ವಿದೇಶ

ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಮತ್ತೆ ರಾಜಕೀಯಕ್ಕೆ?

Srinivas Rao BV

ಲಾಹೋರ್: ಪಾಕಿಸ್ತಾನ ಮಾಜಿ ಸರ್ವಾಧಿಕಾರಿ, ಪರ್ವೇಜ್ ಮುಷರಫ್ ರಾಜಕೀಯಕ್ಕೆ ಮರಳುವ ಸಾಧ್ಯತೆ ಇದೆ. ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ವಿರುದ್ಧ ಮುಸ್ಲಿಂ ಲೀಗ್ ನ ಒಕ್ಕೂಟ ಹೊಸ ಪಕ್ಷವನ್ನು ಸ್ಥಾಪಿಸಲು ಸಿದ್ಧತೆ ನಡೆಸಿದ್ದು, ಇದಕ್ಕೆ ಮುಷರಫ್ ಅಧ್ಯಕ್ಷರಾಗುವ ಸಾಧ್ಯತೆ ಇದೆ.

ಪಾಕಿಸ್ತಾನದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ನಡೆಯುವ ಸಂದರ್ಭದಲ್ಲಿ ಈ ರಾಜಕೀಯ ಸ್ಥಿತ್ಯಂತರ ನಡೆಯುವ ಸೂಚನೆ ಕಂಡುಬಂದಿದೆ. ನವಾಜ್ ಷರೀಫ್ ಅವರ ಪಾಕಿಸ್ತಾನದ ಆಡಳಿತ ಪಕ್ಷ ಪಿಎಂಎಲ್ ವಿರುದ್ಧ ಎಲ್ಲಾ ಮುಸ್ಲಿಂ ಲೀಗ್ ಸಂಘಟನೆಗಳು ಒಗ್ಗೂಡಿ ಪಕ್ಷ ಕಟ್ಟುವ ತಯಾರಿ ನಡೆಸಿವೆ.

ಮುಷರಫ್ ಅವರನ್ನು ಭೇಟಿ ಮಾಡಿರುವ ಪಿಎಂಎಲ್-ಕ್ಯೂ ಪಕ್ಷದ ಅಧ್ಯಕ್ಷ ಚೌಧರಿ ಶೌಜಾತ್ ಹುಸೇನ್ ಎಲ್ಲಾ ಮುಸ್ಲಿಂ ಲೀಗ್ ಪಕ್ಷಗಳನ್ನು ವಿಲೀನಗೊಳಿಸುವ ಬಗ್ಗೆ ಮಾತುಕತೆ ನಡೆಸಿದ್ದಾರೆ. ಮುಷರಫ್ ಹಾಗೂ ಮುಸ್ಲಿಂ ಲೀಗ್ ಪಕ್ಷದ ಇನ್ನಿತರ ನಾಯಕರನ್ನು ಭೇಟಿ ಮಾಡಿದ್ದೆ.ಎಲ್ಲರೂ ವಿಲೀನ ಪ್ರಕ್ರಿಯೆಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ.  

ಈ ವರ್ಷಾಂತ್ಯದ ವೇಳೆಗೆ ನಡೆಯಲಿರುವ ಸ್ಥಳಿಯ ಸಂಸ್ಥೆ ಚುನಾವಣೆಗೂ ಮುನ್ನ ವಿಲೀನ ಪ್ರತಿಕ್ರಿಯೆ ಪೂರ್ಣಗೊಂಡು ಮುಷರಫ್ ನೇತೃತ್ವದಲ್ಲಿ ಹೊಸ ಪಕ್ಷ ಅಸ್ತಿತ್ವಕ್ಕೆ ಬರುವ ಸಾಧ್ಯತೆ ಇದೆ ಎಂದು ಶೌಜಾತ್ ಹುಸೇನ್ ತಿಳಿಸಿದ್ದಾರೆ. ಮುಷರಫ್ ನೇತೃತ್ವದಲ್ಲಿ ನವಾಜ್ ಷರೀಫ್ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಬಹುದೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.

SCROLL FOR NEXT