ನಿಮ್ಮ ಗಂಡ ನಿಮ್ಮನ್ನು ಹೊಡದರೆ, ಕಾರಣವಿಲ್ಲದೆ ನಿಮ್ಮ ಶೀಲವನ್ನು ಶಂಕಿಸಿದರೆ, ಮಕ್ಕಳನ್ನು ಹಿಂಸಿಸಿ ನಿಮಗೆ ಮಾನಸಿಕ ವೇದನೆ ಉಂಟು ಮಾಡಿದರೆ, ಬೇರೊಬ್ಬ ಹೆಣ್ಣಿನೊಡನೆ ಸಂಬಂಧವಿರಿಸಿಕೊಂಡಿದ್ದರೆ, ಜೀವನ ನಿರ್ವಹಣೆಗೆ ಹಣ ಕೊಡದಿದ್ದರೆ, ಕಾರಣವಿಲ್ಲದೆ ನಿಮ್ಮ ಗಂಡ ನಿಮ್ಮನ್ನು ದೂರ ಮಾಡಿದ್ದರೆ ಅಂತಹ ವರ್ತನೆ ಕೌಟುಂಬಿಕ ದೌರ್ಜನ್ಯ ಎನಿಸಿಕೊಳ್ಳುತ್ತದೆ.
ಇದಕ್ಕಾಗಿ ಸಿವಿಲ್ ಕಾನೂನಿನಲ್ಲಿ ದೊರೆಯುವ ಪರಿಹಾರಗಳು
ನ್ಯಾಯಿಕ ಬೇರ್ಪಡೆ: ವಿವಾಹ ವಿಚ್ಛೇದನೆ ಪಡೆಯದೆ ಗಂಡನಿಂದ ಬೇರೆಯಾಗಿ ವಾಸಿಸಲು ಅನುಮತಿ
ವಿಚ್ಝೇದನೆ: ನಿಂದ ಶಾಶ್ವತವಾಗಿ ದೂರವಾಗುವುದು-ಮತ್ತೊಮ್ಮೆ ಮದುವೆ ಆಗಲು ಅವಕಾಶ
ದಾಂಪತ್ಯ ಹಕ್ಕುಗಳ ಪೂರ್ವಸ್ಥಿತಿ ಸ್ಥಾಪನೆ: ತನ್ನನ್ನು ಹೆಂಡತಿಯಂತೆ ನಡೆಸಿಕೊಳ್ಳುವಂತೆ ನ್ಯಾಯಾಲಯದಿಂದ ಆದೇಶ ಪಡೆಯುವುದು.
ಜೀವನಾಂಶ: ಆಹಾರ, ಬಟ್ಟೆ, ಮನೆ, ಶಿಕ್ಷಣ, ವೈದ್ಯಕೀಯ ಚಿಕಿತ್ಸೆ ಮುಂತಾದವುಗಳಿಗಾಗಿ ಜೀವನಾಂಶ ಕೋರುವುದು
ನಿರ್ಬಂಧಕಾಜ್ಞೆ: ಹಿಂಸಿಸುವುದನ್ನು ಮುಂದುವರೆಸದಂತೆ ನ್ಯಾಯಾಲಯದಿಂದ ನಿರ್ಬಂಧಕಾಜ್ಞೆ ಪಡೆಯುವುದು.
ರುಜುವಾತು ಪಡಿಸಬೇಕಾದ ಅಂಶಗಳು
- ಹಿಂಸಿಸುವವನು ಗಂಡ ಅಥವಾ ಆತನ ಬಂಧು ಇರಬಹುದು- ಇದಕ್ಕೆ ರುಜುವಾತಾಗಿ ವಿವಾಹದ ಆಹ್ವಾನ ಪತ್ರಿಕೆ, ಫೋಟೋ ಅಥವಾ ರೇಷನ್ ಕಾರ್ಡನ್ನು ಬಳಸಬಹುದು.
- ನಿಮಗಾದ ಪೆಟ್ಟು ಅಥವಾ ಗಾಯಗಳ ಬಗ್ಗೆ ವೈದ್ಯಕೀಯ ವರದಿ
- ನಿಮ್ಮ ಗಂಡ ನಿಮ್ಮನ್ನು ಹಿಂಸಿಸುವುದನ್ನು ನೋಡಿದವರ ಸಾಕ್ಷ್ಯ
- ಈ ಹಿಂದೆ ನೀವು ಪೊಲೀಸರಿಗೆ ದೂರು ನೀಡಿದ್ದರೆ ಅದರ ಪ್ರತಿ
- ನಿಮ್ಮ ದೇಹದ ಮೇಲಾದ ಗಾಯದ ಗುರುತು
- ಗಂಡನ ಹಿಂಸೆ ತಾಳಲಾರದೆ ಅದರ ಬಗ್ಗೆ ತಾಯಿಯ ಮನೆಯವರಿಗೆ ಅಥವಾ ಗೆಳತಿಯರಿಗೆ ಬರೆದ ಪತ್ರಗಳು ಅಥವಾ ದಿನಚರಿ ಬರೆಯುವ ಅಭ್ಯಾಸವಿದ್ದಲ್ಲಿ ಅಂತಹ ದಿನಚರಿಯಲ್ಲಿ ಹಿಂಸೆಯ ಬಗ್ಗೆ ಬರೆದ ಭಾಗಗಳು
ಕೈಗೊಳ್ಳಬೇಕಾದ ಕ್ರಮ
- ನಿಮ್ಮ ಗಂಡ ಅಥವಾ ಅವನ ಬಂಧುಗಳು ಕೊಡುವ ಹಿಂಸೆಗಳ ಬಗ್ಗೆ ಕೂಡಲೇ ಪೊಲೀಸರಿಗೆ ದೂರು ನೀಡಬೇಕು. ಪೊಲೀಸರು ದೂರಿನ ವಿವರಗಳನ್ನು ಪ್ರಥಮ ಮಾಹಿತಿ ವರದಿಯಲ್ಲಿ ದಾಖಲಿಸುತ್ತಾರೆ. ಅದರ ಪ್ರತಿಯನ್ನು ಕೇಳಿ ಪಡೆದುಕೊಳ್ಳಬೇಕು.
- ಹೆಂಡತಿ ಹಿಂಸೆ ಕೊಡುವುದು ಭಾರತ ದಂಡ ಸಂಹಿತೆಯ(ಐಪಿಸಿ) 498ಎ ಪ್ರಕರಣದ ಪ್ರಕಾರ ಅಪರಾಧ. ಪೊಲೀಸರು ವಾರೆಂಟ್ ಇಲ್ಲದೆಯೇ ಆರೋಪಿಯನ್ನು ಬಂಧಿಸಬಹುದು. ಅಲ್ಲದೇ ದಂಡ ಪ್ರಕ್ರಿಯಾ ಸಂಹಿತೆಯ(ಸಿಆರ್ ಪಿಸಿ) 125ನೇ ಪ್ರಕರಣದ ಪ್ರಕಾರ ನೀವು ಜೀವನಾಂಶ ಪಡೆಯಬಹುದು.
(ಮಹಿಳಾ ಆಯೋಗದಿಂದ ಪಡೆದ ಮಾಹಿತಿ)
-ಮೈನಾಶ್ರೀ.ಸಿ