ಇದು ಮಾಡರ್ನ್ ಯುಗ. ಫ್ಯಾಶನ್ ಜಗತ್ತು. ಹಳೆಯ ಸಂಪ್ರದಾಯ, ಕಥೆ, ಪುರಾಣಗಳೆಲ್ಲಾ ಏಕೆ? ಎಂದು ಪ್ರಶ್ನಿಸುವ ಕಾಲ. ಇಂಥ ಸಂದರ್ಭದಲ್ಲಿ ಹಾಸನದ ಮಹಿಳೆ ಭಾರತದ ಭವ್ಯ ಪರಂಪರೆ, ನೀತಿಯನ್ನು ಸಾರುವ ಪೌರಾಣಿಕ ನಾಟಕಗಳನ್ನು ಮಹಿಳೆಯರಿಂದಲೇ ಆಡಿಸಿ ನಟಿಸುವ ಮೂಲಕ ರಾಮಾಯಣ, ಮಹಾಭಾರತ ಕಥೆಗಳಿಗೆ ರಾಯಭಾರಿಯಾಗಿದ್ದಾರೆ.
ಹಾಸನದಲ್ಲಿ ಮಾತ್ರವಲ್ಲ, ರಾಜ್ಯದ ಅನೇಕ ಕಡೆ ಮಹಿಳೆಯರೇ ಅಭಿನಯಿಸುವ ಪೌರಾಣಿಕ ನಾಟಕಗಳನ್ನು ಪ್ರದರ್ಶಿಸಿರುವುದಲ್ಲದೆ, ಅಮೆರಿಕದಲ್ಲಿ 'ರಾಮಾಯಣ' ನಾಟಕದ ರಾಮನ ಪಾತ್ರವನ್ನು ಏಕಪಾತ್ರಾಭಿನಯದ ಮೂಲಕ ಪ್ರದರ್ಶಿಸಿ ಅಲ್ಲಿಯ ಜನರ ಪ್ರಶಂಸೆ ಗಿಟ್ಟಿಸಿದ್ದಾರೆ. ಹೀಗೆ ನಶಿಸುತ್ತಿರುವ ರಂಗಕಲೆಗೆ ಮರುಜೀವ ತುಂಬಲು ಶ್ರಮಿಸುತ್ತಿರುವವರು ಬಹುಮುಖ ಪ್ರತಿಭೆ ಮಂಗಳಾ ವೆಂಕಟೇಶ್.
ಇವರು ಇದುವರೆಗೆ 20ಕ್ಕೂ ಹೆಚ್ಚು ಪೌರಾಣಿಕ ನಾಟಕಗಳನ್ನು ನಿರ್ದೇಶಿಸಿ, ನಟಿಸಿದ್ದಾರೆ. ವಿಶೇಷವೆಂದರೆ ಅವರು ನಿರ್ದೇಶಿಸಿದ ನಾಟಕಗಳಲ್ಲಿ ಅಭಿನಯಿಸುವವರು ಮಹಿಳೆಯರು ಮಾತ್ರ. 'ಸೃಜನಸಿರಿ ವನಿತಾ ವೃಂದ' ಮಹಿಳಾ ಸಂಘವನ್ನು ಸ್ಥಾಪಿಸಿ, ರಾವಣನ ಗರ್ವಭಂಗ, ಶ್ರೀಕೃಷ್ಣ ಗಾರುಡಿ, ಸತಿ ಸಾವಿತ್ರಿ, ಪ್ರಚಂಡ ರಾವಣ, ವೀರ ದುರ್ಯೋಧನ, ಮಹಿಷಾಸುರ ಮರ್ದಿನಿ, ಚಂದ್ರನ ಗರ್ವಭಂಗ, ಭೂ ಕೈಲಾಸ, ಶ್ರೀನಿವಾಸಕಲ್ಯಾಣ, ನಾಟ್ಯ ರಾಣಿ ಶಕುಂತಲೆ ಮುಂತಾದ ನಾಟಕಗಳನ್ನು ನಿರ್ದೇಶಿಸಿ, ಅಭಿನಯಿಸಿದ್ದಾರೆ.
ಸಂಗೊಳ್ಳಿ ರಾಯಣ್ಣ, ಭಕ್ತ ಶಿಶುನಾಳ ಶರೀಫ ನಾಟಕಗಳನ್ನು ರಾಜ್ಯದ ಹಲವೆಡೆ ಪ್ರದರ್ಶಿಸಿ, ಮೆಚ್ಚುಗೆ ಗಳಿಸಿದ್ದಾರೆ. ಅಮೆರಿಕ ಕನ್ನಡಕೂಟದವರು ನಡೆಸಿದ ಕಾರ್ಯಕ್ರಮದಲ್ಲಿ ರಾಮನ ಪಾತ್ರವನ್ನು ಅಭಿನಯಿಸುವ ಮೂಲಕ ಭಾರತದ ಪುರಾಣೈತಿಹಾಸವನ್ನು ವಿದೇಶಿ ನೆಲದಲ್ಲಿ ಸಾರಿದ್ದಾರೆ.
ಕುವೆಂಪು ಅವರ ರಕ್ತಾಕ್ಷಿ ನಾಟಕದ ಪಾತ್ರಧಾರಿ, ನಿರ್ಮಲ ಮನಸ್ಸಿನ ರುದ್ರಾಂಬೆ ಸಮಾಜ ಹರಡುವ ಗಾಸಿಪ್ಗೆ ಹೆದರದೆ, ಸಮಾಜವನ್ನು ಮೆಟ್ಟಿ ನಿಲ್ಲುವುದನ್ನು ನವಿರಾಗಿ ಹೇಳುವ ಮೂಲಕ ಮಹಿಳೆಯರಿಗೆ ಧೈರ್ಯ ತುಂಬುತ್ತಿದ್ದಾರೆ. ಅಲ್ಲದೆ 'ದಿ ಕ್ರಿಸ್ಮಸ್ ಕರೋಲ್' ಎಂಬ ಇಂಗ್ಲಿಷ್ ನಾಟಕವನ್ನೂ ನಿರ್ದೇಶಿಸಿದ್ದಾರಿವರು.
-ದಯಾಶಂಕರ ಮೈಲಿ