ಲೇಖನಗಳು

ಪ್ರೇಮಿಗಳ ಪಾಲಿಗೂ ಬೇಡವಾಯಿತೇ ಗ್ರೀಟಿಂಗ್ ಕಾರ್ಡ್?

ಹೊಸ ವರ್ಷ ಆರಂಭ ವಾಗುತ್ತಿದ್ದಂತೆ ಆತ್ಮೀಯರಿಗೆ ‘ಗ್ರೀಟಿಂಗ್ ಕಾರ್ಡ್’ ಕಳುಹಿಸುತ್ತಿದ್ದ ಬಾಲ್ಯದ ದಿನಗಳು ನೆನಪಾಗುತ್ತವೆ. ಕ್ರಿಸ್ಮಸ್, ಹೊಸವರ್ಷ, ಸಂಕ್ರಾಂತಿ, ಯುಗಾದಿ, ದೀಪಾವಳಿ ಹೀಗೆ...

ಹೊಸ ವರ್ಷ ಆರಂಭ ವಾಗುತ್ತಿದ್ದಂತೆ ಆತ್ಮೀಯರಿಗೆ ‘ಗ್ರೀಟಿಂಗ್ ಕಾರ್ಡ್’ ಕಳುಹಿಸುತ್ತಿದ್ದ ಬಾಲ್ಯದ ದಿನಗಳು ನೆನಪಾಗುತ್ತವೆ. ಕ್ರಿಸ್ಮಸ್, ಹೊಸವರ್ಷ, ಸಂಕ್ರಾಂತಿ, ಯುಗಾದಿ, ದೀಪಾವಳಿ ಹೀಗೆ ಯಾವುದೇ ಹಬ್ಬಗಳು ಬಂದರೆ ಅದರಲ್ಲೂ ಪ್ರೇಮಿಗಳ ದಿನ ಬಂದರಂತೂ ನಗರದ ಅಂಗಡಿಗಳಲ್ಲಿ ಹಲವು ವಿನ್ಯಾಸಗಳ ಬಣ್ಣಬಣ್ಣಗಳ ಗ್ರೀಟಿಂಗ್ ಕಾರ್ಡ್ ಗಳ ಮಾರಾಟದ ಭರಾಟೆ ಜೋರಾಗುತ್ತಿತ್ತು.

ಒಂದು ರೂಪಾಯಿ ಕಾರ್ಡ್ ನಿಂದ ನೂರಾರು ರೂಪಾಯಿಯ ಕಾರ್ಡ್ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.  ಪ್ರತಿ ಕಾರ್ಡ್ ಗಳಲ್ಲೂ ಕಾಲಕ್ಕೆ ತಕ್ಕಂತೆ ಒಂದೊಂದು ರೀತಿಯ ಪ್ರೀತಿಯ ಸಂದೇಶಗಳಿರುತ್ತವೆ ಇವೆ. ಆದರೆ ತಾಂತ್ರಿಕ ಶೋಧನೆಗಳು ಅಭಿವೃದ್ಧಿಗೊಂಡು ಗ್ರೀಟಿಂಗ್ ಮೂಲಕ ಶುಭಾಶಯ ವಿನಿಮಯ ಮಾಡಿಕೊಳ್ಳುವ ಪ್ರವೃತ್ತಿ ಕ್ಷೀಣಿಸಿವೆ.

ಯುವಕ– ಯುವತಿಯರು, ಕಾಲೇಜು ವಿದ್ಯಾರ್ಥಿಗಳು, ಗೆಳೆತನ, ಪ್ರೀತಿ– ಪ್ರೇಮದ ನಿವೇದನೆಗೆ ಗ್ರೀಟಿಂಗ್ ಕಾರ್ಡ್ ಬಳಸುತ್ತಿದ್ದರು. ಹಿರಿಯರಿಗೆ, ಗುರುಗಳಿಗೆ ಪ್ರೀತಿ ಪೂರ್ವಕವಾಗಿ ಗ್ರೀಟಿಂಗ್ ಕೊಡುವ ಪದ್ಧತಿಯಿತ್ತು. ಆದರೆ ಮೊಬೈಲ್, ಎಸ್ಎಂಎಸ್, ಇ–ಮೇಲ್ ಗಳಿಂದಾಗಿ ಶುಭಾಶಯ ವಿನಿಮಯ ಪದ್ಧತಿಯೇ ಬದಲಾಗಿದ್ದು,  ಪತ್ರಗಳು, ಗ್ರೀಟಿಂಗ್ ಕಾರ್ಡ್ ಗಳು ಮೂಲೆ ಗುಂಪಾಗಿವೆ.

ಸಂದೇಶ ರವಾನೆಗೆ ಬಹುಮುಖ್ಯ ಅಂಶ ಎಂದರೆ ಮೊಬೈಲ್. ಎಸ್ಸೆಮ್ಮಸ್ ಎಂಬುದು ಇತ್ತೀಚಿನ ದಿನಗಳಲ್ಲಿ ಅದೊಂದು ಪದ್ಧತಿ, ಸಂಸ್ಕೃತಿ ಹಾಗೂ ಸಂಪ್ರದಾಯ ಎನ್ನುವಂತೆ ಪ್ರತಿ ನಿತ್ಯ ಶುಭಾಶಯಗಳು ಪ್ರತಿನಿತ್ಯ ಹರಿದಾಡುತ್ತಿರುತ್ತವೆ. ಹಬ್ಬದ ದಿನಗಳು ಬಂತೆಂದೆರೆ ಸಂದೇಶ ರವಾನೆಗಳ ಸಂಖ್ಯೆ ಇಲ್ಲದಷ್ಟಾಗಿದೆ. ಎಸ್ಸೆಮ್ಮೆಸ್ ಶಕೆ ಹೆಚ್ಚಾಗುತ್ತಿದ್ದಂತೆ ಇದರಿಂದಾಗಿ ಲಾಭಪಡೆಯಲು ಮುಂದಾಗಿರುವ ಕಂಪನಿಗಳು ಹಬ್ಬದ ದಿನಗಳ ಎಸ್ಸೆಮ್ಮೆಸ್ ಗೆ ಹಣ ವ್ಯಯಿಸಿ ಸಂದೇಶ ರವಾನಿಸುವಂತೆ ನಿಯಮ ಹೇರಿದೆ. ಹೀಗಾಗಿ ಪ್ರಮುಖ ಹಬ್ಬಗಳಾದ ಸ್ವಾತಂತ್ರ್ಯ ದಿನಾಚರಣೆ, ಪ್ರೇಮಿಗಳ ದಿನಾಚರಣೆ ಹಾಗೂ ಇನ್ನಿತರೆ ಹಬ್ಬದ ದಿನಗಳಲ್ಲಿ ಒಂದು ಸಂದೇಶಕ್ಕೆ ರು.1ಗಳನ್ನೂ ಖರ್ಚುಮಾಡಿ ಸಂದೇಶ ರವಾನಿಸಬೇಕಾಗಿರುತ್ತದೆ. ಹೀಗಾಗಿ ಜನರು ಬುದ್ಧಿ ಉಪಯೋಗಿಸಿ ಎರಡು ದಿನಗಳ ಮುಂಚೆಯೇ ಶುಭಾಶಯ ರವಾನಿಸಲು ಮುಂದಾಗಿದ್ದರು. ಆದರೆ ಇದಕ್ಕೂ ಕ್ರಮ ತೆಗೆದುಕೊಳ್ಳಲು ಮುಂದಾದ ಕಂಪನಿಗಳು ಹಬ್ಬದ ಹಿಂದಿನಗಳಲ್ಲೂ ಸಂದೇಶ ರವಾನಿಸುವುದಕ್ಕೂ ಹಣ ವ್ಯಯಿಸುವಂತೆ ನಿಯಮ ಹೇರಿತು.

ನಂತರ ಗ್ರಾಹಕರ ಸಮಸ್ಯೆಗಳನ್ನು ಅರಿತ ಇತರೆ ಕಂಪನಿಗಳು ಅಂತರ್ಜಾಲದ ಮೂಲಕ ಅಸಂಖ್ಯಾ ಸಂದೇಶಗಳನ್ನು ಕಳುಹಿಸುವುದಕ್ಕೆ ವಿವಿಧ ತಂತ್ರಾಂಶಗಳನ್ನು ತರಲು ಚಿಂತನೆ ನಡೆಸಿ ಮೊದಲು ಯಾಹೂ, ಗೂಗಲ್ ಟಾಕ್, ವಾಟ್ಸ್ಅಪ್, ಲೈನ್, ಫೇಸ್ ಬುಕ್ ಎಂಬ ಹೊಸ ಹೊಸ ಸಾಫ್ಟ್ ವೇರ್ ಗಳು ಆವಿಷ್ಕಾರಗೊಂಡವು. ಈ ತಂತ್ರಾಂಶಗಳು ಹೊರಬರುತ್ತಿದ್ದಂತೆಯೇ ಮೊಬೈಲ್ ಎಸ್ಸೆಮ್ಮಸ್ ಗಳು ವಿರಳವಾಗುತ್ತಾ ಬಂದವು. ಕಂಪನಿಗಳು ಇದೀಗ ಅಂತರ್ಜಾಲ ಸಂಪರ್ಕದ ಕೊಡುಗೆಗಳನ್ನು ನೀಡಿ ಗ್ರಾಹಕರನ್ನು ತಮ್ಮೆಡೆಗೆ ಸೆಳೆಯಲು ಅನೇಕ ಪ್ರಯತ್ನಗಳನ್ನು ನಡೆಸುತ್ತಿದೆ.

ವಿಶೇಷ ಸಂದಭರ್ಗಳಲ್ಲಿ ನಿಮ್ಮ ಆತ್ಮೀಯರಿಗೆ ಗ್ರೀಟಿಂಗ್ಸ್ ಕಳುಹಿಸುತ್ತಿದ್ದ ಬಾಲ್ಯದ ದಿನಗಳನ್ನೊಮ್ಮೆ ನೆನಪಿಸಿಕೊಳ್ಳಿ. ಸಂಕ್ರಾಂತಿ, ದೀಪಾವಳಿ, ಕ್ರಿಸ್ ಮಸ್ ಹೀಗೆ ಯಾವುದೇ ವಿಶೇಷ ದಿನ ಬಂದರೂ ಪಟ್ಟಣದ ಬೀದಿ ಬದಿಯಲ್ಲೋ ಅಥವಾ ಪುಟ್ಟ ಪುಟ್ಟ ಅಂಗಡಿಗಳಲ್ಲೋ ನೂರಾರು ವಿನ್ಯಾಸಗಳ ಬಣ್ಣ ಬಣ್ಣಗಳ ಪುಟ್ಟ ಪುಟ್ಟ ಗ್ರೀಟಿಂಗ್ಸ್ ಕಾರ್ಡುಗಳ ಮಾರಾಟ ಶುರುವಾಗಿಬಿಡುತ್ತಿತ್ತು. ಒಂದು ರೂಪಾಯಿ ಕಾರ್ಡಿನಿಂದ ಹಿಡಿದು ಮೂವತ್ತು ಸಾವಿರಾರು ರೂಪಾಯಿಗಳ ಕಾರ್ಡುಗಳ ತನಕ ವಿವಿಧ ಬೆಲೆಗೆ ಅತ್ಯಾಕರ್ಷಕ ಗ್ರೀಟಿಂಗ್ ಕಾರ್ಡುಗಳು ಲಭ್ಯ ಇರುತ್ತಿದ್ದವು.

ಒಂದೊಂದು ಗ್ರೀಟಿಂಗ್ ಕಾರ್ಡಿನಲ್ಲೂ ಒಂದೊಂದು ಮನಸ್ಸಿಗೆ ಮುದ ನೀಡುವ ಸಂದೇಶಗಳಿರುತ್ತಿದ್ದವು. ಯಾವ ವಿನ್ಯಾಸದ ಕಾರ್ಡನ್ನು, ಯಾವ ವಾಕ್ಯವಿರುವ ಕಾರ್ಡನ್ನು ಯಾರಿಗೆ ಕಳುಹಿಸಬೇಕು ಅಂತ ಯೋಚಿಸಿ ಆಯ್ಕೆ ಮಾಡಿ, ಲಕೋಟೆ ಯಲ್ಲಿಟ್ಟು ಒಂದು ಸ್ಟಾಂಪ್ ಹಚ್ಚಿ ಸಂಬಂಧಪಟ್ಟವರ ವಿಳಾಸ ಬರೆದು ಪೋಸ್ಟ್ ಮೂಲಕ ಕಳುಹಿಸಿಬಿಡುತ್ತಿದ್ದೆವು. ಹೀಗೆ ವಿಶೇಷ ದಿನಗಳಂದು ಗ್ರೀಟಿಂಗ್ ಕಾರ್ಡ್ ಕಳಿಸುವುದು ಮತ್ತು ಸ್ವೀಕರಿಸುವುದು ಮನಸ್ಸಿಗೆ ಎಷ್ಟೊಂದು ಮುದ ನೀಡುತ್ತಿತ್ತು. ಯಾರಾದರೂ ಗ್ರೀಟಿಂಗ್ ಕಾರ್ಡ್ ಕೊಟ್ಟರೆ ಸಾಕು ನಮ್ಮ ಸಂತೋಷಕ್ಕೆ ಪಾರವೇ ಇರುತ್ತಿರಲಿಲ್ಲ. ಬೇರೆಯವರಿಗೆ ಗ್ರೀಟಿಂಗ್ ಕಾರ್ಡ್ ಕೊಟ್ಟರೆ ನಮ್ಮ ಮನಸ್ಸಿನಲೆಲ್ಲೋ ಒಂದು ಅಸೂಯೆ ಭಾವ-ನಮಗೆ ಕೊಡಲಿಲ್ಲ ಎಂಬ ಕೋಪ ಇರುತ್ತಿತ್ತು.

ಡಿಜಿಟಲ್ ಕ್ರಾಂತಿಯ ಈ ಯುಗದಲ್ಲಿ ಎಲ್ಲವೂ ಪೇಪರ್ಲೆಸ್ ಆಗಿಬಿಟ್ಟಿವೆ. ಪತ್ರ ಬರೆಯುವ ಬದಲಿಗೆ ಇ-ಮೇಲ್ ಅಥವಾ ಎಸ್ಎಂಎಸ್ ಕಳಿಸಿಬಿಡುತ್ತೇವೆ. ಮದುವೆಗೆ ಲಗ್ನಪತ್ರಿಕೆಯನ್ನು ಮುದ್ರಿಸುತ್ತೇವಾದರೂ ಒಂದು ಪ್ರತಿಯನ್ನು ಇ-ಮೇಲ್ ಮೂಲಕ ಕಳಿಸಿಬಿಡುತ್ತೇವೆ. ಹಾಗೆಯೇ, ಹಾರ್ಡ್ ಕಾಪಿಯಲ್ಲಿದ್ದ ಗ್ರೀಟಿಂಗ್ ಕಾರ್ಡುಗಳೂ ಕೂಡ ಸಾಫ್ಟ್ ಆಗಿಬಿಟ್ಟಿವೆ. ಅದನ್ನೇ ನಾವು ಇ-ಗ್ರೀಟಿಂಗ್ಸ್ ಅಥವಾ ಎಲೆಕ್ಟ್ರಾನಿಕ್ ಗ್ರೀಟಿಂಗ್ಸ್ ಅಂತ ಕರೆಯುತ್ತೇವೆ.

ಈಗಾಗಲೇ ಆನ್ ಲೈನ್ ಮೂಲಕ ಗ್ರೀಟಿಂಗ್ಸ್ ಕಾರ್ಡ್ ಗಳನ್ನು ಯಾರಿಗೆ ಯಾವ ವಯಸ್ಸಿಗೆ, ಯಾವ ಸಂದರ್ಭಕ್ಕೆ, ಯಾವ ಆಚರಣೆಗೆ ಎಂಬೆಲ್ಲಾ ರೀತಿಯ ಆಪ್ಷನ್ ಕೊಟ್ಟು ನಮ್ಮ ಮನಸ್ಸಿಗೆ ಇಷ್ಟವಾಗುವಂತೆ ಗ್ರೀಟಿಂಗ್ ಕಾರ್ಡ್ ರಚಿಸಿ ಇಮೇಲ್ ಕಳುಹಿಸಬಹುದು.  ಅದಕ್ಕಾಗಿಯೇ ಪ್ರತ್ಯೇಕ ಅಂತರ್ಜಾಲ ತಾಣಗಳೇ ಅಸ್ತಿತ್ವಕ್ಕೆ ಬಂದಿವೆ. ಇಲ್ಲಿ ಎಲ್ಲಾ ರೀತಿಯ ಗ್ರೀಟಿಂಗ್ ಕಾರ್ಡುಗಳೂ ಲಭ್ಯ. ಅದು ಈದ್ ಇರಲಿ, ಕ್ರಿಸ್ ಮಸ್ ಇರಲಿ, ದೀಪಾವಳಿ ಇರಲಿ, ಹುಟ್ಟುಹಬ್ಬವಿರಲಿ, ಸಂಕ್ರಾಂತಿ ಇರಲಿ ಅಥವಾ ಇನ್ಯಾವುದೇ ಸಂದರ್ಭ ಇರಲಿ. ಒಂದೊಂದು ಸಂದರ್ಭಕ್ಕೂ ಸರಿ ಹೊಂದುವಂತಹ ಅತ್ಯಾಕರ್ಷಕ ಗ್ರೀಟಿಂಗ್ಸ್ ಕಾರ್ಡುಗಳು ಇಲ್ಲಿ ಲಭ್ಯ. ಒಂದೊಂದು ಕಾರ್ಡಿನ ಮೇಲೂ ಸ್ಫೂರ್ತಿದಾಯಕ ಕೋಟ್. ಯಾವುದು ಬೇಕೋ ಅದನ್ನು ಆಯ್ದುಕೊಳ್ಳಬಹುದು. ಇನ್ನು ಲೈವ್ ಗ್ರೀಟಿಂಗ್ ಕಾರ್ಡುಗಳು ನಮ್ಮ ಇಷ್ಟಕ್ಕೆ ತಕ್ಕಂತೆ ನಮ್ಮ ಮಾತು -ದೃಶ್ಯದ ರೂಪದಲ್ಲಿ ಬಂದಂತೆ ಪಿಪಿಟಿ ಪ್ರೆಸೆಂಟೇಷನ್ ರೀತಿಯಲ್ಲಿ ಒಂದು ಬಟನ್ ಒತ್ತಿದರೆ ಬರುವಂತಿರುತ್ತದೆ. ಇದನ್ನು ಕಳುಹಿಸುವಾಗ ಸ್ವಯಂಚಾಲಿತವಾಗಿಯೇ ನಮ್ಮ ಹೆಸರು, ವಿಳಾಸವನ್ನು ಭರ್ತಿ ಮಾಡಿ ಬಟನ್ ಒತ್ತಿದರೆ ಸಾಕು ಕ್ಷಣಾರ್ಧಲ್ಲಿ ನಮ್ಮ ಸಂದೇಶ ಬೇಕೆಂದಿರುವವರಿಗೆ ತಲುಪಿರುತ್ತದೆ.

-ಮಂಜುಳ.ವಿ.ಎನ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT