ಈ ವರದಿ ಬಹುಶಃ ನಮನ್ನು ಚಕಿತಗೊಳಿಸಬಹುದು. ಆದರೆ ಇದು ಸತ್ಯ.. ನಗರವಾಸಿಗಳಿಗಿಂತ ಗ್ರಾಮೀಣ ಪ್ರದೇಶದ ಮಂದಿಯಲ್ಲಿ ಸೌಂದರ್ಯ ಪ್ರಜ್ಞೆ ಹೆಚ್ಚು ಎಂದು ನೂತನ ಅಧ್ಯಯನವೊಂದು ತಿಳಿಸಿದೆ.
ನ್ಯಾಷನಲ್ ಸ್ಯಾಂಪಲ್ ಸರ್ವೇ ಆರ್ಗನೈಸೇಷನ್ ನಡೆಸಿರುವ ಈ ನೂತನ ಅಧ್ಯಯನದಿಂದ ಈ ವರದಿ ಹೊರಬಿದ್ದಿದ್ದು, 2014 ರ ಜುಲೈ ತಿಂಗಳಿನಿಂದ 2015ರ ಜುಲೈ ತಿಂಗಳ ವರೆಗಿನ ಒಂದು ವರ್ಷಗಳ ಕಾಲ ಈ ಅಧ್ಯಯನ ನಡೆಸಲಾಗಿದೆಯಂತೆ. ಈ ಅವಧಿಯಲ್ಲಿ ಗ್ರಾಮೀಣ ಪ್ರದೇಶದ ನಿವಾಸಿಗಳ ಸೌಂದರ್ಯ ವರ್ಧಕಗಳ ಖರ್ಚು ವೆಚ್ಚ ನಗರವಾಸಿಗಳನ್ನೇ ಮೀರಿಸಿದೆಯಂತೆ. ಈ ಅಧ್ಯಯನದಲ್ಲಿ ಗ್ರಾಮೀಣ ವಾಸಿಗಳು ಮತ್ತು ನಗರ ವಾಸಿಗಳ ಕುರಿತಂತೆ ಹಲವು ಪ್ರಮುಖ ಅಂಶಗಳು ಬೆಳಕಿಗೆ ಬಂದಿವೆ.
1. ಗ್ರಾಮೀಣ ಭಾಗದ ಜನರು ತಮ್ಮ ಕುಟುಂಬದ ಜೀವನ ನಿರ್ವಹಣೆಯ ಒಟ್ಟಾರೆ ಖರ್ಚುವೆಚ್ಚದಲ್ಲಿ ಶೇ.11ರಷ್ಟು ಹಣವನ್ನು ಸೌಂದರ್ಯ ವರ್ಧಕಗಳಿಗೇ ಮೀಸಲಿಟ್ಟಿದ್ದರಂತೆ. ಇನ್ನು ನಗರ ವಾಸಿಗಳು ಒಟ್ಟಾರೆ ಖರ್ಚಿನಲ್ಲಿ ಶೇ.9 ರಷ್ಟನ್ನು ಮಾತ್ರ ಸೌಂದರ್ಯ ವರ್ಧಕಗಳಿಗಾಗಿ ಮೀಸಲಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
2.ಗ್ರಾಮೀಣ ವಾಸಿಗಳು ಒಳಚರಂಡಿ ಮತ್ತು ಶುಚಿತ್ವಕ್ಕಾಗಿ ಬಳಕೆ ಮಾಡುವ ಹಣಕ್ಕಿಂತ ಕೇವಲ ಧಾರ್ಮಿಕ ಕೆಲಸಕ್ಕೆ ಬಳಕೆ ಮಾಡುವ ಹಣವೇ ಹೆಚ್ಚು ಎಂಬ ಅಂಶ ಹೊರಬಿದ್ದಿದೆ.
3. ನಗರ ವಾಸಿಗಳಿಗೆ ಹೋಲಿಕೆ ಮಾಡಿದರೆ ಗ್ರಾಮೀಣ ಭಾಗದ ಜನರು ತಮ್ಮ ಒಟ್ಟಾರೆ ಗಳಿಕೆಯಲ್ಲಿ ಶೇ.9ರಷ್ಟು ಹಣವನ್ನು ಧಾರ್ಮಿಕ ಕಾರ್ಯಕ್ಕೆ ವೆಚ್ಚ ಮಾಡಿದರೆ, ಕೇವಲ 0.22ರಷ್ಟು ಹಣವನ್ನು ಒಳಚರಂಡಿ ಸೇವೆಗಾಗಿ ಬಳಕೆ ಮಾಡುತ್ತಾರೆ.
4. ಇನ್ನು ನಗರ ಮತ್ತು ಗ್ರಾಮೀಣ ಭಾಗದ ಉಭಯ ವಾಸಿಗಳೂ ಯಥೇಚ್ಛವಾಗಿ ಹಣ ಖರ್ಚು ಮಾಡುವ ಏಕೈಕ ವಲಯವೆಂದರೆ ಅದು ಸಂಪರ್ಕ ಸಂವಹನ. ಅಂದರೆ ಮೊಬೈಲ್ ಮತ್ತು ದೂರವಾಣಿ ವಲಯ. ಇತ್ತೀಚೆಗೆ ಗ್ರಾಮೀಣ ಭಾಗಗಳಲ್ಲಿಯೂ ಮೊಬೈಲ್ ಇಂಟರ್ ನೆಟ್ ಸೇವೆ ವ್ಯಾಪಕವಾಗಿದ್ದು, ಈ ವಲಯದಲ್ಲಿ ನಗರ ಮತ್ತು ಗ್ರಾಮೀಣ ವಾಸಿಗಳು ಯಥೇಚ್ಚವಾಗಿ ಹಣ ಖರ್ಚು ಮಾಡುತ್ತಾರಂತೆ.
5. ನಗರ ಪ್ರದೇಶಕ್ಕೆ ಹೋಲಿಕೆ ಮಾಡಿದರೆ ಗ್ರಾಮೀಣ ಭಾಗದಲ್ಲಿನ ಟೈಲರ್ ಗಳು ಹೆಚ್ಚು ಕ್ರಿಯಾಶೀಲರಾಗಿರುತ್ತಾರಂತೆ. ಕಾರಣ ಗ್ರಾಮೀಣ ಭಾಗದ ವಾಸಿಗಳು ತಾವು ಉಡುವ ತೊಡುಗೆ ವಿಶೇಷವಾಗಿರಬೇಕು ಎಂದು ಬಯಸಿ ಹೊಸ ಹೊಸ ವಿನ್ಯಾಸಕ್ಕೆ ಮೊರೆ ಹೋಗುತ್ತಾರೆ. ಹೀಗಾಗಿ ಹಳೆಯ ವಿನ್ಯಾಸದ ಟೈಲರ್ ಗಳಿಗೆ ಹಳ್ಳಿಗಳಲ್ಲಿ ಬೇಡಿಕೆ ಇಲ್ಲ. ಇದೇ ಕಾರಣಕ್ಕೆ ಗ್ರಾಮೀಣ ಭಾಗದ ದರ್ಜಿಗಳು ಹೆಚ್ಚು ಕ್ರಿಯಾ ಶೀಲರಾಗಿರುತ್ತಾರೆ.
ನ್ಯಾಷನಲ್ ಸ್ಯಾಂಪಲ್ ಸರ್ವೇ ಆರ್ಗನೈಸೇಷನ್ ನಡೆಸಿರುವ ಉಭಯ (ನಗರ ಮತ್ತು ಗ್ರಾಮೀಣ) ವಾಸಿಗಳ ಖರ್ಚುವೆಚ್ಚಗಳ ಪುಟ್ಟ ವಿವರ ಇಲ್ಲಿದೆ.