ಮಹಿಳೆ-ಮನೆ-ಬದುಕು

ರಾಂಗ್‌ನಂಬರ್

ಕೆಲವು ಅತೃಪ್ತ ಆತ್ಮಗಳಿಗೆ ಯಾವುದಾದರೂ ಮೊಬೈಲ್ ನಂಬರ್ ಸಿಕ್ಕರೆ ಸಾಕು, ಆ ನಂಬರ್‌ಗೆ ಕರೆ ಮಾಡಿ ಪೀಡಿಸಲು ಶುರು ಹಚ್ಚಿಕೊಳ್ಳುತ್ತವೆ. ಜಗದಲ್ಲಿ ಇರುವವರೆಲ್ಲ ನಮ್ಮ ಸಾಂಗತ್ಯ ಬಯಸುವರೇನೊ ಎಂಬಂತೆ ಮಾತನಾಡುತ್ತಾರೆ. ಅದರಲ್ಲೂ ಕೆಲ ಗಂಡಸರಿಗೆ ಯುವತಿಯರ ಮೊಬೈಲ್ ನಂಬರ್ ಸಿಕ್ಕರೆ ತರಹೇವಾರಿ ಕಥೆಗಳು ತೆರೆದುಕೊಳ್ಳಲಾರಂಭಿಸುತ್ತವೆ.
ಇತ್ತೀಚೆಗೆ ನನ್ನ ಗೆಳತಿಯೊಬ್ಬಳ ಕವನ ಪತ್ರಿಕೆಯೊಂದರಲ್ಲಿ ಪ್ರಕಟವಾಗಿತ್ತು. ಅವಳ ಹೆಸರಿನೊಂದಿಗೆ ಮೊಬೈಲ್ ನಂಬರನ್ನೂ ಪ್ರಕಟಿಸಲಾಗಿತ್ತು. ಅದಾದ ಮೇಲೆ ಅವಳಿಗೆ ಹೊಸ ಪೀಕಲಾಟ ಶುರುವಾಯಿತು. ಕರೆ ಮಾಡಿ ನಿಮ್ಮ ಕವನ ತುಂಬಾ ಚೆನ್ನಾಗಿದೆ ಅಂತ ಮೊದಲಿಗೆ ಮಾತು ಶುರುವಿಟ್ಟುಕೊಳ್ಳುತ್ತಿದ್ದ ಕೆಲ ಪುರುಷರು, ಆನಂತರ ನೀವು ಏನ್ ಮಾಡ್ತಿದ್ದೀರಿ, ನಿಮ್ಗೆ ಮದ್ವೆ ಆಗಿದ್ಯಾ, ಗಂಡನಿಗೆ ಏನ್ ಕೆಲ್ಸ, ಮಕ್ಳೆಷ್ಟು ಅಂತೆಲ್ಲ ವಿಚಾರಿಸುತ್ತಿದ್ದರು. ಒಬ್ಬ ಪುಣ್ಯಾತ್ಮನಂತೂ ನೀವು ಮನೇಲಿ ಒಬ್ರೆ ಫ್ರೀಯಾಗಿ ಇರ್ತೀರಾ? ನಿಮ್ಮೂರಿಗೆ ಯಾವಾಗ ಬರಲಿ? ಅಲ್ಲಿ ನೋಡೋ ಸ್ಥಳಗಳು ಯಾವುವು? ಅಂತೆಲ್ಲ ಕೇಳೋಕೆ ಶುರು ಮಾಡಿ, ಇವಳು ಗರಂ ಆಗಿದ್ದಕ್ಕೆ, ನಾನು ಕ್ಲೋಸ್ ಆಗೋಣ ಅಂದ್ರೆ ನೀವು ದೂರ ತಳ್ಳೋಕೆ ನೋಡ್ತೀರಲ್ರೀ ಅಂತಂದ. ಗೆಳತಿ ಕಾಲ್ ಕಟ್ ಮಾಡಿದ್ಲು.

ನಮ್ಮ ಪಕ್ಕದ ಮನೆಯ ಅಜ್ಜಿಯ ಬಳಿಯೂ ಮೊಬೈಲ್ ಇದೆ. ಇತ್ತೀಚೆಗೆ ಯಾವನೋ ಒಬ್ಬ ಅವರಿಗೆ ಕಾಲ್ ಮಾಡಿ 'ಐ ಲವ್ ಯೂ' ಹೇಳಲಾರಂಭಿಸಿದ್ದ. ಅಜ್ಜಿ ಮನೆಯವರಿಗೆ ವಿಷಯ ತಿಳಿಸಿ, ಅವರೆಲ್ಲ ಆ ನಂಬರ್‌ಗೆ ಕರೆ ಮಾಡಿ ಹಿಗ್ಗಾಮುಗ್ಗಾ ಝಾಡಿಸಿದ ನಂತರವೂ ತೆಪ್ಪಗಾಗದೆ ಕಾಟ ಕೊಡುತ್ತಿದ್ದವನು, ಪೊಲೀಸ್ ಕಂಪ್ಲೇಂಟ್ ಕೊಡ್ಬೇಕಾ? ಅಂತ ಹೆದರಿಸಿದ ನಂತರ ಅಜ್ಜಿ ತಂಟೆಗೆ ಬರದೆ ಸುಮ್ಮನಾಗಿದ್ದಾನೆ.

ಮತ್ತೊಬ್ಬ ಗೆಳತಿ ಇತ್ತೀಚೆಗೆ ಯಾಕೋ ಮಂಕಾಗಿದ್ದಳು. ಕಾರಣ ಕೇಳಿದಾಗ ಅವಳು ಹೇಳಿದ್ದಿಷ್ಟು.
ಅವಳಿಗೆ ಯುವಕನೊಬ್ಬ ಮೊಬೈಲ್ ಮೂಲಕ ಪರಿಚಯವಾಗಿದ್ದ. ಆಗಾಗ ಕಾಲ್ ಮಾಡಿ ಕಷ್ಟ-ಸುಖ ಹಂಚಿಕೊಳ್ಳುತ್ತಿದ್ದ. ಅಪರೂಪಕ್ಕೊಮ್ಮೆ ಇಬ್ಬರೂ ಭೇಟಿ ಆಗುತ್ತಿದ್ದರು. ತನಗೆ ಮದುವೆ ಆಗಿ ಇಬ್ಬರು ಮಕ್ಕಳಿರುವುದಾಗಿ ಆತ ತಿಳಿಸಿದ್ದ. ನನಗೆ ನೀನು ಅಣ್ಣನ ಸಮಾನ. ನಿನ್ನ ಬಗ್ಗೆ ನನಗೆ ಬೇರೆ ಯಾವ ರೀತಿಯ ಭಾವನೆಯೂ ಇಲ್ಲ ಎಂದು ಅವಳು ಅವನಿಗೆ ಸ್ಪಷ್ಟವಾಗಿ ಹೇಳಿದ್ದಳು. ಅವರಿಬ್ಬರ ನಡುವಿನ ಸಂಬಂಧ ಉತ್ತಮವಾಗಿಯೇ ಇತ್ತು.
ಈ ನಡುವೆ ಒಂದು ದಿನ ಅಪರಿಚಿತ ನಂಬರ್‌ನಿಂದ ಅವಳಿಗೆ ಕರೆ ಬಂತು. ಯಾರೋ ಒಬ್ಬರು ಮಹಿಳೆ ಇವಳ ಕುರಿತು ಮಾಹಿತಿ ಕೇಳಲಾರಂಭಿಸಿದರು. ನೀವ್ಯಾರು, ನಿಮ್ಮ ಹೆಸರೇನು, ಏನ್ ಮಾಡ್ಕೊಂಡಿದ್ದೀರ, ಯಾವ ಊರು ಅಂತೆಲ್ಲ ಕೇಳಿದ ಆಕೆ, ಕೊನೆಗೆ ನನ್ನ ಗಂಡನಿಗೂ ನಿಮಗೂ ಏನ್ ಸಂಬಂಧ? ನಿಮ್ ನಂಬರ್ ಅವರ ಮೊಬೈಲ್‌ನಲ್ಲಿತ್ತು. ಒಂದು ಮೂವತ್ತು ಮೆಸೇಜ್, ಮೂರ್ನಾಲ್ಕು ಕಾಲ್ ಮಾಡಿದ್ದೀರ. ನಿಮ್ಗೂ ನನ್ ಗಂಡನಿಗೂ ಏನಾಗ್ಬೇಕು ಅಂತೆಲ್ಲ ವಿಚಾರಿಸಿದ್ದಾರೆ. ಇವಳು ಅವನು ಮೊಬೈಲ್ ಮೂಲಕ ಪರಿಚಯವಾದ ಬಗೆ ವಿವರಿಸಿ, ಆತ ನನಗೆ ಅಣ್ಣನಿದ್ದ ಹಾಗೆ ಅಂತೆಲ್ಲ ಹೇಳಿದ್ದಾಳೆ. ನೀವು ಆ ರೀತಿ ಹುಡ್ಗಿ ಅಲ್ಲ ಅಂದ್ರೆ ಸಮಸ್ಯೆ ಇಲ್ಲ ಬಿಡಿ ಅಂತ ಆ ಮಹಿಳೆ ಹೇಳಿದ್ದಾರೆ.
ನನ್ನಿಂದ ಗಂಡ-ಹೆಂಡತಿ ಸಂಬಂಧ ಹಾಳಾಗೋದು ಬೇಡ. ಇನ್ಮೇಲೆ ನಾನು ನಿಮ್ಮ ಗಂಡನಿಗೆ ಕಾಲ್ ಅಥವಾ ಮೆಸೇಜ್ ಮಾಡಲ್ಲ. ನಮ್ಮಿಬ್ಬರ ನಡುವೆ ನೀವು ಕಲ್ಪಿಸಿಕೊಂಡಿರುವಂತಹ ಸಂಬಂಧ ಇಲ್ಲ ಅಂತ ಅವಳು ಸ್ಪಷ್ಟಪಡಿಸಿದ್ದಾಳೆ.

ಸಂಪರ್ಕ ಸಾಧನವಾಗಿ ಮನಸ್ಸುಗಳನ್ನು ಬೆಸೆಯುವ ಮೊಬೈಲ್, ಹೀಗೆ ಅಪರಿಚಿತರ ಉಪಟಳದಿಂದಾಗಿ ಮನಸ್ಸಿನ ನೆಮ್ಮದಿಗೆ ಭಂಗ ತರುವ ಸಾಧ್ಯತೆಯೂ ಇರುತ್ತದೆ. ಅಪರಿಚಿತರೊಂದಿಗೆ ಮೊಬೈಲ್‌ನಲ್ಲಿ ಸಂಬಂಧ ಬೆಳೆಸುವುದೆಂದರೆ, ಹಲವು ರಿಸ್ಕ್‌ಗಳಿಗೆ ನಮ್ಮನ್ನು ಒಡ್ಡಿಕೊಂಡಂತೆಯೇ ಸರಿ. ರಾಂಗ್ ನಂಬರ್ ಮೂಲಕ ಹುಟ್ಟಿಕೊಂಡ ಸಂಬಂಧಗಳೆಲ್ಲವೂ ಹೀಗೆ ಸಮಸ್ಯೆಗಳನ್ನೇ ತಂದೊಡ್ಡುತ್ತವೆ ಎನ್ನಲಾಗದಿದ್ದರೂ ಆ ಸಾಧ್ಯತೆ ಹೆಚ್ಚು.


-ಎಚ್.ಕೆ. ಶರತ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!

"ತಿರಂಗಾ ಹಾರಿಸುವುದು ಅಪರಾಧವಲ್ಲ ಎಂಬುದನ್ನು ತೋರಿಸುತ್ತೇವೆ": ಅಕ್ಟೋಬರ್ 16ಕ್ಕೆ ತ್ರಿವರ್ಣ ಧ್ವಜದೊಂದಿಗೆ ಬನ್ನಿ- ಅಭಿಜಿತ್ ದೀಪ್ಕೆ ಕರೆ

ಸುಪ್ರೀಂಕೋರ್ಟ್​ಗೆ ನನ್ನ ಬಗ್ಗೆ ತಪ್ಪು ಮಾಹಿತಿ: ಸರ್ಕಾರದ ವಿರುದ್ಧ ಡಿಜಿಪಿ ಅಲೋಕ್ ಕುಮಾರ್ ಅಸಮಾಧಾನ!