ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರದ ಗದ್ದುಗೆ ಏರುತ್ತಿದ್ದಂತೆಯೇ ದೇಶದ ಜನರ ಕಣ್ಣು ಮೊದಲು ಹೊರಳಿದ್ದೇ ರಕ್ಷಣಾ ಸಚಿವಾಲಯದತ್ತ. ಏಕೆಂದರೆ ಚುನಾವಣಾ ಪೂರ್ವದಲ್ಲಿ ಪಾಕಿಸ್ತಾನ ಮತ್ತು ಚೀನಾ ದೇಶಗಳ ಅತಿಕ್ರಮಣ, ಅಪ್ರಚೋದಿತ ದಾಳಿ ವಿಚಾರಗಳ ಕುರಿತು ತೀವ್ರ ಆಕ್ರೋಶ ಭರಿತರಾಗಿ ಮಾತನಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ರಕ್ಷಣಾ ಇಲಾಖೆಯಲ್ಲಿ ಎಂತಹ ಬದಲಾವಣೆ ಮಾಡಲಿದ್ದಾರೆ ಎಂದು ಕೇವಲ ದೇಶದ ಜನತೆಯಷ್ಟೇ ಅಲ್ಲ ಇಡೀ ವಿಶ್ವ ಸಮುದಾಯವೇ ಕಾತುರದಿಂದ ಕಾಯುತ್ತಿತ್ತು.
ಇದಕ್ಕೆ ಪೂರಕವೆಂಬತೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ತಾವು ಅಧಿಕಾರದ ಗದ್ದುಗೆ ಏರುತ್ತಿದ್ದಂತೆಯೇ ರಕ್ಷಣಾ ಖಾತೆ ನಿರ್ವಹಿಸುತ್ತಿದ್ದ ಅರುಣ್ ಜೇಟ್ಲಿ ಅವರಿಗೆ ವಿತ್ತ ಸಚಿವಾಲಯದ ಜವಾಬ್ದಾರಿ ನೀಡಿ, ವಾದಲ್ಲಿ ಮುಖ್ಯಮಂತ್ರಿಯಾಗಿದ್ದ ಮನೋಹರ್ ಪರಿಕ್ಕರ್ ಅವರನ್ನು ಕೇಂದ್ರಕ್ಕೆ ಕರೆಸಿಕೊಂಡರು. ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ ಪರಿಕ್ಕರ್ ಅವರಿಗೆ ಕೇಂದ್ರದಲ್ಲಿ ರಕ್ಷಣಾ ಇಲಾಖೆಯ ಜವಾಬ್ದಾರಿ ವಹಿಸಿದರು. ಪರಿಕ್ಕರ್ ರಕ್ಷಣಾ ಸಚಿವಾಲಯದ ಹೊಣೆ ಹೊತ್ತಾಗಿನಿಂದ ಈವರೆಗೂ ಸಾಕಷ್ಟು ವಿಚಾರಗಳಲ್ಲಿ ಭಾರತದ ರಕ್ಷಣಾ ಇಲಾಖೆ ಯಶಸ್ಸು ಕಂಡಿದೆ.
ಎನ್ ಡಿಎ ಸರ್ಕಾರ ಅಧಿಕಾರದ ಗದ್ದುಗೆ ಏರಿದ ಬಳಿಕ ರಕ್ಷಣಾ ಇಲಾಖೆಯಲ್ಲಿ ಕಂಡು ಬಂದ ಕೆಲ ಮಹತ್ವದ ಘಟನಾವಳಿಗಳು ಇಲ್ಲಿವೆ.
ವಿದೇಶದಲ್ಲಿದ್ದ ರಕ್ಷಣಾ ಇಲಾಖೆಯ ಸಾವಿರಾರು ಕೋಟಿ ಹಣ ಭಾರತಕ್ಕೆ ವಾಪಸ್
ಮನೋಹರ್ ಪರಿಕ್ಕರ್ ಅವರು ರಕ್ಷಣಾ ಇಲಾಖೆಯ ನೇತೃತ್ವ ವಹಿಸಿದ ಕೆಲವೇ ತಿಂಗಳುಗಳಲ್ಲಿ ಅಮೆರಿಕದ ದಶಕಗಳಿಂದ ಕೊಳೆಯುತ್ತಿದ್ದ ಭಾರತ ರಕ್ಷಣಾ ಇಲಾಖೆಗೆ ಸೇರಿದ ಸುಮಾರು 3 ಸಾವಿರ ಕೋಟಿ ರು.ಗಳನ್ನು ಪತ್ತೆ ಹಚ್ಚಿದ್ದರು. ಪತ್ತೆ ಮಾಡುವುದಷ್ಟೇ ಅಲ್ಲದೇ ಅದನ್ನು ಭಾರತಕ್ಕೆ ವಾಪಸ್ ತರುವಲ್ಲಿ ಪರಿಕ್ಕರ್ ಸೂಕ್ತ ಕ್ರಮ ಕೈಗೊಂಡಿದ್ದಾರೆ. ಕೇವಲ ಇಷ್ಟು ಮಾತ್ರವಲ್ಲದೇ ಯುದ್ಧದ ಸಂದರ್ಭದಲ್ಲಿ ಮಹಿಳಾ ಸೈನಿಕರಿಗೂ ಅವಕಾಶ ಮಾಡಿಕೊಡುವ ಮಹತ್ವದ ನಿರ್ಣಯವಾಗಿದ್ದು ಕೂಡ ಇದೇ ಎನ್ ಡಿಎ ಸರ್ಕಾರದ ಅವಧಿಯಲ್ಲಿ.
ತಗ್ಗಿದ ಜಲಾಂತರ್ಗಾಮಿಗಳಲ್ಲಿನ ದುರಂತ ಸರಣಿ
ಭಾರತದ ಜಲಾಂತರ್ಗಾಮಿಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ಅಗ್ನಿ ದುರಂತಗಳು ನಿಜಕ್ಕೂ ಜಾಗತಿಕ ಮಟ್ಟದಲ್ಲಿ ಭಾರತ ರಕ್ಷಣಾ ವ್ಯವಸ್ಥೆಯನ್ನು ಅಣಕಿಸುವಂತೆ ಮಾಡುತ್ತಿತ್ತು. ಐಎನ್ ಎಸ್ ಸಿಂಧೂರತ್ನ ದುರಂತ, ಐಎನ್ ಎಸ್ ಸಿಂಧೂರಕ್ಷಕ್ ದುರಂತ, ಐಎನ್ ಎಸ್ ವಿರಾಟ್ ಅಗ್ನಿ ಅವಘಡ, ಐಎಎನ್ ಎಸ್ ಕೊಂಕಣ,. ಐಎನ್ಎಸ್ ತಲ್ವಾರ್ ಹೀಗೆ ಸಾಲು-ಸಾಲು ಜಲಾಂತರ್ಗಾಮಿ ನೌಕೆಗಳಲ್ಲಿನ ಅಗ್ನಿ ದುರಂತಗಳು ಭಾರತವನ್ನು ವಿಶ್ವ ಮಟ್ಟದಲ್ಲಿ ಮುಜುಗರಕ್ಕೀಡಾಗುವಂತೆ ಮಾಡಿದ್ದವು. ಆದರೆ ನೂತನ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಈ ಎರಡು ವರ್ಷಗಳ ಅವಧಿಯಲ್ಲಿ ಇಂತಹ ಅವಘಡಗಳ ಸಂಖ್ಯೆ ಗಣನೀಯವಾಗಿ ಇಳಿದಿದೆ.
ಐಎನ್ ಎಸ್ ವಿಕ್ರಮಾಧಿತ್ಯ ಮತ್ತು ಐಎನ್ ಎಸ್ ಸತ್ಪುರ
ರಕ್ಷಣಾ ಇಲಾಖೆಯ ಮೊದಲ ಗಮನಾರ್ಹ ಯಶಸ್ಸು ಎಂದರೆ ಭಾರತೀಯ ನೌಕಾದಳಕ್ಕೆ ಅತ್ಯಾಧುನಿಕ ಯುದ್ಧ ನೌಕೆ ಐಎನ್ ಎಸ್ ವಿಕ್ರಮಾಧಿತ್ಯವನ್ನು ಯುದ್ಧ ನೌಕೆಯನ್ನು ಸೇರ್ಪಡೆಗೊಳಿಸಿದ್ದು. 2014 ಜೂನ್ 14ರಂದು ಐಎನ್ ಎಸ್ ವಿಕ್ರಮಾಧಿತ್ಯ ಯುದ್ಧ ನೌಕೆಯನ್ನು ಭಾರತೀಯ ನೌಕಾದಳಕ್ಕೆ ಸೇರಿಸಲಾಯಿತು. ಇನ್ನು ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ಭಾರತದಲ್ಲೇ ನಿರ್ಮಾಣವಾದ ಐಎನ್ ಎಸ್ ಸತ್ಪುರ ಕೂಡ ರಕ್ಷಣಾ ಇಲಾಖೆಯ ಸಾಧನೆ ಎಂದೇ ಹೇಳಬೇಕು. ಪ್ರಾಜೆಕ್ಟ್ 17 ಎ ಎಂಬ ಯೋಜನೆ ಅಡಿಯಲ್ಲಿ 7 ಸಮರ ನೌಕೆಗಳನ್ನು ಭಾರತೀಯ ಸೇನೆಗೆ ಸೇರ್ಪಡೆಗೊಳಿಸಲಾಯಿತು. ಸಾಮರ್ಥ್ಯದ ವಿಚಾರದಲ್ಲಿ ಭಾರತದ ಇತರೆ ಸಮರ ನೌಕೆಗಳನ್ನು ಮೀರಿಸುವ ಐಎನ್ ಎಸ್ ಸತ್ಪುರ ಬೃಹತ್ ಆಕಾರ ಮತ್ತು ದೈತ್ಯ ದೇಹಿಯಾಗಿದ್ದು, ಶುತ್ರು ಪಾಳಯದ ಸಮರ ನೌಕೆಗಳನ್ನು ರಾಡಾರ್ ಮೂಲಕ ಪತ್ತೆ ಹಚ್ಚಿ ತನ್ನಲ್ಲಿರುವ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಮೂಲಕ ಹೊಡೆದುರುಳಿಸುತ್ತದೆ.
ರಕ್ಷಣೆಗೆ ತಂತ್ರಜ್ಞಾನ ಮತ್ತು ಆಧುನಿಕತೆಯ ಟಚ್
ಭಾರತಕ್ಕೆ ಪ್ರಮುಖ ಬಾಹ್ಯ ಬೆದರಿಕೆಗಳೆಂದರೆ ಅದು ಚೀನಾ ಮತ್ತು ಪಾಕಿಸ್ತಾನ. ಹೀಗಾಗಿ ಈ ಎರಡೂ ದೇಶಗಳ ಆಟಾಟೋಪವನ್ನು ತಹಬದಿಗೆ ತರಲು ರಕ್ಷಣಾ ಇಲಾಖೆಯ ಆಧುನಿಕತೆಯಿಂದ ಮಾತ್ರ ಸಾಧ್ಯ ಎಂದು ಅರಿತಿದ್ದ ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ರಕ್ಷಣಾ ಇಲಾಖೆಗೆ ತಂತ್ರಜ್ಞಾನ ಮತ್ತು ಆಧುನಿಕತೆಯ ಟಚ್ ನೀಡಲು ಮುಂದಾದರು. ಇದರ ಪರಿಣಾಮವಾಗಿಯೇ ಭಾರತ ಇಂದು ಭಾರತೀಯ ಸೇನೆಗೆ ಸಾಕಷ್ಟು ಅತ್ಯಾಧುನಿಕ ಪರಿಕರಗಳು ಸೇರ್ಪಡೆಯಾಗಿವೆ. ಫ್ರಾನ್ಸ್ ನೊಂದಿಗೆ ರಫಾಲೆ ಯುದ್ಧ ವಿಮಾನ ಖರೀದಿ, ಪರಮಾಣು ಶಸ್ತ್ರಾಸ್ತ್ರ ಸಹಿತ ಜಲಾಂತರ್ಗಾಮಿ ನೌಕೆಗಳು, ಪರಮಾಣು ಶಸ್ತ್ರಾಸ್ತ್ರ ನಿರೋಧಕ ಜಲಾಂತರ್ಗಾಮಿಗಳು, ಕಣ್ಗಾವಲು ಜಲಾಂತರ್ಗಾಮಿಗಳು ಇಂದು ಭಾರತೀಯ ನೌಕೆ ಪಡೆಯ ಬತ್ತಳಿಕೆ ಸೇರಿವೆ. ಭೂದಳದ ಬಲಿಷ್ಠತೆಗಾಗಿ ಅತ್ಯಾಧುನಿಕ ಆರ್ಟಿಲರಿ ಗನ್ ಗಳನ್ನು ಭಾರತದಲ್ಲಿಯೇ ತಯಾರಿಸಲು ರಕ್ಷಣಾ ಇಲಾಖೆಗೆ ಆರ್ಥಿಕ ನೆರವು ನೀಡಲಾಯಿತು. ಇದಲ್ಲದೆ ಲಘು ಯುದ್ಧ ಹೆಲಿಕಾಪ್ಟರ್ ಗಳು, ದೇಶೀ ನಿರ್ಮಿತ ಸಿಡಿಗುಂಡು ನಿರೋಧಕ ಸಮರ ನೌಕೆಗಳು, ಅತ್ಯಾಧುನಿಕ ಟ್ಯಾಂಕರ್ ಗಳು, ರಾಡಾರ್ ವ್ಯವಸ್ಥೆಗಳನ್ನು ಇದೀಗ ಭಾರತದಲ್ಲಿಯೇ ತಯಾರಿಸಲಾಗುತ್ತಿದೆ.
ಚೀನಾ-ಪಾಕ್ ನಿದ್ದೆಗೆಡಿಸಿದ ರಕ್ಷಣಾ ಪರಿಕರಗಳ ಸೇರ್ಪಡೆ
ಚುನಾವಣಾ ಪೂರ್ವದಲ್ಲಿ ನರೇಂದ್ರ ಮೋದಿ ಅವರು ತಮ್ಮ ಪ್ರಣಾಳಿಕೆಯಲ್ಲಿ ವಾಗ್ದಾನ ಮಾಡಿದಂತೆ ಭಾರತೀಯ ರಕ್ಷಣಾ ವಲಯವನ್ನು ಬಲಿಷ್ಠಗೊಳಿಸಲು ತೆಗೆದುಕೊಂಡ ಕ್ರಮಗಳ ಪೈಕಿ ಕೆಲ ಪ್ರಮುಖ ಕ್ರಮಗಳೆಂದರೆ, ಚೀನಾವನ್ನು ಮತ್ತು ಅದರ ಜಲಾಂತರ್ಗಾಮಿ ನೌಕೆಗಳನ್ನು ತಡೆಯಲು ಅಮೆರಿಕ ನೌಕಾಪಡೆಯ ಪ್ರಬಲ ಶಕ್ತಿಯಾಗಿರುವ ಪೊಸೈಡೆನ್ 8ಐ ಕಣ್ಗಾವಲು ವಿಮಾನವನ್ನು ಭಾರತೀಯ ವಾಯು ಸೇನೆಗೆ ಸೇರ್ಪಡೆಗೊಳಿಸುವ ಮೂಲಕ ಸೇನಾ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. ಪ್ರಸ್ತುತ ಇಂತಹ 2 ವಿಮಾನಗಳು ಭಾರತೀಯ ವಾಯುಸೇನೆಯ ಬತ್ತಳಕೆಯಲ್ಲಿದ್ದು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದಲ್ಲಿ ಒಂದು ಈಗಾಗಲೇ ಕಾರ್ಯ ನಿರ್ವಹಿಸುತ್ತಿದೆ. ಇದು ಮಾತ್ರವಲ್ಲದೇ ಫ್ರಾನ್ಸ್ ನೊಂದಿಗೆ ರಾಫೆಲ್ ಯುದ್ಧ ವಿಮಾನ ಒಪ್ಪಂದ, ದೇಶೀ ನಿರ್ಮಿತ ಬ್ರಹ್ನೋಸ್ ಕ್ಷಿಪಣಿಗಳು, ಇತ್ತೀಚೆಗಷ್ಟೇ ಡಿಆರ್ ಡಿಒ ಅಭಿವೃದ್ಧಿ ಪಡಿಸಿದ ಕ್ಷಿಪಣಿ ನಿರೋಧಕ ವ್ಯವಸ್ಥೆಯಂತಹ ಸಾಲು-ಸಾಲು ರಕ್ಷಣಾ ಪರಿಕರಗಳು ಈಗಾಗಲೇ ಸೇನೆಯ ಸೇವೆಗೆ ಸೇರ್ಪಡೆಗೊಂಡಿವೆ. ಇದಲ್ಲದೆ ಸಮುದ್ರಗಡಿಯ ಕಣ್ಗಾವಲಿಗಾಗಿ ಪರಮಾಣು ಶಸ್ತ್ರಾಸ್ತ್ರ ಸಹಿತ ಜಲಾಂತರ್ಗಾಮಿ ಮತ್ತು ಪರಮಾಣು ಶಸ್ತ್ರಾಸ್ತ್ರ ನಿರೋಧಕ ಜಲಾಂತರ್ಗಾಮಿ ನೌಕೆಗಳನ್ನು ಭಾರತ ಈಗಾಗಲೇ ಆಯಕಟ್ಟಿನ ಸ್ಥಳದಲ್ಲಿ ನಿಯೋಜಿಸಿದೆ. ಇನ್ನು ಗಡಿಕಾಯುವ ಸೈನಿಕರ ರಕ್ಷಣೆಗಾಗಿ ಹಲವು ದಶಕಗಳಿಂದ ಕೇಳಿಬರುತ್ತಿದ್ದ ಪ್ರಮುಖ ಬೇಡಿಕೆಯಾದ ಬುಲೆಟ್ ಪ್ರೂಫ್ ಜಾಕೆಟ್ ಒದಗಿಸುವ ಕಾರ್ಯಕೂಡ ಆಗಿದ್ದು, ಇದೇ ಎನ್ ಡಿಎ ಸರ್ಕಾರದ ಅವಧಿಯಲ್ಲಿ.
ಮೇಕ್ ಇನ್ ಇಂಡಿಯಾ ಯಶಸ್ಸು; ರಫ್ತಿಗೆ ಸಿದ್ದವಾಯ್ತು ಭಾರತದ ರಕ್ಷಣಾ ಪರಿಕರಗಳು
ರಕ್ಷಣಾ ವಲಯದಲ್ಲಿ ಇಡೀ ವಿಶ್ವವೇ ಬೆರಗಾಗುವ ಸಾಧನೆ ಗೈಯ್ಯುತ್ತಿರುವ ಭಾರತೀಯ ವಿಜ್ಞಾನಿಗಳ ಸಾಧನೆಗೆ ಮತ್ತೊಂದು ಗರಿ ಸೇರ್ಪಡೆಯಾಗುತ್ತಿದ್ದು, ಇಷ್ಟು ದಿನ ವಿದೇಶಗಳಿಂದ ರಕ್ಷಣಾ ಪರಿಕರಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ಭಾರತ ಇನ್ನು ಮುಂದೆ ತನ್ನದೇ ತಂತ್ರಜ್ಞಾನದ ಆಧುನಿಕ ಶಸ್ತ್ರಾಸ್ತ್ರಗಳನ್ನು ವಿದೇಶಗಳಿಗೆ ರಫ್ತು ಮಾಡಲು ಸಿದ್ಧತೆ ನಡೆಸಿದೆ. ಸ್ವದೇಶಿ ನಿರ್ಮಿತ ರಕ್ಷಣಾ ಪರಿಕರಗಳನ್ನು ಈಗಾಗಲೇ ಭಾರತ ವಿದೇಶಗಳಿಗೆ ರಫ್ತು ಮಾಡುತ್ತಿದೆಯಾದರೂ, ಈ ಪ್ರಮಾಣವನ್ನು ಇದೀಗ ದೊಡ್ಡ ಮಟ್ಟಕ್ಕೆ ರಕ್ಷಣಾ ಇಲಾಖೆ ಸಿದ್ಧತೆ ನಡೆಸುತ್ತಿದೆ. ಇದೇ ಕಾರಣಕ್ಕಾಗಿ ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ಕ್ರಮ ಕೈಗೊಂಡಿದ್ದ ಕೇಂದ್ರ ರಕ್ಷಣಾ ಇಲಾಖೆ ಸ್ವದೇಶಿ ತಂತ್ರಜ್ಞಾನದ ಯೋಜನೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿತ್ತು. ಇದೀಗ ಅದರ ಫಲ ನಿಧಾನವಾಗಿ ಗೋಚರಿಸುತ್ತಿದ್ದು, ಭಾರತದ ಸ್ವದೇಶಿ ನಿರ್ಮಿತ ಐದು ಪ್ರಮುಖ ಶಸ್ತ್ರಾಸ್ತ್ರಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಎಲ್ ಸಿಹೆಚ್ (ಲಘು ಸಮರ ಹೆಲಿಕಾಪ್ಟರ್), ಬ್ರಹ್ಮೋಸ್ ಮತ್ತು ಅಗ್ನಿ ಕ್ಷಿಪಣಿಗಳು, ತೇಜಸ್ ಲಘು ಯುದ್ಧ ವಿಮಾನ, ಆಕಾಶ್ ಕ್ಷಿಪಣಿಗಳು, ಎಇಡಬಲ್ಯೂಸಿ ಕಣ್ಗಾವಲು ವ್ಯವಸ್ಥೆ(Airborne early warning and control)ಯಂತಹ ಸಾಕಷ್ಟು ರಕ್ಷಣಾ ಪರಿಕರಗಳು ಇದೀಗ ವಿದೇಶಗಳಲ್ಲಿಯೂ ಬೇಡಿಕೆ ಸೃಷ್ಟಿಸಿವೆ.
ಶತ್ರು ದೇಶಗಳಿಗೆ ತನ್ನ ಕಠಿಣ ನಿರ್ಧಾರದ ಮೂಲಕ ಎಚ್ಚರಿಕೆ ಸಂದೇಶ ರವಾನೆ
ಕೇವಲ ರಕ್ಷಣಾ ಪರಿಕರಗಳ ಸೇರ್ಪಡೆ ಅಥವಾ ಆಮದು ಮಾತ್ರವಲ್ಲದೇ ತನ್ನ ಕಠಿಣ ನಿಲುವಿನಿಂದಲೂ ಕೇಂದ್ರ ರಕ್ಷಣಾ ಇಲಾಖೆ ಬಾಹ್ಯ ಬೆದರಿಕೆ ಒಡ್ಡಿರುವ ದೇಶಗಳಿಗೆ ಪರೋಕ್ಷ ಎಚ್ಚರಿಕೆ ರವಾನಿಸಿತ್ತು. ಇದಕ್ಕೆ ಸ್ಪಷ್ಟ ನಿದರ್ಶನಗಳೆಂದರೆ ಚೀನಾದ ವಿರೋಧದ ನಡುವೆಯೂ ಭಾರತ ಅಮೆರಿಕ ಮತ್ತು ಜಪಾನ್ ದೇಶಗಳೊಂದಿಗೆ ಜಂಟಿ ಸಮರಾಭ್ಯಾಸದಲ್ಲಿ ತೊಡಗಲು ತನ್ನ ಅತ್ಯಾಧುನಿಕ ಪಡೆಯನ್ನು ರವಾನಿಸಿತ್ತು. ಭಾರತದ ಈ ನಿಲುವು ಇಂದಿಗೂ ಚೀನಾಕ್ಕೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇನ್ನು ರಕ್ಷಣಾ ಕ್ಷೇತ್ರಕ್ಕೆ ಎಫ್ ಡಿಐಗೆ ಅನುವು ಮಾಡಿಕೊಟ್ಟ ಪರಿಣಾಮ ಇಂದು ದೇಶದ ಹಲವು ಉಧ್ಯಮಿಗಳು ರಕ್ಷಣಾ ಕ್ಷೇತ್ರದಲ್ಲಿ ಬಂಡವಾಳ ವಿನಿಯೋಗಿಸುತ್ತಿದ್ದಾರೆ. ಇದಕ್ಕೆ ಇತ್ತೀಚಿನ ನಿದರ್ಶನವೆಂದರೆ ಉಕ್ರೇನ್ ಮೂಲದ ರಕ್ಷಣಾ ಸಂಸ್ಥೆಯೊಂದಿಗೆ ಸೇರಿ ರಿಲಯನ್ಸ್ ಸಂಸ್ಥೆ ಭಾರತದಲ್ಲಿಯೇ ಸಣ್ಣ ಪ್ರಮಾಣದ ಶಸ್ತ್ರಾಸ್ತ್ರ ತಯಾರಿಕೆಯಲ್ಲಿ ತೊಡಗಿದೆ.
ಲೇಸರ್ ಬೇಲಿಯಿಂದ ಮತ್ತಷ್ಟು ಭದ್ರವಾಯ್ತು ಗಡಿ
ಉಗ್ರರನ್ನು ಮಟ್ಟ ಹಾಕುತ್ತೇವೆ ಎಂದು ಮಾತುಕೊಟ್ಟು ಬಳಿಕ ಬೆನ್ನ ಹಿಂದೆ ಉಗ್ರರನ್ನು ಭಾರತದ ಮೇಲೆ ದಾಳಿಗೆ ಅಟ್ಟುವ ಪಾಕಿಸ್ತಾನದ ಕುತಂತ್ರಕ್ಕೆ ದಿಟ್ಟ ಉತ್ತರ ನೀಡಿರುವ ಭಾರತ ಇದೀಗ ತನ್ನ ರಕ್ಷಣೆಗಾಗಿ ಗಡಿಯಲ್ಲಿ ಲೇಸರ್ ಬೇಲಿಗಳನ್ನು ನಿರ್ಮಿಸಿದೆ. ವಿಶ್ವದ ಅತ್ಯಂತ ಅಪಾಯಕಾರಿ ಗಡಿಗಳಲ್ಲಿ ಒಂದಾಗಿರುವ ಭಾರತ-ಪಾಕಿಸ್ತಾನ ಗಡಿಯಲ್ಲಿ ಉಗ್ರರ ಒಳ ನುಸುಳುವಿಕೆಯನ್ನು ತಡೆಯಲು ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದ್ದು, ಇದರ ಮೊದಲ ಹಂತವಾಗಿ ಪಂಜಾಬ್ ಪ್ರಾಂತ್ಯದ ಗಡಿ ಪ್ರದೇಶದಲ್ಲಿ ಭಾರತ ಅತ್ಯಾಧುನಿಕ ತಂತ್ರಜ್ಞಾನದ ಲೇಸರ್ ಬೇಲಿಗಳನ್ನು ನಿರ್ಮಿಸಿದೆ. ಭಾರತದತ್ತ ನಿರಂತರವಾಗಿ ಉಗ್ರರನ್ನು ಅಟ್ಟುತಲೇ ಇರುವ ಪಾಕಿಸ್ತಾನಕ್ಕೆ ಈ ಅತ್ಯಾಧುನಿಕ ತಂತ್ರಜ್ಞಾನದ ಲೇಸರ್ ಬೇಲಿ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಭಾರತ ಇದೀಗ ಪಾಕಿಸ್ತಾನ ಮತ್ತು ಉಗ್ರರ ವಿರುದ್ಧ ತೊಡೆ ತಟ್ಟಿ ನಿಂತಿದೆ. ಪಠಾಣ್ ಕೋಟ್ ವಾಯುನೆಲೆ ಮೇಲಿನ ಉಗ್ರ ದಾಳಿ ಬಳಿಕ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ಭಾರತದ ಗಡಿಗಳನ್ನು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಭದ್ರ ಪಡಿಸುವುದಾಗಿ ಹೇಳಿತ್ತು. ಇದೀಗ ಕೊಟ್ಟ ಮಾತಿನಂತೆ ಕೇವಲ ನಾಲ್ಕೇ ತಿಂಗಳಲ್ಲಿ ಗಡಿಯಲ್ಲಿ ಲೇಸರ್ ಬೇಲಿ ಅಳವಡಿಸುವ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಆ ಮೂಲಕ ಭಾರತದ ಗಡಿ ಪ್ರದೇಶವನ್ನು ಮತ್ತಷ್ಟು ಸುರಕ್ಷಿತವಾಗಿಸಿದೆ.
ವಿಶ್ವಕ್ಕೇ ಸಾಮರ್ಥ್ಯ ಪ್ರದರ್ಶನ ಮಾಡಿದ ಭಾರತೀಯ ಸೇನೆ
ಪಾಕಿಸ್ತಾನದ ಅಬೋಟಾಬಾದ್ ನಲ್ಲಿ ಅವಿತು ಕುಳಿತ್ತಿದ್ದ ಅಲ್ ಖೈದಾ ಉಗ್ರ ಸಂಘಟನೆ ಮುಖ್ಯಸ್ಥ ಒಸಾಮ ಬಿನ್ ಲಾಡೆನ್ ನನ್ನು ಅಮೆರಿಕ ನೇವೀ ಸೀಲ್ ಕಾರ್ಯಾಚರಣೆ ಮೂಲಕ ಪಾಕಿಸ್ತಾನದಲ್ಲಿಯೇ ಕೊಂದು ಹಾಕಿತ್ತು. ಆ ಮೂಲಕ ತನ್ನ ಸೇನಾ ಸಾಮರ್ಥ್ಯದ ಕುರಿತು ವಿಶ್ವಕ್ಕೇ ಪರಿಚಯಿಸಿತ್ತು. ಇಂತಹುದೇ ಕಾರ್ಯಾಚರಣೆಯನ್ನು ಭಾರತೀಯ ಸೇನೆ ಮಯನ್ಮಾರ್ ನಲ್ಲಿ ನಡೆಸಿತ್ತು. ಮಣಿಪುರ ಮತ್ತು ನಾಗಾಲ್ಯಾಂಡ್ ಗಳಲ್ಲಿ ಅಟ್ಟಹಾಸ ಮೆರೆದು 20 ಮಂದಿ ಭಾರತೀಯ ಯೋಧರನ್ನು ಧಾರುಣವಾಗಿ ಕೊಂದು ಮಯನ್ಮಾರ್ ನಲ್ಲಿ ಅವಿತು ಕುಳಿತಿದ್ದ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿದ್ದ ಭಾರತೀಯ ಸೇನೆ ಮಯನ್ಮಾರ್ ಗಡಿಯೊಳಗೆ ನುಗ್ಗಿ ಆ ಉಗ್ರರನ್ನು ಕೊಂದು ಹಾಕಿತ್ತು. ಈ ಘಟನೆ ಕೇವಲ ಭಾರತ ಮಾತ್ರವಲ್ಲದೇ ಇಡೀ ವಿಶ್ವವೇ ಭಾರತೀಯ ಸೇನೆಯ ಕಾರ್ಯಾಚರಣೆ ಕುರಿತಂತೆ ಅಚ್ಚರಿಯಿಂದ ನೋಡುತ್ತಿತ್ತು. ಆ ಮೂಲಕ ಭಾರತೀಯ ಸೇನೆ ಪಾಕಿಸ್ತಾನಕ್ಕೆ ಪರೋಕ್ಷ ಎಚ್ಚರಿಕೆ ರವಾನಿಸಿತ್ತು.