ಎಲ್ಲಿ ಹೋದವು ಆ ದಿನಗಳು? ರಜೆ ಬರಲು ತಿಂಗಳಿಗೂ ಮುಂಚೆಯೇ ಅಜ್ಜನಿಗೆ ಪತ್ರ ಬರೆದು ಪರೀಕ್ಷೆ ಮುಗಿದ ತಕ್ಷಣ ನಮ್ಮನ್ನು ಕರೆದುಕೊಂಡು ಹೋಗು ಎಂದು ವಿನಂತಿಸಿದ ದಿನಗಳು, ಅಜ್ಜ ಬಂದಾಗ ಒಂಟಿ ಕಾಲಿನ ಮೇಲೆ ನಿಂತ ಹಕ್ಕಿಯಂತೆ ಹಾರಲು ಸಿದ್ಧವಾಗುತ್ತಿದ್ದ ದಿನಗಳು, ದಾರಿಯುದ್ದಕೂ ಇನ್ನೂ ಎಷ್ಟು ದೂರ ಎಂದು ಹಲವು ಬಾರಿ ಕೇಳಿ ಅಜ್ಜನ ತಲೆ ತಿಂದ ಕ್ಷಣಗಳು, ಹಸು, ನಾಯಿ, ಬೆಕ್ಕು, ಕೋಳಿಗಳೆಲ್ಲ ಹೇಗಿವೆ ಈಗ ನಮ್ಮ ನೆನಪು ಇನ್ನೂ ಇರುತ್ತದೆಯಾ ಎಂದು ಕೇಳುತ್ತಲೇ ಸಾಗಿದ ದಾರಿ, ಬಿಕ್ಕೆ, ನೇರಳೆ, ಮಾವು, ಗೇರು, ಎಳಚಿ, ರೇಷ್ಮೆ ಕಾಯಿಗಳ ಹಣ್ಣಾಗಲೂ ಬಿಡದೆ ತಿಂದ ದಿನಗಳು, ಹೊಳೆಯ ಸ್ನಾನ, ದುರ್ಗಮ್ಮನ ಜಾತ್ರೆಯ ಬೆಂಡು ಬತ್ತಾಸು ಓಲೆ ಸರ ಆಟಿಕೆಗಳು .. ಒಂದಾ.. ಎರಡಾ..
ಹಿಂದೆಲ್ಲ ಬೇಸಿಗೆಯನ್ನು ಮಕ್ಕಳು ಅನುಭವಿಸುವ ರೀತಿಯೂ ಭಿನ್ನವಾಗಿರುತ್ತಿತ್ತು. ಮಕ್ಕಳು ನಡೆದದ್ದೇ ದಾರಿ ಆಡಿದ್ದೇ ಆಟ. ಲಗೋರಿ, ಕಬಡ್ಡಿ, ಕುಂಟೇಬಿಲ್ಲೇ, ಚಿನ್ನೆ ದಾಂಡು, ಚೌಕಾಬಾರಾ, ಆಲಿಕಲ್ಲು, ಮರಕೋತಿ ಆಟಗಳು ಆಟಗಳು ಮನಸ್ಸಿಗೆ ಮೈಗೆ ಜೀವ ನೀಡುತ್ತಿದ್ದವು. ಆಗೆಲ್ಲಾ ಬೇಸಿಗೆಯ ಮಕ್ಕಳ ಆಟ-ಪಾಠಗಳಿಗೆ ಪ್ರಕೃತಿಯೇ ಗುರು. ಆದರೆ ಈಗಿನ ಬೇಸಿಗೆ ರಜೆಯನ್ನು ಮಕ್ಕಳಿಗೆ ವಿಶೇಷ ತರಗತಿಗಳಿಗಾಗಿ ಪಾಲಕರು ಬಳಸಿಕೊಳ್ಳುತ್ತಾರೆ ಅಥವಾ ಬೇಸಿಗೆ ಶಿಬಿರವೆನ್ನುವ ಕೃತಕ ವಾತಾವರಣದಲ್ಲಿ ಮಕ್ಕಳನ್ನು ಕಳೆಯ ಬಿಡುತ್ತಾರೆ. ಅಲ್ಲಿ ಮಕ್ಕಳಿಗೆ ಕಲೆ, ನೃತ್ಯ, ಹಾಡು, ಸಂಗೀತ ಇತ್ಯಾದಿಗಳ ಕುರಿತಂತೆ ಬಲವಂತದ ಸ್ನಾನ. ರಜೆಯನ್ನಾದರೂ ತಮ್ಮ ಇಷ್ಟದಂತೆ ಕಳೆಯಬೇಕೆನ್ನುವ ಮಕ್ಕಳ ಹಕ್ಕುನ್ನು ಕಿತ್ತುಕೊಳ್ಳಲಾಗುತ್ತಿದೆ. ದುರದೃಷ್ಟವಶಾತ್ ಈಗ ಹಳ್ಳಿಗಳಿಗೂ ಬೇಸಿಗೆ ಶಿಬಿರಗಳು ಕಾಲಿಟ್ಟಿವೆ. ಸ್ವತಂತ್ರವಾಗಿ ಹಾರುವ ಹಕ್ಕಿಗಳನ್ನು ಪಂಜರದಲ್ಲಿಟ್ಟು ಹಾರಲು ಕಲಿಸುವ ಪ್ರಯತ್ನದಂತಿದೆ ಈ ಬೇಸಿಗೆ ಶಿಬಿರ.
ಏನು ಮಾಡಬೇಕು?
ಬೇಸಿಗೆ ರಜೆಯಲ್ಲಿ ಮಕ್ಕಳು ಮನೆಯಲ್ಲಿಯೇ ಅವರಿಗಿಷ್ಟ ಬಂದಂತೆ ಇರಲು ಬಿಟ್ಟು ನೋಡಿ. ಯಾವುದೇ ಕಟ್ಟುಪಾಡು ಇಲ್ಲದೆ, ಶಿಬಿರಗಳ ರಗಳೆ ಇಲ್ಲದೆ ನಿಮ್ಮೊಂದಿಗೆ ಮಳೆಗಾಲಕ್ಕೆ ತಯಾರಿಸುವ ಹಪ್ಪಳ ಸಂಡಿಗೆ ತಯಾರಿಸಲು ಕೈ ಜೋಡಿಸಲಿ, ಅಪ್ಪನ ಕೆಲಸಗಳನ್ನು ಗಮನಿಸಲಿ, ಅಜ್ಜ ಅಜ್ಜಿ ಹೇಳುವ ಅನುಭವದ ಕಥೆಗಳಿಗೆ ಕಿವಿಯಾನಿಸಿ ನಿದ್ರಿಸಲಿ. ದಿನವಿಡೀ ನಿಮ್ಮೊಂದಿಗೆ ಕಳೆಯುವ ಮಕ್ಕಳಿಗೆ ಮನೆಕೆಲಸ, ನಿಮ್ಮ ಪರಿಸ್ಥಿತಿ, ನೋವು ನಲಿವುಗಳು ನಿಧಾನವಾಗಿ ಅರ್ಥವಾಗುತ್ತವೆ. ನಿಮ್ಮನ್ನು ಗಮನಿಸುತ್ತಾ ಬೆಳೆಯುವ ಮಕ್ಕಳಿಗೆ ನೀವು ಇನ್ನಷ್ಟು ಅರ್ಥವಾಗುತ್ತಾ, ಭಾಂಧವ್ಯ ಗಟ್ಟಿಯಾಗುತ್ತಾ ಮಕ್ಕಳು ಮತ್ತಷ್ಟು ಹತ್ತಿರವಾಗುತ್ತಾರೆ. ಅಂದು ನಮಗೆ ದಕ್ಕಿದ ಬಾಲ್ಯದ ಸುಮಧುರತೆಯ ಅರ್ಧದಷ್ಟಾದರೂ ನಮ್ಮ ಮಕ್ಕಳಿಗೆ ದಕ್ಕುತ್ತದೆ. ಬಾಲ್ಯವೇ ಅವರನ್ನು ಬೆಳೆಸುತ್ತದೆ. ಮಕ್ಕಳ ಆಸಕ್ತಿಗಳು, ಪ್ರತಿಭೆಗಳು ಪ್ರಕಟಗೊಳ್ಳುವುದಕ್ಕೆ ಮನೆಯೇ ಸೂಕ್ತ ತಾಣ. ಗಮನಿಸುವ, ಗುರುತಿಸುವ, ಅರ್ಥ ಮಾಡಿಕೊಳ್ಳುವ ವ್ಯವಧಾನ ನಿಮ್ಮೊಳಗಿರಬೇಕಷ್ಟೆ.
ಮಕ್ಕಳಿಗೆ ತಿಂಡಿ, ಬಟ್ಟೆ, ಆಟಿಕೆಗಳನು ತಂದುಕೊಡುವಷ್ಟೇ ಉತ್ಸುಕತೆಯಿಂದ, ಮುತುವರ್ಜಿಯಿಂದ ಪುಸ್ತಕಗಳನ್ನೂ ತಂದು ಕೊಡಿ. ನೀವೂ ಓದಿ ಅವರೊಂದಿಗೆ ಚರ್ಚಿಸಿ ಪುಸ್ತಕಗಳ ಮೋಹಕ್ಕೆ ಸಿಲುಕುವಂತೆ ಮಾಡಿ. ಶಿಬಿರಗಳಿಗೆ ದುಬಾರಿ ಹಣತೆತ್ತು ಅವರ ಕ್ರೀಯಾಶೀಲತೆಯನ್ನು ಪರೀಕ್ಷಿಸುವ ಬದಲು ಸಹಜವಾಗಿ ಅಕ್ಕಪಕ್ಕದವರೊಂದಿಗೆ ಬೆರೆಯಲಿ, ಪುಸ್ತಕ ಓದಲಿ, ಆಡಲಿ, ಕುಣಿಯಲಿ, ನಲಿಯಲಿ. ಪ್ರಕೃತಿಯ ಸುಂದರ ಬೆಳಗನು, ವಸಂತನ ಆಗಮನದಿಂದ ಚಿಗುರಿದ ಎಲೆ ಹೂವು ಕಾಯಿ ಹಣ್ಣು ಹಕ್ಕಿಗಳನು ನೋಡುತ್ತಾ ಅನುಭವಿಸಿ ಆಸ್ವಾದಿಸಲಿ. ಈ ಬೇಸಿಗೆಯ ಸುಡು ಬಿಸಿಲು ಅವರಿಗೆ ತಂಪು ನೆರಳಾಗಿ ಭಾಸವಾಗಿ ಅನುಭವದ ಜೋಳಿಗೆ ಭರ್ತಿಯಾಗಲಿ. ಬರುವ ಪ್ರತಿ ಬೇಸಿಗೆಯೂ ಚಿರಾಯುವಾಗಿರಲಿ ಮತ್ತೆ ಮತ್ತೆ ಬರಲಿ ಎನ್ನುವ ಬೇಡಿಕೆ ಮಕ್ಕಳದಾಗಿರಲಿ.
-ಜಮುನಾ ರಾಣಿ ಎಚ್.ಎಸ್.