ಮಹಿಳೆ-ಮನೆ-ಬದುಕು

ಎಷ್ಟೊಂದ್ ಜನ ಇಲ್ಲಿ ಯಾರು ನನ್ನವರು?

ಈ ಮಹಾನಗರಿಯಲ್ಲಿ ಒಬ್ಬಳೇ ಇದ್ದೀಯಾ ಹೆದರಿಕೆ ಆಗಲ್ವಾ ನಿನಗೆ ಗೆಳೆಯನೊಬ್ಬನ ಪ್ರಶ್ನೆಗೆ ಉತ್ತರ ಕೊಡಲು ತಡವರಿಸಿದೆ. ಕಾಲೇಜಿನಲ್ಲಿರುವಾಗ ನೀನೆಷ್ಟು ಪುಕ್ಕಲು ಅಂತಾ ನನಗೆ ಗೊತ್ತಿಲ್ವಾ ಅದಕ್ಕೆ ಕೇಳಿದೆ. ಎನಿ ವೇ ನೀನೀವಾಗ ಸ್ಟ್ರಾಂಗ್ ಆಗಿದ್ದಿ ಅಂತ ತಿಳಿದು ಖುಷಿಯಾಯ್ತು ಎಂದು ಹೇಳಿದಾಗ ನನ್ನ ಕಣ್ಣಿಂದ ಎರಡು ಹನಿ ಜಾರಿ ಬಿತ್ತು.
ನಾನು ಸ್ಟ್ರಾಂಗ್ ಅಲ್ಲ ಆದ್ರೆ ಸ್ಟ್ರಾಂಗ್ ಆಗಿದ್ದೀನಿ ಎಂಬಂತೆ ತೋರಿಸಿಕೊಳ್ತಿದ್ದೀನಿ. ನಿನಗೊತ್ತಾ? ದೂರದ ಹಳ್ಳಿಯಿಂದ ಬಂದು ಇಲ್ಲಿ ಬದುಕು ಸಾಗಿಸೋಕೆ ಎಷ್ಟು ಭಯ ಆಗ್ತಿದೆ ಅಂತಾ. ಆ ಲೇಡೀಸ್ ಪಿಜಿ, ಈ ಆಫೀಸು ಇವೆರಡರ ನಡುವೆ ಬದುಕು ಯಾಂತ್ರಿಕವಾಗಿಬಿಟ್ಟಿದೆ. ಹಗಲು ರಾತ್ರಿಯೆನ್ನದೆ ಶಿಫ್ಟ್‌ಗಳಲ್ಲಿ ಕೆಲಸ ಮಾಡುತ್ತಾ ಹಾಸ್ಟೆಲ್ ಊಟವನ್ನುಂಡು ನಾಲ್ಕು ಗೋಡೆಗಳ ಮಧ್ಯೆ ಲೈಫ್ ಎಂಜಾಯ್ ಮಾಡುತ್ತಿದ್ದೇನೆ. ನಿಜ ಹೇಳಲಾ... ಈ ಮೂರು ವರ್ಷಗಳಲ್ಲಿ ಬದುಕು ಎಂಥೆಂಥಾ ಜನರನ್ನು ಪರಿಚಯಿಸಿದೆ ಗೊತ್ತಾ? ಜನರು ಹೀಗೂ ಇರ್ತಾರೆ! ಅಂತಾ ಗೊತ್ತಾಗಿದ್ದೇ ಇಲ್ಲಿಗೆ ಬಂದ ನಂತರ. ಅವತ್ತು ಶೇಷಾದ್ರಿಪುರಂನಲ್ಲಿ ಒಬ್ಬ ವ್ಯಕ್ತಿ ಬಿದ್ದು ನೊರೆಯುಗುಳುತ್ತಿದ್ದ. ಪಕ್ಕದಲ್ಲಿ ಇದ್ದ ಇನ್ನೊಬ್ಬ ಸಹಾಯಕ್ಕಾಗಿ ಅಂಗಾಲಾಚುತ್ತಿದ್ದ. ಗೆಳೆಯನಿಗೆ 'ಬೈಕ್ ನಿಲ್ಲಿಸು ಮಾರಾಯಾ.. ನಮ್ಮ ಅಪ್ಪನ ವಯಸ್ಸಿನ ವ್ಯಕ್ತಿ, ಏನೋ ಕಷ್ಟದಲ್ಲಿದ್ದಾನೆ' ಎಂದೆ. ನಿನಗೇನು ಗೊತ್ತು ಅವರು ಸುಮ್ನೆ ಆ್ಯಕ್ಟಿಂಗ್ ಮಾಡ್ತಿರಬಹುದು. ಅವರ ಪಕ್ಕ ನಾವು ಸಹಾಯ ಮಾಡೋಕೆ ಹೋದ್ರೆ ನಮ್ಮಲ್ಲಿರುವುದನ್ನೆಲ್ಲಾ ದೋಚಿಕೊಂಡ್ರೆ ಏನು ಗತಿ? ನೀನು ಬೇರೆ ಜತೆಗಿದ್ದೀ, ಅವರೇನಾದ್ರೂ ಮಾಡಿದ್ರೆ ಇಂಥವರನ್ನೆಲ್ಲಾ ನೋಡಿದ್ರೂ ನೋಡದಂತೆ ಹೋಗ್ಬೇಕು ಎಂದು ನನ್ನನ್ನು ಬೈಯುತ್ತಾ ಸ್ಪೀಡ್ ಹೆಚ್ಚಿಸಿದ. ಈಗಲೂ ಆ ದೃಶ್ಯ ಕಣ್ಣಿಗೆ ಕಟ್ಟಿದಂತಿದೆ. ಅವರಿಗೆ ಸಹಾಯ ಮಾಡೋಕೆ ನನ್ನಿಂದ ಸಾಧ್ಯವಾಗಲಿಲ್ಲವಲ್ಲಾ ಎಂಬ ದುಃಖವಿದೆ.  ಪ್ರೀತಿ, ನಂಬಿಕೆ ಅನ್ನೋದು ಬರೀ ಪದಗಳಲ್ಲಿ ಮಾತ್ರ ಉಳಿದಿದೆಯೇನೋ ಎಂದು ಅನಿಸ್ತಾ ಇದೆ. ಹಾಗೆ ನೋಡಿದರೆ ನಮ್ಮನ್ನು ಹೆಚ್ಚು ನೋಯಿಸುವವರು ನಮ್ಮ ಆಪ್ತರೇ.
ಅಪ್ಪ ಅಮ್ಮ ಎಷ್ಟೇ ಕ್ಲೋಸ್ ಆಗಿದ್ರೂ, ಕೆಲವೊಂದು ವಿಷಯಗಳನ್ನು ಅವರಲ್ಲಿ ಹೇಳಲು ಸಾಧ್ಯವಾಗುವುದಿಲ್ಲ, ಗೆಳೆಯರಲ್ಲಿ ಮಾತ್ರ ಹೇಳ್ಬೇಕು. ಆ ಹೊತ್ತಲ್ಲಿ ನಮ್ಮ ಮನಸ್ಸಿನ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವವರು ಬೇಕು ಅಂತ ಅನಿಸುತ್ತದೆ. ಒಬ್ಬಂಟಿಯೆನಿಸಿದಾಗ ನಾ ನಿನ್ನ ಜತೆಗಿದ್ದೀನಿ, ಆಲ್ ಈಸ್ ವೆಲ್ ಅಂತಾ ಹೇಳುವ, ನಾನು ಸೋತು ಹೋಗ್ತಿದ್ದೀನಿ ಎಂದು ಕಣ್ಣೀರಿಡುವಾಗ ನೀನು ಗೆದ್ದೇ ಗೆಲ್ಲುತ್ತಿ ಎಂದು ಹುರಿದುಂಬಿಸುವಂಥವರು ಬೇಕು ಎಂದೆನಿಸುತ್ತದೆ.
'ಬಾಯ್‌ಫ್ರೆಂಡ್ ಬೇಕು' ಅಂತ ಅನಿಸ್ತಿದೆಯಾ ಅವನ ಮುಖದಲ್ಲಿ ತುಂಟ ನಗುವಿತ್ತು.
ಇಲ್ಲ... ಆದರೆ ಕಷ್ಟದ ಕ್ಷಣಗಳಲ್ಲಿ ನಡುಗುವ ಕೈ ಹಿಡಿದು 'ಎಲ್ಲ ಸರಿಹೋಗುತ್ತೆ ಕಣೇ' ಎಂದು ಹೇಳುವ ಫ್ರೆಂಡ್ ಬೇಕು.  ಕೆಲವು ಫ್ರೆಂಡ್ಸ್ (ಹುಡ್ಗೀರು) ಬೇಜಾರಾಗಿರುವಾಗ ಅವರನ್ನು ಸಮಾಧಾನ ಮಾಡೋಕೆ ಹೋಗಿ, ಆಮೇಲೆ ಅವರು ನಮ್ಮನ್ನು ಪೂರ್ತಿ ಹಚ್ಕೊಂಡು ಬಿಟ್ರೆ ಏನು ಗತಿ? ಎಂಬ ಭಯದಿಂದ ಕರೆಕ್ಟ್ ಟೈಮಲ್ಲಿ ಎಸ್ಕೇಪ್ ಆಗಿಬಿಡ್ತಾರೆ. ಪ್ರೀತಿ ಮಾಡಿದ ಹುಡುಗ ಕೈ ಕೊಟ್ಟು ಹೋದ್ರೆ ಅತ್ತು ಕರೆದು ರಂಪಾಟ ಮಾಡಿ ಮತ್ತೆ ಸುಮ್ಮನಾಗಿಬಿಡ್ತೀವಿ. ಆದ್ರೆ ಇಂಥ ಗೆಳೆಯರು ದೂರ ಹೋದರೆ ಅನುಭವಿಸುವ ನೋವು ಇದೆಯಲ್ಲಾ? ಅದು ಲವ್ ಬ್ರೇಕ್ ನೋವಿಗಿಂತಲೂ ತೀವ್ರವಾದದ್ದು. ಇಲ್ಲಿ ಬ್ಯುಸಿ ಲೈಫ್ ಆದ್ರೂ ಆಗ್ಗಾಗ್ಗೆ ಒಂಟಿತನ ಕಾಡುತ್ತೆ. ಹಾಗೆ ನೋಡಿದರೆ ಫೇಸ್‌ಬುಕ್‌ನಲ್ಲಿ ಸಿಕ್ಕಾಪಟ್ಟೆ ಫ್ರೆಂಡ್ಸ್ ಇದ್ದಾರೆ. ಹೆಚ್ಚೆಂದರೆ Feeling Sad ಅಂತಾ ಫೇಸ್‌ಬುಕ್‌ನಲ್ಲಿ ಸ್ಟೇಟಸ್ ಅಪ್‌ಡೇಟ್ ಮಾಡಬಹುದು. ವಾಟ್ಸಾಪ್‌ನಲ್ಲಿ  DND ಎಂದು ಬರೆದು ಸ್ಯಾಡ್ ಸ್ಮೈಲಿ ಎಂದು ಹಾಕಿ ಸುಮ್ಮನಾಗಬಹುದು ಅಷ್ಟೇ.
ಮತ್ತೆ ಈ ನನ್ನ ಹ್ಯಾಂಡ್‌ಬ್ಯಾಗ್ ಇದೆಯಲ್ಲಾ ಇದೇ ನನ್ನ ಸಂಗಾತಿ. ಪೆನ್ನು, ರೈಟಿಂಗ್ ಪ್ಯಾಡ್ ಜತೆ ಧೈರ್ಯಕ್ಕೆ ಪಿನ್ನು, ಪೆಪ್ಪರ್ ಸ್ಪ್ರೇ ಕೂಡಾ ಇಟ್ಕೊಂಡಿದ್ದೀನಿ. ಗಂಡಸರ ಬಗ್ಗೆ ಗೊತ್ತಲ್ವಾ ಕೆಲವರು ಒಂದೇ ನೋಟದಲ್ಲಿ ನಮ್ಮನ್ನ ಮೇಲಿಂದ ಕೆಳಕ್ಕೆ ಸ್ಕ್ಯಾನ್ ಮಾಡಿಬಿಡುತ್ತಾರೆ. ಇನ್ನು ಕೆಲವರು ನಮ್ಮನ್ನೇ ನುಂಗುವಂತೆ ನೋಡ್ತಾ ಇರ್ತಾರೆ.
ಹಾಗಂತ ಇನ್ಯಾವುದೋ ಹುಡುಗನ ಜತೆ ಕ್ಲೋಸ್ ಆಗಿ ಇದ್ರೆ ಇಲ್ಲ ಸಲ್ಲದ ರೂಮರ್ ಹಬ್ಬಿಸುತ್ತಾರೆ. ಬಿಡುವಿನ ವೇಳೆ ಈ ವೇದನೆಗಳನ್ನೆಲ್ಲಾ ಗೀಚಿದಾಗ ಏನೋ ಒಂಥರಾ ಸಮಾಧಾನ. ಪುಸ್ತಕದ ಪುಟ ತಿರುವುತ್ತಾ, ಕಲ್ಪನಾ ಲೋಕದಲ್ಲಿ ಕಳೆದು ಹೋಗುವಾಗ ದುಃಖ ಮರೆಯಾಗುತ್ತದೆ. ನನ್ನ ಕಣ್ಣೀರು ಮಳೆ ಹನಿಯೊಂದಿಗೆ ಸಮ್ಮಿಲನಗೊಂಡಾಗ ಮನಸ್ಸು ಶಾಂತವಾಗುತ್ತದೆ. ಯಾವುದಕ್ಕೂ ಹೆದರಬೇಡ, ದೇವರಿದ್ದಾನೆ ಎಂದು ಅಮ್ಮ ಹೇಳಿದ ಮಾತುಗಳನ್ನು ನೆನೆದು ಧೈರ್ಯ ತುಂಬಿಕೊಳ್ಳುತ್ತೇನೆ. ತುಂಬಾ ಬೇಜಾರಾದಾಗ ಮನಸ್ಸಿನಲ್ಲಿಯೇ ಅಮ್ಮನನ್ನು ನೆನೆದು ಎಲ್ಲವನ್ನೂ ಹೇಳಿ ಬಿಡುತ್ತೇನೆ.
ತುಜೆ ಸಬ್‌ಕುಚ್ ಪತಾ ಹೈ ನಾ ಮಾ...ಹಾಡಿನ ಪ್ರತೀ ಸಾಲುಗಳು ನನ್ನ ಮಾತುಗಳಾಗುತ್ತವೆ. ಏನೇ ಎದುರಾದರೂ ಧೈರ್ಯದಿಂದ ಮುಂದೆ ನಡೆಯಲೇಬೇಕಾಗಿದೆ. ಜೀವನ ಅಂದ್ರೆ ಇದೇ ಅಲ್ವಾ?

- ಇಬ್ಬನಿ
loveibbani@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!

SIR ವಿರುದ್ಧ ಪ್ರತಿಭಟನೆ ಮುಂದುವರೆಸುತ್ತೆವೆ: ರಾಜಕೀಯ, ಜನಸಾಮಾನ್ಯರ ಪ್ರತಿರೋಧಕ್ಕೇ ಜಯ': ರಾಹುಲ್ ಗಾಂಧಿ