ವನ್ಯಮೃಗ ಛಾಯಾಗ್ರಾಹಕಿ ರತಿಕಾ ರಾಮಸಾಮಿ
ಹೈದರಾಬಾದ್: ನಾವು ಯಾವಾಗಲಾದರೂ ಮೃಗಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಪ್ರಾಣಿ-ಪಕ್ಷಿಗಳನ್ನು ನೋಡಿ ಖುಷಿಪಡುತ್ತೇವೆ. ಅವರ ಜೊತೆಯಲ್ಲಿ ಕಾಲ ಕಳೆಯಲು ಮನಸ್ಸು ಹಾತೊರೆಯುತ್ತದೆ. ಪ್ರಾಣಿ-ಪಕ್ಷಿಗಳೊಂದಿಗೆ ಬೆರೆತು ಒಂದಾಗಬೇಕೆಂದು ಬಯಸುತ್ತೇವೆ. ಅದು ವಾಸ್ತವವಾಗುವುದು ದೂರದ ಮಾತು.
ಆದರೆ ಭಾರತದ ಮೊದಲ ಮಹಿಳಾ ವನ್ಯಜೀವಿ ಛಾಯಾಗ್ರಾಹಕಿ ರತಿಕಾ ಕುಮಾರಸಾಮಿಯವರಿಗೆ ಇದೇ ವೃತ್ತಿ. ಅವರ ನಿತ್ಯದ ಜೀವನದಲ್ಲಿ ಇದು ಒಂದು ಭಾಗ.
ವಿಶ್ವ ಛಾಯಾಗ್ರಾಹಕರ ದಿನವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ 46 ವರ್ಷದ ರತಿಕಾ ಕುಮಾರಸಾಮಿ ತಮ್ಮ ವೃತ್ತಿ ಜೀವನದ ಬಗ್ಗೆ ಒಂದೊಂದೇ ಅನುಭವಗಳನ್ನು ವಿವರಿಸುತ್ತಾರೆ.
ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಿದ್ದ ಮಗಳಿಗೊಂದು ಡಿಜಿಟಲ್ ಕ್ಯಾಮರಾ ಗಿಫ್ಟ್ ಕೊಟ್ಟಿದ್ದರು. ಆಗ ರತಿಕಾ 10ನೇ ತರಗತಿಯಲ್ಲಿದ್ದರು. ಆಗ್ರಾಗೆ ಪ್ರವಾಸ ಹೋಗಿದ್ದಾಗ ಫೋಟೋ ಕ್ಲಿಕ್ಕಿಸಿದ್ದರು. ಡಿಜಿಟಲ್ ಕ್ಯಾಮರಾದಲ್ಲಿ ಫೋಟೋ ತೆಗೆಯಲು ಕಲಿತರೆ ದೊಡ್ಡ ಕ್ಯಾಮರಾ ತೆಗೆದುಕೊಡುತ್ತೇನೆಂದು ಹೇಳಿದ್ದರು. ಅದೃಷ್ಟವಶಾತ್ ನನ್ನ ಅಂಕಲ್ ನನಗೆ ಡಿಎಸ್ಎಲ್ಆರ್ ಕ್ಯಾಮರಾವನ್ನು ಕಾಲೇಜು ದಿನಗಳಲ್ಲಿ ತೆಗೆಸಿಕೊಟ್ಟರು ಎಂದು ನೆನಪಿಸಿಕೊಳ್ಳುತ್ತಾರೆ ರತಿಕಾ.
ರತಿಕಾ ಸಿವಿಲ್ ಇಂಜಿನಿಯರಿಂಗ್ ಓದಬೇಕಿತ್ತು. ಆದರೆ ಆ ಸಮಯದಲ್ಲಿ ಕಂಪ್ಯೂಟರ್ ಸೈನ್ಸ್ ಹೊಸ ಸಬ್ಜೆಕ್ಟ್ ಆಗಿ ಪರಿಚಯಿಸಿದ್ದರಿಂದ ನನ್ನ ತಂದೆ ಅದನ್ನು ಆರಿಸಿಕೊಳ್ಳುವಂತೆ ಹೇಳಿದರು. ಅದನ್ನು ಕಲಿತರೆ ಒಳ್ಳೆಯ ವೇತನ ಬರುವ ಒತ್ತಡರಹಿತ ಕೆಲಸ ಮಾಡಬಹುದು ಎಂಬುದು ಅವರ ಯೋಚನೆಯಾಗಿತ್ತು.
ಆದರೆ ನನ್ನ ಅದೃಷ್ಟವೇ ಬೇರೆಯಾಗಿತ್ತು. ನನ್ನ ತಂದೆಯವರ ಆಸೆಗೆ ವಿರುದ್ಧವಾಗಿ ಸಾಫ್ಟ್ ವೇರ್ ಇಂಜಿನಿಯರ್ ಆಗದೆ ನಿರಂತರವಾಗಿ ಸಂಚಾರ ಮಾಡುತ್ತಿರುತ್ತೇನೆ, ಒಂದು ಸ್ಥಳದಲ್ಲಿ ಹೆಚ್ಚು ದಿನ ಕೂರುವುದಿಲ್ಲ ಎನ್ನುತ್ತಾರೆ ರತಿಕಾ.
ಫೋಟೋಗ್ರಫಿ ಕಲಿತ ಅಂದಿನ ದಿನಗಳನ್ನು ನೆನಪಿಸಿಕೊಳ್ಳುವ ರತಿಕಾ, ಆ ಸಮಯದಲ್ಲಿ ಫೋಟೋಗ್ರಾಫರ್ ಗೆ ಸಂಕಲನ, ತಾಂತ್ರಿಕತೆ ಕಂಪ್ಯೂಟರ್ ನಲ್ಲಿ ಕಲಿಯುವುದು ಕಷ್ಟವಾಗುತ್ತಿತ್ತು. ಆದರೆ ನನಗೆ ಅದರಲ್ಲಿ ಆಸಕ್ತಿಯಿತ್ತು. ಎಂಬಿಎ ಕೋರ್ಸ್ ಮಾಡಿದ್ದು ನನಗೆ ಫೋಟೋಗ್ರಫಿಗೆ ಅನುಕೂಲವಾಯಿತು ಎನ್ನುತ್ತಾರೆ.
ತಮಿಳುನಾಡಿನ ತೆನಿ ಜಿಲ್ಲೆಯ ವೆಂಕಟಾಚಲಪುರಂನಲ್ಲಿ ಜನಿಸಿದ ರತಿಕಾರಿಗೆ ಬಾಲ್ಯದಿಂದಲೂ ಪ್ರಕೃತಿ, ಪಕ್ಷಿಧಾಮದ ಜೊತೆಗೆ ವಿಶೇಷವಾದ ಒಲವು, ಸಂಬಂಧವಿತ್ತು.
''ನನಗೆ ಪ್ರಯಾಣ ಮಾಡುವುದೆಂದರೆ ತುಂಬಾ ಇಷ್ಟ. 2004ರಲ್ಲಿ ಮದುವೆಯಾದ ನಂತರ ರಾಜಸ್ತಾನದ ಭರತ್ ಪುರ ಪಕ್ಷಿಧಾಮಕ್ಕೆ ನನ್ನ ಡಿ70 ಲೆನ್ಸ್ ಜೊತೆ ಭೇಟಿ ನೀಡಿದೆ.ಅಲ್ಲಿ ಅಷ್ಟೊಂದು ಬಣ್ಣಬಣ್ಣದ ಪಕ್ಷಿಗಳಿರಬಹುದು ಎಂದು ನಾನು ಯೋಚಿಸಿರಲಿಲ್ಲ. ನನಗಾದ ಸಂತೋಷಕ್ಕೆ ಪಾರವೇ ಇರಲಿಲ್ಲ. ಪಕ್ಷಿಗಳ ಫೋಟೋವನ್ನು ಹಿಡಿಯಲು ಕಷ್ಟವಾದರೂ ಕೂಡ ನಾನು ನನ್ನ ಕ್ಯಾಮರಾದೊಳಗೆ ಹಿಡಿಯಲೇ ಬೇಕು ಎನಿಸಿತು. ವೈಟ್ ಎಗ್ರೆಟ್ ನ್ನು ನಾನು ಮೊದಲು ಹಿಡಿದೆ. ನಾನು ದೆಹಲಿಯ ಒಕ್ಲಾ ಪಕ್ಷಿಧಾಮಕ್ಕೆ ಆಗಾಗ ಹೋಗುತ್ತಿದ್ದೆ ಎನ್ನುತ್ತಾರೆ ರತಿಕಾ.
ಹೀಗೆ ಪಕ್ಷಿಗಳ ಫೋಟೋ ತೆಗೆಯುವುದರಿಂದ ಆರಂಭಗೊಂಡ ಅವರ ಅಭಿಯಾನ ನಿಲ್ಲಲಿಲ್ಲ. ಆಸಕ್ತಿಯಿಂದ ಮುಂದುವರಿಸಿದರು. 2009ರಲ್ಲಿ ದೂರದರ್ಶನದಿಂದ ದೇಶದ ಮೊದಲ ವನ್ಯಮೃಗ ಫೋಟೋಗ್ರಾಫರ್ ಎಂಬ ಗೌರವ ನೀಡಿ ಆದರಿಸಿದರು.
ತಮ್ಮ ಹವ್ಯಾಸಕ್ಕೆ ಮನೆಯವರ ಅದರಲ್ಲೂ ತಮ್ಮ ಪತಿ ಶ್ರೀಧರ್ ಅವರ ಬೆಂಬಲ ಸದಾ ಇದೆ ಎನ್ನುತ್ತಾರೆ ರತಿಕಾ.
ಛಾಯಾಗ್ರಹಣ ವೃತ್ತಿಗೆ ಬರುವವರಿಗೆ ಶೇಕಡಾ 70ರಷ್ಟು ಜ್ಞಾನ ಮತ್ತು ಉಳಿದದ್ದು ತಾಳ್ಮೆ, ಗಮನಹರಿಸುವಿಕೆ, ಪ್ರಕೃತಿ, ವನ್ಯಜೀವಿಗಳ ಬಗ್ಗೆ ಪ್ರೀತಿಯಿರಬೇಕು ಎನ್ನುತ್ತಾರೆ ರತಿಕಾ ರಾಮಸಾಮಿ.