ಕೆಫಿನ್ ಆರೋಗ್ಯಕ್ಕೆ ಅಪಾಯಕಾರಿ ಎಂಬುದು ಎಲ್ಲರಿಗೂ ಗೊತ್ತಿರೋ ಸತ್ಯವೇ. ಈ ಕೆಫಿನ್ ಅಂಶ ಕಾಫಿಯಲ್ಲಿ ಹೇರಳವಾಗಿರುವುದರಿಂದ ಹೆಚ್ಚು ಕಾಫಿ ಸೇವನೆ ಸಲ್ಲದು ಎಂಬುದು ವೈದ್ಯರ ಸಲಹೆ. ಆದರೆ ವಿಷವೇ ವಿಷಕ್ಕೆ ಮದ್ದಾಗುವಂತೆ ಈ ಕೆಫಿನ್ ಅಂಶವೇ ಮನುಷ್ಯನ ಕೆಲವೊಂದು ಅನಾರೋಗ್ಯಕ್ಕೆ ರಾಮಬಾಣ ಆಗಬಲ್ಲುದಂತೆ. ಕಾಫಿಯ ಕೆಫಿನ್ ಬೊಕ್ಕತಲೆಯವರಿಗೆ ಸಂಜೀವಿನಿಯಾಗಬಲ್ಲದು.
ಅಷ್ಟೇ ಅಲ್ಲ, ಮನುಷ್ಯನ ದಣಿವನ್ನು ನಿವಾರಿಸಿ ಮಾಂಸ ಖಂಡಗಳಿಗೆ ನವಚೈತನ್ಯವನ್ನೂ ನೀಡಬಲ್ಲದು. ಜರ್ಮನಿಯ ಜೇನಾ ವಿವಿ ಸಂಶೋಧಕ ಟೋಬಿಯಸ್ ಪಿಶರ್, ಕೂದಲುದುರುತ್ತಿರುವ 14 ಮಂದಿ ಹೇರ್ ಫಾಲಿಕಲ್ಸ್ಗಳನ್ನು ತೆಗೆದು ಅದನ್ನು ಕೆಫಿನ್ನ ವಿಭಿನ್ನಸ್ತರದ ಮಿಶ್ರಣದ ಟೆಸ್ಟ್ಟ್ಯೂಬ್ನಲ್ಲಿ ಎಂಟು ದಿನಗಳವರೆಗೆ ಇಟ್ಟರಂತೆ. ನಂತರ ಪರಿಣಾಮ ನೋಡಿದಾಗ ಕೂದಲ ಬೆಳವಣಿಗೆಯಲ್ಲಿ ಶೇ.33-40ರಷ್ಟು ವೃದ್ಧಿಸಿತ್ತಂತೆ.
ಕೂದಲ ಕೋಶಿಕೆಗಳನ್ನು ಕೆಫಿನ್ ಪ್ರಭಾವಿತಗೊಳಿಸುತ್ತದೆ ಎಂಬುದು ವಿಜ್ಞಾನಿಗಳ ಅಭಿಪ್ರಾಯ. ಅದು ಡೈ ಹೈಡ್ರೊಟೆರಾನ್ನ ಘಾತಕ ಪರಿಣಾಮಗಳನ್ನೂ ಎದುರಿಸಬಲ್ಲದು. ಮನುಷ್ಯರ ಕೂದಲು ಉದುರುವ ಸಮಸ್ಯೆಗೆ ಈ ಡೈ ಹೈಡ್ರೊಟೆರಾನ್ ರಸಾಯನದ ಶ್ರವಣವೇ ಕಾರಣವಾಗಿರುತ್ತದೆ. ವಿಶೇಷವಾಗಿ ಬೊಕ್ಕತ್ತಲೆಯ ಸಮಸ್ಯೆ ತರುವುದು ಡಿಎಚ್ಟಿ ಎಂಬ ರಾಸಾಯನಿಕ ಅಂಶ. ಕೆಫಿನ್ನೊಂದಿಗೆ ಹೇರ್ಫಾಲಿಕಲ್ಸ್ನ ಪರೀಕ್ಷೆ ಸಾಕಷ್ಟು ಯಶಸ್ವಿಯಾಗಿದೆ ಎಂಬುದು ಸಂಶೋಧಕರ ಅಭಿಪ್ರಾಯ.
ನೋವು ಶಮನ ಮುಂಜಾನೆ ನಿದ್ದೆಯಿಂದೆದ್ದಾಗ, ಕೆಲಸ ಮಾಡಿ ದಣಿದಾಗ, ವ್ಯಾಯಾಮ ಮಾಡಿ ಆಯಾಸವಾದಾಗ... ಹೀಗೆ ದಿನದಲ್ಲಿ ಐದಾರು ಬಾರಿ ಕಾಫಿ ಕುಡಿದು ನವಚೈತನ್ಯ ಪಡೆಯುತ್ತಾರೆ. ಸಂಶೋಧಕರೂ ಇದನ್ನೂ ದೃಢೀಕರಿಸಿದ್ದಾರೆ. ದಣಿದ ಶರೀರದ ಮಾಂಸಖಂಡಗಳ ನೋವು ನಿವಾರಣೆಗೆ ಕಾಫಿ ಕುಡಿಯುವುದರಿಂದ ಪರಿಹಾರ ಕಂಡುಕೊಳ್ಳಬಹುದು ಎಂದಿದ್ದಾರೆ.
ವ್ಯಾಯಾಮಕ್ಕೂ ಮುನ್ನ ಒಂದು ಕಫ್ ಕಾಫಿ ಕುಡಿದು ಆರಂಭಿಸಿದರೆ ಆಯಾಸ ಕಮ್ಮಿ ಆಗುತ್ತದಂತೆ. ಬಹಳಷ್ಟು ಕೆಲಸ ಮಾಡಿ ಮೈ ಕೈಗಳಲ್ಲಿ ನೋವುಂಟಾಗಿದ್ದರೆ ಅಥವಾ ತುಂಬಾ ವ್ಯಾಯಾಮ ಮಾಡಿ ದಣಿದಿದ್ದರೆ ಒಂದು ಕಫ್ ಕಾಫಿ ಕುಡಿದರೆ ಸಾಕು. ಕೆಫಿನ್ ದಣಿದ ಮಾಂಸ ಖಂಡಗಳಿಗೆ ಹೊಸ ಚೈತನ್ಯ ತರುತ್ತದೆ.
ಕಾಫಿ ಕುಡಿಯದವರು ಕೆಫಿನ್ಯುಕ್ತ ಇನ್ನಿತರ ಪೇಯಗಳನ್ನು ಕುಡಿದು, ದೇಹದೊಳಕ್ಕೆ ಕೆಫಿನ್ ಅಂಶವನ್ನು ಸೇರಿಸಿಕೊಳ್ಳಬಹುದು. ಒಟ್ಟಾರೆ ಕಾಫಿ ದೇಹಕ್ಕೆ ನವಚೈತನ್ಯ ನೀಡುವ ಪೇಯ ಎಂಬುದಂತೂ ಖಾತ್ರಿ.