ಮಹಿಳೆ-ಮನೆ-ಬದುಕು

ಹಸಿರು ಗಾಜಿನ ಅವತಾರ

Vishwanath S

ಮನೆಯ ಆಂತರಿಕ ಸೌಂದರ್ಯ ಹೆಚ್ಚಿಸಲು ನೀವು ಗಾಜನ್ನು ಒಡೆಯಬೇಕಿಲ್ಲ. ಅಲ್ಲದೆ, ಈ ಗಾಜಿನೊಳಗೆ ನೀವು ಪರಿಸರ ಬೀಜವನ್ನೇ ಬಿತ್ತಬಹುದು.

ಹಳೇ ಬಿಯರ್ ಬಾಟಲಿ ಅಥವಾ ಇನ್ನ್ಯಾವುದೇ ಬಾಟಲಿಗಳನ್ನು ಉಪಯೋಗವಿಲ್ಲವೆಂದು ಎಲ್ಲೆಲ್ಲೋ ಎಸೆಯುವುದುಂಟು. ಆದರೆ, ನೀವಿವನ್ನು ವೇಸ್ಟ್ ಎಂದು ಅಷ್ಟು ಕ್ರೂರವಾಗಿ ನೋಡುವುದು ಬೇಡ. ಈ ಬಾಟಲಿ ಮನೆಯನ್ನು ಮನೆಯ ಆಂತರಿಕ ವಿನ್ಯಾಸದಲ್ಲಿ ಬಳಸಿಕೊಳ್ಳಬಹುದು. ಗಾಜು ಮೊದಲೇ ಸುಂದರ ವಸ್ತು. ಅನೇಕ ಮನೆಯ ಕಾಂಪೌಂಡುಗಳಲ್ಲಿ ಗಾಜಿನ ಬಾಟಲಿಯ ಚೂರುಗಳನ್ನು ಸಿಮೆಂಟಿನಿಂದ ಫಿಕ್ಸ್ ಮಾಡಿದ್ದನ್ನು ನೋಡಿರಬಹುದು. ಒಂದು  ರಕ್ಷಣೆಗೆ, ಇನ್ನೊಂದು ಸೌಂದರ್ಯಕ್ಕೆ ಎರಡಕ್ಕೂ ಹೊಂದಿಕೆಯಾಗುವಂಥ ವಸ್ತು ಇದು.

ಬಾಹ್ಯ ಸೌಂದರ್ಯಕ್ಕೆ ಈ ಸೂತ್ರವಾಯಿತು. ಆದರೆ, ಮನೆಯ ಆಂತರಿಕ ಸೌಂದರ್ಯ ಹೆಚ್ಚಿಸಲು ನೀವು ಗಾಜನ್ನು ಒಡೆಯಬೇಕಿಲ್ಲ. ಅಲ್ಲದೆ, ಈ ಗಾಜಿನೊಳಗೆ ನೀವು ಪರಿಸರ ಬೀಜವನ್ನೇ ಬಿತ್ತಬಹುದು. ಹೇಗೆ ಅಂತೀರಾ? ಬಹಳ ಸುಲಭ. ಮೊದಲು ಬಾಟಲ್ ಅನ್ನು ಸಂಪೂರ್ಣವಾಗಿ ಸ್ವಚ್ಛ ಮಾಡಿಟ್ಟುಕೊಳ್ಳಿ. ಹತ್ತಿಯ ದಾರ ಜೊತೆಗಿರಲಿ. ಕತ್ತರಿ ಮತ್ತು ಫೆವಿಬಾಂಡ್ ಇಟ್ಟುಕೊಳ್ಳಿ.

ಎರಡು ಎಳೆಯ ದಾರವನ್ನು ಬಾಟಲಿಯ ಕುತ್ತಿಗೆಗೆ ಕಟ್ಟಿ, ನೇತುಹಾಕಲು ವ್ಯವಸ್ಥೆ  ಮಾಡಿಟ್ಟುಕೊಳ್ಳಿ. ಮಿಕ್ಕ ದಾರದಲ್ಲಿ 10 ತುಂಡುಗಳನ್ನು ಮಾಡಿ, ಪ್ರತಿ ತುಂಡುಗಳೂ ಎರಡೂವರೆ ಅಡಿ ಇರುವಂತೆ ನೋಡಿಕೊಳ್ಳಿ. ಚಿತ್ರದಲ್ಲಿ ತೋರಿಸಿರುವಂತೆ ಚೌಕಾಕೃತಿಯಲ್ಲಿ ಅದನ್ನು ಹೆಣೆದು, ಬಾಟಲಿಯ ಸುತ್ತ ಜಾಲರಿ ಮಾಡಿ. ಇದು ಕೇವಲ ಅಲಂಕಾರಕ್ಕಷ್ಟೇ. ಖಾಲಿ ಬಾಟಲಿಯೊಳಗೆ ತುಸು ಮಣ್ಣು ಹಾಕಿ, ಅದರೊಳಗೆ ಸ್ವಲ್ಪ ನೀರು ಸುರಿಯಿರಿ. ಯಾವುದಾದರೂ ಅಲಂಕಾರಿಕ ಗಿಡದ ಬುಡವನ್ನು ಅದರೊಳಗೆ ಹುದುಗಿಸಿ. ಈಗ ಆ ಬಾಟಲಿಯನ್ನು ನೇತು ಹಾಕಿ. ಆಯಿತಲ್ಲ, ಬಾಟಲಿ ಗಾರ್ಡನ್!  ಈ ವೇಳೆ ಕೆಲವು ಸೂಚನೆ ಗಮನಿಸಬೇಕು. ಈ ಬಾಟಲಿಗಳು ಮಕ್ಕಳ ಕೈಗೆ ಸಿಗಬಾರದು. ಕಟ್ಟುವ  ದಾರ ಸದೃಢವಾಗಿರಬೇಕು. ಇಲ್ಲದಿದ್ದಲ್ಲಿ ಬಾಟಲಿ ಬಿದ್ದು ಸೃಷ್ಟಿಸುವ ಅನಾಹುತ ಸಣ್ಣದೇನಲ್ಲ. ಖಾಲಿ ಬಾಟಲಿಗಳ ಮೇಲೆ ಇನ್ನೇಕೆ ಕೋಪ? ಇರಲಿ ಅನುಕಂಪ!

SCROLL FOR NEXT