ಮಕ್ಕಳಿರುವ ಮನೆಯಲ್ಲಿ ಯಾವ ಗೋಡೆಯನ್ನು ನೋಡಿದರೂ ಪೆನ್ನು, ಪೆನ್ಸಿಲ್‌ಗಳಿಂದ ಬರೆದ ರೇಖೆಗಳ ಚಿತ್ತಾರವೇ ಕಾಣಸಿಗುತ್ತದೆ. ಮಕ್ಕಳಿಗೆ ಎಷ್ಟು ಹೇಳಿದರೂ, ಯಾರ ಭಯವಿಟ್ಟರೂ ನಿಲ್ಲದು ಅವರ ಈ ಆಟ.
ಹಾಗೆಯೇ ನಮಗೂ ಎಷ್ಟೋ ಸಂದರ್ಭಗಳಲ್ಲಿ ಗೋಡೆಯೇ ಬರವಣಿಗೆಗೆ ಹಾಳೆಯಂತಾಗುತ್ತದೆ. ಫೋನ್‌ನಲ್ಲಿ ಮಾತನಾಡುತ್ತಿರುವಾಗ ಯಾವುದೋ ವಿಷಯ ಬರೆದಿಟ್ಟುಕೊಳ್ಳುವ ಅವಶ್ಯಕತೆ ಇದ್ದಾಗ, ಎಷ್ಟು ಹುಡುಕಿದರೂ ಪೇಪರ್ ಕಣ್ಣಿಗೆ ಸಿಗುವುದಿಲ್ಲ. ಆಗ ತಕ್ಷಣ ಗೋಡೆಗೆ ಮೊರೆ ಹೋಗುತ್ತೇವೆ. ಹಾಗೆಯೇ ಅಡುಗೆ ಮನೆ ಒಡತಿ ಯಾವಾಗಲೂ ತನ್ನ ನೆನಪಿಗೆ ಬರಲೆಂದು ಅದೆಷ್ಟೋ ವಿಷಯಗಳ ಬರೆಯಲು ಗೋಡೆ ಹಾಳೆಯ ರೂಪದಲ್ಲಿ ಉಪಯೋಗಿಸುತ್ತಾಳೆ. ಅದೆಷ್ಟೋ ಬಾರಿ ಆಫೀಸ್‌ಗಳಲ್ಲಿಯೂ ಇಂತಹ ಸಂದರ್ಭಗಳು ಒದಗಿ ಗೋಡೆಯ ಅಲಂಕಾರವನ್ನೇ ಹಾಳು ಮಾಡುತ್ತೇವೆ.
ಹಾಗಾದರೆ ಇದನ್ನು ತಡೆಯಬೇಕೆನ್ನುವ ಮನಸ್ಥಿತಿ ನಿಮ್ಮದಾಗಿದೆ ಅಲ್ಲವೇ? ಆದರೆ ಮಕ್ಕಳ ಮನೆ ಎಂದರೆ ಇದಕ್ಕೆಲ್ಲಾ ಅಂಕುಶ ಹಾಕಲು ಸಾಧ್ಯವೇ? ಬೇಕಾದಾಗ ಬೇಕಾದ್ದನ್ನು ಮಾಡದೆ ಕೆಲವೊಂದು ಕಟ್ಟು ನಿಟ್ಟುಗಳನ್ನು ಹಾಕಿಕೊಂಡು ಬದುಕುವ ಬದುಕೂ ಒಂದು ಬದುಕಲ್ಲ ಅನ್ನುವ ಮನೋಭಾವ.
ಈ ಸಮಸ್ಯೆಗೆ ಪರಿಹಾರ ಇಲ್ಲ ಎಂದು ನೀವು ಯೋಚಿಸುತ್ತಿರುವಿರಾ?. ಹಾಗಾದರೆ ನಿಮ್ಮ ಅನಿಸಿಕೆ ತಪ್ಪು. ರೈಟ್ ಪೇಂಟಿಂಗ್(write paint) ಅನ್ನು ಗೋಡೆಗೆ ಬಳಸಿದರೆ ನಿಮ್ಮೆಲ್ಲಾ ಮೇಲಿನ ಸಮಸ್ಯೆಗೆ ಪರಿಹಾರ ದೊರೆಯುತ್ತದೆ. ಇದು ಒಂದು ಬಗೆಯ ಪೇಂಟಿಂಗ್ ಆಗಿದ್ದು ಗೋಡೆಗೆ ಮಾಮೂಲಿಯಂತೆ ಬಣ್ಣ ಹಚ್ಚಿ ಒಣಗಿದ ಮೇಲೆ ಇದನ್ನು ಹಚ್ಚಬೇಕು. ತದ ನಂತರ ನಿಮ್ಮ ಮನೆಯ ಅಥವಾ ಕಚೇರಿಯ ಗೋಡೆಯನ್ನು ಬೋರ್ಡ್‌ನಂತೆ ಉಪಯೋಗಿಸಬಹುದು. ಮಾರ್ಕರ್ ಪೆನ್ನಿಂದ ಬರೆದರೂ ಸುಲಭವಾಗಿ ಅಳಿಸಬಹುದು.
ತುಸು ದುಬಾರಿ ಎನಿಸಿದರೂ ಮನೆಯ ಎಲ್ಲಾ ಗೋಡೆಗಳಿಗೂ ಹಚ್ಚುವ ಅವಶ್ಯಕತೆ ಇಲ್ಲ. ಹಾಗೆಯೇ ಕೈಗೆಟಕುವಷ್ಟು ಎತ್ತರಕ್ಕೆ ಹಚ್ಚಿದರೆ ಸಾಕು. ಅಗತ್ಯವಿರುವಲ್ಲಿ ಅಂದರೆ ಅಡುಗೆ ಮನೆಯ ಒಂದು ಗೋಡೆ, ಲಿವಿಂಗ್ ರೂಮ್‌ನ ಒಂದು ಗೋಡೆಗೆ ಬಳಸಿದರೆ ಸಾಕು ವೈಟ್ ಗೋಡೆಯನ್ನು ಬೋರ್ಡ್ ಆಗಿ ಉಪಯೋಗಿಸಿ ಮಕ್ಕಳಿಗೆ ಆಟದ ಜೊತೆ ಪಾಠವವನ್ನೂ ಹೇಳಿಕೊಡಬಹುದು. ಹೋಟೆಲ್‌ಗಳಲ್ಲಿ ಮೆನು ಬೋರ್ಡ್ ಆಗಿ, ಆಫೀಸ್‌ನ ಕಾನ್ಫರೆನ್ಸ್ ರೂಮ್‌ನಲ್ಲಿ ಬಳಸಬಹುದು.
- ಜಮುನಾ ರಾಣಿ .ಎಚ್. ಎಸ್.