ಕಡೆಗಣಿಸಿಬಿಡಿ ಗಾಳಿ ಸುದ್ದಿ
ನಿಮ್ಮ ಬಗ್ಗೆ ಇತರರು, ನಿಮಗೆ ಗೊತ್ತಿಲ್ಲದೇ ಇರುವಂತಹ ವಿಷಯವನ್ನು ಗೊತ್ತಿದ್ದವರಂತೆ ಮಾತನಾಡುವುದೇ ಗಾಸಿಪ್. ಗಾಸಿಪ್ ಕೇವಲ ಸೆಲೆಬ್ರಿಟಿಗಳಿಗೆ ಮಾತ್ರ ಸೀಮಿತ ಎಂಬ ಕಾಲವೊಂದಿತ್ತು. ಇಂದು ಮ್ಯಾನೇಜರ್‌ನಿಂದ ಹಿಡಿದು ಜವಾನನವರೆಗೂ ಗಾಸಿಪ್ ವಿಸ್ತರಿಸಿದೆ. ಹಲವರ ಬದುಕನ್ನು ಮೂರಾಬಟ್ಟೆ ಮಾಡಿದ್ದು ಈ ಗಾಸಿಪ್ಪೇ!
ಗ್ರಾಮೀಣ ಭಾಷೆಯಲ್ಲಿ ಇದಕ್ಕೆ ಗಾಳಿ ಸುದ್ದಿ ಎಂಬ ಹೆಸರಿದೆ. ರಾಜ ಮಹಾರಾಜರ ಕಾಲದಿಂದಲೂ ಈ ಗಾಳಿ ಸುದ್ದಿಯ ಪ್ರಭಾವ ಜೋರಾಗಿತ್ತು. ಇತಿಹಾಸದಲ್ಲಿ ಗಾಳಿ ಸುದ್ದಿಯಿಂದ ಯುದ್ದಗಳೇ ಘಟಿಸಿದ ಉದಾಹರಣೆಗಳಿವೆ. ಈ ಗಾಳಿಸುದ್ದಿಯೇ ಈಗ 'ಗಾಸಿಪ್' ಎನಿಸಿಕೊಂಡಿದೆ. ಕಚೇರಿಗಳಲ್ಲಿ ಬೆಂಬಿಡದ ಭೂತದಂತೆ ಕಾಡುತ್ತಿದೆ. ನೀವು ಸಹೋದ್ಯೋಗಿಗಳೊಂದಿಗೆ ಸೌಹಾರ್ದದಿಂದ ಇದ್ದರೆ, ಮುಕ್ತವಾಗಿ ಬೆರೆಯುವ ವ್ಯಕ್ತಿಯಾಗಿದ್ದರೆ ಗಾಸಿಪ್‌ಗಳಿಗೆ ಬಲಿಯಾಗುವ ಸಾಧ್ಯತೆಗಳು ಹೆಚ್ಚು.
ಗಾಸಿಪ್ ಕಚೇರಿ
ಸಾಧ್ಯವಾದಷ್ಟು ಗಂಭೀರತೆ ಬೇಕು. ಕಚೇರಿಗಳಲ್ಲಿ ಅನಗತ್ಯ ವಿಷಯಗಳ ಬಗ್ಗೆ ಚರ್ಚೆ ಬೇಡ. ಕಚೇರಿಯ ಇನ್ನಿತರ ಸಿಬ್ಬಂದಿ ಇಲ್ಲದೇ ಇರುವ ಸಂದರ್ಭದಲ್ಲಿ ಅವರ ಬಗ್ಗೆ ಮಾತನಾಡುವ ಅಗತ್ಯವೂ ಇರುವುದಿಲ್ಲ. ಮನೆಯಲ್ಲಿನ ಸಮಸ್ಯೆಗಳ ಬಗ್ಗೆ ಕಚೇರಿಯ ಸಹವರ್ತಿಗಳೊಂದಿಗೆ ಚರ್ಚಿಸುವುದು ಅನಪೇಕ್ಷಣೀಯ. ತೀರ ಪ್ರಾಣ ಸ್ನೇಹಿತನಾಗಿದ್ದರೆ ಅಡ್ಡಿ ಎನಿಸುವುದಿಲ್ಲ. ಇನ್ನೊಬ್ಬ ವ್ಯಕ್ತಿಯ ವಿಶ್ವಾಸಾರ್ಹತೆ ಅಥವಾ ಲೈಕೆಬಿಲಿಟಿ ಹಾಳುಮಾಡುವ ಮಾತಿನಿಂದ ದೂರ ಉಳಿಯುವುದು ಒಳಿತು. ಗಾಸಿಪ್‌ನಿಂದ ಅಮೂಲ್ಯವಾದ ಗೆಳತನ ಹಾಳಾಗದಂತೆ ಕಾಪಾಡಬೇಕಾದಲ್ಲಿ ಮೊದಲು ಗಾಸಿಪ್‌ಗೆ ಬಲಿಯಾಗದಂತೆ ಎಚ್ಚರವಾಗಿರಬೇಕು.
ಮಹಿಳೆಯೇ ಮೀನು
ಗಾಸಿಪ್ ಸಮಸ್ಯೆ ಎದುರಿಸುವವರು ಹೆಚ್ಚಾಗಿ ಮಹಿಳೆಯರು. ಕೆಲಸದ ಸ್ಥಳದಲ್ಲಿ ಅನಗತ್ಯ ಹರಟೆ ಗಾಸಿಪ್‌ಗಳಿಗೆ ದಾರಿ ಆಗಬಹುದು. ಧರಿಸಿದ ಉಡುಪುಗಳೂ ಗಾಸಿಪ್‌ಗೆ ಕಾರಣವಾಗಬಹುದು. ಕಚೇರಿ ಕೆಲಸ ಹೊರತು ಪಡಿಸಿ ಬೇರೆ ಸಂದರ್ಭಗಳಲ್ಲಿ ಬಾಸ್ ಸೇರಿದಂತೆ ಮೇಲಧಿಕಾರಿಗಳಿಂದ ದೂರ ಉಳಿಯುವುದು ಒಳ್ಳೆಯದು. ಪಾರ್ಟಿಗಳಿಗೆ ಹೋಗಲೇಬೇಕಾದ ಸಂದರ್ಭದಲ್ಲಿ ಕುಟುಂಬ ಸದಸ್ಯರು ಜತೆಯಲ್ಲಿರಲಿ. ಕಚೇರಿಯಲ್ಲಿ ನೀವು ಬೋಲ್ಡ್ ಆಂಡ್ ಬ್ಯೂಟಿಫುಲ್ ಎನ್ನುವ ಹೊಗಳಿಕೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಡಿ!
ದಾಂಪತ್ಯಕ್ಕೆ ಕೊಡಲಿ
ಖಾಸಗಿ ಸಂಸ್ಥೆಯೊಂದರ ಸಮೀಕ್ಷೆ ಆಧಾರದಲ್ಲಿ ರಾಜ್ಯದಲ್ಲಿ ಗಾಸಿಪ್‌ಗಳಿಂದಲೇ ಶೇಕಡಾ 25ರಷ್ಟು ದಂಪತಿಗಳು ಪರಸ್ಪರ ದೂರವಾಗಿದ್ದಾರೆ. ಕಚೇರಿಗಳಲ್ಲಿ ಕೆಲಸ ಮಾಡುವ ಸಂದರ್ಭ ಪುರುಷರು, ಮಹಿಳೆಯರು ಜತೆಯಾಗಿ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ಆದರೆ ಹಲವು ಬಾರಿ ಗಾಸಿಪ್ ಸೃಷ್ಟಿಯಾಗಿ ದಂಪತಿಗಳ ವಿರಸಕ್ಕೆ ಕಾರಣವಾಗುತ್ತಿರುವುದು ಕಹಿಸತ್ಯ. ಈ ವಿಷಯವಾಗಿ ದಂಪತಿಗಳು ಆತುರದ ನಿರ್ಧಾರ ತೆಗೆದುಕೊಳ್ಳದೆ ಅಂತಹ ಸ್ಥಿತಿ ನಿರ್ಮಾಣದ ಕಾರಣ? ಗಾಸಿಪ್ ಆಗಿದ್ದೇಕೆ? ಎನ್ನುವ ಬಗ್ಗೆ ಪರಿಶೀಲಿಸುವ ವ್ಯವಧಾನ ಅಗತ್ಯ.
-ಶಿವಕುಮಾರ ಕುಷ್ಟಗಿ