ಪ್ರೀತಿ, ಸಿನಿಮಾ ಮತ್ತು ಫೇಸ್ ಬುಕ್ 
ಲೇಖನಗಳು

ಪ್ರೀತಿ, ಸಿನಿಮಾ ಮತ್ತು ಫೇಸ್ ಬುಕ್

ಶೀರ್ಷಿಕೆ ನೋಡಿದ ಕೂಡಲೇ ವಿಷಯ ಏನೆಂದು ನಿಮಗೆ ಗೊತ್ತಾಗಿರಬೇಕು ಅಲ್ವಾ? ಹೌದು ಇವತ್ತು ವ್ಯಾಲೆಂಟೈನ್ಸ್ ಡೇ(ಪ್ರೇಮಿಗಳ ದಿನ)...

ಶೀರ್ಷಿಕೆ ನೋಡಿದ ಕೂಡಲೇ ವಿಷಯ ಏನೆಂದು  ನಿಮಗೆ ಗೊತ್ತಾಗಿರಬೇಕು ಅಲ್ವಾ? ಹೌದು ಇವತ್ತು ವ್ಯಾಲೆಂಟೈನ್ಸ್ ಡೇ(ಪ್ರೇಮಿಗಳ ದಿನ). ಪಾಶ್ಚಾತ್ಯರಿಂದ ಬಳುವಳಿಯಾಗಿ ಸಿಕ್ಕ ಈ ಆಚರಣೆ ಭಾರತದಲ್ಲಿ ಇಂದು ಗಣರಾಜ್ಯೋತ್ಸವ, ಶಿವರಾತ್ರಿಯಷ್ಟೇ ಪ್ರಾಮುಖ್ಯತೆಯನ್ನು ಪಡೆದಿದೆ ಎಂದರೆ ತಪ್ಪಾಗಲಾರದು. ಪ್ರೇಮಿಗಳ ದಿನ ಎಂದ ಕೂಡಲೇ ಪ್ರೀತಿಸಲು ಪ್ರತ್ಯೇಕ ದಿನ ಬೇಕಾ? ಅದೊಂದಿನ ಪ್ರೀತಿ ಮಾಡಿದರೆ ಸಾಕಾ? ಕೆಂಪು ಗುಲಾಬಿ ಕೊಟ್ಟು ಐ ಲವ್ ಯೂ ಅಂತಾ ಹೇಳಿ ಇಲ್ಲವೇ ದುಬಾರಿ ಗಿಫ್ಟ್, ಕಾರ್ಡ್ ಕೊಟ್ಟು ಪಾರ್ಕ್ ಸಿನಿಮಾ ಸುತ್ತಾಡಿ ವ್ಯಾಲೆಂಟೈನ್ಸ್ ಡೇ ಆಚರಿಸುವ ಪಾಶ್ಚಾತ್ಯರ ಪ್ರೇಮದ ಹುಚ್ಚು ಭಾರತೀಯರಾದ ನಮಗ್ಯಾಕೆ ಬೇಕು? ಎಂಬ ಪ್ರಶ್ನೆ ಪ್ರತೀ ವ್ಯಾಲೆಂಟೈನ್ಸ್ ಡೇ ದಿನದಂದು ಕೇಳಿ ಬರುತ್ತದೆ. ಈ ಬಗ್ಗೆ ಮಾಧ್ಯಮಗಳು ಸಾಕಷ್ಟು ಚರ್ಚೆಗಳನ್ನು ನಡೆಸಿದರೆ, ಕೆಲವೊಂದು ಸಂಘಟನೆಗಳು ವ್ಯಾಲೆಂಟೈನ್ಸ್ ಡೇ ವಿರೋಧಿಸಿ ಎಂಬ ಘೋಷಣೆಗಳನ್ನು ಕೂಗುತ್ತವೆ. ಆದರೂ ಭಾರತದಲ್ಲಿ ವ್ಯಾಲೆಂಟೈನ್ಸ್ ಆಚರಣೆ ಮುಂದುವರಿಯುತ್ತಲೇ ಇದೆ. ಯಾಕೆಂದರೆ ಇಂತಹ ಚರ್ಚೆ, ಪ್ರತಿಭಟನೆಗಳಿಂದಲೇ ವ್ಯಾಲೆಂಟೈನ್ಸ್ ಡೇ ಇನ್ನಷ್ಟು ಪ್ರಚಾರ ಗಿಟ್ಟಿಸಿಕೊಂಡಿವೆ ಎಂದರೆ ತಪ್ಪಾಗಲಾರದು.

ಪ್ರತೀವರ್ಷ ಫೆ.14 ಬಂತೆಂದರೆ ಸಾಕು...ಪಾರ್ಕ್, ಸಿನಿಮಾ ಹಾಲ್ ಎಲ್ಲೆಡೆಯೂ ಪ್ರೇಮಿಗಳ ಕಲರವ. ಪ್ರೀತಿಯ ಮೆಸೇಜ್ ಗಳಿಂದ  ತುಂಬಿ ತುಳುಕುವ ಇನ್‌ಬಾಕ್ಸ್,  ಇ ಮೇಲ್, ಗಿಫ್ಟ್... ಬೆಳಗ್ಗಿನಿಂದ ರಾತ್ರಿ ವರೆಗಿನ ಸಮಯ ಪ್ರೇಮಮಯ!
ಯಾರು ಎಷ್ಟೇ ಕೂಗಾಡಲಿ...ವ್ಯಾಲೆಂಟೈನ್ಸ್ ಡೇ ಆಚರಣೆ ಎಂದ ಕೂಡಲೇ ಮಾಧ್ಯಮಗಳೇನು ಸುಮ್ಮನೆ ಕೂರುವುದಿಲ್ಲ, ವ್ಯಾಲೆಂಟೈನ್ಸ್ ಡೇ ನಮಗೆ ಬೇಕೋ ಬೇಡವೆ? ಎಂದು ಸುದ್ದಿವಾಹಿನಿಗಳು ಚರ್ಚೆಗೆ ಆಹ್ವಾನಿಸಿದರೆ, ಪತ್ರಿಕೆಗಳು ಲವ್ ಲೆಟರ್ ಗಳ  ಗುಚ್ಛವನ್ನೇ ಹೊತ್ತು ತರುತ್ತವೆ. ಇನ್ನು ಅದೇ ದಿನ ಹೊಸ ಚಿತ್ರಗಳನ್ನು ರಿಲೀಸ್ ಮಾಡುವ ಮೂಲಕ ಚಿತ್ರರಂಗವೂ 'ಪ್ರೀತಿ'ಯನ್ನು ಮೆರೆಯುತ್ತದೆ.

ಪ್ರೀತಿ ಎಂದಾಕ್ಷಣ 'ಸಿನಿಮಾ'ದ ಬಗ್ಗೆ ಹೇಳದಿದ್ದರೆ ಅದು ಅಪೂರ್ಣವೇ. 'ಪ್ರೀತಿ' ಎಂಬ ಮಧುರವಾದ ಭಾವನೆಯನ್ನೇ ಬಂಡವಾಳವಾಗಿರಿಸಿಕೊಂಡು ದುಡ್ಡು ಮಾಡಿದ್ದು ಎಂದರೆ ಸಿನಿಮಾ ಮಾತ್ರ. ಪ್ರೀತಿ ಹೇಗಿರುತ್ತದೆ, ಅದನ್ನು ಗಳಿಸುವುದು ಹೇಗೆ? ಮುರಿಯುವುದು ಹೇಗೆ? ಪ್ರೀತಿಯ ನಾನಾ ರೂಪಗಳನ್ನು ಅನಾವರಣ ಮಾಡಿದ್ದೇ ಸಿನಿಮಾ. ಸಿನಿಮಾ ಮತ್ತು ಪ್ರೀತಿ ಒಂದೇ ನಾಣ್ಯದ ಮುಖಗಳಂತಿದ್ದು, ಇದರ ಪ್ರಭಾವ ಎಷ್ಟೆಂದರೆ ಲವ್ ಸ್ಟೋರಿ  ಇದ್ದರೇನೆ ಅದು ಸಿನಿಮಾ ಎನ್ನುವಂತಹ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ.

ಫ್ಲಾಶ್ ಬ್ಯಾಕ್ ನೋಡಿದರೆ ಹಳೇ ಕಾಲದ ಸಿನಿಮಾಗಳಲ್ಲಿ ಮೈ ತುಂಬಾ ಬಟ್ಟೆ ಹಾಕಿಕೊಂಡಿದ್ದ ನಾಯಕಿ, ಕಷ್ಟಪಟ್ಟು ದುಡಿಯುತ್ತಿದ್ದ ನಾಯಕನನ್ನು ಲವ್ ಮಾಡ್ತಿದ್ದಳು. ಕಣ್ ಕಣ್ ಸನ್ನೆಗಳಿಂದಲೇ ಮಾತನಾಡುತ್ತಾ ಪ್ರೀತಿ ಮಾಡುತ್ತಿದ್ದರು. ಆದರೆ ಈಗ ತುಂಡು ಬಟ್ಟೆಯ ನಾಯಕಿಗೆ ಪ್ರೀತಿಸುವುದೊಂದೇ ಕಾಯಕ ಅವಳೊಂದಿಗೆ 24 ಗಂಟೆ ಸುತ್ತಾಡಲು ಒಬ್ಬ ಕೆಲಸವೇ ಇಲ್ಲದ ನಾಯಕ.

ಇನ್ನು ಹೇಳುವುದಾದರೆ ಸಿನಿಮಾದ ಒಂದೇ ಹಾಡಿನಲ್ಲೇ ನಾಯಕಿ ಪ್ರೀತಿಯಲ್ಲಿ 'ಬೀಳು'ತ್ತಾಳೆ. ಹೀಗೆ ಬಿದ್ದವಳು ಮುಂದಿನ ದೃಶ್ಯದಲ್ಲಿ ಚೆಲ್ಲಾಪಿಲ್ಲಿಯಾಗಿದ್ದ ಡ್ರೆಸ್ ತಡಕಾಡಿಕೊಂಡು ನಾಯಕನ ಬೆಡ್ ನಿಂದ 'ಎದ್ದೇಳು'ತ್ತಾಳೆ. ನಾಯಕ ಲವ್ ಮಾಡಿದ್ದಾನೆ ಅಂದ್ರೆ ಆತ ನಾಯಕಿಗೆ ಲಿಪ್ ಲಾಕ್  ಮಾಡಲೇಬೇಕು. ಆಕೆ ಪಾರದರ್ಶಕ ಡ್ರೆಸ್ ಹಾಕಿ ಮಳೆಯಲ್ಲಿ ನೆನೆಯಲೇ ಬೇಕು..ಅವರಿಬ್ಬರದ್ದು ಅಗಾಧ ಪ್ರೀತಿ ಎಂದು ತೋರಿಸಲು ನಾಯಕ ನಾಯಕಿ ರಾತ್ರಿ 'ಕುಚ್ ಕುಚ್' ಮಾಡಲೇ ಬೇಕು. ನಾಲ್ಕು ಸಾಂಗ್, ಒಂದು ಲಾಂಗ್, ಕೋಲ್ಡಾಗಿರುವ ವೆದರು, ಹಾಟ್ ಆಗಿರುವ ಫಿಗರು ಸಿನಿಮಾದಲ್ಲಿ ಇದ್ರೇನೆ ನೋಡೋಕೆ ಮಜಾ ಎಂದು ಈಗಿನ ಸಿನಿಮಾವನ್ನು ಬೆಂಗ್ಳೂರು ಭಾಷೆಯಲ್ಲಿ ವಿವರಿಸಿದರೆ ತಪ್ಪೇನಾಗಲ್ಲ ಬಿಡಿ.

ಪ್ರೀತಿಯ ಬಗ್ಗೆಯಿರುವ ಇಷ್ಟೊಂದು ಸಿನಿಮಾಗಳನ್ನು ನೋಡಿದರೂ ನಿಜವಾದ ಪ್ರೀತಿ ಏನೆಂಬುದು ಇಂದಿನ ಯುವ ಜನರಿಗೆ ಅರ್ಥವಾಗದ ಮಾತು. ಯಾಕೆಂದರೆ ನಿಜವಾದ ಪ್ರೀತಿ ಯಾವುದು ಎಂಬುದರ ಬಗ್ಗೆ ಜನರನ್ನು ಗೊಂದಲಕ್ಕೀಡಾಗುವಂತೆ ಮಾಡಿದ್ದೇ ಸಿನಿಮಾಗಳು. ಪ್ರೀತಿಯ ಭಾವನೆ ಹೇಗಿರುತ್ತದೆ, ಅದರಲ್ಲಿ ಎದುರಿಸಬೇಕಾದ ಸವಾಲುಗಳು, ಕಷ್ಟ ನಷ್ಟ ಎಲ್ಲವನ್ನೂ ಹೇಳಿಕೊಟ್ಟದ್ದು ಕೂಡಾ ಸಿನಿಮಾ..ಇದು ಪ್ಲಸ್ ಪಾಯಿಂಟ್.

ಅದೇ ವೇಳೆ ಪ್ರೀತಿಸುವ ಹುಡುಗಿ ಸುಂದರಿಯಾಗಿರಲೇ ಬೇಕು, ಆಕೆಯನ್ನು ಒಲಿಸಿಕೊಳ್ಳಲು ದೊಡ್ಡ ಉಡುಗೊರೆ ಕೊಡಬೇಕು...ಆಕೆಯನ್ನು ಬುಟ್ಟಿಗೆ ಹಾಕಿಕೊಳ್ಳಲು ನೀಟಾಗಿ ಡ್ರೆಸ್ ಮಾಡಿ ಬೈಕ್್ನಲ್ಲಿ ಸುತ್ತಾಡಬೇಕು, ಹುಡುಗನನ್ನು ಪಟಾಯಿಸುವುದು ಹೇಗೆ? ಅವನಿಗೆ ಕೈ ಕೊಡುವುದು ಹೇಗೆ ಎಂಬೆಲ್ಲಾ ವಿಷಯಗಳನ್ನು ಕೂಡಾ ಸಿನಿಮಾ ಜನರಿಗೆ ಹೇಳಿಕೊಟ್ಟಿದೆ. ಇದು ನೆಗೆಟಿವ್ ಪಾಯಿಂಟ್. ಒಟ್ಟಿನಲ್ಲಿ ಸಿನಿಮಾ ಮೂಲಕ ಇದನ್ನೆಲ್ಲಾ ನೋಡಿದ ಜನರು ಹೆಚ್ಚಾಗಿ ಸ್ವೀಕರಿಸಿದ್ದು ನೆಗೆಟಿವ್ ಪಾಯಿಂಟ್್ನ್ನೇ. ಇದರಿಂದಾಗಿಯೇ ಜನರು ಲವ್ ಯಾವುದು ಲಸ್ಟ್ ಯಾವುದು ಎಂಬುದರ ವ್ಯತ್ಯಾಸವನ್ನು ಅರಿಯುವಲ್ಲಿ ಎಡವಿದ್ದಾರೆ. ಪರಿಣಾಮ ಇಂತಹ ಪ್ರಣಯ ಸಂಬಂಧಗಳು ದೀರ್ಘ ಕಾಲ ಬಾಳ್ವಿಕೆ ಬರುವುದೇ ಇಲ್ಲ.


ಸಿನಿಮಾಗಳ ವಿಷ್ಯದಿಂದ ಸ್ವಲ್ಪ ಸರಿದು ಸೋಷ್ಯಲ್ ನೆಟ್್ವರ್ಕಿಂಗ್ ಸೈಟ್್ಗಳತ್ತ ಕಣ್ಣು ಹಾಯಿಸೋಣ. ಹಳೇ ಕಾಲದಲ್ಲಾದರೆ ಅಪರೂಪಕ್ಕೆ ಸಿಕ್ಕ ಗೆಳೆಯರಲ್ಲಿ ಏನು ಪತ್ತೆನೇ ಇಲ್ಲ? ಒಂದು ಲೆಟರ್ ಹಾಕ್ಬಾರ್ದಿತ್ತಾ? ಫೋನ್ ಮಾಡ್ಬಾರ್ದಿತ್ತಾ? ಎಂದೆಲ್ಲಾ ಕೇಳುತ್ತಿದ್ದರು. ಈಗ ಫೇಸ್ ಬುಕ್ ಲ್ಲೋ, ಆರ್ಕುಟ್್ನಲ್ಲೋ ಹುಡುಕಿದರಾಯ್ತು. ನಮಗೆ ಪರಿಚಯ ಇರುವ ಇಲ್ಲದ ಎಲ್ಲ ಮನುಷ್ಯರನ್ನು ಗೆಳೆಯರಾಗುವಂತೆ ಮಾಡುವ ಈ ಸೋಷ್ಯಲ್್ಸೈಟ್್ಗಳು ಇಂದು ಪ್ರತಿಯೊಬ್ಬನ ಜೀವನದಲ್ಲಿ ಅವಿಭಾಜ್ಯ ಅಂಗ ಎಂಬಂತೆ ಹಾಸುಹೊಕ್ಕಾಗಿವೆ. ಬೆಳಗ್ಗೆದ್ದು ಫೇಸ್ ತೊಳೆಯದಿದ್ದರೂ ಫೇಸ್ ಬುಕ್ ಓಪನ್ ಮಾಡಿ ಯಾರು ಏನೆಲ್ಲಾ ಮಾಡುತ್ತಿದ್ದಾರೆ ಎಂಬುದನ್ನು ನೋಡುವ ತವಕ. ಲಾಗಿನ್ ಆದ ಕೂಡಲೇ ನಿಮ್ಮ ಮನಸ್ಸಲ್ಲಿ ಏನಿದೆ? ಎಂದು ಕೇಳುವ ಈ ಸೋಶಿಯಲ್ ಸೈಟ್ ಳಿಂದಲೇ ಅದೆಷ್ಟೋ ಜನರ ಮಾನಸಿಕ ಸ್ಥಿತಿ ಹಾಳಾಗಿದೆ ಎಂಬುದು ಇತ್ತೀಚೆಗೆ ಸಮೀಕ್ಷೆಯೊಂದರಲ್ಲಿ ತಿಳಿದು ಬಂದಿತ್ತು. ಯಾಕೆಂದರೆ ಫೇಸ್ ಬುಕ್ ಲ್ಲಿ ತಾವು ಹೇಗೆ ಎಂಜಾಯ್ ಮಾಡಿದೆವು? ಎಷ್ಟೊಂದು ಉಲ್ಲಾಸಕರವಾಗಿ ಜೀವನ ಸಾಗಿಸುತ್ತಿದ್ದೇವೆ? ಮೊದಲಾದ ಪೋಸ್ಟ್್ಗಳನ್ನು, ಫೋಟೋಗಳನ್ನು ನೋಡಿದರೆ ಕೆಲವರಲ್ಲಿ ಕೀಳರಿಮೆ ಆವರಿಸಿಬಿಡುತ್ತದೆ ಎಂಬುದನ್ನು ಈ ಸಮೀಕ್ಷೆ ಬಹಿರಂಗ ಪಡಿಸಿದೆ. ಆದಾಗ್ಯೂ, ಫೇಸ್್ಬುಕ್್ನಲ್ಲಿ ಸಿಕ್ಕಾಪಟ್ಟೆ ಗೆಳೆಯರಿದ್ದಾರೆ ಎಂದು ಬೀಗುವ ಅದೆಷ್ಟೋ ಮಂದಿಗಳಿದ್ದಾರೆ. ಆದರೆ ಒಮ್ಮೆ ಯೋಚಿಸಿ, ನೀವು ಸಂಕಷ್ಟಕ್ಕೀಡಾದಾಗ ನಿಮ್ಮ ಅಳಲನ್ನು ಫೇಸ್್ಬುಕ್್ನಲ್ಲಿ ತೋಡಿಕೊಂಡರೆ ಲೈಕ್ ಮಾಡುವ, ಕಾಮೆಂಟ್ ಮಾಡುವ ಗೆಳೆಯರಿಗಿಂತ ನಿಮ್ಮ ಫೇಸ್ ನೋಡಿದ ಕೂಡಲೇ 'ಚಿಂತೆ ಬಿಡು...ನಾನಿದ್ದೀನಿ ನಿನ್ನ ಜತೆ' ಎಂದು ಹೇಳುವ ಗೆಳೆಯನನ್ನು ನೀವು ಹೊಂದಿದ್ದರೆ ನೀವೇ ಪುಣ್ಯವಂತರು.

ಹಾಗೆಯೇ ಪ್ರೀತಿಯ ವಿಷ್ಯದಲ್ಲೂ ಸೋಷ್ಯಲ್ ನೆಟ್ವರ್ಕಿಂಗ್  ಪ್ರಮುಖ ಪಾತ್ರವನ್ನು ವಹಿಸಿಕೊಂಡಿದೆ. ಚಾಟ್, ಇಮೇಲ್, ಮೆಸೇಜ್ ಮೂಲಕ ಹುಟ್ಟುವ ಇ-ಪ್ರೀತಿಗೆ ಸೋಷ್ಯಲ್ ನೆಟ್ವರ್ಕಿಂಗ್  ತಾಣವೂ ವೇದಿಕೆ ಕಲ್ಪಿಸಿದೆ. ಪ್ರೀತಿ ಮೂಡಿದ್ದರೆ, ಮುರಿದು ಬಿದ್ದಿದ್ದರೆ ಎಲ್ಲಾ ವಿಷಯವನ್ನು ಈ ತಾಣಗಳಲ್ಲಿ ಬಹಿರಂಗ ಪಡಿಸಬಹುದು. ಇಂತಹ ಬಹಿರಂಗ ಹೇಳಿಕೆಗಳು ಕೆಲವೊಮ್ಮೆ ಪ್ರಾಣಕ್ಕೆ ಕುತ್ತು ತರುತ್ತವೆ ಎಂಬುದಕ್ಕೆ ಮಾಲಿನಿ ಮುರ್ಮು ಪ್ರಕರಣವೇ ಸಾಕ್ಷಿ. ತನ್ನ ಬಾಯ್ ಫ್ರೆಂಡ್ ಕೈಕೊಟ್ಟ ಕಾರಣ ಖಿನ್ನಳಾಗಿದ್ದ ಮಾಲಿನಿಗೆ ಆಕೆಯ ಬಾಯ್ ಫ್ರೆಂಡ್ ಫೇಸ್ ಬುಕ್ ಲ್ಲಿ  ಲವ್ ಬ್ರೇಕ್ ಅಪ್  ಬಗ್ಗೆ ಬರೆದದ್ದೇ ಆತ್ಮಹತ್ಯೆಗೆ ಪ್ರೇರಣೆಯಾಯಿತು. ಆತ ಮಾಡಿದ ಅಚಾತುರ್ಯ ಮುಗ್ದ ಬಾಲಕಿಯ ಜೀವನವನ್ನೇ ಕಬಳಿಸಿತು. ಆಕೆಯ ಸಾವಿನ ಸುದ್ದಿ ಬಿತ್ತರವಾಗುತ್ತಿದ್ದಂತೆ ಮಾಲಿನಿಯ ಬಾಯ್ ಫ್ರೆಂಡ್  ಫೇಸ್ ಬುಕ್  ಅಕೌಂಟ್ ಡಿಲೀಟ್ ಮಾಡಿಬಿಟ್ಟ. ಆದರೆ 22 ವರ್ಷದವರೆಗೆ ಆಕೆಯನ್ನು ಸಾಕಿ ಬೆಳೆಸಿದ ಪೋಷಕರಿಗೆ ಸಿಕ್ಕಿದ್ದಾದರೂ ಏನು? ಆತನೇನೋ ಅಕೌಂಟ್ ಡಿಲೀಟ್ ಮಾಡಿ ಹೊಸ ಅಕೌಂಟ್ ಓಪನ್ ಮಾಡಬಹುದು ಆದರೆ ಹೋದ ಜೀವ ವಾಪಾಸ್ ತರೋಕೆ ಆಗುತ್ತಾ? ಇಂತಹ ಒಂದಲ್ಲ ಒಂದು ಅನಾಹುತಗಳು ಪ್ರೀತಿಯ ವಿಷಯದಲ್ಲಿ ಆಗೇ ಆಗುತ್ತದೆ. ಈ ಅನಾಹುತಗಳಲ್ಲಿ ಭ್ರೂಣ ಹತ್ಯೆಯ ಸಂಖ್ಯೆಯೂ ಜಾಸ್ತಿಯಾಗುತ್ತಿರುವುದು ದುರದೃಷ್ಟಕರ. ಇದೆಲ್ಲದಕ್ಕೂ ಪ್ರೀತಿಯೇ ಕಾರಣ ಎಂದು ದೂರುವವರೇ ಹೆಚ್ಚು.

ಇನ್ನು ಕೆಲವರಿಗೆ ತಮ್ಮ ಪ್ರೀತಿಯನ್ನು ಸಾಮಾಜಿಕ ತಾಣದಲ್ಲಿಯೇ ಹೇಳಿಕೊಳ್ಳಬೇಕು. ನಾವು ಪ್ರೀತಿ ಮಾಡುತ್ತಿದ್ದೇವೆ ಎಂದು ಸೋಷ್ಯಲ್ ಸೈಟ್‌ಗಳಲ್ಲಿ ಜಗಜ್ಜಾಹೀರು ಮಾಡಿದರೆ ಮಾತ್ರ ಸಮಾಧಾನ. ರಿಲೇಶನ್‌ಶಿಪ್ ಸ್ಟೇಟಸ್‌ ನಲ್ಲಿ ಇನ್‌ರಿಲೇಶನ್‌ಶಿಪ್ ಅಂತ ಬರೆದು ಪ್ರೀತಿಸುವ ವ್ಯಕ್ತಿಯನ್ನು ಟ್ಯಾಗ್ ಮಾಡಿದರೆ ಅಲ್ಲಿಗೆ ಎಲ್ಲರಿಗೂ ವಿಷಯ ತಿಳಿಸಿದಂತೆಯೇ. ಇನ್ನು ಸ್ಟೇಟಸ್, ಕಾಮೆಂಟ್‌ಗಳಲ್ಲಿ  ಪ್ರೀತಿ ಮಾಡುವುದು, ಮುದ್ದು ಮಾಡುವುದು ಎಲ್ಲವೂ ಸ್ಮೈಲಿಗಳ ಮೂಲಕ ಖುಲ್ಲಂಖುಲ್ಲ! ಪ್ರೀತಿಸುತ್ತೇನೆ ಎಂದು ಹೇಳಲು ಹೀಗೆಲ್ಲ ಸ್ಟಂಟ್‌ಗಳನ್ನು ಮಾಡಬೇಕಾ? ಇನ್ನೊಬ್ಬರ ಮುಂದೆ ನಾನವಳನ್ನು / ನಾನವನನ್ನು ಪ್ರೀತಿಸುತ್ತೇನೆ ಎಂದು ಹೇಳುವ ಅಗತ್ಯವೇನಿದೆ? ಅದೇನಿದ್ದರೂ ಇಬ್ಬರ ನಡುವಿನ ಖಾಸಗಿ ವಿಷ್ಯ. ಅದನ್ನು ಎಲ್ಲಿ ವ್ಯಕ್ತ ಪಡಿಸಬೇಕೋ ಅಲ್ಲಿ ವ್ಯಕ್ತಿ ಪಡಿಸಿದರಷ್ಟೇ ಚೆಂದ.

ಇದನ್ನೆಲ್ಲಾ ನೋಡಿದಾಗ ಹಳೇ ಕಾಲದಲ್ಲಿ ಪ್ರೀತಿ ಚೆನ್ನಾಗಿತ್ತು. ಈಗ ಚೆನ್ನಾಗಿಲ್ಲ ಎಂದು ಹೇಳುವವರೂ ಇದ್ದಾರೆ. ಆದರೆ ಒಂದು ಮಾತು... ಪ್ರೀತಿ ಎಂಬುದು ನೀರಿನಂತೆ ಅದು ಯಾವ ಪಾತ್ರೆಯೊಳಗೆ ಸೇರಿಕೊಳ್ಳುತ್ತದೋ ಅದು ಅದೇ ಪಾತ್ರೆಯ ಆಕಾರವನ್ನು ಪಡೆದುಕೊಳ್ಳುತ್ತದೆ. ಪ್ರೀತಿ ಯಾವತ್ತೂ ಹಾಳಾಗಿಲ್ಲ..ಮುಂದೆ ಹಾಳಾಗುವುದೂ ಇಲ್ಲ. ಆದರೆ ಪ್ರೀತಿಸುವ ರೀತಿ ಮಾತ್ರ ಬದಲಾಗಿದೆ. ಬದಲಾವಣೆಯೇ ಜಗದ ನಿಯಮ ಎಂಬ ಹಾಗೆ ಪ್ರೀತಿಯ ರೀತಿಯಲ್ಲಿ ಬದಲಾವಣೆಯಾಗುತ್ತಾ ಬಂದಿದೆ ಹೊರತು 'ಪ್ರೀತಿ' ಎಂಬ ಆ ಮಧುರ ಭಾವನೆ ಇದೆಯಲ್ವಾ ಅದು ಇಂದಿಗೂ ಕಣ್ಣ ಹನಿಯಂತೆ ನಿಷ್ಕಲ್ಮಷವಾಗಿಯೇ ಇದೆ.

- ರಶ್ಮಿ ಕಾಸರಗೋಡು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT