ಯಶಸ್ವಿ ಪುರುಷನ ಹಿಂದೆ ಹೆಣ್ಣೊಬ್ಬಳು ಇದ್ದೇ ಇರುತ್ತಾಳೆ ಎಂಬುದು ನಾಣ್ನುಡಿ. ಅಡ್ನಾಡಿಯಾಗಿದ್ದ ಪುರುಷನೊಬ್ಬನಿಗೆ ತನ್ನ ಸಾಮರ್ಥ್ಯದ ಅರಿವು ಮೂಡಿಸಿ ಆತನನ್ನು ಮತ್ತೆ ಸಾಧನೆಯ ಹಾದಿಯತ್ತ ಕರೆದೊಯ್ಯಲು ಒಬ್ಬ ಹೆಣ್ಣಿಗೆ ಸಾಧ್ಯ. ಅಂಥದೊಂದು ಲವ್ ಸ್ಟೋರಿ ಇಲ್ಲಿದೆ. ಕ್ರಿಕೆಟಿಗ ಶಿಖರ್ ಧವನ್ ರ ಪ್ರೇಮಕತೆ ಇದು. ಒಂದೊಮ್ಮೆ ಫಾರ್ಮ್ ಕಳೆದುಕೊಂಡಿದ್ದ ಧವನ್ ವಿಶ್ವಕಪ್‌ನಲ್ಲಿ ಹೊಡೆಬಡಿ ಆಟದ ಮೂಲಕ ತಮ್ಮ ಫಾರ್ಮ್‌ಗೆ ಮರಳಿದ್ದರು. ಶಿಖರ್ ಧವನ್ ಎಂಬ ಈ 'ಮೀಸೆ ಆಟಗಾರನ' ಯಶಸ್ಸಿನ ಹಿಂದೆ ಇದೆ ಒಂದು ಲವ್‌ಸ್ಟೋರಿ. ಯೆಸ್...ಒಂದು ಫೇಸ್‌ಬುಕ್ ಲವ್‌ಸ್ಟೋರಿ.
2004ರಲ್ಲಿ ಬಾಂಗ್ಲಾದೇಶದಲ್ಲಿ ನಡೆದೆ ಅಂಡರ್ 19 ವಿಶ್ವಕಪ್‌ನಲ್ಲಿ ಟಾಪ್ ಸ್ಕೋರರ್ ಆಗಿದ್ದ ಶಿಖರ್ ಧವನ್‌ನ ಸಹ ಆಟಗಾರರಾಗಿದ್ದ ಸುರೇಶ್ ರೈನಾ, ದಿನೇಶ್ ಕಾರ್ತಿಕ್, ಆರ್.ಪಿ ಸಿಂಗ್ ಮೊದಲಾದವರು ಭಾರತದ ಟೀಂಗೆ ಆಯ್ಕೆಯಾದರೂ ಆಯ್ಕೆಗಾರರಿಗೆ ಧವನ್‌ನ ಪ್ರತಿಭೆ ಕಾಣಲೇ ಇಲ್ಲ. ಹಾಗೆ ಆಯ್ಕೆಗಾರರ ನಿರ್ಲಕ್ಷ್ಯಕ್ಕೊಳಗಾಗಿ ತನ್ನ ಪಾಡಿಗೆ ತಾನಾಯಿತು ಎಂಬಂತಿರುವಾಗ ಹರ್ಭಜನ್ ಸಿಂಗ್ ಅವರ ಫೇಸ್ ಬುಕ್ ಫ್ರೆಂಡ್ ಲಿಸ್ಟ್‌ನಲ್ಲಿ ಒಬ್ಬ ಸುಂದರಿ ಕಣ್ಣಿಗೆ ಬಿದ್ದಳು.
ಮೆಲ್ಬರ್ನ್‌ನಲ್ಲೇ ವಾಸವಾಗಿದ್ದ ಬ್ರಿಟಿಷ್-ಭಾರತೀಯ ಮೂಲದವಳಾದ ಆಕೆಯ ಹೆಸರು ಆಯೇಷಾ ಮುಖರ್ಜಿ. ಆಕೆಯನ್ನು ನೋಡಿದ ಧವನ್ ಕೂಡಲೇ ಫ್ರೆಂಡ್ ರಿಕ್ವೆಸ್ಟ್ ಕಳಿಸಿಯೇ ಬಿಟ್ಟರು. ಆಕೆ ಅದನ್ನು ಸ್ವೀಕರಿಸಿದ್ದು ಮಾತ್ರವಲ್ಲದೆ, ಅಲ್ಲಿ ಧವನ್ ಬದುಕು ಕೂಡಾ ಹೊಸ ತಿರುವು ಪಡೆದುಕೊಂಡಿತು.
ಫೇಸ್‌ಬುಕ್ ಫ್ರೆಂಡ್ ಪ್ರಿಯತಮೆಯಾದಳು. 2009ರಲ್ಲಿ ಅವರ ವಿವಾಹ ನಿಶ್ಚಿತಾರ್ಥವಾಗಿ,2012ರಲ್ಲಿ ವಿವಾಹವಾದರು. ಕಿಕ್ ಬಾಕ್ಸರ್ ಆಗಿರುವ ಆಯೇಷಾಗೆ ಮೊದಲೊಂದು ಮದುವೆಯಾಗಿದ್ದು ಅದರಲ್ಲಿ ರೇಹಾ ಮತ್ತು ಅಲಿಯಾಹ್ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆಕೆ ಧವನ್ ಜೀವನಕ್ಕೆ ಪ್ರವೇಶಿಸಿ ಆತನ ಜೀವನದಲ್ಲಿ ಅಚ್ಚುಕಟ್ಟುತನವನ್ನು ತಂದರು. ಏಳು ಬೀಳುಗಳಲ್ಲಿ ಧವನ್ ಜತೆ ಆಯೇಷಾ ಜತೆಯಾಗಿ ನಿಂತರು. ಆಮೇಲೆ ತನ್ನ ಹುರಿಮೀಸೆ ಅಹಂಕಾರದ ಪ್ರತೀಕವಲ್ಲ, ಇದು ಅಭಿಮಾನದ ಸಂಕೇತ ಎಂದು ಧವನ್ ಸಾಧಿಸಿ ತೋರಿಸಿದರು. ಆತ್ಮವಿಶ್ವಾಸದಿಂದ ಕ್ರೀಸ್‌ಗಿಳಿಯುವ ಧವನ್‌ನನ್ನು ಕಡೆಗಣಿಸಲು ಆಯ್ಕೆಗಾರರಿಗೆ ಆಗಲಿಲ್ಲ. ಹಾಗೆ ಧವನ್ ಟೀಂ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಂಡರು. 2013ರಲ್ಲಿ ತನ್ನ ಪತ್ನಿಯ ದೇಶವಾದ ಆಸ್ಟ್ರೇಲಿಯಾ ವಿರುದ್ಧ ಮೊಹಾಲಿಯಲ್ಲಿ 187 ರನ್ ಸಿಡಿಸಿ ಧವನ್ ಅಬ್ಬರಿಸಿ ನಿಂತರು. ಆಸ್ಟ್ರೇಲಿಯಾ ಬೌಲರ್‌ಗಳ ಮಾರಕ ಬಾಲ್‌ಗಳನ್ನು ಬೌಂಡರಿಗಟ್ಟಿ ಜಗತ್ತೇ ನಿಬ್ಬೆರಗಾಗುವಂತೆ ಮಾಡಿದ ಧವನ್, ಟೀಂ ಇಂಡಿಯಾದಲ್ಲಿ ತನ್ನ ಸ್ಥಾನವನ್ನು ಗಟ್ಟಿ ಮಾಡಿಕೊಂಡರು.
ಹೀಗೆ ತನ್ನ ಸಾಮರ್ಥ್ಯದ ಬಗ್ಗೆ ಭರವಸೆ ಕಳೆದುಕೊಂಡು ಎಲ್ಲಿಯೋ ಕಳೆದು ಹೋಗುತ್ತಿದ್ದ ಶಿಖರ್ ಧವನ್ ನ್ನು ಪ್ರೀತಿಯಿಂದಲೇ ಎಚ್ಚರಿಸಿ, ಸರಿದಾರಿಗೆ ತಂದ ಕ್ರೆಡಿಟ್ ಆಯೇಷಾಗೇ ಸಲ್ಲಬೇಕು.