ಪ್ರೇಮಕ್ಕೆ ಕಣ್ಣಿಲ್ಲ ಅಂತ ಹೇಳುವುದು ನಿಜ. ಪ್ರೀತಿ ಯಾರ ಮೇಲೆ ಬೇಕಾದರೂ ಯಾವಾಗ ಬೇಕಾದರೂ ಹುಟ್ಟಿಕೊಳ್ಳಬಹುದು. ಇಲ್ಲಿ ಶಾನೋನ್ ಎಂಬ ಹುಡುಗಿಗೆ ಲವ್ವಾಗಿದೆ. ಅದು ಹುಡುಗನ ಮೇಲೆ ಅಲ್ಲ, ಸೀಮಾ ಅನ್ನುವ ಹುಡುಗಿ ಮೇಲೆ! ಶಿಬಿರವೊಂದರಲ್ಲಿ ಪಾಠ ಮಾಡುತ್ತಿದ್ದಾಗ ಶಾನೋನ್, ಸೀಮಾಳನ್ನು ನೋಡಿದ್ದು. ಲವ್ ಅಟ್ ಫಸ್ಟ್ ಸೈಟ್ ಅಂತಾರಲ್ಲಾ ಹಾಗೇ ಆಯ್ತು. ಸೀಮಾನನ್ನು ನೋಡಿದಾಕ್ಷಣ ಶಾನೋನ್ ಮನಸ್ಸಲ್ಲೇ ಅಂದುಕೊಂಡ್ಳು...ಮದ್ವೆ ಆಗುವುದಾದರೇ ಇದೇ ಹುಡುಗಿಯನ್ನು. ಆದ್ರೆ ಕ್ಯಾಲಿಫೋರ್ನಿಯಾದಲ್ಲಿ ಸಲಿಂಗಿಗಳ ವಿವಾಹ ಅಷ್ಟು ಸುಲಭವಾಗಿರಲಿಲ್ಲ. ಇದನ್ಯಾವುದನ್ನೂ ಲೆಕ್ಕಿಸದೆ ಶಾನೋನ್ ಸೀಮಾ ಒಂದಾದರು. ಇಬ್ಬರೂ ಬೇರೆ ಬೇರೆ ಧರ್ಮ, ಸಂಸ್ಕೃತಿ ಹಾಗೂ ನಂಬಿಕೆಯುಳ್ಳವರು. ಆದರೆ ಅವರ ಪ್ರೀತಿ ಇಬ್ಬರನ್ನು ಒಂದಾಗುವಂತೆ ಮಾಡಿತ್ತು.
ತಮ್ಮ ಸಂಬಂಧದ ಬಗ್ಗೆ ಮನೆಯಲ್ಲಿ ಹೇಳಿದಾಗ ಅವರು ಅದನ್ನು ಒಪ್ಪಿಕೊಂಡರು. ಕುಟುಂಬ ಮತ್ತು ಸ್ನೇಹಿತರ ಬೆಂಬಲ ಸಿಕ್ಕಿರುವುದರಿಂದಲೇ ಲಾಸ್ ಏಂಜಲೀಸ್‌ನಲ್ಲಿ ನಮ್ಮ ವಿವಾಹ 2013 ಜೂನ್ ತಿಂಗಳಲ್ಲಿ ನೆರವೇರಿತು. ನಮಗೆ ಸಿಕ್ಕ ಬೆಂಬಲವೇ ದೊಡ್ಡ ಉಡುಗೊರೆ ಅಂತಾರೆ ಶಾನೋನ್ ಮತ್ತು ಸೀಮಾ.
ನಮ್ಮ ಮದುವೆ ಖಾಸಗಿ ಕಾರ್ಯಕ್ರಮವಾಗಿದ್ದರೂ, ಮದ್ವೆಯ ಫೋಟೋ ನೋಡಿ ಬಹಳಷ್ಟು ಮಂದಿ ನಮ್ಮನ್ನು ಹರಸಿದ್ದರು. ನಮಗೆ ತಿಳಿಯುವ ಮುನ್ನವೇ ನಮ್ಮ ವಿವಾಹದ ಫೋಟೋಗಳು ಜಗತ್ತಿನಾದ್ಯಂತ ಸುದ್ದಿ ಮಾಡಿದ್ದವು. ನಮ್ಮಂತೆಯೇ ಇರುವ ಜನರಿಗೆ ನಾವು ಮಾದರಿಯಾಗಿದ್ದೆವು. ಜನರು ನಮ್ಮನ್ನು ಗುರುತಿಸತೊಡಗಿದ್ದರು. ಬದುಕಲ್ಲಿ ತೆಗೆದುಕೊಂಡ ಈ ದಿಟ್ಟ ನಿರ್ಧಾರಕ್ಕೆ ನಮ್ಮನ್ನು ಅಭಿನಂದಿಸಿದರು.
ತಮ್ಮ ಮದ್ವೆಯ ಬಗ್ಗೆ ಸೀಮಾ ಹೇಳುವುದು ಹೀಗೆ...ಭಾರತೀಯ ಸಂಸ್ಕೃತಿಯಂತೆ ನಾನು ಪಲ್ಲಕ್ಕಿಯಲ್ಲಿ ಕುಳಿತು ಮದುವೆ ಮಂಟಪಕ್ಕೆ ಬಂದಿದ್ದೆ. ಶಾನೋನ್ ತನ್ನ ಅಮ್ಮನೊಂದಿಗೆ ಹೂಗುಚ್ಛ ಹಿಡಿದು ಬಂದಿದ್ದಳು. ಅಮೆರಿಕ ಮತ್ತು ಭಾರತೀಯ ಸಂಪ್ರದಾಯಗಳ ಮಿಲನವಾಗಿತ್ತು ಅದು. ಸಿಂಧೂರ, ಮಂಟಪ, ವರಮಾಲೆ, ಭಾರತೀಯ ಸಿಹಿತಿಂಡಿಗಳು...ಭಾರತೀಯ ಸಂಸ್ಕೃತಿಯನ್ನು ಬಿಂಬಿಸಿದರೆ, ಹೂಗುಚ್ಛ ಹಿಡಿದು ಜತೆಯಾಗಿ ನಡೆದು ಆಮೇಲೆ ಆ ಕಿಸ್ ಘಳಿಗೆ...ಅಮೆರಿಕನ್ ಸಂಸ್ಕೃತಿಯಂತೆ ನಡೆಯಿತು.
ನಾವು ಈ ಸಮಾಜಕ್ಕೆ ಹೆದರಿ ಕೂರುತ್ತಿದ್ದರೆ ಇದ್ಯಾವುದೂ ನಡೆಯುತ್ತಿರಲಿಲ್ಲ. ನೀವು ಯಾರನ್ನಾದರೂ ಪ್ರೀತಿಸಿ ಅವರ ಜತೆಯೇ ಬದುಕು ಸಾಗಿಸಬೇಕು ಅಂತಿದ್ದರೆ ಪರಿಸ್ಥಿತಿಯೂ ಅದಕ್ಕೆ ಅನುಕೂಲವಾಗಿರುವಂತೆ ನಾವೇ ಮಾಡಿಕೊಳ್ಳಬೇಕು. ನಾವು ಮನಸ್ಸಲ್ಲಿ ಅಂದುಕೊಂಡದ್ದನ್ನು ಮಾಡಲೇ ಬೇಕು ಎಂಬ ಛಲ ನಮ್ಮಲ್ಲಿರಬೇಕು. ನಮ್ಮ ಕನಸುಗಳನ್ನು ಬೆನ್ನತ್ತಿ ಹೋದರೆ ಎಲ್ಲವೂ ಶುಭವಾಗುತ್ತದೆ ಎಂಬುದು ಈ ದಂಪತಿಗಳ ವಿಶ್ವಾಸದ ನುಡಿ.
ಭಾರತೀಯ ಸಮಾಜದಲ್ಲಿ ಪ್ರೇಮ ವಿವಾಹಗಳಿಗೆ ಅಡ್ಡಿಯಾಗಿ ಬರುವುದೇ ಜಾತಿ, ಧರ್ಮಗಳು. ಇನ್ನು ಸಲಿಂಗ ವಿವಾಹ ದೂರ ದ ಮಾತು. ಹೆಣ್ಣಕ್ಕಳಿಗೆ 30 ವರ್ಷವಾದರೂ ಮದ್ವೆಯಾಗಿಲ್ಲ ಎಂಬುದು ನಮಗೆ ದೊಡ್ಡ ಸಮಸ್ಯೆಯಾಗಿ ಕಾಣುತ್ತದೆ. ಸಲಿಂಗಕಾಮವನ್ನು ಜನ ಛೀ..ಥೂ ಅಂತಾರೆ. ಸಲಿಂಗ ವಿವಾಹಕ್ಕೆ ನಮ್ಮಲ್ಲಿ ಅನುಮತಿ ಇಲ್ಲ. ನಮ್ಮ ದೇಶ ಇದೆನ್ನೆಲ್ಲಾ
ಯಾವಾಗ ಒಪ್ಪಿಕೊಳ್ಳುತ್ತೆ? ಎಂಬುದು ಸೀಮಾಳ ಪ್ರಶ್ನೆ.
ನಾನು ಮತ್ತು ಶಾನೋನ್ ಕಟ್ಟುಪಾಡುಗಳನ್ನು ಮೀರಿ ಬಂದಿದ್ದೇವೆ. ನನ್ನನ್ನು ಪ್ರೀತಿಸಿದವಳನ್ನೇ ಮದ್ವೆಯಾಗಿದ್ದೇನೆ ಎಂಬ ಸಂತೃಪ್ತಿ ನಮ್ಮಿಬ್ಬರದ್ದೂ ಎಂದು ಹೇಳುವಾಗ ಸೀಮಾ-ಶಾನೋನ್ ಕೈ ಹಿಡಿದುಕೊಂಡೇ ಇದ್ದಳು. ಅವರ ಕಣ್ಣಲ್ಲಿ ಪ್ರೀತಿ ಜಿನುಗುತ್ತಿತ್ತು.