ಬೆಳಗ್ಗೆದ್ದು ಬಾಗಿಲು ತೆರೆದಾಗ ಬಾಗಿಲ ಬಳಿಯಲ್ಲಿ ಕೆಂಗುಲಾಬಿಯ ಹೂಗುಚ್ಛ, ಚಾಕ್ಲೆಟ್ ತುಂಬಿದ ಪುಟ್ಟ ಬುಟ್ಟಿ, ಟು ಮೈ ಸ್ವೀಟ್ ಹಾರ್ಟ್ ಎಂದು ಗೋಲ್ಡನ್ ಅಕ್ಷರದಲ್ಲಿ ಬರೆದ ಮಿನುಗುವ ಗ್ರೀಟಿಂಗ್ ಕಾರ್ಡ್...ಅದೊಂದು ರೊಮ್ಯಾಂಟಿಕ್ ಅನುಭವ...
ಪ್ರೇಮಿಗಳ ದಿನ ಅಥವಾ ವ್ಯಾಲೆಂಟೈನ್ಸ್ ಡೇ ಬಂದಾಗ ರೊಮ್ಯಾಂಟಿಕ್ ಫೀಲಿಂಗ್ ಕೊಡುವ ದೃಶ್ಯಗಳೇ ನಮ್ಮನ್ನು ಪುಳಕಗೊಳಿಸುತ್ತವೆ. ಪ್ರೇಮಿಗಳ ದಿನ ಯಾರಿಗೆ ಇಷ್ಟ ಇಲ್ಲ ಹೇಳಿ? ಈಗಿನ ಕಾಲದ ಯುವ ಜನಾಂಗಕ್ಕೆ ಬೇರೆ ಯಾವ ಹಬ್ಬ ಆಚರಿಸದಿದ್ದರೂ ಪರ್ವಾಗಿಲ್ಲ, ವ್ಯಾಲೆಂಟೈನ್ಸ್ ದಿನ ಎಂದರೆ ಅದನ್ನು ಒಂದಲ್ಲ ಒಂದು ರೀತಿಯಲ್ಲಿ ಆಚರಿಸಲೇ ಬೇಕು. ಕಾಲೇಜು ವಿದ್ಯಾರ್ಥಿಗಳಿಗೆ ಈ ದಿನವೆಂದರೆ ಎಲ್ಲಿಲ್ಲದ ಹಿಗ್ಗು. ಹದಿಹರೆಯದ ವಯಸ್ಸಲ್ಲಿನ ವಯೋ ಸಹಜ ಆಕರ್ಷಣೆಗಳು, ಪ್ರೀತಿ ಅರಳುವ, ಅರಳಿಸುವ ಮನಸ್ಸುಗಳು ಈ ದಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವುದಕ್ಕಾಗಿ ಕಾತರದಿಂದ ಕಾಯುತ್ತಿರುತ್ತವೆ.
ವರ್ಷದ ಅತೀ ಲವೇಬಲ್ ಡೇ ಅಂದರೆ ಅದು ವ್ಯಾಲೆಂಟೈನ್ಸ್ ಡೇ ಮಾತ್ರ. ಅಂದಹಾಗೆ ಇಂದಿನ ಯುವಕ ಯುವತಿಯರಲ್ಲಿ ನಾವು ಆಚರಿಸುವ ದಿನಾಚರಣೆಗಳ ಬಗ್ಗೆ ಕೇಳಿ ನೋಡಿ. ಅವರಿಗೆ ಇನ್ನುಳಿದ ದಿನಾಚರಣೆಗಳ ಬಗ್ಗೆ ಗೊತ್ತಿರಲ್ಲ ಆದರೆ ಫೆ,. 14 ಏನು ವಿಶೇಷ ಎಂದು ಕೇಳಿದರೆ..ಅವತ್ತು ವ್ಯಾಲೆಂಟೈನ್ಸ್ ಡೇ ಎಂಬ ಉತ್ತರ ಥಟ್ಟನೆ ಸಿಗುತ್ತದೆ . ಅಂದರೆ ವ್ಯಾಲೆಂಟೈನ್ಸ್ ಡೇ ಅಷ್ಟೊಂದು ಜನಪ್ರಿಯವಾಗಿದೆ ಎಂಬುದಕ್ಕೆ ಬೇರೆ ಸಾಕ್ಷ್ಯ ಬೇಕಾಗಿಲ್ಲ. ಭಾರತೀಯ ಸಂಸ್ಕೃತಿಯಲ್ಲಿ ಈ ಒಂದು ಡೇ ಮಹತ್ವವನ್ನು ಪಡೆದು ಕೊಂಡದ್ದು ಹೇಗೆ ಎಂಬುದರ ಬಗ್ಗೆ ಯೋಚಿಸಿದರೆ ಉತ್ತರ ಸಿಂಪಲ್...
5 ನೇ ಶತಮಾನದಲ್ಲಿ ಪೋಪ್ ಗೆಲಾಸಿಯಸ್ ಫೆ. 14ನ್ನು ಸೇಂಟ್ ವ್ಯಾಲೆಂಟೈನ್ ನೆನಪಿಗಾಗಿ ವ್ಯಾಲೆಂಟೈನ್ಸ್ ಡೇ ಎಂದು ಆಚರಿಸಿ ಎಂದು ಘೋಷಿಸಿದ್ದರು. 21ನೇ ಶತಮಾನದಲ್ಲಿರುವ ನಾವೀಗ ವ್ಯಾಲೆಂಟೈನ್ಸ್ ಡೇ ಗೆ ಅಷ್ಟೊಂದು ಮಹತ್ವ ಕೊಟ್ಟು ಆಚರಿಸುತ್ತೇವೆ ಎಂದರೆ ಅದರ ಕೀರ್ತಿ ಮಾಧ್ಯಮಗಳಿಗೆ ಸಲ್ಲಲೇ ಬೇಕು.
ವ್ಯಾಲೆಂಟೈನ್ಸ್ ಡೇ ಯಾವ ರೀತಿ ಆಚರಿಸಬೇಕು, ಹೇಗೆ ಪ್ರೊಪೋಸ್ ಮಾಡಬೇಕು, ಹೇಗೆ ಪ್ರೀತಿಸಬೇಕು ಎಂದು ಹೇಳಿಕೊಟ್ಟದ್ದು ಇದೇ ಮಾಧ್ಯಮಗಳು. ಸಿನಿಮಾಗಳು ಪ್ರೀತಿಯನ್ನು ಮಾರಕಟ್ಟೆ ಸರಕಾಗಿಸಿಕೊಂಡಾಗ, ಜಾಹೀರಾತುಗಳು ಜನರನ್ನು ತಮ್ಮತ್ತ ಸೆಳೆದು ಗಿಫ್ಟ್ ವ್ಯಾಪಾರ ಮಾಡಿಕೊಂಡವು. ಪ್ರೀತಿ ಎಂಬ ಅನುಭೂತಿಯನ್ನು ವಸ್ತುಗಳ ಮೂಲಕ ತೋರ್ಪಡಿಸುವ ಕ್ರಿಯೆ ಇಲ್ಲಿ ಬೆಳೆಯುತ್ತಾ ಹೋದಂತೆ ಮಾರುಕಟ್ಟೆಯ ವ್ಯಾಪ್ತಿಯೂ ವಿಸ್ತಾರವಾಯಿತು.
ರೊಮ್ಯಾನ್ಸ್ , ಪ್ಯಾಷನ್ ಮತ್ತು ಟೀವಿ
ಪ್ರೀತಿ ಎಂಬುದು ಹೇಗಿರುತ್ತದೆ ಎಂಬುದನ್ನು ತೋರಿಸಿದ್ದೇ ಸಿನಿಮಾಗಳು. ಅಲ್ಲಿಯವರಗೆ ಪ್ರೀತಿ ಎಂಬುದು ಹೇಗೆ ಹುಟ್ಟಿಕೊಳ್ಳುತ್ತದೆ, ಅದನ್ನು ವ್ಯಕ್ತ ಪಡಿಸುವುದು ಹೇಗೆ ಎಂಬುದನ್ನು ಅರಿಯದೆ ಚಡಪಡಿಸುವ ಮನುಷ್ಯನಿಗೆ ಸಿನಿಮಾಗಳು ಪ್ರೀತಿಯೆಂಬುದು ಹೇಗಿರುತ್ತದೆ ಎಂಬುದನ್ನು ಚಲಿಸುವ ಚಿತ್ರಗಳ ಮೂಲಕ ಹೇಳಿಕೊಟ್ಟವು. ಸಮೀಕ್ಷೆಯೊಂದರ ಪ್ರಕಾರ ವ್ಯಾಲೆಂಟೈನ್ಸ್ ಡೇ ದಿನದಂದು ಪ್ಯಾಷನ್ ಮತ್ತು ರೊಮ್ಯಾನ್ಸ್ ಇಷ್ಟ ಪಡುತ್ತಾರಂತೆ. ಈ ದಿನ ರಜೆ ಬೇಕು ಎಂದು ಬಯಸುವವರೇ ಜಾಸ್ತಿ. ಯಾಕೆ ಈ ದಿನ ರಜೆ ಬೇಕು ಎಂದು ಕೇಳಿದರೆ ಶೇ. 46ರಷ್ಟು ಮಂದಿ ಸಂಜೆ ಹೊತ್ತು ಹೊರಗೆ ಹೋಗಿ ರೊಮ್ಯಾಂಟಿಕ್ ಆಗಿ ಕಳೆಯಲು ಬಯಸುತ್ತಾರೆ. ಶೇ. 21ರಷ್ಟು ಮಂದಿ ಆ ದಿನ ತಮ್ಮ ಸಂಗಾತಿಯೊಡನೆ ಪ್ರೀತಿಯ ಕ್ಷಣಗಳನ್ನು ಕಳೆಯಲು ಬಯಸುತ್ತಾರಂತೆ. ಶೇ. 19 ರಷ್ಟು ಜನ ಮನೆಯಲ್ಲೇ ಸಿನಿಮಾ ನೋಡಲು ಇಷ್ಟ ಪಟ್ಟರೆ ಶೇ. 14 ರಷ್ಟು ಮಂದಿ ಗಿಫ್ಟ್ ಗಳನ್ನು ಖರೀದಿಸಿ, ಕೊಟ್ಟು, ಪಡೆದು ಖುಷಿ ಪಡಲು ಇಷ್ಟ ಪಡುತ್ತಾರಂತೆ.
ಇಷ್ಟೇ ಅಲ್ಲ ವ್ಯಾಲೆಂಟೈನ್ಸ್ ದಿನ ಹೆಣ್ಣು ತನ್ನ ಸಂಗಾತಿಯಿಂದ ಏನು ಬಯಸುತ್ತಾಳೆ ಎಂಬುದಕ್ಕೆ ಶೇ. 96 ರಷ್ಟು ಮಂದಿ ಪ್ರಾಮಾಣಿಕತೆ ಎಂದು ಉತ್ತರಿಸಿದ್ದಾರೆ. ಶೇ. 46 ಮಂದಿ ಪ್ಯಾಷನ್ ಅಂದರೆ, ಸೋಷ್ಯಲ್ ಸ್ಟೇಟಸ್, ಅದ್ದೂರಿ ಮದುವೆ ಎಂದೂ ಉತ್ತರಿಸಿದ್ದಾರೆ
ಪ್ರೇಮಿಗಳಿಗೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ದಿನವಾದರೆ, ಇನ್ನು ಕೆಲವರಿಗೆ ಪ್ರೀತಿಯನ್ನು ಪ್ರಸ್ತಾಪ ಮಾಡುವ ದಿನ. ಈ ದಿನ ಅಲ್ಲೊಂದು ಹೊಸ ಸಂಬಂಧ ಹುಟ್ಟಿಕೊಳ್ಳುತ್ತದೆ. ಹೆಚ್ಚಿನವರು ರಿಂಗ್ ತೊಡಿಸಿ ತಮ್ಮ ಪ್ರೀತಿ ಪ್ರಸ್ತಾಪ ಮಾಡುತ್ತಾರೆ. ಅದರಲ್ಲಿಯೂ ರಿಂಗ್ ತೊಡಿಸಿ ಮದುವೆ ಪ್ರಸ್ತಾಪ ಮಾಡುವುದನ್ನು ಇಷ್ಟ ಪಡುತ್ತೇವೆ ಎಂದು ಶೇ. 83 ಮಹಿಳೆಯರು ಒಪ್ಪಿಕೊಂಡಿದ್ದಾರೆ. ಇದರಲ್ಲಿ ಶೇ. 45 ರಷ್ಟು ಮಂದಿ ಆ ರಿಂಗ್ ನ್ನು ಪ್ರಿಯಕರನ ಮುಂದೆಯೇ ತೊಟ್ಟರೆ. ಶೇ. 32 ರಷ್ಟು ಮಂದಿ ಅದನ್ನು ಇತರರಿಂದ ಬಚ್ಚಿಟ್ಟುಕೊಳ್ಳುತ್ತಾರೆ. ಶೇ. 70 ರಷ್ಟು ಮಂದಿ ತಮಗೆ ಯಾವ ಗಿಫ್ಟ್ ಸಿಕ್ಕಿದೆ ಎನ್ನುವುದನ್ನೂ ಬಹಿರಂಗ ಪಡಿಸುವುದಿಲ್ಲವಂತೆ.
ಗಿಫ್ಟ್ ಗಳ ಮಾತು ಪಕ್ಕಕ್ಕಿಟ್ಟರೆ ಈ ದಿನ ಕೆಂಗುಲಾಬಿ ಮತ್ತು ಚಾಕಲೇಟ್ ಅತೀ ಹೆಚ್ಚು ಖರ್ಚಾಗುವ ವಸ್ತು. ಕೆಂಗುಲಾಬಿಯ ರಫ್ತು ಆಮದುಗಳು ಈ ದಿನ ಜಾಸ್ತಿಯಾಗಿರುತ್ತವೆ. ಚಾಕಲೇಟ್ ಕಂಪನಿಗಳು ಈ ದಿನವನ್ನೇ ಗುರಿಯಾಗಿಟ್ಟುಕೊಂಡು ವಿಧ ವಿಧದ ಚಾಕ್ಲೇಟ್ ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತವೆ. ಅಂದಹಾಗೆ ಇದು ಇಂಟರ್ನೆಟ್ ಯುಗ ಆಗಿರುವುದರಿಂದ ಒಂದು ಕಾಲದಲ್ಲಿ ಅಬ್ಬರದ ಮಾರಾಟ ನಡೆಸುತ್ತಿದ್ದ ಗ್ರೀಟಿಂಗ್ ಕಾರ್ಡ್ನ ಮಾರುಕಟ್ಟೆಯಲ್ಲಿ ಅಲ್ಪ ಕುಸಿತ ಕಂಡು ಬಂದಿದೆ.
ವ್ಯಾಲೆಂಟೈನ್ಸ್ ದಿನ ಅಂದರೆ ಪ್ರೀತಿ ಮಾಡುವುದಷ್ಟೇ ಅಲ್ಲ, ಅದೇ ದಿನ ಬ್ರೇಕ್ ಅಪ್ ಗಳೂ ಆಗುತ್ತವೆ. ತಮ್ಮ ಸಂಗಾತಿಗೆ ವ್ಯಾಲೆಂಟೈನ್ ದಿನ ವೇ ಗುಡ್ ಬೈ ಹೇಳಲು ಸೂಕ್ತ ಎಂದು ಹೇಳುವವರ ಸಂಖ್ಯೆ ಹೆಚ್ಚಿದೆ. ಈ ಟೈಮ್ ನಲ್ಲಿ ಬ್ರೇಕ್ ಅಪ್ ಆದ್ರೆ ಶೇ. 74 ರಷ್ಟು ಮಂದಿ ತಮ್ಮ ಲವರ್ ಕೊಡಿಸಿದ ರಿಂಗ್ ಅನ್ನು ವಾಪಸ್ ಮಾಡುತ್ತಾರೆ. ಅದೇ ವೇಳೆ ಶೇ. 26 ರಷ್ಟು ಮಂದಿ ಇದನ್ನು ತಮ್ಮಲ್ಲಿಯೇ ಇಟ್ಟು ಕೊಳ್ಳುತ್ತಾರಂತೆ. ಶೇ. 46 ರಷ್ಟು ಮಂದಿ ಬ್ರೇಕ್ ಅಪ್ ಮಾಡಿ ಹೊಸ ಸಂಗಾತಿಯನ್ನು ಹುಡುಕುತ್ತಾರಂತೆ.
ಸೋಷ್ಯಲ್ ಮೀಡಿಯಾ ಮತ್ತು ಮುಕ್ತ ಮುಕ್ತ
ವ್ಯಾಲೆಂಟೈನ್ಸ್ ಡೇ ಹೇಗೆ ಆಚರಿಸಿದ್ದು ಮಾತ್ರವಲ್ಲ ಅದನ್ನು ಜಗತ್ತಿಗೆ ಸಾರಿ ಹೇಳಬೇಕು ಎಂಬ ಉತ್ಸಾಹ ಹಲವರಲ್ಲಿರುತ್ತದೆ. ಹೀಗಿರುವವರು ತಮ್ಮ ದಿನಚರಿ ಯನ್ನು ಸಾಮಾಜಿಕ ತಾಣದಲ್ಲಿ ಅಪ್ ಡೇಟ್ ಮಾಡುತ್ತಾರೆ. ಇನ್ನು ಕೆಲವರು ತಾನು ತನ್ನ ಸಂಗಾತಿಯನ್ನು ಎಷ್ಟು ಪ್ರೀತಿಸುತ್ತೇನೆ ಎಂದು ತೋರಿಸಲು ಸಾರ್ವಜನಿಕ ಸ್ಥಳಗಳನ್ನೇ ಆಯ್ಕೆ ಮಾಡುತ್ತಾರೆ. ಒಂದಷ್ಟು ಜನರ ಮುಂದೆ ಆಲಿಂಗಿಸಿ, ಚುಂಬಿಸಿ ನಾನು ಆಕೆ/ಆತನನ್ನು ಎಷ್ಟು ಪ್ರೀತಿ ಮಾಡುತ್ತೇನೆ ಎಂಬುದನ್ನು ತೋರಿಸುತ್ತಾರೆ. ಇಲ್ಲಿ ಎಲ್ಲವೂ ಮುಕ್ತ ಮುಕ್ತವಾಗಿರುತ್ತದೆ. ಸಮೀಕ್ಷೆಗಳ ಪ್ರಕಾರ ಸಾರ್ವಜನಿಕವಾಗಿ ವ್ಯಕ್ತ ಪಡಿಸುವ ಪ್ರೀತಿಗಿಂತ ಏಕಾಂತದಲ್ಲಿ ಸಂಗಾತಿಗಳಿಬ್ಬರೇ ಜತೆಗೆ ಸಮಯ ಕಳೆಯುತ್ತಾ ಪ್ರೀತಿಸುವ ಪ್ರೀತಿ ಹೆಚ್ಚು ಗಾಢವಾಗಿರುತ್ತದಂತೆ. ಆದರೆ ಸಿನಿಮಾ ಮತ್ತು ಮಾಧ್ಯಮಗಳ ಪ್ರಭಾವದಿಂದ ಪ್ರೀತಿಯ ನಿಜವಾದ ಅನುಭೂತಿಗಳು ಬದಲಾಗುತ್ತಾ ಬಂದಿವೆ. ಪ್ರೀತಿಯಲ್ಲಿಯೂ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ಬಂದಿರುವ ಕಾರಣ ಪ್ರೀತಿಯ ವ್ಯಾಖ್ಯಾನವೂ ಬದಲಾಗಿದೆ.
ಅಂದಹಾಗೆ ಪ್ರೀತಿ ಎಂಬುದು ದ್ರಾವಕವಿದ್ದಂತೆ ಅದು ಯಾವ ಪಾತ್ರೆಯನ್ನು ಸೇರುತ್ತದೋ ಆ ಆಕಾರವನ್ನು ಅದು ಪಡೆದುಕೊಳ್ಳುತ್ತದೆ. ಪ್ರೀತಿ ಎಂದರೆ ಹೀಗೆ ಇರಬೇಕು ಎಂಬ ಕಟ್ಟುಪಾಡುಗಳಿಲ್ಲ, ಅದು ಯಾವತ್ತೂ ಸ್ವತಂತ್ರವಾಗಿಯೇ ಇರುತ್ತದೆ. ಅದು ಉತ್ತರ, ಪ್ರಶ್ನೆಯಲ್ಲ!