ಮಹಿಳೆ-ಮನೆ-ಬದುಕು

ನಡುಗಾಲದ ನಡುಕ

ಹೆಣ್ಣು ಮಗುವಾಗಿ, ಪುಟ್ಟಹುಡುಗಿಯಾಗಿ, ಕಿಶೋರಿಯಾಗಿ, ಉದ್ಯೋಗಸ್ಥೆಯಾಗಿ , ಕೊನೆಗೆ ಪತ್ನಿಯಾಗಿ ಸಂಸಾರದ ಜವಾಬ್ದಾರಿ ಹೊತ್ತಿರುವ ಮಹಿಳೆಗೆ ಇದು ಒಂದು ರೀತಿ ಅಗ್ನಿಪರೀಕ್ಷೆಯ ಕಾಲ. ಒಂದೆಡೆ ಬೆಳೆಯುತ್ತಿರುವ ಮಕ್ಕಳು.. ಇನ್ನೊಂದೆಡೆ ಹೆಚ್ಚುತ್ತಿರುವ ಜವಾಬ್ದಾರಿ, ಜತೆಗೆ ಉದ್ಯೋಗವೂ ಇದ್ದರೆ ಅವಳ ಆತಂಕ, ಗಡಿಬಿಡಿಗೆ ಕೊನೆಯೇ ಇಲ್ಲ. ಜತೆಗೆ ಏರುತ್ತಿರುವ ವಯಸ್ಸು... ತನ್ನ ಮಕ್ಕಳು ಹೇಳಿದಂತೆ ಕೇಳಲಾಗುತ್ತಿಲ್ಲ, ಸಮಾನ ವಯಸ್ಕರಂತೆ ಅಲಂಕರಿಸಿಕೊಳ್ಳಲಾಗುತ್ತಿಲ್ಲ. ತಾನೇ ಬೆಳೆಸಿದ ಮಕ್ಕಳ ಮೂದಲಿಕೆ ಸಹಿಸಲಾಗುತ್ತಿಲ್ಲ. ಬಾಲ್ಯದಿಂದ ಕಲಿತ ಕಟ್ಟುಪಾಡುಗಳನ್ನು ಮೀರುವ ಧೈರ್ಯವಿಲ್ಲ. ಈ ಎಲ್ಲದರ ನಡುವೆಯೂ ಮನದಲಿ ಇನ್ನೇನೋ ಬಯಕೆ.

ವಾಸ್ತವ
ಬಿಳಿಯಾಗುತ್ತಿರುವ ಉದುರುತ್ತಿರುವ ತಲೆಗೂದಲು, ಸಂದು ಬಿಡುತ್ತಿರುವ ಹಲ್ಲುಗಳು, ಸುಕ್ಕುಗಟ್ಟುತ್ತಿರುವ ಚರ್ಮ, ಸ್ಥೂಲವಾಗುತ್ತಿರುವ ದೇಹ ನಿನಗೆ ವಯಸ್ಸಾಗುತ್ತಿದೆ ಎಂಬ ಸೂಚನೆ ನೀಡುತ್ತಿದ್ದರೂ ಜಾಹೀರಾತಿನಲ್ಲಿ ತೋರಿಸುವ ಎಲ್ಲ ಬಗೆಯ ಸಾಧನಗಳ ಮೊರೆಹೋಗುತ್ತಾಳೆ. ಸಣ್ಣಗಾಗಲು ಅರಿವಿರದ ಔಷಧಗಳ ಸೇವನೆ, ಅತಿಯಾದ ಡಯಟಿಂಗ್‌ನಿಂದ ಅಪಾಯವೇ ಹೆಚ್ಚು. ಇದಾವುದರಿಂದಲೂ ವಯಸ್ಸನ್ನು ಹಿಡಿದುನಿಲ್ಲಿಸಲಾಗದು. ಆದರೂ ಅದೇನೋ ಇಷ್ಟುವರ್ಷ ಇಲ್ಲದ ಅತಿಯಾದ ಕಾಳಜಿ.. ಮಗಳನ್ನು ನೋಡಿದಾಗ ಅವಳಂತೆ ಇರಲಾಗಲಿಲ್ಲವಲ್ಲ ಎಂಬ ಕೊರಗು. ತಾನೇ ಬೆಳೆಸಿದ ಮಗಳಿಗೆ ಈ ಧೈರ್ಯ ಬಂದದ್ದಾದರೂ ಹೇಗೆಂಬ ಅನುಮಾನ..

ಬದಲಾವಣೆ
ಇದ್ದಕ್ಕಿದ್ದಂತೆ ದೇಹ ಬಿಸಿಯಾಗುವಿಕೆ, ಎನೋ ಆಲಸ್ಯ, ತಡೆಯಲಾರದ ಸೆಖೆ.. ಏನನ್ನೋ ಕಳೆದುಕೊಳ್ಳುತ್ತಿದ್ದೇನೆಂಬ ಭಯ... ಹಾರ್ಮೋನ್‌ಗಳ ಏರುಪೇರಿನಿಂದಾಗಿ ಹೀಗಾಗುವುದು ಎಂಬ ಅರಿವಿದ್ದರೂ ಸಣ್ಣ ಮಗುವನ್ನು ಸಂತೈಸುವಂತೆ ಸಂತೈಸುವರು ಬೇಕೆನ್ನುವ ಹಂಬಲ. ಮಕ್ಕಳು ತನ್ನ ಮಾತನ್ನು ಕೇಳದಾದರು ಎನ್ನುವ ಹತಾಶೆ, ಮಗಳ ಮದುವೆ, ಮಗನ ಉದ್ಯೋಗ, ಗಂಡ ನಿವೃತ್ತರಾಗುವ ಮುನ್ನ ಎಲ್ಲವೂ ನೆಲೆಗೊಳ್ಳಬೇಕೆಂಬ ಮಹತ್ವಾಕಾಂಕ್ಷೆ.. ಜತೆಗೆ ಬಿಪಿ ಇದ್ದರಂತೂ ಮುಗಿದೇಹೋಯ್ತು. ಅವಳನ್ನು ಹತೋಟಿಗೆ ತರಲು ಮನೆಯವರೆಲ್ಲರೂ ಹರಸಾಹಸವನ್ನೇ ಮಾಡಬೇಕಾದೀತು.

ಮುಂಚೆಯೆಲ್ಲಾ ನಗುನಗುತ್ತಾ ಕೇಳಿದ್ದು-ಕೇಳದೆಯೇ ಇದ್ದದ್ದು ಎಲ್ಲವನ್ನೂ ಕೊಡಿಸುತ್ತಿದ್ದ, ಖುಷಿ ಖುಷಿಯಾಗಿರುತ್ತಿದ್ದ, ಬಗೆಬಗೆಯಾದುದನ್ನು ಮಾಡಿ ಬಡಿಸುತ್ತಿದ್ದ, ನಿಲ್ಲಿಸದೇ ಮಾತನಾಡುತ್ತಿದ್ದ ಅಮ್ಮ,, ಈಗ ಒಂದು ಮಾತು ಬಿಟ್ಟು ಎರಡನೇ ಮಾತಿಗೆ ಕೋಪಗೊಂಡು ಕೂಗಾಡುವ ಅಮ್ಮ... ಒಮ್ಮೊಮ್ಮೆ ಆಕಾಶವೇ ತಲೆಯ ಮೇಲೆ ಬಿದ್ದಂತೆ ಮೌನವಾಗಿರುವುದನ್ನು ಕಂಡ ಮಕ್ಕಳಿಗೆ ಈ ಅಮ್ಮನೇಕೆ ಹೀಗಾಡುತ್ತಿದ್ದಾಳೆಂದು ತಿಳಿಯುವ ಪ್ರಯತ್ನ ಮಾಡದೇ ತಾವೇ ದೂರವಿರಲು ಬಯಸುತ್ತಾರೆ. ಹೆಂಡತಿ ಹೇಗೆಬೇಕೋ ಹಾಗಿರಲಿ. ಒಟ್ಟಿನಲ್ಲಿ ಸಮಾಧಾನವಾಗಿದ್ದರೆ ಸಾಕು ಎಂದು ಗಂಡನೂ ತನ್ನಪಾಡಿಗೆ ತಾನಿದ್ದುಬಿಡುತ್ತಾನೆ. ಈಗ ಅವಳಿಗೆ ತನ್ನನ್ನು ಒಲೈಸುವವರು, ಮನದ ದುಗುಡ ಅರ್ಥಮಾಡಿಕೊಳ್ಳುವವರು ಅವಶ್ಯವೆನಿಸುತ್ತಾರೆ. ಎಲ್ಲರೂ ಸುಖವಾಗಿದ್ದಾರೆ, ನಾನು ಮಾತ್ರವೇ ಈ ಮನೆಯಲ್ಲಿ ದುಡಿಯುವ ಯಂತ್ರ ಎನ್ನುವ ಭಾವ ಕಾಡತೊಡಗಿ ಎಲ್ಲರ ಮೇಲೂ ಹರಿಹಾಯುತ್ತಾಳೆ. ತಾನಂತೂ ಹೆಚ್ಚು ಓದಲಾಗಲಿಲ್ಲ.. ಮಗಳು ಚೆನ್ನಾಗಿ ಓದಲಿ ಎಂದು ಎಲ್ಲ ಕೆಲಸಗಳಿಂದ ದೂರ ಇರಿಸಿದ್ದ ಮಗಳ ಬಗ್ಗೆಯೂ ಈಗ ಅಸಹನೆ.. ಹೆಣ್ಣಾಗಿ ಇವಳಿಗೂ ಅರ್ಥವಾಗುವುದಿಲ್ಲ.. ಸಣ್ಣಪುಟ್ಟ ಸಹಾಯವನ್ನೂ ಮಾಡುತ್ತಿಲ್ಲ ಎಂಬ ಕೊರಗು.. ಗಂಡನ ಪ್ರತಿಯೊಂದು ಚಲನವಲನವನ್ನೂ ಎಕ್ಸ್‌ರೇ ಕಂಗಳಿಂದ ನೋಡುವುದು.. ಆತ ಯಾರೊಡನೆ ನಗುನಗುತ್ತಾ ಮಾತನಾಡಿದರೂ ಅಲ್ಲೇನೋ ಸಂದೇಹ.. ತನ್ನಲ್ಲೇನೋ ಕೊರತೆಯೆಂಬ ಕೀಳರಿಮೆ. ಎಲ್ಲಿ ಎಲ್ಲರೂ ತನ್ನ ಕೈತಪ್ಪುತ್ತಿರುವರೋ ಎಂಬ ಅಸಹಾಯಕತೆ..

ಈ ಸ್ಥಿತಿಯಲ್ಲಿ ಮನೆಯವರೆಲ್ಲರ ಪ್ರೀತಿ, ಅನುಕಂಪ, ಪ್ರೋತ್ಸಾಹ, ಖುಷಿಯಾದ ಮಾತುಗಳಿಂದ ಮತ್ತೆ ಅವಳಲ್ಲಿ ಆತ್ಮವಿಶ್ವಾಸ ಹೆಚ್ಚಿ, ಎಲ್ಲರೂ ತನ್ನೊಂದಿಗಿದ್ದಾರೆಂಬ ಭಾವ ಮೂಡುವಂತೆ ಮಾಡಿದರೆ, ಸಂತೋಷವಾಗಿ ಈ ನಡುವಯಸ್ಸಿನ ಚಕ್ರವ್ಯೂಹದಿಂದ ಹೊರಬಂದು ಸ್ನೇಹಮಯಿಯಾಗಿರಲು ಸಾಧ್ಯ.
-ನಾಗಲಕ್ಷ್ಮೀ, ಕಡೂರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!