ಪ್ರೀತಿ ಎಲ್ಲಿ ಬೇಕಾದರೂ ಹುಟ್ಟಬಹುದು. ಕಾಲೇಜಿನಲ್ಲಿ, ಕಾಫಿ ಶಾಪ್‌ನಲ್ಲಿ ಅಷ್ಟೇ ಯಾಕೆ ಪ್ರಯಾಣದ ವೇಳೆಯೂ ಹುಟ್ಟಿಕೊಳ್ಳುತ್ತದೆ. ಆದರೆ ಭಾರತದಲ್ಲಿ ಶೇ. 36ರಷ್ಟು ವ್ಯಕ್ತಿಗಳಿಗೆ ಪ್ರೀತಿ ತಮ್ಮ ಕಚೇರಿಯಲ್ಲಿ ಹುಟ್ಟಿಕೊಳ್ಳುತ್ತದಂತೆ. ತಮ್ಮದೇ ಕಚೇರಿಯಲ್ಲಿರುವ ಸಹೋದ್ಯೋಗಿಗಳನ್ನು ಪ್ರೀತಿಸಿ,ಮದುವೆಯಾದವರ ಸಂಖ್ಯೆ ಶೇ. 20 ಇದೆ.
ಆನ್‌ಲೈನ್ ಜಾಬ್ ಸೈಟ್‌ವೊಂದು 2015ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ತಮ್ಮದೇ ಕಚೇರಿಯಲ್ಲಿ ತಮ್ಮದೇ ರೀತಿಯ ಕೆಲಸ ಮಾಡುವವರು ಬೇಕೆಂದು ಶೇ. 56 ರಷ್ಟು ಮಂದಿ ಹಂಬಲಿಸುತ್ತಾರೆ. ಆಫೀಸಿನಲ್ಲಿ ಪ್ರೀತಿಯಲ್ಲಿ ಬೀಳುವುದು ಸುಲಭವೇ ಆಗಿದ್ದರೂ ಅದರಿಂದ ಅಪಾಯಗಳೇ ಜಾಸ್ತಿ. ಇದೇ ಪ್ರಣಯ ಕೆಲಸಕ್ಕೆ ಕುತ್ತು ತರಬಹುದು!
ಕಚೇರಿಯಲ್ಲಿ ಪ್ರೀತಿಯಲ್ಲಿ ಬೀಳ್ತಾರಲ್ಲ, ಅದರಲ್ಲಿ ಶೇ. 55 ರಷ್ಟು ಮಂದಿ ತಮ್ಮ ಬಾಸ್‌ನ್ನು ಲವ್ ಮಾಡ್ತಾರಂತೆ. ಶೇ. 68 ರಷ್ಟು ಮಂದಿ ತಮಗಿಂತ ಉನ್ನತ ಹುದ್ದೆಯಲ್ಲಿರುವವರನ್ನು ಪ್ರೀತಿ ಮಾಡುತ್ತಾರಂತೆ. ಆದಾಗ್ಯೂ, ಶೇ. 34 ರಷ್ಟು ಮಂದಿ ತಮ್ಮ ಸಹೋದ್ಯೋಗಿಯನ್ನೇ ಪ್ರೀತಿಸುತ್ತಾರಂತೆ.
ಆಫೀಸ್ ರೊಮ್ಯಾನ್ಸ್ ಯಾವತ್ತೂ ಚುಪ್ ಚುಪ್ಕೇ ಮಾಡ್ಬೇಕು. ಶೇ. 71 ರಷ್ಟು ಮಂದಿ ತಮ್ಮ ಪ್ರೀತಿಯನ್ನು ಗುಟ್ಟಾಗಿಯೇ ಇಟ್ಟುಕೊಳ್ಳುತ್ತಾರೆ. ಆದರೆ ಶೇ. 72 ರಷ್ಟು ಮಂದಿಯ ಗುಟ್ಟು ಬೇಗನೆ ಇನ್ನೊಬ್ಬರಿಗೆ ತಿಳಿದು ಬಿಡುತ್ತದಂತೆ.
ಆಫೀಸ್ ನಲ್ಲಿ ರೊಮ್ಯಾನ್ಸ್ ಮಾಡುವ ಮುನ್ನ
ಕಂಪನಿಯ ರೂಲ್ಸ್ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಿ. ಕೆಲವೊಂದು ಕಂಪನಿಗಳು ಇಂಥಾ ವಿಷಯಗಳ ಬಗ್ಗೆ ತುಂಬಾ ಕಟ್ಟುನಿಟ್ಟಾಗಿರುತ್ತವೆ. ಹೀಗಿರುವಾಗ ಪ್ರೀತಿಯನ್ನು ಪಡೆಯುವುದಕ್ಕೋಸ್ಕರ ಕೆಲಸವೇ ಕಳೆದುಕೊಳ್ಳುವ ಸ್ಥಿತಿ ಬರದಂತೆ ನೋಡಿಕೊಳ್ಳಿ.
ಅರೆಕ್ಷಣದಲ್ಲಿ ಪ್ರೀತಿ ಹುಟ್ಟಿಕೊಂಡರೂ ಅದರ ಬಗ್ಗೆ ಸರಿಯಾದ ನಿಲುವು ಸ್ವೀಕರಿಸಿ
ನಿಮ್ಮ ಮನೆಯ ವಿಷಯ, ಕಚೇರಿ ವಿಷಯ, ಪ್ರಣಯ ಸಂಬಂಧ ಎಲ್ಲದಕ್ಕೂ ಬೇರೆ ಬೇರೆ ಆದ್ಯತೆಗಳಿರುತ್ತವೆ. ನಿಮ್ಮ ಪ್ರೀತಿಯನ್ನು ಸಾರ್ವಜನಿಕವಾಗಿ ಪ್ರದರ್ಶಿಸುವ ಸಾಹಸಕ್ಕೆ ಯಾವತ್ತೂ ಕೈ ಹಾಕಬೇಡಿ.
ಸಾಮಾಜಿಕ ತಾಣದಲ್ಲಿ ಏನೇ ಪೋಸ್ಟ್ ಹಾಕುತ್ತಿದ್ದರೂ ಅಪ್‌ಲೋಡ್ ಮಾಡುವ ಮುನ್ನ ಯೋಚಿಸಿ. ನಿಮ್ಮ ಪ್ರಣಯ ಸಂಬಂಧಗಳನ್ನು ಸಾಮಾಜಿಕ ತಾಣದಲ್ಲಿ ಪ್ರದರ್ಶಿಸು ಅಗತ್ಯವಿಲ್ಲ.