದ 500 ಯುರೋವರೆಗೆ ದಂಡ ವಿಧಿಸಬಹುದು. ಕೆಲವು ಸ್ಮಾರಕಗಳು, ಸೇತುವೆಗಳು, ಮೆಟ್ಟಿಲುಗಳು ಹಾಗೂ ಕಾಲುವೆ ಬದಿಯ ಪ್ರದೇಶಗಳಲ್ಲಿ ಕುಳಿತು ಅಥವಾ ಮಲಗಿ ಊಟ, ಪಾನೀಯ ಸೇವಿಸಿದರೆ 100ರಿಂದ 200 ಯುರೋವರೆಗೆ ದಂಡ ಬೀಳಬಹುದು.
ಕಾಲುವೆಗಳಲ್ಲಿ ಈಜುವುದು ಅಥವಾ ಧುಮುಕುವುದು 350 ಯುರೋ ದಂಡಕ್ಕೆ ಕಾರಣವಾಗಬಹುದು. ನಗರದ ಕೆಲವು ಭಾಗಗಳಲ್ಲಿ ಅಂಗಿ ಇಲ್ಲದೆ ಅಥವಾ ಸ್ವಿಮ್ ಸೂಟ್'ನಲ್ಲಿ ಓಡಾಡಿದರೂ 250 ಯುರೋವರೆಗೆ ದಂಡ ವಿಧಿಸಬಹುದು. ಐತಿಹಾಸಿಕ ನಗರ ಕೇಂದ್ರದ ಬಹುಭಾಗದಲ್ಲಿ ಸೈಕಲ್ ಸವಾರಿ ಮಾಡುವುದಷ್ಟೇ ಅಲ್ಲ, ಸೈಕಲ್‌ನ್ನು ಕೈಯಲ್ಲಿ ತಳ್ಳಿಕೊಂಡು ಹೋಗುವುದಕ್ಕೂ ನಿರ್ಬಂಧವಿದ್ದು, ಉಲ್ಲಂಘನೆಗೆ 100 ಯುರೋ ದಂಡ ವಿಧಿಸಬಹುದು.
ಜಪಾನ್ ಪ್ರವಾಸಕ್ಕೂ ಮುನ್ನ ನಿಮ್ಮ ಔಷಧಗಳ ಬಗ್ಗೆ ಪರಿಶೀಲನೆ ನಡೆಸುವುದು ಮುಖ್ಯ. ವೈಯಕ್ತಿಕ ಬಳಕೆಯ ಔಷಧಗಳನ್ನು ದೇಶಕ್ಕೆ ಕೊಂಡೊಯ್ಯುವುದಕ್ಕೆ ಕೆಲವು ನಿರ್ಬಂಧಗಳು ಹಾಗೂ ನಿರ್ದಿಷ್ಟ ಪ್ರಕ್ರಿಯೆಗಳಿವೆ. ಕೆಲವು ನಿಯಂತ್ರಿತ ಔಷಧಗಳು ಸಂಪೂರ್ಣವಾಗಿ ನಿಷೇಧಿತವಾಗಿರಬಹುದು. ಬೇರೆ ದೇಶಗಳಲ್ಲಿ ಸಾಮಾನ್ಯವಾಗಿ ಬಳಸುವ ಔಷಧಗಳಿಗೂ ಅವುಗಳಲ್ಲಿರುವ ಅಂಶ ಮತ್ತು ಪ್ರಮಾಣವನ್ನು ಆಧರಿಸಿ ಮುಂಗಡ ಅನುಮತಿ ಅಥವಾ ದಾಖಲೆಗಳ ಅಗತ್ಯವಿರಬಹುದು. ಹೀಗಾಗಿ ಔಷಧದ ಪ್ಯಾಕೆಟ್‌ಗಳನ್ನು ಬ್ಯಾಗ್‌ಗೆ ಹಾಕಿಕೊಂಡು ಹೊರಡುವ ಮೊದಲು ನಿಯಮಗಳನ್ನು ಪರಿಶೀಲಿಸುವುದು ಉತ್ತಮ.
ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ದೇಶಗಳಲ್ಲೂ ಗಡಿ ನಿಯಮಗಳನ್ನು ನಿರ್ಲಕ್ಷಿಸುವಂತಿಲ್ಲ. ಇಲ್ಲಿ ಪ್ರಮುಖವಾಗಿ ಜೈವಿಕ ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಆಹಾರ, ಸಸ್ಯಗಳು, ಬೀಜಗಳು, ಪ್ರಾಣಿ ಉತ್ಪನ್ನಗಳು, ಮಣ್ಣು ಹಾಗೂ ಕೆಲವು ಮರದ ವಸ್ತುಗಳನ್ನು ದೇಶಕ್ಕೆ ಕೊಂಡೊಯ್ಯುವುದಕ್ಕೆ ನಿರ್ಬಂಧಗಳಿರಬಹುದು ಅಥವಾ ಅವುಗಳನ್ನು ಕಡ್ಡಾಯವಾಗಿ ಘೋಷಿಸಬೇಕಾಗಬಹುದು.
ಆಸ್ಟ್ರೇಲಿಯಾದಲ್ಲಿ ಕೆಲವು ಆಹಾರ ಪದಾರ್ಥಗಳನ್ನು ಅಲ್ಪ ಪ್ರಮಾಣದಲ್ಲಿ ತಂದಿದ್ದರೂ ಘೋಷಣೆ ಮಾಡಬೇಕಾಗುತ್ತದೆ. ನ್ಯೂಜಿಲೆಂಡ್‌ನಲ್ಲೂ ಅಪಾಯ ಉಂಟುಮಾಡಬಹುದಾದ ವಸ್ತುಗಳನ್ನು ಘೋಷಿಸುವ ನಿಯಮವಿದೆ. ಘೋಷಿಸದೆ ತಂದ ವಸ್ತುಗಳಿಗೆ ದಂಡ ಬೀಳಬಹುದು. ಹೀಗಾಗಿ ಬ್ಯಾಗ್‌ನ ತಳದಲ್ಲಿ ಮರೆತುಹೋದ ಒಂದು ಸೇಬು ಕೂಡ ವಿಮಾನ ನಿಲ್ದಾಣದಲ್ಲಿ ತಲೆನೋವಿಗೆ ಕಾರಣವಾಗುತ್ತವೆ.
ಕೆಲವು ದೇಶಗಳ ನಿಯಮಗಳು ನಾವು ಏನು ಹೊತ್ತುಕೊಂಡು ಹೋಗುತ್ತೇವೆ ಎಂಬುದಕ್ಕಿಂತ ಹೇಗೆ ವರ್ತಿಸುತ್ತೇವೆ ಎಂಬುದರ ಮೇಲೂ ಹೆಚ್ಚು ಗಮನ ಹರಿಸುತ್ತವೆ.
ಸಂಯುಕ್ತ ಅರಬ್ ಅಮೀರಾತ್‌ನಲ್ಲಿ ಅನುಮತಿ ಇಲ್ಲದೆ ವ್ಯಕ್ತಿಗಳ ಫೋಟೋ ತೆಗೆಯುವುದು, ಸೂಕ್ಷ್ಮ ಪ್ರದೇಶಗಳ ಚಿತ್ರ ಸೆರೆಹಿಡಿಯುವುದು ಅಥವಾ ಅನುಮತಿ ಇಲ್ಲದ ಕೆಲವು ಔಷಧಗಳನ್ನು ಕೊಂಡೊಯ್ಯುವುದು ಸಮಸ್ಯೆ ತಂದೊಡ್ಡಬಹುದು. ಸಾರ್ವಜನಿಕ ಸ್ಥಳಗಳಲ್ಲಿ ನಮ್ಮ ವರ್ತನೆಗೂ ಅಲ್ಲಿನ ಕಾನೂನುಗಳು ಅನ್ವಯಿಸುತ್ತವೆ ಮತ್ತು ಪ್ರವಾಸಿಗರು ನಿರೀಕ್ಷಿಸುವುದಕ್ಕಿಂತ ಅವು ಹೆಚ್ಚು ಕಟ್ಟುನಿಟ್ಟಾಗಿರಬಹುದು.
ಸ್ಪೇನ್‌ನ ಬಾರ್ಸಿಲೋನಾದಲ್ಲೂ ಬೀಚ್‌ನಿಂದ ದೂರವಿರುವ ನಗರ ಪ್ರದೇಶಗಳಲ್ಲಿ ಸ್ವಿಮ್ ಸೂಟ್ ಧರಿಸಿ ಓಡಾಡುವುದಕ್ಕೆ ಸಂಬಂಧಿಸಿದ ನಿಯಮಗಳಿವೆ. ಯುರೋಪ್‌ನ ಹಲವು ನಗರಗಳು ಸಾರ್ವಜನಿಕವಾಗಿ ಮದ್ಯ ಸೇವನೆ, ಧೂಮಪಾನ, ಕಸ ಎಸೆಯುವುದು ಮತ್ತು ಐತಿಹಾಸಿಕ ಪ್ರದೇಶಗಳಲ್ಲಿ ಪ್ರವಾಸಿಗರ ವರ್ತನೆಗೆ ಸಂಬಂಧಿಸಿದಂತೆ ಸ್ಥಳೀಯ ನಿರ್ಬಂಧಗಳನ್ನು ಜಾರಿಗೆ ತಂದಿವೆ. ಆದರೆ, ಎಲ್ಲ ದೇಶಗಳಲ್ಲೂ ಒಂದೇ ರೀತಿಯ ನಿಯಮಗಳಿಲ್ಲ. ಇದೇ ಕಾರಣಕ್ಕೆ ಪ್ರವಾಸದ ಮುನ್ನ ಸ್ಥಳೀಯ ನಿಯಮಗಳನ್ನು ತಿಳಿದುಕೊಳ್ಳುವುದು ಅತ್ಯಂತ ಮುಖ್ಯ.
ವಿದೇಶ ಪ್ರವಾಸಕ್ಕೆ ಹೊರಡುವಾಗ ಸ್ಥಳೀಯ ಕಾನೂನುಗಳ ಸಂಪೂರ್ಣ ಪುಸ್ತಕವನ್ನೇ ಪಾಸ್‌ಪೋರ್ಟ್ ಜತೆಗೆ ಕೊಂಡೊಯ್ಯಬೇಕಿಲ್ಲ. ಆದರೆ, ಪ್ರಯಾಣಿಸುವ ದೇಶದ ಅಧಿಕೃತ ಸರ್ಕಾರಿ ಅಥವಾ ಪ್ರವಾಸೋದ್ಯಮ ವೆಬ್‌ಸೈಟ್‌ನಲ್ಲಿ ಪ್ರವೇಶಕ್ಕೂ ಮುನ್ನ ನಿಯಮಗಳನ್ನು ಪರಿಶೀಲಿಸುವುದು ಮಾತ್ರ ಮರೆಯಬಾರದು.
ಚ್ಯೂಯಿಂಗ್ ಗಮ್‌ನಿಂದ ಔಷಧದವರೆಗೆ, ಒಂದು ಸೇಬಿನಿಂದ ಹಿಡಿದು ಫೋಟೋ ತೆಗೆಯುವವರೆಗೆ—ನಮಗೆ ಸಹಜವಾಗಿ ಕಾಣುವ ಸಣ್ಣ ತಪ್ಪುಗಳೇ ವಿದೇಶದಲ್ಲಿ ಭಾರೀ ದಂಡಕ್ಕೆ ಕಾರಣವಾಗಬಹುದು.
ಹೀಗಾಗಿ ಪ್ರವಾಸದ ಪ್ಲ್ಯಾನ್‌ನಲ್ಲಿ ಸ್ಥಳಗಳ ಪಟ್ಟಿ, ಹೋಟೆಲ್ ಮತ್ತು ವಿಮಾನದ ಜತೆಗೆ ‘ಸ್ಥಳೀಯ ನಿಯಮಗಳ ಪರಿಶೀಲನೆ’ಯನ್ನೂ ಸೇರಿಸಿಕೊಂಡರೆ ರಜೆಯ ಖುಷಿಗೆ ಅನಗತ್ಯ ಕಾನೂನು ತೊಂದರೆ ಎದುರಾಗುವುದನ್ನು ತಪ್ಪಿಸಬಹುದು.