ಇತ್ತೀಚೆಗೆ ಮಹಿಳೆಯರ ಮೇಲೆ ಆ್ಯಸಿಡ್ ದಾಳಿ ಹೆಚ್ಚಾಗುತ್ತಿದೆ. ಆದರೆ, ಇಂತಹ ದಾಳಿಗೆ ಒಳಗಾದ ಮಹಿಳೆಯರು ಮಾನಸಿಕವಾಗಿ ಕುಗ್ಗುತ್ತಾ, ಬದುಕೇ ಮುಗಿದು ಹೋಯಿತು ಎಂಬ ಚಿಂತೆಯಲ್ಲಿ ಬಿದ್ದು, ತಮ್ಮನ್ನು ತಾವು ಕಳೆದುಕೊಳ್ಳುತ್ತಾರೆ. ಇಂತಹ ಮಹಿಳೆಯರಿಗೆ ಬೆನ್ನುಲುಬಾಗಿ ಮಹಿಳಾ ಆಯೋಗ ನಿಂತಿದೆ. ದೌರ್ಜನ್ಯ ಪ್ರಕರಣಗಳೂ ಹೆಚ್ಚಾಗುತ್ತಿವೆ ಎಂದು ಮಹಿಳೆ ಕುಗ್ಗಬಾರದು, ಅದರ ವಿರುದ್ಧ ದನಿ ಎತ್ತಿ ತನ್ನ ಬದುಕನ್ನು ತಾನೇ ಕಟ್ಟಿಕೊಳ್ಳಬೇಕು ಎಂದು ಹೇಳುವ ಆಯೋಗ, ಆಕೆಗೆ ತನ್ನ ಹಕ್ಕು ಕುರಿತು ಮತ್ತು ಯೋಜನೆಗಳ ಬಗ್ಗೆ ಮಾಹಿತಿ ನೀಡಿದೆ.
ದೈಹಿಕ ಹಿಂಸೆಗೆ ಒಳಗಾದ ಮಹಿಳೆಗೆ ಸುರಕ್ಷಾ ಯೋಜನೆ
ಆ್ಯಸಿಡ್ ದಾಳಿಯ ಕಾರಣಗಳು ಯಾವುದೇ ಇರಲಿ, ಇದರ ಸತ್ಯಾಸತ್ಯತೆ ರುಜುವಾತು ಆಗಲಿ ಅಥವಾ ಆಗದೇ ಇರಲಿ, ಈ ಯೋಜನೆಯಲ್ಲಿ ಆ್ಯಸಿಡ್ ದಾಳಿಯ ಪರಿಣಾಮಕ್ಕನುಗುಣವಾಗಿ ಪರಿಹಾರ ಲಭ್ಯವಿರುತ್ತದೆ.
ಅರ್ಹತೆ
ಈ ಯೋಜನೆಯಡಿಲ್ಲಿ ಅರ್ಹತೆ ಹೊಂದಲು ಮಹಿಳೆಯರು, ಆ್ಯಸಿಡ್ ದಾಳಿಗೆ ಒಳಗಾಗಿರಬೇಕು, ಹುಡುಗಿ ಅಥವಾ ಮಹಿಳೆಯಾಗಿರಬೇಕು, ಭಾರತದ ಪ್ರಜೆಯಾಗಿರಬೇಕು.
ಅನರ್ಹತೆ
- ಆ್ಯಸಿಡ್ ದಾಳಿಗೆ ಒಳಗಾದ ಮಹಿಳೆಯು ಈಗಾಗಲೇ ಅವಶ್ಯಕ ಪರಿಹಾರವನ್ನು ಬೇರೆ ಸಾರ್ವಜನಿಕ ಸಂಸ್ಥೆಗಳಿದಂ ಪಡೆದಿದ್ದರೆ ಅವಳು ಈ ಯೋಜನೆಯಡಿಯಲ್ಲಿ ಪರಿಹಾರ ಪಡೆದುಕೊಳ್ಳಲು ಅನರ್ಹಳಾಗಿರುತ್ತಾಳೆ.
- ಇತರೆ ಸಂಸ್ಥೆಗಳಿಂದ ಪಡೆಯಲಾದ ಪರಿಹಾರ ಮೊತ್ತವು ನಿರೀಕ್ಷಿತ ವೆಚ್ಚಕ್ಕಿಂತ ಕಡಿಮೆ ಪ್ರಮಾಣದಲ್ಲಿ ಇದ್ದಲ್ಲಿ, ಹೆಚ್ಚುವರಿ ಪರಿಹಾರ ಧನವನ್ನು ಈ ಯೋಜನೆಯಡಿಯಲ್ಲಿ ಆಯೋಗದಿಂದ ಪಡೆಯಬಹುದು.
- ಆ್ಯಸಿಡ್ ದಾಳಿಗೆ ಒಳಗಾದ ಮಹಿಳೆಯು ಬೇರೆ ಯಾವುದೇ ತರಹದ ಜೀವ ವಿಮೆ ಅಥವಾ ಆರೋಗ್ಯ ವಿಮೆ ಪಾಲಿಸಿಯನ್ನು ಹೊಂದಿದ್ದು, ಅದರಿಂದ ಅಗತ್ಯವಾದ ಎಲ್ಲ ಪರಿಹಾರ ಸಿಗುವ ಸಂದರ್ಭವಿದ್ದಲ್ಲಿ ಸರ್ಕಾರವು ಪರಿಹಾರ ಧನವನ್ನು ಒದಗಿಸದೇ ಇರುವ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಹೊಂದಿರುತ್ತದೆ.
ಆಸಿಡ್ ದಾಳಿಗೆ ಒಳಗಾದ ಮಹಿಳೆ ಆಯೋಗಕ್ಕೆ ಅರ್ಜಿಸಲ್ಲಿಸಲು ವಿಧಾನ
- ದೌರ್ಜನ್ಯದ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಿದ ಪ್ರತಿಯನ್ನು ಪ್ರಥಮ ಮಾಹಿತಿಯ ವರದಿ(ಎಫ್ ಐಆರ್)ಯನ್ನು ಆಯೋಗಕ್ಕೆ ಸಲ್ಲಿಸುವುದು.
- ವೈದ್ಯಕೀಯ ದೃಢೀಕರಣದೊಂದಿಗೆ ವರದಿ ಹಾಗೂ ಅಂದಾಜು ವೆಚ್ಚದ ಬಗ್ಗೆ ದಾಖಲೆ ಅಥವಾ ಬಿಲ್ಲುಗಳನ್ನು ಸಲ್ಲಿಸುವುದು.
- ಅರ್ಜಿಯನ್ನು ಮಹಿಳೆಯ ಪರವಾಗಿ ಯಾರು ಬೇಕಾದರೂ ಸಲ್ಲಿಸಬಹುದು.
ಪರಿಹಾರ
1. ಎಲ್ಲ ವೈದ್ಯಕೀಯ ಚಿಕಿತ್ಸೆಯ ವೆಚ್ಚಗಳು
ವೈದ್ಯರ ಧೃಢೀಕರಣದ ಆಧಾರದ ಮೇಲೆ:
- ಮುಂದೆ ಒದಗಬಹುದಾದ ವೈದ್ಯಕೀಯ ಚಿಕಿತ್ಸೆಯ ವೆಚ್ಚಗಳು.
- ಆಸಿಡ್ ದಾಳಿಗೆ ಒಳಗಾದ ದೇಹದ ಯಾವುದೇ ಭಾಗದ ಪ್ಲಾಸ್ಟಿಕ್ ಸರ್ಜರಿ, ಜೋಡಣೆ... ಇತರೆ ಚಿಕಿತ್ಸೆಗಾಗಿ ಉಂಟಾದ ಅಥವಾ ಮುಂದೆ ಒದಗಿಸಬಹುದಾದ ವೆಚ್ಚಗಳು
- ಆ್ಯಸಿಡ್ ದಾಳಿಗೆ ಒಳಗಾದ ಮಹಿಳೆಯು ವೈದ್ಯಕೀಯ ಚಿಕಿತ್ಸೆಗಾಗಿ ಯಾರಿಂದಲಾದರೂ ಸಾಲ ಪಡೆದಿದ್ದಲ್ಲಿ ಅದನ್ನು ಹಿಂತಿರುಗಿಸಲು ಅವಶ್ಯಕವಾದ ವೆಚ್ಚ
ವಿಶೇಷ ಪರಿಹಾರ
- ಆ್ಯಸಿಡ್ ದಾಳಿಯಿಂದ ಮಹಿಳೆಯು ಅಂಗವಿಕಲತೆ ಹೊಂದಿದಲ್ಲಿ ಅವಳಿಗೆ ಅಂಗವಿಕಲ ಮತ್ತು ಹಿರಿಯನಾಗರೀಕರ ಸೇವೆಗಳ ಇಲಾಖೆಯಿಂದ ದೊರೆಯಬಹುದಾದ ಸೌಲಭ್ಯಗಳನ್ನು ಪಡೆಯಬಹುದು.
- ಆ್ಯಸಿಡ್ ದಾಳಿಯಿಂದ ಉಂಟಾದ ಅಂಗವಿಕಲತೆಯು ಅವಳ ಹಿಂದಿನ ಉದ್ಯೋಗವನ್ನು ಮುಂದುವರೆಸುವಲ್ಲಿ ತೊಡಕು ಉಂಟುಮಾಡಿದಲ್ಲಿ ಹಾಲಿ ಪರಿಸ್ಥಿತಿಗನುಗುಣವಾಗಿ ಉದ್ಯೋಗವನ್ನು ಪಡೆಯಬಹುದು.
- ದಾಳಿಗೆ ಒಳಗಾದ ಮಹಿಳೆ ಸ್ವಂತ ಉದ್ಯೋಗ ಮಾಡಲು ಇಚ್ಛಿಸದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ರೂಪಿಸಿರುವ ಉದ್ಯೋಗಿನಿ ಹಾಗೂ ಆಸರೆ ಯೋಜನೆಗಳಲ್ಲಿ ಪ್ರಾಶಸ್ತ್ಯ ನೀಡಲು ಕ್ರಮ ಕೈಗೊಳ್ಳುವುದು ಹಾಗೂ ಅದಕ್ಕೆ ಬೇಕಾದ ನೆರವನ್ನು ಪಡೆಯಬಹುದು.
- ಆ್ಯಸಿಡ್ ದಾಳಿಯ ಪರಿಣಾದಿಂದ ಮಹಿಳೆ ನಿರಾಶ್ರಿತಳಾಗಿದ್ದಲ್ಲಿ ಅವಳ ಆಶ್ರಯಕ್ಕಾಗಿ ಅಥವಾ ವಸತಿಗಾಗಿ ನೆರವು ಪಡೆಯಬಹುದು.
- ಆ್ಯಸಿಡ್ ದಾಳಿಗೆ ಒಳಗಾದ ತಕ್ಷಣವೇ ಜೀವನಾಂಶಕ್ಕಾಗಿ ನೆರವು ಪಡೆಯಬಹುದು.
(ಮಹಿಳಾ ಆಯೋಗದಿಂದ ಪಡೆದ ಮಾಹಿತಿ)
-ಮೈನಾಶ್ರೀ.ಸಿ