ಮಹಿಳೆಯರ ದಿನಾಚರಣೆಯಂದು ನನ್ನ ಪತ್ನಿಯ ಬಗ್ಗೆ ಹೇಳುವುದಕ್ಕೆ ಇಷ್ಟ ಪಡುತ್ತೇನೆ. ನನ್ನದು ಪ್ರೇಮವಿವಾಹ. ಒಂದು ಕಡೆ ಮನೆಯವರು ಒಪ್ಪಿದರು, ನಮ್ಮ ಮನೆಯಲ್ಲಿ ಒಪ್ಪಲಿಲ್ಲ. ಆದರೂ ಮದುವೆಯಾದೆವು, ಮದುವೆಯ ಮುಂಚೆ ನಾನು ಕೇಳಿದ್ದು ಒಂದೇ ವಿಷಯ, ನನಗೆಷ್ಟೇ ಹಣ ಬರಲಿ ಅದರಲ್ಲೇ ಸಂಸಾರ ತೂಗಿಸಬೇಕು, ಬೇರೆಯವರ ಒಡವೆ, ವಸ್ತುಗಳಿಗೆ ಆಸೆ ಪಡಬಾರದು ಅಂತ. ಒಂದು ದಿನವೂ ನನಗೆ ಆ ವಿಷಯದಲ್ಲಿ ನೋವಾಗದಂತೆ ನಡೆದುಕೊಂಡಿದ್ದಾಳೆ. ಮದುವೆಯಾದ ಒಂದು ತಿಂಗಳಿಗೆ ನನಗೇ ದೊಡ್ಡ ಅಪಘಾತವಾಯಿತು, ಸುಮಾರು ಒಂದೂವರೆ ತಿಂಗಳು ಆಸ್ಪತ್ರೆ ವಾಸ. ನನ್ನಾಕೆಗೆ ನಾನಾ ರೀತಿಯ ಮಾನಸಿಕ ಹಿಂಸೆ, ಕಾಲ್ಗುಣ ಸರಿಯಿಲ್ಲವೋ ಏನೋ ಎಂಬ ಆರೋಪ ಬೇರೆ, ಎರಡೂ ಕಡೆಯವರು ಹೀಯಾಳಿಸಿದರೂ ಗಟ್ಟಿ ಮನಸು ಮಾಡಿ ಎಲ್ಲವನ್ನೂ ತೂಗಿಸಿಕೊಂಡು ಬಂದಳು. ಆಕೆಯ ಧೃಢ ಮನಸ್ಸಿನ ಪರಿಚಯವಾಗಿದ್ದು ಅಂದಿಗೆ. ಕಷ್ಟ ಸುಖದಲ್ಲಿ ಭಾಗಿಯಾಗಿದ್ದಾಳೆ, ಇಂದಿನ ನನ್ನ ಪರಿಸ್ಥಿತಿಯ ಹಿಂದಿನ ಸ್ಫೂರ್ತಿ ಆಕೆಯೇ ಎನ್ನುವುದಕ್ಕೆ ನನಗೆ ಯಾವುದೇ ಅಳಕು ಇಲ್ಲ. ಒಳ್ಳೆಯ ಗೆಳತಿ ಆಕೆ. ನನ್ನ ಅನುಭವದಂತೆ, ಸಂಸಾರಕ್ಕೆ ತೊಂದರೆಯಾದಲ್ಲಿ ಹೆಣ್ಣು ಮನೆಯ ಒಳಗೆ, ಹೊರಗೆ ನಿಭಾಯಿಸುವ ಶಕ್ತಿ ಉಳ್ಳವಳು, ಕೆಲಸಕ್ಕೂ ಹೋಗಿ, ಮನೆಯನ್ನೂ ಸಂಭಾಳಿಸುವಳು, ಗಂಡಸಿಗೆ ಅದು ಕಷ್ಟವಾಗುತ್ತದೆ. (ಕೆಲವು ಅಪವಾದಗಳನ್ನು ಹೊರತು ಪಡಿಸಿ )
-ರಾಘವ್ ಶರ್ಮಾ