ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿರುವ ವಿಭಿನ್ನ ಶೈಲಿಯ ಕಲಾವಿದೆ ಸುರೇಖಾ ಮನೋಜ್ ಬಿಡುವಿನ ವೇಳೆಯಲ್ಲಿ ಬಾಟಲಿ ಕಲೆಯ ಕೈಹಿಡಿದರು. ಇಂದು ಅವರ ಬೆರಗುಗೊಳಿಸುವ ಬಾಟಲಿ ಕಲೆ ಕಲಾಸಕ್ತರ ಮನಗೆದ್ದಿದೆ. ಕೆಲವೇ ನಿಮಿಷಗಳಲ್ಲಿ ಬಾಟಲಿ ಕಲೆಯನ್ನು ಅನಾವರಣಗೊಳಿಸುವ ಇವರು ಬಾಟಲಿಗಳ ಮೇಲೆ ಸಿರಾಮಿಕ್ ಪೌಡರ್, ಫ್ಯಾಬ್ರಿಕ್ ಕಲರ್‌ಗಳು, ವಾರ್ನಿಶ್ ಹಾಗೂ ಫೆವಿಕಾಲ್ ಸಹಾಯದಿಂದ ಆ್ಯಂಟಿಕ್ ರೂಪ ಕೊಟ್ಟು ಕಲಾಕೃತಿ ರಚಿಸುತ್ತಾರೆ. ಆಫ್ರಿಕದ ಬಡಕಟ್ಟು ಜನಾಂಗದ ರೂಪದ ಕಲೆಯನ್ನು ಸೊಗಸಾಗಿ ರಚಿಸುತ್ತಾರೆ. ಇದುವರೆಗೆ 500ಕ್ಕೂ ಹೆಚ್ಚು ಬಾಟಲಿ ಕಲಾಕೃತಿಗಳನ್ನು ರಚಿಸಿದ್ದಾರೆ.
ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ, ಫ್ರಿಲಾನ್ಸ್ ಡಿಸೈನರ್ ಆಗಿ ದುಡಿದಿರುವ ಸುರೇಖಾ, ಪೇಂಟಿಂಗ್, ಸ್ಕಲ್ಪಚರ್, ಪ್ರಿಂಟ್ ಮೇಕಿಂಗ್, ಕ್ಲೆ ಮಾಡಲಿಂಗ್‌ನಲ್ಲೂ ಎತ್ತಿದ ಕೈ. ಕೀ ಚೈನ್‌ಗಳನ್ನು, ಮಣ್ಣಿನ ಆಭರಣಗಳನ್ನು, ವಿವಿಧ ಮಾಧ್ಯಮಗಳಲ್ಲಿ ಹೂಗಳನ್ನು, ತೆಂಗಿನ ಚಿಪ್ಪುಗಳಿಂದ ಕಲಾಕೃತಿಗಳನ್ನು ತಯಾರಿಸುತ್ತಾರೆ. ಈ ಕಲೆಯ ಬಗ್ಗೆ ಕಾಲೇಜುಗಳಲ್ಲಿ ಕಾರ್ಯಾಗಾರಗಳನ್ನು ನಡೆಸುತ್ತಾರೆ.
ಗೆಳೆಯರಿಂದ ಹಾಗೂ ರದ್ದಿಯವರಿಂದ ಬಾಟಲಿಗಳನ್ನು ಸಂಗ್ರಹಿಸುವ ಸುರೇಖಾ, ಈ ಕಲೆಯನ್ನು ಹೇಗೆ ಆರಂಭಿಸಿದಿರಿ? ಇದಕ್ಕೆ ಸ್ಫೂರ್ತಿ ಯಾರು? ಎಂದು ಕೇಳಿದರೆ, 'ಬಾಲ್ಯದಲ್ಲಿ ತಂದೆಗೆ ವಿಶೇಷ ಸಂದರ್ಭಗಳಲ್ಲಿ ಉಡುಗೊರೆ ಕೊಡಲು ಮಾರುಕಟ್ಟೆಯಿಂದ ಖರೀದಿಸಿ ತಂದ ವಸ್ತುಗಳು ನನಗೆ ಇಷ್ಟವಾಗುತ್ತಿರಲಿಲ್ಲ. ನಾನೇ ಕೈಯ್ಯಾರೆ ಏನಾದರೂ ವಿಶೇಷವಾದುದನ್ನು ತಯಾರಿಸಿ ಕೊಡಬೇಕು ಎಂದು ಯೋಚಿಸಿದಾಗ ಈ ವಿಶಿಷ್ಟ ಕಲೆ ಹೊಳೆಯಿತು. ಹಾಗಾಗಿ ಈ ಕಲೆಗೆ ನನ್ನ ತಂದೆಯೇ ಸ್ಫೂರ್ತಿ. ಜತೆಗೆ ತಾಯಿಯ ಬೆಂಬಲ, ಪತಿ ಮನೋಜ್‌ರ ಪ್ರೋತ್ಸಾಹವೂ ಇದೆ' ಎನ್ನುತ್ತಾರೆ ಸುರೇಖಾ.
= ಈರಣ್ಣ ಬೆಂಗಾಲಿ