ಕೆಂಗುಲಾಬಿ ಪ್ರೀತಿಯ ಪ್ರತೀಕ. ವಿಧ ವಿಧ ಬಣ್ಣದ ಗುಲಾಬಿಗಳಿದ್ದರೂ ವ್ಯಾಲೆಂಟೈನ್ಸ್ ಡೇಗೆ ಕೆಂಗುಲಾಬಿಯೇ ಬೇಕು . ಪ್ರೇಮಿಗಳ ದಿನಬಂತೆಂದರೆ ಈ ಕೆಂಗುಲಾಬಿಗಳಿಗೆ ಡಿಮ್ಯಾಂಡೋ ಡಿಮ್ಯಾಂಡು. ವ್ಯಾಲೆಂಟೈನ್ಸ್ ವಾರದಲ್ಲಿ ಮೊದಲ ದಿನವನ್ನು (ಫೆ.7)ನ್ನು ರೋಸ್ ಡೇ ಆಗಿ ಆಚರಿಸಲಾಗುತ್ತದೆ. ಗುಲಾಬಿಯ ಮಾರಾಟವೂ ಈ ವಾರಗಳಲ್ಲಿ ಭರ್ಜರಿಯಾಗಿ ನಡೆಯುತ್ತವೆ.
ಅಂದಹಾಗೆ ಪ್ರೇಮಿಗಳಿಗೆ ಕೆಂಗುಲಾಬಿಯೇ ಯಾಕೆ ಕೊಡಬೇಕು? ಬೇರೆ ಬಣ್ಣದ ಗುಲಾಬಿಗಳನ್ನು ಕೊಟ್ಟರೆ ಆಗಲ್ವಾ? ಯಾಕೆ ಇಲ್ಲಿಯೂ ವರ್ಣ ಭೇದ ನೀತಿ ಎಂದು ನೀವು ಯೋಚಿಸುತ್ತಿದ್ದರೆ ಇಲ್ಲಿದೆ ಉತ್ತರ...
ಪ್ರತಿಯೊಂದು ಬಣ್ಣಕ್ಕೂ ಅದರದ್ದೇ ಆದ ವ್ಯಾಖ್ಯಾನಗಳಿವೆ. 18 ಶತಮಾನದಲ್ಲಿ ಗುಲಾಬಿಗಳ ರಂಗಿನ ಅರ್ಥದ ಭಾಷೆ ಸೃಷ್ಟಿಯಾಯಿತು ಎಂದು ಹೇಳಲಾಗುತ್ತಿದೆ. ಪ್ರೇಮಿಗಳ ಮನಸ್ಸಿನ ಭಾಷೆಯನ್ನು ವ್ಯಕ್ತ ಪಡಿಸಲು ಗುಲಾಬಿಯನ್ನು ಬಳಸಿದ್ದು ಇದೇ ಶತಮಾನದಲ್ಲಿ.
ಕೆಂಗುಲಾಬಿ ನಿಷ್ಕಳಂಕ ಪ್ರೀತಿಯ ಸಂಕೇತ. ಅವುಗಳ ಗಾಢ ಬಣ್ಣವು ಮನಸ್ಸಿನ ಭಾವನೆಗಳನ್ನು ಅಭಿವ್ಯಕ್ತ ಮಾಡುತ್ತವೆ. ಪಿಂಕ್ (ಗುಲಾಬಿ) ಬಣ್ಣದ ಗುಲಾಬಿಯು ಲಾಲಿತ್ಯ ಮತ್ತು ಸೊಬಗನ್ನು ಸೂಚಿಸಿದರೆ ಬಿಳಿ ಗುಲಾಬಿಯು ಹೊಸ ಆರಂಭದ ಸಂಕೇತ. ಅದರಲ್ಲೂ ಗೆಳೆತನದ ಸಹಜತೆಗೆ ಹಳದಿ ಗುಲಾಬಿ ಎಂಬುದು ಗೊತ್ತೇ ಇದೆ ಅಲ್ವಾ?
ಪ್ರೀತಿ ಒಂದು ಕಾಮನ ಬಿಲ್ಲು ಎಂದು ಹೇಳುವಂತೆ ಪ್ರತಿಯೊಂದು ಬಣ್ಣವೂ ಒಂದಲ್ಲ ಒಂದು ಬಗೆಯ ಭಾವನೆಗಳನ್ನು ಹೊಮ್ಮಿಸುತ್ತದೆ. ಏಳು ಬಣ್ಣಗಳು ಸೇರಿ ಬಿಳಿ ಬಣ್ಣವಾಗುವ ಪ್ರಕ್ರಿಯೆಯಂತೆ ಪ್ರೀತಿ ಎಲ್ಲವೂ ಒಂದೇ, ಅದು ಇಂದಿಗೂ ಕಣ್ಣ ಹನಿಯಂತೆ ನಿಷ್ಕಲ್ಮಶ.