ಮೆರ್ಸೆಸೈಡ್: ಪತಿ ಸಾವಿಗೀಡಾಗಿ ಒಂದು ವರ್ಷ ಕಳೆದಿದೆ. ಆದರೆ ಒಂದು ವರ್ಷದ ನಂತರ ಆತನ ಪತ್ನಿ ಆತನ ಮಗುವಿಗೆ ಜನ್ಮ ನೀಡಿ ಸುದ್ದಿಯಾಗಿದ್ದಾಳೆ. ಇಂಗ್ಲೆಂಡ್‌ನ ಮೆರ್ಸೆಸೈಡ್‌ನ ಜೆನ್ನಿ ಬ್ಲೂಎಟ್ (31) ಎಂಬಾಕೆ ತನ್ನ ಪತಿ ಜಿಂ ಸಾವಿಗೀಡಾಗಿ ಒಂದು ವರ್ಷದ ನಂತರ ಆತನದ್ದೇ ವೀರ್ಯವನ್ನು ಬಳಸಿ ಗರ್ಭ ಧರಿಸಿ, ಗಂಡನ ಆಸೆ ಈಡೇರಿಸಿದ್ದಾರೆ.
ವಿಧಿವಶನವಾಗಿರುವ ಪತಿಯ ಇಚ್ಛೆಯನುಸಾರವಾಗಿ ಜೆನ್ನಿ ಈ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಐವಿಎಫ್ ( In vitro fertilisation ) ಮೂಲಕ ಪತಿಯ ವೀರ್ಯದಿಂದ ಅವಳಿ ಮಕ್ಕಳಿಗೆ ಅಮ್ಮನಾಗಿದ್ದಾಳೆ ಈಕೆ. ಇದರಲ್ಲಿ ಒಂದು ಮಗು 23 ದಿನವಷ್ಟೇ ಬದುಕಿತ್ತು. ಆದರೆ ಈಗ 16 ತಿಂಗಳಾಗಿರುವ ತಮ್ಮ ಪುತ್ರಿ ಪಿಕ್ಸಿ ಜತೆಗೆ ನಾನು ಸಂತಸದಿಂದ ಇದ್ದೇನೆ ಅಂತಾರೆ ಜೆನ್ನಿ.
ತನ್ನ ಮರಣಾನಂತರ ತನ್ನ ಪತ್ನಿ ಒಬ್ಬಂಟಿಯಾಗಿ ಬಿಡುತ್ತಾಳಲ್ಲಾ ಎಂಬ ಆತಂಕ ಜಿಮ್‌ಗೆ ಇತ್ತು. ನಾನು ಮಗುವಿನ ಅಪ್ಪನಾಗಬೇಕೆಂಬ ಆಸೆ ಅವರಿಗಿತ್ತು. ಅವರ ಆಸೆಯನ್ನು ಈಡೇರಿಸುವುದಕ್ಕಾಗಿಯೇ ಐವಿಎಫ್ ಮೂಲಕ ಮಗು ಪಡೆಯುವಂತೆ ಮಾಡಿತು ಅಂತಾರೆ ಶಿಕ್ಷಕಿಯಾಗಿರುವ ಜೆನ್ನಿ. ಪಿಕ್ಸಿ ಜತೆಗೆ ಹುಟ್ಟಿದ ಲಿಲ್ಲಿ ಸಾವನ್ನಪ್ಪಿದ್ದರೂ, ಆ ಮಗು ಸ್ವರ್ಗದಲ್ಲಿ ಜಿಮ್ ಜತೆ ಇರುತ್ತದೆ ಎಂಬ ನಂಬಿಕೆಯಲ್ಲಿ ನಾನಿದ್ದೇನೆ ಎನ್ನುವುದು ಜೆನ್ನಿ ಮಾತು.
ಐರ್‌ಲ್ಯಾಂಡ್‌ನಲ್ಲಿ ರಜಾ ಕಳೆಯಲು ಹೋದಾಗ ಜೆನ್ನಿ, ಜಿಮ್‌ನ್ನು ಭೇಟಿಯಾಗಿದ್ದರು. ಅಲ್ಲಿ ಪ್ರೀತಿ ಮೊಳಕೆಯೊಡೆಯಿತು. ಆಮೇಲೆ ಇಬ್ಬರೂ ಜತೆಯಾಗಿ ವಾಸಿಸಲು ತೊಡಗಿದಾಗ ಜಿಮ್‌ಗೆ ಶ್ವಾಸಕೋಶ ಕ್ಯಾನ್ಸರ್ ಬಂದಿತ್ತು. ಹಲವಾರು ವರ್ಷಗಳ ಕಾಲ ಚಿಕಿತ್ಸೆ ನಡೆಸಿದರೂ ಕ್ಯಾನ್ಸರ್ ನಿಂದ ಮುಕ್ತವಾಗಲು ಸಾಧ್ಯವಾಗಲಿಲ್ಲ. ಈ ನಡುವೆ 2011 ಡಿಸೆಂಬರ್ 23ರಂದು ಇವರಿಬ್ಬರೂ ವಿವಾಹವಾದರು.
ವಿವಾಹವಾಗಿ ಒಂದು ವರ್ಷ ಅಂದರೆ 2012 ಫೆಬ್ರವರಿಯಲ್ಲಿ ಜಿಮ್ ಮರಣ ಹೊಂದಿದ. ಸಾವಿಗೆ ಮುನ್ನ ಮಕ್ಕಳು ಬೇಕು ಎಂದು ಜಿಮ್ ಆಗ್ರಹಿಸಿದ್ದರು. ಅದು ಸಾಧ್ಯವಾಗದೇ ಇದ್ದಾಗ ಆತನ ವೀರ್ಯಾಣುವನ್ನು ಸಂಗ್ರಹಿಸಿಡಲಾಗಿತ್ತು. ಜಿಮ್ ಸಾವಿಗೀಡಾಗಿ 1 ವರ್ಷದ ನಂತರ ಆ ವೀರ್ಯಾಣುವನ್ನು ಜೆನ್ನಿ ಗರ್ಭಪಾತ್ರದಲ್ಲಿರಿಸಿ ಮಗುವಿಗೆ ಜನ್ಮ ನೀಡಲಾಯಿತು.