ಟೆಡ್ಡಿ ಎಂಬ ಈ ಮುದ್ದು ಕರಡಿ ಯಾರಿಗೆ ಇಷ್ಟವಿಲ್ಲ ಹೇಳಿ? ಹೆಣ್ಮಕ್ಕಳಿಗೆ ಟೆಡ್ಡಿ ಎಂದರೆ ವಿಶೇಷ ಒಲವು. ವ್ಯಾಲೆಂಟೈನ್ಸ್ ಡೇ ವಾರಾಚರಣೆಯಲ್ಲಿ ಫೆ. 10ರಂದು ಟೆಡ್ಡಿ ಡೇ ಆಚರಿಸಲಾಗುತ್ತದೆ. ಮಕ್ಕಳಿಂದ ಹಿಡಿದು ಹಿರಿಯರ ವರೆಗೆ ಎಲ್ಲರಿಗೂ ಈ ಟೆಡ್ಡಿ ಪ್ರಿಯವಾದುದೇ. ಅಂದಹಾಗೆ ಈ ಮುದ್ದು ಮುದ್ದಾದ ಆಟಿಕೆಗೆ Teddy bears ಎಂಬ ಹೆಸರು ಹೇಗೆ ಬಂತು ಎಂಬುದು ಗೊತ್ತಿದೆಯಾ?
1902ರಲ್ಲಿ ಮಿಸಿಸಿಪ್ಪಿ ಗವರ್ನರ್ ಅಮೆರಿಕ ಅಧ್ಯಕ್ಷ ಥಿಯೋಡಾರ್ ರೂಸ್‌ವೆಲ್ಟ್ ನ್ನು ಬೇಟೆಗಾಗಿ ಕರೆದಿದ್ದರು. ಆ ಕಾಲದಲ್ಲಿ ಪ್ರಾಣಿಗಳನ್ನು ಬೇಟೆಯಾಡುವುದು ಪ್ರತಿಷ್ಠೆಯ ವಿಷಯವಾಗಿತ್ತು. ಆದರೇನು ಮಾಡುವುದು ಬೇಟೆಗಾಗಿ ಬಂದ ಅತಿಥಿ ಮಹಾಶಯರೆಲ್ಲಾ ಪ್ರಾಣಿಗಳನ್ನು ಬೇಟೆಯಾಡಿದಾಗ ರೂಸ್‌ವೆಲ್ಟ್‌ಗೆ ಒಂದೇ ಒಂದು ಪ್ರಾಣಿಯನ್ನು ಬೇಟೆಯಾಡಲು ಸಾಧ್ಯವಾಗಲೇ ಇಲ್ಲ. ರೂಸ್‌ವೆಲ್ಟ್ ಗೆ ನಿರಾಶೆ ಮತ್ತು ಅವಮಾನ ಒಟ್ಟಿಗೆ ಅನುಭವಕ್ಕೆ ಬಂದಿತ್ತು. ಆಗ ಅವರ ಸಹಾಯಿಯೊಬ್ಬ ಪುಟ್ಟ ಕರಡಿ ಮರಿಯೊಂದನ್ನು ಅರಮನೆಯ ಬಳಿಗೆ ಹೊತ್ತುಕೊಂಡು ಬಂದು ಈ ಕರಡಿಗೆ ಶೂಟ್ ಮಾಡಿ ಎಂದು ಹೇಳಿದನು. ಆದರೆ ರೂಸ್‌ವೆಲ್ಟ್‌ಗೆ ಆ ಪುಟ್ಟ ಕರಡಿಯನ್ನು ಶೂಟ್ ಮಾಡುವ ಮನಸ್ಸಾಗಲೇ ಇಲ್ಲ.
ರೂಸ್‌ವೆಲ್ಟ್‌ನ ಈ ಕರಡಿ ಕತೆ ಹೇಗೋ ಪತ್ರಿಕೆಯವರಿಗೆ ತಿಳಿದು ಬಿಟ್ಟಿತು. ದ ವಾಷಿಂಗ್ಟನ್ ಪೋಸ್ಟ್ ಈ ಬಗ್ಗೆ ಕಾರ್ಟೂನ್ ಒಂದನ್ನೂ ಪ್ರಕಟಿಸಿತು. ರೂಸ್‌ವೆಲ್ಟ್‌ರನ್ನು ಅವರ ಆಪ್ತರು ಟೆಡ್ಡಿ ಎಂದೇ ಕರೆಯುತ್ತಿದ್ದರು. ಈ ಕಾರ್ಟೂನ್‌ನ್ನು ನೋಡಿದ ಮೋರಿಸ್ ಮಿಚ್‌ಟಂ ಎಂಬಾತ ಪುಟ್ಟ ಆಟಿಕೆಯನ್ನು ತಯಾರಿಸಿ Teddy's bears ಎಂದು ಅದನ್ನು ಕರೆದ. ಅನಂತರ ರೂಸ್‌ವೆಲ್ಟ್ ಅವರ ಅನುಮತಿ ಪಡೆದು ಆ ಆಟಿಕೆಗೆ ಅವರ ಹೆಸರನ್ನಿಡಲಾಯಿತು. ಹೀಗೆ ಪುಟ್ಟ ಆಟಿಕೆ ಕರಡಿ ಮರಿ Teddy bears ಎಂಬ ಹೆಸರು ಪಡೆಯಿತು.