ಅದೇನೇ ಸಂದೇಹವಿದ್ದರೂ, ಮಾಹಿತಿ ಪಡೆಯಬೇಕಾಗಿದ್ದರೂ ನಾವು ಸರ್ಚ್ ಇಂಜಿನ್ ಗಳ ಮೊರೆ ಹೋಗುತ್ತೇವೆ. ಸುದ್ದಿಯಿಂದ ಹಿಡಿದು ಕಾಯಿಲೆಯ ಬಗ್ಗೆ, ಶಾಲಾ ಪ್ರಾಜೆಕ್ಟ್ ಗಳಿಂದ ಹಿಡಿದು ಥೀಸಿಸ್ ವರೆಗೆ ಎಲ್ಲ ಮಾಹಿತಿಗಳನ್ನು ಕಲೆ ಹಾಕಲು ಸರ್ಚ್ ಇಂಜಿನ್ ಗಳೇ ಸಹಾಯಕ್ಕೆ ಬೇಕು. ಅಂದ ಹಾಗೆ ಈ ಎಲ್ಲ ಮಾಹಿತಿಗಳನ್ನು ಇಂಟರ್ ನೆಟ್ ಮೂಲಕ ಪಡೆದುಕೊಳ್ಳುವುದು ಹೇಗೆ? ಎಂಬುದರ ಬಗ್ಗೆ ನಾವು ಇಲ್ಲಿ ನೋಡೋಣ.
ಶಾಲೆಯಲ್ಲಿ ಪ್ರಾಜೆಕ್ಟ್ ಅಥವಾ ಅದ್ಯಾವುದೇ ಅಸೈನ್ಮೆಂಟ್ ಕೊಟ್ಟರೆ ವಿದ್ಯಾರ್ಥಿಗಳು ಅಂತರ್ಜಾಲದ ಮೊರೆ ಹೋಗುತ್ತಾರೆ. ಕಾಲೇಜಿನ ಲೈಬ್ರರಿಯಲ್ಲಿ ರುವ ಮಾಹಿತಿಗಳಿಗಿಂತ ಹೆಚ್ಚಿನ ಮಾಹಿತಿಗಳು ಒಂದೇ ಕ್ಷಣದಲ್ಲಿ ಇಲ್ಲಿ ಸಿಕ್ಕಿ ಬಿಡುತ್ತವೆ. ಗೂಗಲ್ ಸ್ಕೋಲಾರ್ ಕ್ಲಿಕ್ ಮಾಡಿದರೆ ಅಲ್ಲಿ ಆನ್ ಲೈನ್ ಲೇಖನಗಳು ಮತ್ತು ಜರ್ನಲ್ ಗಳು ಸುಲಭವಾಗಿ ಸಿಕ್ಕಿ ಬಿಡುತ್ತವೆ.
ಅಷ್ಟೇ ಅಲ್ಲ ಆನ್ ಲೈನ್ ಕೆಲಸ ಮಾಡುವಾಗ ಗೂಗಲ್ ಡಾಕ್ಯುಮೆಂಟ್ ಗಳಲ್ಲಿ ಫೈಲ್ ಸೇವ್ ಮಾಡಿದರೆ ಬೇಕೆಂದಾಗ ಅವುಗಳನ್ನು ಬಳಸಿಕೊಳ್ಳಬಹುದು. ಇವುಗಳು ಆಟೋ ಸೇವ್ ಆಗುವ ಮೂಲಕ ಯಾವುದೇ ಮಾಹಿತಿ ಅಥವಾ ಫೈಲ್ ಗಳು ಕಳೆದು ಹೋಗುವ ಸಾಧ್ಯತೆಗಳಿರುವುದಿಲ್ಲ.
ಶಾಲೆಯಲ್ಲಿ ಕಲಿಯುವ ವಿದ್ಯೆ ಒಂದೆಡೆಯಾದರೆ ಇಂಟರ್ ನೆಟ್ ಪರ್ಯಾಯ ಕಲಿಕೆಗೆ ಒತ್ತು ನೀಡುತ್ತದೆ. ಆನ್ ಲೈನ್ ಮೂಲಕ ಒಂದೇ ವಿಷಯದ ಹಲವಾರುಆಯಾಮಗಳು ಇಲ್ಲಿ ಸಿಗುತ್ತವೆ. ಮಾಹಿತಿಗಳನ್ನು ಚಿತ್ರದ ಮೂಲಕ, ಬರಹದ ಮೂಲಕ ಅಥವಾ ವೀಡಿಯೋ ಮೂಲಕ ಇಲ್ಲಿ ನೋಡಿ ಇಲ್ಲಿ ಕಲಿತುಕೊಳ್ಳಬಹುದು. ವಿಕಿ ಪೀಡಿಯಾ, ಯಾಹೂ ಆನ್ಸರ್ಸ್ ಅಥವಾ ಯೂಟ್ಯೂಬ್ ಮೊದಲಾದ ವೆಬ್ ಸೈಟ್ ಗಳ ಮೂಲಕ ಮಾಹಿತಿಯನ್ನು ಕಲೆ ಹಾಕಬಹುದು.
ಸಂದೇಹ, ಗೊಂದಲಗಳನ್ನು ಬಗೆ ಹರಿಸಲು
ಪ್ರತಿಯೊಬ್ಬ ಮನುಷ್ಯನ ಮನಸ್ಸಿನಲ್ಲಿಯೂ ಸಂದೇಹ, ಗೊಂದಲಗಳು ಇದ್ದೇ ಇರುತ್ತವೆ. ಕೆಲವೊಂದು ಸಂದೇಹಗಳನ್ನು ಮುಕ್ತವಾಗಿ ಕೇಳಲು ಸಾಧ್ಯವಾಗುವುದಿಲ್ಲ. ಇಂಥಾ ಹೊತ್ತಲ್ಲಿ ಜನರು ಅಂತರ್ಜಾಲದಲ್ಲಿ ಮಾಹಿತಿಗಾಗಿ ಹುಡುಕಾಡುತ್ತಾರೆ. ಮೊಡವೆ ಸಮಸ್ಯೆ, ಮುಟ್ಟಿನ ಸಮಸ್ಯೆ ಅಥವಾ ದೇಹದಲ್ಲಿನ ಬದಲಾವಣೆಗಳ ಬಗ್ಗೆ ಜನರು ವ್ಯಾಕುಲರಾಗಿರುತ್ತಾರೆ. ಹದಿ ಹರೆಯದಲ್ಲಿ ಇಂಥಾ ಕುತೂಹಲಗಳು, ಗೊಂದಲಗಳು ಸಹಜ. ಇದೆಲ್ಲವನ್ನೂ ಮುಕ್ತವಾಗಿ ಕೇಳಿ ತಿಳಿದುಕೊಳ್ಳಲು ಸಾಧ್ಯವಿಲ್ಲದೇ ಇರುವಾಗ ಅಂತರ್ಜಾಲದಲ್ಲಿ ಮಾಹಿತಿ ಸಂಗ್ರಹಿಸುತ್ತಾರೆ. ಆರೋಗ್ಯಕ್ಕೆ ಸಂಬಂಧಿಸಿದ ವಿಷಯ ಬಂದಾಗ ಹೆಚ್ಚಿನವರು ಅಂತರ್ಜಾಲದಲ್ಲಿ ಹುಡುಕಾಡುವುದೇ ಹೆಚ್ಚು. ಆದರೆ ಅಲ್ಲಿ ನೀಡಿರುವ ವಿಷಯಗಳು ನೂರಕ್ಕೆ ನೂರು ಸರಿ ಎಂದು ಹೇಳಲಾಗುವುದಿಲ್ಲ.ಆದಾಗ್ಯೂ, ಅಲ್ಲಿ ನೀಡಿರುವ ಮಾಹಿತಿಗಳನ್ನು, ಪರಿಹಾರೋಪಾಯ ಗಳನ್ನು ಅಳವಡಿಸಿ ಕೊಳ್ಳವ ಮುನ್ನ ವೈದ್ಯರನ್ನು ಕಾಣುವುದೊಳಿತು.
ಇನ್ನು ಕೆಲವು ಸಮಸ್ಯೆಗಳಿಗೆ ಆನ್ ಲೈನ್ ನಲ್ಲೇ ತಜ್ಞರು ಮಾಹಿತಿ ನೀಡುತ್ತಿರುತ್ತಾರೆ.ಕೆಲವೊಂದು ವೆಬ್ ಸೈಟ್ ಗಳು ಈ ಹುಡುಕಾಟದ ಹಾದಿ ತಪ್ಪಿಸುತ್ತವೆ. ಆದ್ದರಿಂದ ಇಂಥಾ ಮಾಹಿತಿಗಳನ್ನು ಹುಡುಕುವಾಗ ವೆಬ್ ಸೈಟ್ ಗಳಲ್ಲಿ ನೀಡಿರುವ ಮಾಹಿತಿ ಅಷ್ಟೇ ಅಲ್ಲ, ಆ ವೆಬ್ ಸೈಟ್ ಲಿಂಕ್ ಗಳ ಬಗ್ಗೆಯೂ ಎಚ್ಚರವಿರಲಿ.
ಇದು ಆನ್ ಲೈನ್ ಟ್ಯೂಷನ್ ನ ಕಾಲ. ಇಂಟರ್ ನೆಟ್ ಕನೆಕ್ಷನ್ ಇದ್ದರೆ ಮನೆಯಲ್ಲೇ ಕೂತು ಸಂಗೀತ, ನೃತ್ಯ ಸೇರಿದಂತೆ ಕಲಿಕಾ ವಿಷಯಗಳು ಯಾವುದೇ ಇರಲಿ ಎಲ್ಲವೂ ಆನ್ ಲೈನ್ ನಲ್ಲಿ ಲಭ್ಯ. ನಮ್ಮ ಆಸಕ್ತಿ, ಹವ್ಯಾಸಗಳಿಗೆ ತಕ್ಕಂತೆ ಸಂಪನ್ಮೂಲ ವ್ಯಕ್ತಿ ಗಳಿಂದ ಆನ್ ಲೈನ್ ಕಲಿಕೆ ಮಾಡಬಹುದು.
ಆನ್ ಲೈನ್ ಟುಟೋರಿಯಲ್ಸ್ ಎಂದು ಸರ್ಚ್ ಮಾಡಿದರೆ ಇದು ಲಭ್ಯ
ಸುದ್ದಿ ಮತ್ತು ಪ್ರಚಲಿತ ವಿದ್ಯಾಮಾನಗಳು
ಈಗ ಸುದ್ದಿ ನೋಡಲು ಸುದ್ದಿ ತಾಣಗಳಿಗೆ ಭೇಟಿ ನೀಡಬೇಕೆಂದಿಲ್ಲ. ಎಲ್ಲವೂ ಸಾಮಾಜಿಕ ತಾಣ ಗಳ ಮೂಲಕ ಸಿಕ್ಕಿ ಬಿಡುತ್ತದೆ. ಆದಾಗ್ಯೂ , ಸುದ್ದಿಗಳನ್ನು ತಕ್ಷಣಕ್ಕೆ ಪಡೆಯಬೇಕಾದರೆ ಸುದ್ದಿ ತಾಣಗಳ ಆ್ಯಪ್ ಗಳೇ ಇವೆ. ಸುದ್ದಿ ತಾಣದ ಪೇಜ್ ಗಳನ್ನು ಲೈಕ್ ಮಾಡುವ ಮೂಲಕ ಅಥವಾ ಸಬ್ ಸ್ಕ್ರೈಬ್ ಮಾಡುವ ಮೂಲಕ ಸುದ್ದಿಯನ್ನು ಕ್ಷಣ ಮಾತ್ರದಲ್ಲಿ ಪಡೆಯಬಹುದು.
ಸರ್ಚ್ ಇಂಜಿನ್ ಎಂದಾಕ್ಷಣ ಗೂಗಲ್ ಎಂಬ ಹೆಸರು ಥಟ್ಟನೆ ಹೇಳಿಬಿಡುತ್ತೇವೆ. ಗೂಗಲ್ ಹೊರತಾಗಿ Bingo, yahoo, Ask.com, AOL.com ಮೊದಲಾದ ಸರ್ಚ್ ಇಂಜಿನ್ ಗಳೂ ಲಭ್ಯ ಇವೆ.
ಸರ್ಚ್ ಇಂಜಿನ್ ಗಳ ಪಟ್ಟಿ ಇಲ್ಲಿದೆ (https://en.wikipedia.org/wiki/List_of_search_engines)
ಕೊನೆಯ ಗುಟುಕು: ಸರ್ಚ್ ಇಂಜಿನ್ ಗಳಲ್ಲಿ ಯಾವುದೇ ರೀತಿಯ ಮಾಹಿತಿಯನ್ನು ಹುಡುಕಬೇಕಾದರೆ ಕೀವರ್ಡ್ ಅಥವಾ ಹುಡುಕು ಪದ ಗೊತ್ತಿರಬೇಕು. ನಿಮ್ಮ ಪ್ರಶ್ನೆಯಲ್ಲಿ and, or ಅಥವಾ Not ಎಂಬ ಪದಗಳನ್ನು ಬಳಸುವ ಅಗತ್ಯವಿಲ್ಲ. ಉದಾಹರಣೆಗ ಕಂಪ್ಯೂಟರ್ ರೀಬೂಟ್ ಮಾಡುವುದು ಹೇಗೆ? ಎಂಬುದು ನಿಮ್ಮ ಪ್ರಶ್ನೆಯಾದರೆ ಸರ್ಚ್ ಇಂಜಿನ್ ಕಂಪ್ಯೂಟರ್ ಮತ್ತು ರೀಬೂಟ್ ಎಂಬೀ ಪದಗಳನ್ನು ಮಾತ್ರ ಹುಡುಕು ಪದವಾಗಿ ತೆಗೆದುಕೊಂಡು ಆ ಪದಗಳಿರುವ ಪುಟದ ಲಿಂಕ್ಗಳನ್ನು ತೋರಿಸುತ್ತದೆ. ಪ್ರಶ್ನೆಗಳು ಯಾವುದೇ ಆಗಿರಲಿ, ಕೀವರ್ಡ್ ಸರಿಯಾಗಿ ಇದ್ದರೆ ಕ್ಷಣ ಮಾತ್ರದಲ್ಲಿ ನಮಗೆ ಬೇಕಾದ ಮಾಹಿತಿಯನ್ನು ಸರ್ಚ್ ಇಂಜಿನ್ನಲ್ಲಿ ಹುಡುಕಿ ತೆಗೆಯಬಹುದು.