ಮಹಿಳೆ-ಮನೆ-ಬದುಕು

ಮದರ್‌ಗೆ ಲೆಟರ್

ಅಮ್ಮಾ... ನಿನ್ನ ಕುರಿತು ಏನನ್ನೇ ಬರೆಯಲು ಹೊರಟರೂ ಅಲ್ಲಿಗೆ ಅಪ್ಪ ಬಂದು ಎದುರು ನಿಲ್ತಾರೆ. ನಿನ್ನ- ಅಪ್ಪನ ನಡುವೆ ನಾನು. ನಿಮ್ಮಿಬ್ಬರ ನಡುವಿನ ಅಂತರ, ಅಪ್ಪನ ಕ್ರಿಯೆಗೆ ನೀನು ನೀಡುವ ಪ್ರತಿಕ್ರಿಯೆ ಸದಾ ಕಣ್ಮುಂದೆ ಬಂದು ಬರಲಾರಂಭಿಸುತ್ತದೆ.
ಆದರ್ಶವಾದಿಗಳಲ್ಲದಿದ್ದರೂ ಆದರ್ಶವಾದಿಗಳಂತೆ ಆಗಾಗ ವರ್ತಿಸುವ ನಮ್ಮಿಬ್ಬರ ಜತೆ ನೀನು ಏಗುವ ಪರಿ ಥರಾವರಿ. ಜಗದ ಜನರ ಮೈಮನದಲ್ಲಿ ತುಂಬಿರುವ ಕೊಳಕು ನಮ್ಮಲ್ಲೂ ಇದೆ ಎನ್ನುವ ವಾಸ್ತವ ಬದಿಗಿಟ್ಟು, ನಾನು ಮತ್ತು ಅಪ್ಪ ನಿನ್ನ ಮೇಲೆ ಸಿಟ್ಟು ಮಾಡಿಕೊಳ್ಳುವುದು ನನಗೇ ಸರಿ ಎಂದೆನಿಸುವುದಿಲ್ಲ.
ನಿನ್ನ ಪುಟ್ಟ ಪ್ರಪಂಚ ಹಾಗೂ ಅಪ್ಪನ ವಿಶಾಲ ಪ್ರಪಂಚ ಎರಡನ್ನೂ ಕಂಡಿರುವ ನನಗೆ ನಿನ್ನ ಜಗದಲ್ಲಿರುವ ಜೀವಂತಿಕೆಯ ಜತೆ ಜೀಕುವುದು ಹೆಚ್ಚು ಖುಷಿ ಕೊಡುತ್ತದೆ. ನಿನ್ನ ಪ್ರಪಂಚದಲ್ಲಿರುವ ಪಾತ್ರಗಳು ಮನೆ, ಮಕ್ಕಳು ಮತ್ತು ಸಂಸಾರದ ಕುರಿತು ಹರಟುತ್ತವೆ. ಇಲ್ಲೆಲ್ಲೋ ಕುಳಿತು ಯಾರದೋ ಮನೆಯಲ್ಲಿ ನಡೆದ ಪ್ರಸಂಗದ ಕುರಿತು ತಾಸುಗಟ್ಟಲೆ ಮಾತಾಡುವ ನಿನ್ನ ಜಗದ ಪಾತ್ರಗಳ ಮೇಲೆ ನನಗೆ ತುಸು ಅಸಮಾಧಾನವಿದ್ದರೂ, ಅಪ್ಪನ ಪ್ರಪಂಚದಲ್ಲಿರುವ ವ್ಯಕ್ತಿತ್ವಗಳಿಗೆ ಹೋಲಿಸಿದರೆ ಇವು ಎಷ್ಟೋ ವಾಸಿ ಎಂದು ನಿಟ್ಟುಸಿರು ಬಿಡುತ್ತೇನೆ.
ನಿನ್ನಲ್ಲಿರುವ ಸಣ್ಣತನ, ಆಸೆ, ಹತಾಶೆ ಹಾಗೂ ಖಾಲಿಯಾಗದ ಮಮತೆಯ ಒರತೆ ಜಗದ ಎಲ್ಲ ಅಮ್ಮಂದಿರ ಅಂತರಂಗದಲ್ಲೂ ಇರುವಂಥದ್ದೇ. ನಿನ್ನ ಸಣ್ಣತನದೆಡೆಗೆ ಬೊಟ್ಟು ಮಾಡಿ ದೂಷಿಸುವ ನನ್ನ ಹಾಗೂ ಅಪ್ಪನ ಖಯಾಲಿಯೂ ಒಂದು ಕಾಯಿಲೆ ಎನ್ನುವ ಗುಮಾನಿ ನನ್ನನ್ನು ಆಗಾಗ ಕಾಡುವುದುಂಟು.
ಈ ಮಾಡರ್ನ್ ಮಮ್ಮಿಗಳು ತಮ್ಮ ಮಕ್ಕಳ ಚಟುವಟಿಕೆಗಳ ಮೇಲೆ ನಿರ್ಬಂಧ ವಿಧಿಸುವುದನ್ನು ಕಂಡಾಗಲೆಲ್ಲ ನೀನು ಹಿಂದುಳಿದವಳ ಹಣೆಪಟ್ಟಿ ಹೊತ್ತಿದ್ದು ಒಳಿತೇ ಆಯಿತು ಅಂದುಕೊಳ್ಳುತ್ತೇನೆ. ಏಳನೇ ಕ್ಲಾಸ್‌ನಲ್ಲಿ ಡುಮ್ಕಿ ಹೊಡೆದಿರುವ ನೀನು ಮರಿ ಮಿಸ್ಸಾಗಿ ಮಗ್ಗಿ ಕಲಿಸಿದ್ದು, ಕಂಠಪಾಠ ಮಾಡಿ ಕಲಿತ ಇಂಗ್ಲಿಷ್ ಪದ್ಯ ಒಪ್ಪಿಸುವಾಗ, ಇಂಗ್ಲಿಷ್ ಓದಲು ಬಾರದಿದ್ದರೂ ಇಂಗ್ಲಿಷ್ ಬರುವಂತೆ ಪೋಸು ಕೊಡುತ್ತ ಪುಸ್ತಕದ ಮೇಲೆ ಕಣ್ಣಾಯಿಸುತ್ತ ಸರಿಯಾಗಿ ಪದ್ಯ ಹೇಳುತ್ತಿದ್ದೀನೋ ಇಲ್ವೋ ಅಂತ ಪರೀಕ್ಷಿಸುವಂತೆ ನಟಿಸುತ್ತಿದ್ದ ಕ್ಷಣಗಳನ್ನು ನೆನೆದರೆ ಈಗಲೂ ನಗು ಬರುತ್ತೆ.
ಟೆಸ್ಟ್‌ನಲ್ಲಿ ಮಾರ್ಕ್ಸ್ ಕಡಿಮೆ ತೆಗೆದು, ನಿನ್ನೆದುರು ಮಾರ್ಕ್ಸ್‌ಕಾರ್ಡ್ ಹಿಡಿದು ನಿಲ್ಲುವಾಗ ಆಗುತ್ತಿದ್ದ ಭಯ, ಮೆಚ್ಚಿಕೊಂಡ ಹುಡುಗಿಗೆ ಮೊದಲ ಪ್ರೇಮಪತ್ರ ನೀಡುವಾಗ ಆದ ಭಯಕ್ಕೆ ಸರಿಸಮಾನವಾದುದು.
ಅಪ್ಪನ ಜಗತ್ತಿನಲ್ಲಿ ವಾಸ್ತವವಿದ್ದರೂ ಅಷ್ಟೇ ಬೂಟಾಟಿಕೆಯೂ ಇದೆ. ನಿನ್ನ ಜಗದಲ್ಲಿ ಅಸೂಯೆ ಇದೆಯಾದರೂ ಅದರಾಚೆಗೆ ಅಮೂರ್ತ ಮುಗ್ಧತೆಯ ಕಂಪಿದೆ. ಅಪ್ಪ ಹಾಗೂ ಅಪ್ಪನ ಜಗತ್ತಿನವನೆಂದು ಗುರುತಿಸಿಕೊಂಡ ನನ್ನಲ್ಲಿ ನಾವು ತಿಳಿದುಕೊಂಡವರೆಂಬ ಭ್ರಮೆ ಇದೆ. ಆಗಾಗ್ಗೆ ನೀನು ನಮ್ಮೆಡೆಗೆ ತೂರಿಬಿಡುವ ಪ್ರಶ್ನೆಗಳಿಗೆ ಉತ್ತರಿಸಲಾಗದೆ ನಿರುತ್ತರನಾದಾಗಲೆಲ್ಲ ನಮ್ಮ ಅಹಂ ಕರಗಲಾರಂಭಿಸುತ್ತದೆ. ಆದರೂ ಅದನ್ನು ತೋರಿಸಿಕೊಳ್ಳದೇ ಮತ್ತೆ ಬಾಲ ಬಿಚ್ಚುವ ನಮ್ಮ ಚಾಳಿಯ ಬಗ್ಗೆ ನಿನ್ನಷ್ಟು ಬೇರ್ಯಾರೂ ತಿಳಿದುಕೊಂಡಿರಲು ಸಾಧ್ಯವೇ ಇಲ್ಲ ಬಿಡು. ನಾನು ಅಪ್ಪನ ಜಗತ್ತಿನ ಜೀವಿಯಾದರೂ ನಿನ್ನ ಬಳಿ ಇರುವಷ್ಟು ಸಲುಗೆಯಿಂದ ಅಪ್ಪನ ಬಳಿ ಇರಲಾರೆ. ನನ್ನ ತಿಕ್ಕಲು, ತುಂಟ, ತರ್ಲೆ ಪ್ರಶ್ನೆಗಳಿಗೆ ನೀನು ಪ್ರತಿಕ್ರಿಯಿಸುವ ಪರಿ ನನಗೆ ಅಚ್ಚುಮೆಚ್ಚು.
'ರಾಣಿ ಮುಖರ್ಜಿನಾ ಮದುವೆಯಾಗೋಣ ಅಂತಿದ್ದೀನಿ, ನನ್ನ ಸುತ್ತ ಬರೀ ಕ್ರಾಂತಿಕಾರಿಗಳೇ(ಪ್ರೇಮ ಕ್ರಾಂತಿ) ತುಂಬಿಕೊಂಡಿದ್ದಾರೆ. ಹಿಂಗೇ ಆದ್ರೆ ನಾನೂ ಕ್ರಾಂತಿ ಮಾಡೋ ಚಾನ್ಸು ಜಾಸ್ತಿ ಇದೆ, ನನ್ನ ಗರ್ಲ್‌ಫ್ರೆಂಡು ಫೋನ್ ಮಾಡವ್ಳೆ. ಈಗ ನಮ್ಮ ಮನೆಗೆ ಬರ್ತಾಳಂತೆ' ಅಂತಂದಾಗ ನೀನು ಕೊಟ್ಟ ರೆಸ್ಪಾನ್ಸ್... ಇದು ಅಪ್ಪಟ ನಾನ್ಸೆನ್ಸ್...
ಮೊದಲ ಬಾರಿಗೆ ನಾನು ನನ್ನ ಕ್ಲಾಸ್‌ಮೇಟ್ ಒಬ್ಬಳನ್ನು ಮನೆಗೆ ಕರೆದುಕೊಂಡು ಬಂದಾಗ ನೀನು ಏನಂತೀಯೋ ಅನ್ನೋ ಆತಂಕವಿತ್ತು. ಅದಕ್ಕೂ ಮುನ್ನ ನೀನಾಡಿದ್ದ ಮಾತು ಇದಕ್ಕೆ ಕಾರಣ. 'ಹಂಗೇನಾದ್ರೂ ಯಾವಳನ್ನಾದ್ರೂ ಮನೆಗೆ ಕರ್ಕೊಂಡು ಬಂದ್ರೆ ಒಳಗೆ ಸೇರ್ಸಲ್ಲ' ಅಂತ ಧಮಕಿ ಹಾಕಿದ್ದ ನೀನು, ಅವಳು ನಿನ್ನೆದುರು ಬಂದು ನಿಂತಾಗ ನಗುತ್ತ ಬರಮಾಡಿಕೊಂಡೆ. ಬಾಯಿಗೆ ಬಿಡುವು ನೀಡದೇ ವಟಗುಡುವ ಅವಳಿಗೆ ಪಟಾಕಿ ಎಂದು ನಾಮಕರಣ ಮಾಡಿದೆ.
ನೀನು ಮನಸ್ಸಿಗೆ ತುಂಬಾ ಬೇಜಾರಾದಾಗ ಬಿಕ್ಕಿ ಬಿಕ್ಕಿ ಅಳುತ್ತೀಯ. ಆ ಅಳು ನನಗೂ ಬಳುವಳಿಯಾಗಿ ಬಂದು ಬಿಟ್ಟಿದೆ. ಒಮ್ಮೊಮ್ಮೆ ಇಬ್ಬರೂ ಜತೆಯಲ್ಲಿ ಕೂತು ಬಿಕ್ಕಿ ಬಿಕ್ಕಿ ಅತ್ತಿದ್ದೂ ಉಂಟು. ನೀನಲ್ಲದೇ ಇನ್ನ್ಯಾರೊಂದಿಗೂ ಹಾಗೆ ಕುಳಿತು ನಾ ಅತ್ತು ಹಗುರಾಗಲಾರೆ... ಅಕಾರಣವಾಗಿ ನಿನ್ನೊಂದಿಗೆ ನಕ್ಕಂತೆ ಮತ್ತ್ಯಾರೊಂದಿಗೂ ನಗಲಾರೆ. ನಿನ್ನ ಮೇಲೆ ತುಸು ಅಸಮಾಧಾನವಿದೆ. ಅದರಾಚೆಗೆ ಪದದ ಹಂಗು ತೊಡಿಸಿ ಆಡಲಾರದಷ್ಟು ಪ್ರೀತಿಯಿದೆ ಅಮ್ಮಾ...
ಇಂತಿ,
ನಿನ್ನ ಪ್ರೀತಿಯ ಮಗ



-ಎಚ್.ಕೆ. ಶರತ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!