ಇಸ್ಲಾಮಾಬಾದ್: ಭಾರತ ಮತ್ತು ಪಾಕಿಸ್ತಾನ ನಡುವಣ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಟ್ಟದ ಮಾತುಕತೆ ಮುರಿದುಬಿದ್ದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿರುವ ಪಾಕ್ ಭದ್ರತಾ ಸಲಹೆಗಾರ ಸರ್ತಾಜ್ ಅಜೀಜ್, ಮೋದಿಯ ಭಾರತ ಪ್ರಾದೇಶಿಕ ಮಹಾಶಕ್ತಿಯ ರೀತಿ ವರ್ತಿಸುತ್ತದೆ ಎಂದು ಆರೋಪಿಸಿದ್ದಾರೆ.
ಪಾಕಿಸ್ತಾನದ ಡಾನ್ ಪತ್ರಿಕೆ ಈ ಕುರಿತು ವರದಿ ಮಾಡಿದ್ದು, ಮೋದಿಯವರ ಭಾರತ ಪ್ರಾದೇಶಿಕ ಮಹಾಶಕ್ತಿಯೆಂಬಂತೆ ವರ್ತಿಸುತ್ತದೆ. ನಮ್ಮದು ಪರಮಾಣು ಶಸ್ತ್ರಾಸ್ತ್ರ ದೇಶ, ನಮ್ಮನ್ನು ನಾವು ಹೇಗೆ ರಕ್ಷಿಸಿಕೊಳ್ಳಬೇಕೆಂದು ನಮಗೆ ಗೊತ್ತಿದೆ ಎಂದು ಸರ್ತಾಜ್ ಅಜೀಜ್ ಹೇಳಿರುವುದಾಗಿ ಉಲ್ಲೇಖಿಸಿದೆ.
ಭದ್ರತಾ ಸಲಹೆಗಾರರ ಮಟ್ಟದ ಮಾತುಕತೆ ಮುರಿದುಬಿದ್ದ ನಂತರ, ತನ್ನ ತಂತ್ರ ನಡೆಯುವುದಿಲ್ಲ ಎಂಬುದನ್ನು ಭಾರತ ಅರ್ಥ ಮಾಡಿಕೊಳ್ಳಬೇಕು. ಪಾಕಿಸ್ತಾನದೊಂದಿಗಿನ ಮಾತುಕತೆಯಲ್ಲಿ ಭಾರತ ಪ್ರಾಮಾಣಿಕತೆ ತೋರಿಸಬೇಕಿದೆ ಎಂದು ಪ್ರತಿಪಾದಿಸಿದ್ದಾರೆ.
ಕಾಶ್ಮೀರಿ ಆಕ್ರಮಿತ ಪ್ರದೇಶದ ಬಗ್ಗೆ ಭಾರತ ಜನಾಭಿಪ್ರಾಯ ಸಂಗ್ರಹಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಭಾರತ ಭಯೋತ್ಪಾದನೆಯಲ್ಲಿ ನಿರತವಾಗಿದೆ ಎಂಬುದಕ್ಕೆ ಪಾಕ್ ಬಳಿ ಸಾಕ್ಷ್ಯಾಧಾರಗಳಿವೆ. ಭಾರತಕ್ಕೆ ಪಾಕಿಸ್ತಾನದ ವಿರುದ್ಧ ಪ್ರಚಾರ ಮಾಡುವುದು ಮುಖ್ಯವಾಗಿದೆ ಎಂದು ಆಪಾದಿಸಿದರು.
ಅನೇಕ ಅನುಮಾನ, ವಾದ-ವಿವಾದಗಳ ನಂತರ ಎರಡೂ ಕಡೆಯವರು ತಮ್ಮ ಹಠವನ್ನು ಬಿಡದಿದ್ದ ಹಿನ್ನೆಲೆಯಲ್ಲಿ ಭಾರತ-ಪಾಕ್ ಮಧ್ಯದ ಭದ್ರತಾ ಸಲಹೆಗಾರರ ಮಟ್ಟದ ಮಾತುಕತೆ ಕೊನೆಗೂ ಶನಿವಾರ ರಾತ್ರಿ ಮುರಿದು ಬಿದ್ದಿತ್ತು.
ಷರತ್ತನ್ನು ಮುಂದಿಟ್ಟುಕೊಂಡು ಮಾತುಕತೆ ಮುಂದುವರಿಸಿದರೆ ಅದರಿಂದ ಯಾವುದೇ ಉದ್ದೇಶ ಈಡೇರಲು ಸಾಧ್ಯವಿಲ್ಲ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.