ಆಧುನಿಕ ಹೆಂಗಸರು ಅತ್ಯಂತ ದ್ವೇಷಿಸುವ ಸಂಗತಿ ಯಾವುದು? ಅಡುಗೆ ಮಾಡೋದು? ಊಹುಂ. ಬೆಳಗ್ಗೆ ಮನೆಗೆಲಸ ಮಾಡಿಟ್ಟು ಆಫೀಸಿಗೆ ಹೋಗೋದು? ಅಲ್ಲ. ಸಿಟಿಬಸ್ ಪ್ರಯಾಣ? ನೋ ನೋ. ಕಸ ಗುಡಿಸೋದು? ಅಲ್ಲಾ ಕಣ್ರೀ. ಗಂಡ? ಯಾವಾಗ್ಲೂ ಅಲ್ಲ, ಒಮ್ಮೊಮ್ಮೆ ಮಾತ್ರ! ಹಾಗಾದರೆ ಮತ್ತೇನು? ಕಾಲಿನ ರೋಮ ತೆಗೆದು ಕ್ಲೀನ್ ಮಾಡುವುದು!
ಹೌದು, 21ನೇ ಶತಮಾನದ ಹುಡುಗಿಯರು ಅತಿ ಹೆಚ್ಚು ಹೇಟ್ ಮಾಡುವ ಕೆಲಸ ಇದು. ಆಧುನಿಕ ಮೇಕಪ್ನ ಒಂದು ಭಾಗವಾದ ಲೆಗ್ ಶೇವಿಂಗ್ ಅಂದರೆ ಎಲ್ಲರೂ ಮೂಗು ಮುರಿಯುವವರೇ. ವಾರಕ್ಕೊಮ್ಮೆ, ಹದಿನೈದು ದಿನಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಮಾಡುವ ಈ 'ಪಾದಕ್ಷೌರ' ಯಾರಿಗೂ ಇಷ್ಟವಿಲ್ಲ, ಆದರೆ ಇಂದಿನ ಅನಿವಾರ್ಯ ಕರ್ಮವಿದು.
ಚಳಿಗಾಲದಲ್ಲಿ ಈ ಕೆಲಸಕ್ಕೆ ಕೊಂಚ ಬಿಡುವು. ಏಕೆಂದರೆ ಎಲ್ಲರೂ ಮೈತುಂಬ ಬಟ್ಟೆ ತೊಡುತ್ತಾರೆ. ಪಾಶ್ಚಾತ್ಯ ದೇಶಗಳಲ್ಲಂತೂ ಈ ಅವಧಿಯಲ್ಲಿ ಕಾಲ್ಬೆರಳು ಕೂಡ ಹೊರಗಿಣುಕುವುದಿಲ್ಲ. ಅಷ್ಟು ಚಳಿಇರುತ್ತದೆ. ಮಳೆಗಾಲದಲ್ಲೂ ತಕ್ಕಮಟ್ಟಿಗೆ ಇದಕ್ಕೆ ರಜೆಯೇ. ಆದರೆ, ಬೇಸಿಗೆಯಲ್ಲಿ ಮಾತ್ರ ಇದು ಕಾಲಕಾಲಕ್ಕೆ ನಡೆಯಲೇಬೇಕು.
ಒಂದು ಸಮೀಕ್ಷೆಯ ಪ್ರಕಾರ ಶೇ.35ರಷ್ಟು ಮಹಿಳೆಯರು ಲೆಗ್ ಶೇವ್ ಮಾಡುವುದನ್ನು ಭಯಂಕರವಾಗಿ ದ್ವೇಷಿಸುತ್ತಾರೆ. ಮಜಾ ಏನು ಅಂದರೆ, ಕಾಲಿನ ರೋಮ ತೆಗೆಯುವ ಮಹಿಳೆಯರ ಪ್ರಮಾಣವೂ ಹೆಚ್ಚುಕಮ್ಮಿ ಇಷ್ಟೇ ಇದೆ. ಎಲ್ಲರಿಗೂ ಇದನ್ನು ಮಾಡುವ ಅಗತ್ಯ ಬೀಳುವುದಿಲ್ಲ. ಇನ್ನೂ ಮಜಾ ಏನು ಅಂದರೆ, ಹೀಗೆ ಲೆಗ್ಶೇವ್ ಮಾಡುವುದರಲ್ಲಿ ಒಬ್ಬಳು ಮಹಿಳೆ ತನ್ನ ಜೀವಮಾನದಲ್ಲಿ ಎರಡು ತಿಂಗಳನ್ನೇ ಕಳೆದಿರುತ್ತಾಳೆ.
ಅಮೆರಿಕ, ಫ್ರಾನ್ಸ್, ಬ್ರಿಟನ್ನಿನ ಮಹಿಳೆಯರಲ್ಲಂತೂ ಇದು ಇನ್ನೂ ಹೆಚ್ಚು. ನುಣುಪು ಕಾಲು ಆಧುನಿಕ ಹೆಂಗೆಳೆಯರ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಹಾಗೆ ನೋಡಿದರೆ ಈಗಿನ ಕಾಲವೇ 'ರೋಮವಿರೋಧಿ.' 'ರೋಮ'ನ್ ಸಾಮ್ರಾಜ್ಯ ಅಳಿದು ಬಹಳ ವರ್ಷವಾಯಿತು! ಗಂಡಸರ ಮೈಮೇಲೂ ಇಂದು ಕೂದಲಿರುವಂತಿಲ್ಲ. ತಲೆ, ಹುಬ್ಬು ಹಾಗೂ ಕಣ್ರೆಪ್ಪೆ ಬಿಟ್ಟರೆ ಇನ್ನೆಲ್ಲ ಭಾಗ ನುಣುಪಾಗಿರುವ ದೇಹವನ್ನೇ ಟೀವಿ ಜಾಹೀರಾತುಗಳು ಅತ್ಯುತ್ತಮ ದೇಹ ಎಂಬಂತೆ ತೋರಿಸಿ ತೋರಿಸಿ ಇವತ್ತು ಎಲ್ಲರೂ ಕೂದಲನ್ನು ದ್ವೇಷಿಸುವಂತೆ ಮಾಡಿವೆ. ಹಾಗಾಗಿ ಮೈ-ಕೈಗೆಲ್ಲ ವ್ಯಾಕ್ಸಿಂಗ್ ಮಾಡಿಸಿಕೊಳ್ಳುವುದು ಅಥವಾ ಹೇರ್ ರಿಮೂವರ್ ಕ್ರೀಂ ಹಾಕಿ ಇಡೀ ದೇಹವನ್ನು ನೈಸ್ ರಸ್ತೆಯಂತೆ ಮಾಡಿಕೊಳ್ಳುವುದು ಈಗಾಗಲೇ ರಕ್ತಗತವಾಗಿರುವ ಫ್ಯಾಷನ್ನು.
ಹೀಗೆ ಎಲ್ಲರೂ 'ಆ್ಯಂಟಿ ಹೇರ್' ಆಂದೋಲನದಲ್ಲಿ ಮುಳುಗಿರುವಾಗ 'ಆಂಟಿ'ಯರು ಮಾತ್ರ ಇದರಿಂದ ಹೊರಗಿರಲು ಸಾಧ್ಯವೇ? ಅವರೂ ತಮ್ಮ ಕಾಲು ನುಣುಪಾಗಿರಬೇಕೆಂದು ಸಹಜವಾಗಿಯೇ ಬಯಸುತ್ತಿದ್ದಾರೆ. ಮಿನಿ ಸ್ಕರ್ಟ್ ಹಾಕಿಕೊಂಡು ನಿಂತವಳ ಕಾಲು ನುಣುಪು ಕಂಬದಂತೆ ಫಳಫಳ ಹೊಳೆದರೆ ಮಾತ್ರ ಅದಕ್ಕೆ ಬೆಲೆ. ಹಾಗಾಗಿಯೇ ಕಾಲಿನ ಮೇಲೆ ಯಾರಿಗೂ ಕೂದಲು ಬೇಡ. ಅದಿದ್ದರೆ ಒಂಥರಾ ಗಲೀಜು ಎಂಬಂತೆ ನೋಡಲಾಗುತ್ತದೆ. ಯಾವಾಗಲೂ ಸೀರೆ ಉಡುವ, ಚೂಡಿದಾರ್ ಹಾಕುವ ಅಥವಾ ಜೀನ್ಸ್ ತೊಡುವ ಮಧ್ಯಮ ವರ್ಗದ ಹುಡುಗಿಯರಲ್ಲಿ ಈ 'ಕಾಲ್ಕೆರೆತ' ಅಷ್ಟಾಗಿ ಬಳಕೆಯಲ್ಲಿಲ್ಲ. ತ್ರೀಫೋರ್ಥ್ ಹಾಕುವ, ಜೀನ್ಸ್ ಚಡ್ಡಿ ತೊಡುವ, ಮಿನಿಸ್ಕರ್ಟ್ ಧರಿಸುವ ಅಥವಾ ಬೀಚ್ನಲ್ಲಿ ಬಿಕಿನಿಯಲ್ಲಿ ಓಡಾಡುವಷ್ಟು ಮಾಡ್ ಆಗಿರುವ ಮೇಲ್ಮಧ್ಯಮ ಹಾಗೂ ಶ್ರೀಮಂತ ವರ್ಗದಲ್ಲಿ ಕಾಲಿನ ಮೇಲೆ ನೀರ ಹನಿ ಬಿದ್ದರೆ ಅದು ಪಟ್ ಎಂದು ಜಾರಿಬೀಳಬೇಕು, ಅಷ್ಟು ನೈಸಾಗಿರಬೇಕು! ಇವತ್ತು ಮೀಸೆ ಹೊತ್ತ ಗಂಡಸಿಗೇ ಬೆಲೆಯಿಲ್ಲ, ಇನ್ನು ತೋಳು, ಕಾಲಿನ ಮೇಲೆ ರೋಮವಿರುವ ಹೆಂಗೆಳೆಯರಿಗೆ ಬೆಲೆ ಕೊಡುತ್ತಾರೆಯೇ? ಆಗಾಗ ಲೆಗ್ ಶೇವ್ ಮಾಡುವವರಿಗೆ ಈ ಕೆಲಸಕ್ಕೆ ಹೆಚ್ಚು ಹೊತ್ತೇನೂ ಬೇಡ. ಕೇವಲ 5 ನಿಮಿಷ ಸಾಕು. ಆದರೂ ಇದು ಅವರಿಗೆ ಬಹಳ ಕಿರಿಕಿರಿ ಉಂಟುಮಾಡುವ ಕೆಲಸ ಎಂಬುದು ಮಾತ್ರ ನಿಜ.
ಹೆಂಗಸರು ಹೆಚ್ಚು ದ್ವೇಷಿಸುವ ಎರಡನೇ ಕೆಲಸ ಯಾವುದು ಗೊತ್ತಾ? ಹೇರ್ಸ್ಟೈಲಿಂಗ್. ಅಂದರೆ ಜಡೆ ಹೆಣೆದುಕೊಳ್ಳುವುದಲ್ಲ. ಜಡೆಯ ಕಾಲ ಹೋಯಿತು ಬಿಡಿ. ಬಿಚ್ಚಿ ಹರಡಿಕೊಳ್ಳುವ ಕೂದಲಿಗೆ ಪ್ರತಿದಿನ ಒಂದು ಶೇಪ್ ಕೊಟ್ಟು ಮನೆಯಿಂದ ಹೊರಬೀಳಬೇಕಲ್ಲ, ಆ ಹದಿನೈದು ನಿಮಿಷವನ್ನು ಹುಡುಗಿಯರು ಬಹಳ ಹೇಟ್ ಮಾಡುತ್ತಾರೆ. ದಿನಕ್ಕೆ ಹದಿನೈದು ನಿಮಿಷದಂತೆ ತೆಗೆದುಕೊಂಡರೂ ಅವರ ಜೀವಮಾನದಲ್ಲಿ ಹೆಚ್ಚುಕಮ್ಮಿ 270 ದಿನ ಇದಕ್ಕಾಗಿ ಖರ್ಚಾಗಿರುತ್ತದೆ!
ಮೂರನೇ ಅತಿ ಹೆಚ್ಚು ದ್ವೇಷಿಸುವ ಕೆಲಸ ಹುಬ್ಬು ಕೀಳುವುದು. ಇದಕ್ಕೆ ವರ್ಷಕ್ಕೆ 11 ತಾಸು ಹಿಡಿಯುತ್ತದೆ.
ನಂತರದ ಸ್ಥಾನ ಮೇಕಪ್ ತೆಗೆಯುವುದಕ್ಕೆ. ಇದೇನೂ ಸುಲಭದ ಕೆಲಸವಲ್ಲ. ಸಾಕಷ್ಟು ಕಿರಿಕಿರಿ ಉಂಟುಮಾಡುತ್ತದೆ. ಆದರೆ ಬಳಿದುಕೊಂಡ ಮೇಕಪ್ ತೆಗೆಯದೆ ಇರುವಂತಿಲ್ಲ. ತೆಗೆಯದಿದ್ದರೆ ಮೊದಲನೆಯದಾಗಿ, ನಿದ್ದೆ ಬರುವುದು ಕಷ್ಟ. ಎರಡನೆಯದಾಗಿ, ಚರ್ಮ ಹಾಳಾಗುತ್ತದೆ.
ಹಿಂದಿನ ಕಾಲದಲ್ಲಿ ಅಲಂಕಾರ ಮಾಡಿಕೊಳ್ಳುವುದು ಹೆಣ್ಣಿಗೆ ಒಂದು ಸಂಭ್ರಮವಾಗಿತ್ತು. ಆಗ ಅದೊಂದು 'ಶೃಂಗಾರ ಕಾವ್ಯ.' ಮೈ ಕೈಗೆ ಅರಿಶಿಣ-ಚಂದನ ಬಳಿದುಕೊಳ್ಳುವ ಪೌರಾಣಿಕ ಯುಗದಿಂದ ಹಿಡಿದು ಮುಖಕ್ಕೆ ಸ್ನೋ-ಪೌಡರ್ ಮಾತ್ರ ಬಳಿದುಕೊಂಡು, ಹಣೆಗೆ ಕಾಸಗಲ ಕುಂಕುಮವಿಟ್ಟು, ತುಟಿಗೆ ಕಂಡೂ ಕಾಣದಂತೆ ಬಣ್ಣ ಹಚ್ಚಿಕೊಳ್ಳುತ್ತಿದ್ದ 50 ವರ್ಷದ ಹಿಂದಿನವರೆಗೆ ಅಲಂಕಾರವೆಂದರೆ ಎಲ್ಲ ಸ್ತ್ರೀಯರಿಗೂ ಖುಷಿಯ ಕೆಲಸವೇ ಆಗಿತ್ತು. ಇಂದು ಪರಿಸ್ಥಿತಿ ಬದಲಾಗಿದೆ. ಹೊರಗೆ ಸೆಕ್ಸಿಯಾಗಿ ಕಾಣಬೇಕೆಂಬ ಏಕೈಕ ಉದ್ದೇಶ ಅಲಂಕಾರಕ್ಕೆ ಪ್ರಾಪ್ತವಾಗಿದೆ. ಆದ್ದರಿಂದಲೇ ಅದನ್ನು ಬಿಡುವಂತಿಲ್ಲ. ಕಾಲಕಾಲಕ್ಕೆ ಏನೇನು ಮಾಡಿಕೊಳ್ಳಬೇಕೋ ಅದನ್ನು ಮಾಡಿಕೊಳ್ಳದಿದ್ದರೆ ಮನಸ್ಸಿಗೆ ನೆಮ್ಮದಿಯಿಲ್ಲ; ಆದರಿಂದ ಇಂದು ಅಲಂಕಾರವೂ ಕಾಟಾಚಾರದ ಕೆಲಸ! ಇಷ್ಟೆಲ್ಲಾ ಆದರೂ ಯಾಕೆ ಅಷ್ಟೆಲ್ಲಾ ಅಲಂಕಾರ ಮಾಡಿಕೊಳ್ಳುತ್ತೀರಿ ಎಂದು ಹುಡುಗಿಯರನ್ನು ಕೇಳಿನೋಡಿ. 'ಎಲ್ಲರೂ ಮಾಡಿಕೊಳ್ತಾರೆ. ನಾನೊಬ್ಬಳು ಬಿಚ್ಚೋಲೆ ಗೌರಮ್ಮನ ಥರ ಹೋಗೋಕಾಗುತ್ತಾ?' ಎಂಬ ಉತ್ತರ ರೆಡಿಯಾಗಿರುತ್ತದೆ.
ಯಾವುದಕ್ಕೆ ಎಷ್ಟು ದಿನ ಖರ್ಚು?
ಲೆಗ್ ಶೇವಿಂಗ್ - ಬದುಕಿನ 72 ದಿನ
ಕೂದಲು ಬಾಚುವುದು - ಬದುಕಿನ 270 ದಿನ
ಐ ಬ್ರೋ ಮಾಡಿಕೊಳ್ಳುವುದು - ಬದುಕಿನ 30 ದಿನ
ಮೇಕಪ್ ತೆಗೆಯುವುದು - ಬದುಕಿನ 52 ದಿನ
ಹೇರ್ ಡೈ ಮಾಡುವುದು - ಬದುಕಿನ 23 ದಿನ
ನೇಲ್ಪಾಲಿಶ್ ಹಚ್ಚುವುದು - ಬದುಕಿನ 20 ದಿನ
ಪೆಡಿಕ್ಯೂರ್ ಮಾಡಿಕೊಳ್ಳುವುದು - ಬದುಕಿನ 12 ದಿನ
-ತ್ರಿಕಾಲಜ್ಞಾನಿ