ಗೆಳೆಯರೊಬ್ಬರು ಹೇಳುತ್ತಿದ್ದರು - ಅಲ್ಲ, ನಾವು ಚಿಕ್ಕವರಿದ್ದಾಗ ಹೇಗಿದ್ದೆವು ಮೂರು ಮಕ್ಕಳು ಆಟವಾಡಿಕೊಂಡಿದ್ದ ಮನೆಯಲ್ಲಿ ಅಡುಗೆ ಮಾಡಲೂ ಕಾಳು ಅಕ್ಕಿಯಿರುತ್ತಿರಲಿಲ್ಲವಂತೆ. ಅಪ್ಪ ಆಗಲೇ ತೀರಿಕೊಂಡಿದ್ದರು. ನಮ್ಮಮ್ಮ ಕೂಲಿ ಮಾಡಿ ತಂದ ಹಣ ಸಾಕಾಗುತ್ತಿದ್ದುದು ಕೇವಲ ಅಕ್ಕಿ ತರಲಷ್ಟೇ. ಹಾಗಾಗಿ ಕತ್ತಲಾಗುವುದರೊಳಗೆ ಪಕ್ಕದ ಜಮೀನಿನ ಕಳೆಗಳ ಮಧ್ಯೆ ಬೆಳೆದಿದ್ದ ಹಲವು ಬಗೆಯ ಸೊಪ್ಪುಗಳನ್ನು ಕಿತ್ತು ತಂದು ಬೇಯಿಸುತ್ತಿದ್ದಳು. ಅದಕ್ಕೆ ಬೆರೆಸಲು ಪಕ್ಕದ ಮನೆಯವರಿಂದ ಉಪ್ಪನ್ನು ಕೂಡ ಬೇಡುತ್ತಿದ್ದಳು. ಬೊಗಸೆ ಅನ್ನ ಸೊಪ್ಪನ್ನು ಒಂದು ತಟ್ಟೆಯಲ್ಲಿ ಕಲಸಿ ನಾಲ್ಕು ಜನವೂ ತಿನ್ನುತ್ತಿದ್ದರೆ, ಆಹಾ, ಇವತ್ತಿಗೂ ಬಾಯಲ್ಲಿ ನೀರು ಬರುತ್ತದೆ. ಬಡತನ ನಮಗೆಂದೂ ಕಾಡಲಿಲ್ಲ.
ಇವತ್ತು ನಮ್ಮ ಮಕ್ಕಳನ್ನು ನೋಡಿ. ಅವರು ಬೆಳಗ್ಗೆ ಏಳುವ ಮುನ್ನವೇ ಹಾರ್ಲಿಕ್ಸ್ ಕುಡಿ ಅಂತ ಲೋಟವನ್ನು ಅವರ ಬಾಯಿಗಿಡುತ್ತೇವೆ. ಅರ್ಧ ಕುಡಿದ ಮಗು ಉಳಿದಿದ್ದನ್ನು ಬೇಡ ಅನ್ನುತ್ತದೆ. ತುಪ್ಪದ ದೋಸೆ ಮಾಡಿ ತಿಂಡಿ ಕೊಟ್ಟರೆ, ನಂಗೆ ಇಡ್ಲಿ ಬೇಕು ಅಂತ ಹಠ ಹಿಡಿಯುತ್ತದೆ. ಯಾಕೆ ಹೀಗೆ? ಮುಂಚಿನ ಹಾಗೆ ಬಡತನ ಇಲ್ಲ, ಇವತ್ತಿನ ಆರ್ಥಿಕ ಅನುಕೂಲವೇ ಅವರಿಗೆ ಮುಳುವಾಗಿದೆಯಾ?
ಹೌದು, ಆದರೆ ಅದಕ್ಕೆ ಕಾರಣ ಆ ಮಗುವಲ್ಲ, ನಾವೇ! ಚಳಿಯೇ ಗೊತ್ತಿರದವನು, ಹೊದಿಕೆಯ ಬೆಚ್ಚನೆಯ ಸುಖವನ್ನು ಹೇಗೆ ಅರ್ಥೈಸಿಕೊಳ್ಳಬಲ್ಲ?
ಬಹಳಷ್ಟು ಮಕ್ಕಳ ಪೋಷಕರ ಅನಿಸಿಕೆ ಇದೇ. 'ನಮಗೇನೋ ಗತಿ ಇರಲಿಲ್ಲಪ್ಪ, ಕಷ್ಟ ಅನುಭವಿಸಿದೆವು. ಹಾಗಂತ ನಮ್ಮ ಮಕ್ಕಳೂ ನಮ್ಮ ಹಾಗೆ ಯಾಕೆ ಇರಬೇಕು?' ಅವರ ವಾದ ಸರಿಯಿದೆ. ಹಾಗೆಂದು ಅವರಿಗೆ ಜೀವನದ ಪಾಠವನ್ನೇ ಕಲಿಸದಿದ್ದರೆ ಅದು ನಮ್ಮದೇ ತಪ್ಪಲ್ಲವೇ? ಹಸಿವು ತಿಳಿಯದಿದ್ದವನಿಗೆ ಅನ್ನದ ಬೆಲೆಯಾದರೂ ಹೇಗೆ ತಿಳಿದೀತು? ಮಕ್ಕಳಿಗೆ ಕೆಲವು ಪಾಠಗಳನ್ನು ಜೀವನದ ಮುಖಾಂತರ ಕಲಿಸಲು ಮಾತ್ರ ಸಾಧ್ಯ. ಈಜುವು ದನ್ನು ಈಜಿಯೇ ಕಲಿಯಬೇಕೇ ಹೊರತು ಓದಿ ಕಲಿಯಲು ಸಾಧ್ಯವಿಲ್ಲ.
ಪ್ರತೀ ದಿನ ಕಾರಿನಲ್ಲಿ ಹೋಗುವವರು ಆಗಾಗ ಬಸ್ಸಿನಲ್ಲಿ ಪ್ರಯಾಣಿಸಿ. ಅವರೇಕೆ ಆ ನೂಕಾಟದಲ್ಲಿ ಕಷ್ಟಪಡಬೇಕು ಎಂಬ ಆಲೋಚನೆ ಬೇಡ. ಇವೆಲ್ಲದರ ಉದ್ದೇಶ ಒಂದೇ. ಬಿಸಿಲು, ಮಳೆ, ಚಳಿ, ಗಾಳಿ, ಹಸಿವು, ನೋವು, ದುಡಿಮೆ, ಬಡತನ, ಶ್ರಮ, ತಳ್ಳುವ ಗಾಡಿಯ ಕಲ್ಲಂಗಡಿ, ಪುಟ್ಟ ಹೋಟೆಲ್ಲಿನ ಬಿಸಿ ಇಡ್ಲಿ, ಬಸ್ಸ್ಟಾಪಿನ ಎಳನೀರು, ಮಾರುಕಟ್ಟೆಯ ಜನಜಂಗುಳಿಯ ನಡುವಿನ ವ್ಯಾಪಾರ, ಶಾಪಿಂಗ್ ಮುಗಿದಾದ ಲಗೇಜು ಹೊರುವಿಕೆ, ಸರಕಾರಿ ಕಚೇರಿಯೊಂದರ ಮುಂದಿನ ಕ್ಯೂ, ಸೈಕಲ್ಲು ತುಳಿತ, ಎತ್ತಿನ ಗಾಡಿಯ ಪ್ರಯಾಣ, ಹಳ್ಳಿಯ ಜೀವನ ಇವೆಲ್ಲವುಗಳ ಅರಿವು ನಮ್ಮ ಮಕ್ಕಳಿಗೆ ಆಗಬೇಕು.
ಕೇವಲ ರೆಫ್ರಿಜಿರೇಟರೊಳಗಿನ ಮಿನರಲ್ ನೀರನ್ನೇ ಮಗು ಕುಡಿಯುತ್ತಾ ಹೋದರೆ ಹಳ್ಳಿಯಲ್ಲಿ ಸಿಗುವ ನಲ್ಲಿ ನೀರನ್ನು ಕುಡಿಯಲು ಅವಕ್ಕೆ ಸಾಧ್ಯವೆ? ಇದು ಕೇವಲ ಜೀವನಶೈಲಿಯ ಮಾತಲ್ಲ. ಪಳಗಿಸಿಕೊಳ್ಳಬಹುದಾದ ನಮ್ಮ ಮನಸ್ಸಿನ ಮತ್ತು ದೇಹದ ಮಾತು. ಒಮ್ಮೆ ಅದಕ್ಕೆ ಹೊಂದಿಕೊಂಡರೆ ಎಂಥದ್ದೇ ಕಷ್ಟ ಬಂದರೂ ಎದುರಿಸಬಹುದು. ಅದೊಂಥರಾ ಧೂಳಿನಲ್ಲಿ ಮೂಟೆ ಹೊರುವವನಿಗೆ ಯಾಕೆ ಡಸ್ಟ್ ಅಲರ್ಜಿಯಾಗುವುದಿಲ್ಲ? ದಿನನಿತ್ಯ ನಲ್ಲಿ ನೀರನ್ನೇ ಕುಡಿಯುವವನಿಗೆ ಯಾಕೆ ರೋಗ ಬರುವುದಿಲ್ಲ? ಅನ್ನುವಷ್ಟೇ ಸುಲಭ. ಬದುಕಲು ಕಲಿಯಲು ಮನಸ್ಸು ಮತ್ತು ದೇಹವನ್ನು ನಾವು ಹೇಳಿದಂತೆ ಕೇಳಲು ಪಳಗಿಸಿಕೊಳ್ಳಬೇಕು.
ಹೀಗಾದಾಗಲಷ್ಟೇ ಅವರು ಕಷ್ಟ ಸುಖ ಎರಡನ್ನೂ ಭವಿಷ್ಯದಲ್ಲಿ ಸಮರ್ಥವಾಗಿ ಎದುರಿಸಬಲ್ಲರು. ಜತೆಗೆ ಕಷ್ಟ-ಸುಖಗಳೆರಡರ ಬೆಲೆಯೂ ತಿಳಿದಿರುತ್ತದೆ. ಮುಂದೆ ನಾವು ವೃದ್ಧರಾದಾಗ ಎದುರಾಗಬಹುದಾದ ಕಷ್ಟಗಳಿಗೆ ನಮ್ಮ ಮಕ್ಕಳು ಹೊಂದಿಕೊಳ್ಳಲಾಗದೆ ನಮ್ಮನ್ನು ದೂರುವ ಸಂದರ್ಭ ಬರಬಾರದಲ್ಲವೇ?
-ಸಂತೋಷ್ಕುಮಾರ್ ಎಲ್. ಎಂ.