ನಮ್ಮ ಕಾಲದಲ್ಲಿ ಪ್ರೀತಿ ಅದೆಷ್ಟು ಚೆನ್ನಾಗಿತ್ತು. ಈಗಿನ ಜನರಿಗೆ ಪ್ರೀತಿ ಎಂದರೆ ಬರೀ ಖಯಾಲಿ ಎಂದು ಗೊಣಗುವವರನ್ನು ನೀವು ನೋಡಿರಬಹುದು. ನಿಜ, ಪ್ರೀತಿಯನ್ನು ಅಭಿವ್ಯಕ್ತಿ ಪಡಿಸುವ ರೀತಿಯಲ್ಲಿ ಬದಲಾವಣೆಯ ಗಾಳಿ ಬೀಸಿದೆ. ಈಗ ಕದ್ದು ಮುಚ್ಚಿ ಪ್ರೀತಿಸುವ ಪ್ರೇಮಿಗಳು ವಿರಳ. ಪ್ರೇಮಪತ್ರದ ಬದಲು ವಾಟ್ಸಾಪ್‌ನಲ್ಲಿ ಒಂದು ಸಂದೇಶ ಕಳಿಸಿದರೆ ಮುಗೀತು! ಮದುವೆ ಆಗುವ ಮುನ್ನ ವ್ಯಾಲೆಂಟೈನ್ಸ್ ಡೇ ಆಚರಿಸಿಕೊಂಡಿದ್ದ ಪ್ರೇಮಿಗಳು ಮದುವೆಯಾದ ನಂತರ ಇನ್ನೇನು ಆಚರಣೆ ಎಂದು ಸುಮ್ಮನಾಗಿ ಬಿಡುತ್ತಾರೆ. ಮದುವೆಯಾದ ನಂತರ ಪ್ರೀತಿ ಮಾಡುವುದಾ? ಅದಕ್ಕೆಲ್ಲಿದೆ ಸಮಯ ಎಂದು ಮರುಪ್ರಶ್ನೆ ಹಾಕುವವರು ಇಲ್ಲಿ ಕೇಳಿ...ಎಲ್ಲವೂ ನಮ್ಮ ಆದ್ಯತೆಯ ಮೇಲೆ ಅವಲಂಬಿತವಾಗಿರುತ್ತದೆ. ಯಾವುದು ಬೇಕು ಬೇಡ ಎಂದು ನಿರ್ಧರಿಸುವವರು ನಾವೇ. ಹೀಗಿರುವಾಗ ಒಂದಷ್ಟು ಹೊತ್ತು ಆ ಹಳೇ ಪ್ರಣಯವನ್ನು ಮತ್ತೊಮ್ಮೆ ಆಸ್ವಾದಿಸುವ ಸನ್ನಿವೇಶವನ್ನು ನಾವೇ ಯಾಕೆ ಸೃಷ್ಟಿ ಮಾಡಬಾರದು?
ನಿಮ್ಮ ಸಂಗಾತಿಗೆ ಸಮಯವನ್ನು ನೀಡಿ
ಮದುವೆ ಆದ ಮೇಲೆ ಯಾವುದಕ್ಕೂ ಸಮಯ ಇಲ್ಲ ಎಂದು ಹೇಳಬೇಡಿ. ಪ್ರೀತಿಸುವ ಕಾಲದಲ್ಲಿ ಅದೆಷ್ಟೇ ಬ್ಯುಸಿಯಿದ್ದರೂ ಪ್ರಿಯಕರ/ಪ್ರೇಯಸಿಯ ಜತೆ ಒಂದಷ್ಟು ಹೊತ್ತು ಕಳೆಯಲು ನಾವು ಸಮಯ ಕಂಡುಕೊಂಡಿದ್ದೆವಲ್ಲಾ..ಹಾಗೆಯೇ ದಿನದ ಇಪ್ಪತ್ತು ನಾಲ್ಕು ಗಂಟೆಗಳಲ್ಲಿ ಒಂದರ್ಧ ಗಂಟೆ ನಿಮ್ಮ ಸಂಗಾತಿಯೊಡನೆ ಪ್ರೀತಿಯ ಮಾತುಗಳನ್ನಾಡುತ್ತಾ ಕಳೆಯಿರಿ. ಅದೆಷ್ಟೇ ಟೆನ್ಶನ್ ಇದ್ದರೂ ಪರಸ್ಪರ ಪ್ರೀತಿಯ ಕಾಳಜಿಯ ಮಾತುಗಳಿಂದ ಮನಸ್ಸು ಶಾಂತವಾಗುತ್ತದೆ.
ಮದುವೆ ಆದ ನಂತರ ಅನಿವಾರ್ಯವಾಗಿ ಜತೆ ಇರ್ಬೇಕಲ್ಲಾ ಎಂದು ಅಡ್ಜೆಸ್ಟ್ ಮಾಡಿಕೊಂಡು ಇರಬೇಡಿ. ಪರಸ್ಪರ ಗೌರವ ಮತ್ತು ಪ್ರೀತಿ ಯಾವತ್ತೂ ಇರಲಿ. ಆಗೊಮ್ಮೆ ಈಗೊಮ್ಮೆ ಸಂಗಾತಿಗೆ ಮುತ್ತು ಕೊಡುತ್ತಾ ಮೆಚ್ಚುಗೆಯ ಮಾತುಗಳನ್ನಾಡಿ. ನಿನ್ನೊಂದಿಗೆ ನಾನು ಸದಾ ಇದ್ದೇನೆ ಎಂದು ನಿಮ್ಮ ಸಂಗಾತಿಗೆ ಮನವರಿಕೆ ಮಾಡಿಕೊಡಿ. ಸಂಗಾತಿಯೊಂದಿಗೆ ಸೆಕ್ಸ್ ಮಾಡುವುದೂ ಕೂಡಾ ಪ್ರೀತಿಯ ಒಂದು ಭಾಗವೇ.
ನಿಮ್ಮ ಸಂಗಾತಿಗೆ ಆದ್ಯತೆ ನೀಡಿ
ಅದೆಷ್ಟೇ ಕೆಲಸಗಳಿದ್ದರೂ ನಿಮ್ಮ ಸಂಗಾತಿಗೆ ತೊಂದರೆ ಆದಾಗ ಅವರ ಸಹಾಯಕ್ಕೆ ನಿಲ್ಲಿ. ಆರೋಗ್ಯ ಸರಿ ಇಲ್ಲದೇ ಇರುವಾಗ ಔಷಧಿಗಿಂತ ನಿಮ್ಮ ಸಾನಿಧ್ಯವೇ ಅವರಿಗೆ ಹೆಚ್ಚಿನ ಅಗತ್ಯವಿರುತ್ತದೆ. ಒಂದು ಹಿತವಾದ ಸ್ಪರ್ಶ ಮತ್ತು ಸಾನಿಧ್ಯ ಹಲವಾರು ಬದಲಾವಣೆಯನ್ನು ಮಾಡಬಲ್ಲದು. ಟ್ರೈ ಮಾಡಿ...
ಅದೇನೇ ಸಮಸ್ಯೆಯಿದ್ದರೂ ಮುಕ್ತವಾಗಿ ಹೇಳಿ
ತಪ್ಪು ನಿಮ್ಮದೇ ಆಗಿದ್ದರೂ ಅದನ್ನು ಒಪ್ಪಿ ಕ್ಷಮೆ ಕೇಳಿ. ಕ್ಷಮೆ ಕೇಳುವುದರಿಂದ ಯಾರೂ ಕಿರಿಯರಾಗುವುದಿಲ್ಲ. ನಮ್ಮೊಳಗಿನ ಅಹಂನ್ನು ಬಿಟ್ಟು ಮುಕ್ತವಾಗಿ ಮಾತನಾಡಿ. ತಪ್ಪು ಯಾರದ್ದೇ ಆಗಿರಲಿ ಅದನ್ನು ಕ್ಷಮಿಸಿ ತಿದ್ದಿ ನಡೆಯುವ ಗುಣ ನಿಮ್ಮಲ್ಲಿರಲಿ.
ದಿನ ಒಂದೇ ರೀತಿಯ ಜೀವನ ನಡೆಸಿ ಬೋರಾಗಿದ್ದರೆ, ಸಂಗಾತಿಯ ಜತೆ ಏನಾದರೂ ವಿಶೇಷವಾಗಿರುವುದನ್ನು ಮಾಡಿ. ಇಬ್ಬರಿಗೂ ಖುಷಿ ಕೊಡುವ ವಿಷಯಗಳನ್ನು ಮಾಡುತ್ತಾ ಇರಿ. ಒಂದಷ್ಟು ಸಾಹಸವೂ ಇದ್ದರೆ ಲೈಫ್ ಈಸ್ ಬ್ಯೂಟಿಫುಲ್
ನೀವು ನಿಮ್ಮ ಸಂಗಾತಿಗೆ ಪ್ರಾಮಾಣಿಕರಾಗಿರಿ. ಪ್ರಾಮಾಣಿಕರಾಗಿ ಇರುವುದರಿಂದ ಪರಸ್ಪರ ಗೌರವ ಮತ್ತು ಪ್ರೀತಿ ಹೆಚ್ಚುತ್ತದೆ.
ಆಶ್ವಾಸನೆ ನೀಡಿದರೆ ಅದನ್ನು ಪೂರೈಸಿ
ಪ್ರೀತಿಸುವ ಹೊತ್ತಲ್ಲಿ ನಾನು ನಿನಗೆ ಆಕಾಶದಿಂದ ತಾರೆಯನ್ನೇ ಕಿತ್ತು ತರುತ್ತೇನೆ ಎಂದು ಹೇಳುವವರಿದ್ದಾರೆ. ಅದು ಅಸಾಧ್ಯ ಎಂದು ಗೊತ್ತಿದ್ದರೂ ಪ್ರೇಯಸಿ ಹೌದಾ? ಎಂದು ಖುಷಿ ಪಡುತ್ತಾಳೆ. ಇದೇ ವಾಕ್ಯವನ್ನು ಮದುವೆಯಾದ ನಂತರ ಹೆಂಡತಿಗೆ ಹೇಳಿ ನೋಡಿ. ಸಾಕು ನಿಲ್ಲಿಸು ಎಂಬ ಮಾತು ಕಪಾಳಕ್ಕೆ ಹೊಡೆದಂಗೆ ಬರುತ್ತದೆ. ಆದ ಕಾರಣ ಯಾವತ್ತೂ ವಾಸ್ತವಕ್ಕೆ ಹತ್ತಿರವಾದ ಮಾತುಗಳನ್ನಾಡಿ. ಆಶ್ವಾಸನೆ ಕೊಟ್ಟರೆ ಅದನ್ನು ಪೂರೈಸಿ. ಪುಟ್ಟ ಪುಟ್ಟ ವಿಷಯಗಳಲ್ಲಿನ ಖುಷಿಗಳು ಬದುಕಲ್ಲಿ ತುಂಬಲಿ .