ಗರ್ಭಿಣಿಯಾಗುವುದಕ್ಕೆ ನನಗೆ ಭಯ. ನನ್ನ ಈ ಮುಖವನ್ನು ನೋಡಿ ಮಗುವಿಗೆ ಭಯದಿಂದ ಕಿರುಚಿದರೆ ಏನು ಮಾಡೋಣ? ಆಗ ಪತಿ ಅಲೋಕ್ ದೀಕ್ಷಿತ್ ಹೇಳಿದ್ದೇನು ಗೊತ್ತಾ? ನೀನು ಯಾವ ಕಾರಣಕ್ಕೂ ಭಯಪಡಬೇಡ. ನಿನ್ನ ಬಗ್ಗೆ ನಿನ್ನ ಮಗಳು ಅಭಿಮಾನ ಪಡುತ್ತಾಳೆ. ಹೀಗಂತ ಹೇಳಿದ್ದು ಲಕ್ಷ್ಮಿ. ಆ್ಯಸಿಡ್ ದಾಳಿಗೊಳಗಾಗಿ ಆ ಕೌರ್ಯದ ವಿರುದ್ಧ ಹೋರಾಡುತ್ತಿರುವ ದಿಟ್ಟ ಮಹಿಳೆ ಈಕೆ. ಲಕ್ಷ್ಮಿಗೆ ಮದುವೆಯಾಗಿ ಈಗ ಪೀಹೂ ಎಂಬ ಪುಟ್ಟ ಮಗಳಿದ್ದಾಳೆ. ಪೀಹೂ ಅಮ್ಮನ ಮುಖ ನೋಡಿ ಭಯ ಪಟ್ಟಿಲ್ಲ. ಒಂದು ವರುಷದ ಪೀಹೂ ಈಗ ಲಕ್ಷ್ಮಿ ಅಲೋಕ್ ದಂಪತಿಯ ಮನೆ ಮನ ತುಂಬಿಕೊಂಡು ಕಿಲ ಕಿಲ ನಗುತ್ತಾಳೆ.
ಲಕ್ಷ್ಮಿ ಮುನ್ನಾಲಾಲ್ ಹುಟ್ಟಿದ್ದು ದೆಹಲಿಯ ಬಡಕುಟುಂಬವೊಂದರಲ್ಲಿ. ಈಕೆ ಚೆನ್ನಾಗಿ ಹಾಡಬಲ್ಲಳು, ನೃತ್ಯ ಮಾಡಬಲ್ಲಳು. ಚಿತ್ರಕಲೆ, ಕವನ ರಚನೆ ಎಲ್ಲದರಲ್ಲೂ ಆಕೆ ಎತ್ತಿದ ಕೈ. ಏಳನೇ ತರಗತಿಯಲ್ಲಿರುವಾಗ ತನ್ನ ಗೆಳತಿಯ ಸಹೋದರನ ಪ್ರೇಮ ಪ್ರಸ್ತಾಪವನ್ನು ತಿರಸ್ಕರಿಸಿದ್ದಕ್ಕೆ ಆತ ಲಕ್ಷ್ಮಿಯ ಮುಖಕ್ಕೆ ಆ್ಯಸಿಡ್ ಎರಚಿದ್ದ. ಮುಖ ಸುಟ್ಟು ವಿಕೃತವಾಗಿ ಬಿಟ್ಟಿತು. ಆಸ್ಪತ್ರೆಯಲ್ಲಿ ಹಲವಾರು ತಿಂಗಳು ಚಿಕಿತ್ಸೆ ಪಡೆದ ನಂತರ ಮನೆಗೆ ಬಂದು ಕನ್ನಡಿ ನೋಡಿದ ಲಕ್ಷ್ಮಿ ನನ್ನ ಮುಖವೆಲ್ಲಿ ಎಂದು ಕೇಳಿದ್ದಳು.
ಒಂದಷ್ಟು ದಿನ ಖಿನ್ನತೆಯಲ್ಲಿ ಬಳಲಿದಳು. ಒಂದು ದಿನ ತನಗೆ ಈಗ ಹಳೆಯ ಮುಖ ಮತ್ತೆ ಸಿಗುವುದಿಲ್ಲ ಎಂಬ ವಾಸ್ತವವನ್ನು ಅವಳು ಸ್ವೀಕರಿಸಲೇ ಬೇಕಾಯಿತು. ಅವಳನ್ನು ನೋಡಿ ಕೆಲವರು ಬೆಚ್ಚಿ ಬಿದ್ದರು, ಇನ್ನು ಕೆಲವರು ಮುಖ ತಿರುಗಿಸಿ ದೂರ ಸರಿದರು. ಅಂಥಾ ಪರಿಸ್ಥಿತಿಯಲ್ಲಿ ಲಕ್ಷ್ಮಿ ಕತ್ತಲೆ ಕೋಣೆಯನ್ನೇ ಇಷ್ಟಪಟ್ಟಳು. ಆದರೆ ಸೋಲೊಪ್ಪಿಕೊಳ್ಳಲು ಅವಳು ತಯಾರಿರಲಿಲ್ಲ.
ಹಾಗೆ ಲಕ್ಷ್ಮಿ ತನ್ನ ಹೋರಾಟ ಮುಂದುವರಿಸಿದಳು. ದೇಶದಲ್ಲಿ ಆ್ಯಸಿಡ್ ಮಾರಾಟಕ್ಕೆ ನಿಯಂತ್ರಣ ಹೇರಬೇಕೆಂದು ಆಕೆ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದಳು. ಸಾಮಾಜಿಕ ತಾಣಗಳಲ್ಲಿ ತನ್ನ ಹೋರಾಟದ ಬಗ್ಗೆ ಹೇಳಿದಳು. ಸಾಮಾಜಿಕ ತಾಣಗಳ ಮೂಲಕ ಸಂಗ್ರಹಿಸಿದ 27,000 ದೂರುಗಳನ್ನು ಸಾಕ್ಷ್ಯವಾಗಿಟ್ಟುಕೊಂಡು ಲಕ್ಷ್ಮಿ ಕಾನೂನು ಹೋರಾಟ ನಡೆಸಿದಳು. ಲಕ್ಷ್ಮಿಯ ಮೇಲೆ ಆ್ಯಸಿಡ್ ದಾಳಿ ಮಾಡಿದ್ದ ವ್ಯಕ್ತಿಗೆ 10 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಯಿತು.
ಇಷ್ಟಕ್ಕೆ ಲಕ್ಷ್ಮಿಯ ಹೋರಾಟ ನಿಲ್ಲಲಿಲ್ಲ. ಅಪರಾಧಿಗೆ ಶಿಕ್ಷೆಯೇನೋ ಸಿಕ್ಕಿ ಬಿಟ್ಟಿತು. ಆದರೆ ನನ್ನಂತೆ ಇರುವ ಹೆಣ್ಣು ಮಕ್ಕಳ ಮುಂದಿನ ಭವಿಷ್ಯವೇನು ಎಂಬುದನ್ನು ಆಕೆ ಯೋಚಿಸಿಳು. ಹೀಗೆ ಕಫೆ ಹ್ಯಾಂಗ್ ಔಟ್ ಎಂಬ ಹೆಸರಿನಲ್ಲಿ ಸ್ವಯಂ ಉದ್ಯೋಗವೊಂದನ್ನು ಆರಂಭಿಸಿಳು. ಆ ಹೊತ್ತಲ್ಲಿ ಆ್ಯಸಿಡ್ ದಾಳಿ ಸಂತ್ರಸ್ತರ ಬಗ್ಗೆ ಪತ್ರಿಕೆಯಲ್ಲಿ ಬರೆಯುತ್ತಿದ್ದ ಅಲೋಕ್ ದೀಕ್ಷಿತ್ ಎಂಬ ಪತ್ರಕರ್ತನ ಭೇಟಿ ಆಯಿತು. ಇಬ್ಬರಲ್ಲೂ ಪ್ರಣಯಾಂಕುರವಾಯಿತು. ಸೌಂದರ್ಯವಿರುವುದು ಮುಖದಲ್ಲಲ್ಲ, ಮನಸ್ಸಲ್ಲಿ ಎಂಬುದು ಅವನೊಂದಿಗಿನ ಪ್ರೀತಿ ಕಲಿಸಿಕೊಟ್ಟಿತ್ತು. ಇವರಿಬ್ಬರೂ ಮದುವೆಯಾದರು. ಆ್ಯಸಿಡ್ ದಾಳಿ ಸಂತ್ರಸ್ತೆಯೊಬ್ಬಳಿಗೆ ಬಾಳು ಕೊಟ್ಟು ಪುಣ್ಯ ಮಾಡುತ್ತಿದ್ದೇನೆ ಎಂಬ ಯಾವ ಯೋಚನೆಯೂ ಅಲೋಕ್ ಮನಸ್ಸಲ್ಲಿ ಇಲ್ಲ. ನಿಷ್ಕಲ್ಮಷ ಪ್ರೀತಿಯ ಮುಂದೆ ದೇಹ ಸೌಂದರ್ಯವೆಂಬುದು ನಗಣ್ಯ...
ಅಲೋಕ್ ಲಕ್ಷ್ಮಿ ನಡುವಿನ ಈ ಪ್ರೀತಿ ಇದನ್ನು ಸಾರಿ ಹೇಳುತ್ತಿದೆ.