ವಿದೇಶ

ಪೇಶಾವರದ ಶಾಲೆ ಮೇಲೆ ದಾಳಿ ನಡೆಸಿದ್ದ 4 ಉಗ್ರರನ್ನು ಗಲ್ಲಿಗೇರಿಸಿದ ಪಾಕಿಸ್ತಾನ

Srinivas Rao BV

ಇಸ್ಲಾಮಾಬಾದ್: ಕಳೆದ ವರ್ಷ ಪೇಶಾವರದ ಶಾಲೆ ಮೇಲೆ ನಡೆದಿದ್ದ ಉಗ್ರರ ದಾಳಿಯಲ್ಲಿ ಭಾಗಿಯಾಗಿದ್ದ ನಾಲ್ವರನ್ನು ಪಾಕಿಸ್ತಾನ ಗಲ್ಲಿಗೆರಿಸಿದೆ.
ಪೇಶಾವರದ ಆರ್ಮಿ ಶಾಲೆ ಮೇಲೆ ದಾಳಿ ನಡೆಸಿದ್ದ ಉಗ್ರರ ಪೈಕಿ 4 ಉಗ್ರರನ್ನು ಕೊಹಾಟ್ ಜಿಲ್ಲೆಯ ಜೈಲಿನಲ್ಲಿ ಮರಣದಂಡನೆ ಶಿಕ್ಷೆ ಜಾರಿಗೊಳಿಸಲಾಗಿದೆ ಎಂದು ಪೇಶಾವರದ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಮಾನುಷ ಕೃತ್ಯ ಎಸಗಿದ್ದ ಉಗ್ರರನ್ನು ಗಲ್ಲಿಗೇರಿಸುತ್ತಿರುವುದು ಇದೇ ಮೊದಲಾಗಿದೆ.
ಉಗ್ರರಿಗೆ ವಿಧಿಸಲಾಗಿದ್ದ ಮರಣದಂಡನೆ ಶಿಕ್ಷೆಯ ವಾರೆಂಟ್ ಗಳಿಗೆ ನವೆಂಬರ್.30 ರಂದೇ ಪಾಕಿಸ್ತಾನದ ಸೇನಾ ಮುಖ್ಯಸ್ಥ ರಹೀಲ್ ಶರೀಫ್ ಸಹಿ ಹಾಕಿದ್ದರು. ಇದಕ್ಕೂ ಮುನ್ನ ಉಗ್ರರಾದ ಮೌಲ್ವಿ ಅಬ್ದುಸ್ ಸಲಾಮ್, ಹಜರತ್ ಅಲಿ, ಮುಜೀಬ್ ಉರ್ ರೆಹಮಾನ್ ಮತ್ತು ಸಬೀಲ್ ಕ್ಷಮಾದಾನ ಅರ್ಜಿಯನ್ನು ತಿರಸ್ಕೃತಗೊಳಿಸಲಾಗಿತ್ತು.
ಶಾಲೆಯಲ್ಲಿ ದಾಳಿ ನಡೆಸುವುದಕ್ಕೆ ದೇಣಿಗೆ ಸಂಗ್ರಹಿಸಿದ್ದ ಆರೋಪದಡಿ ಹಜರತ್ ಅಲಿ ಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು. ನಜೀಬ್ ಉಲ್ಲಾ ಆತ್ಮಾಹುತಿ ಬಾಂಬರ್ ಗಳನ್ನು ಸಾಗಣೆ ಮಾಡಿದ್ದರೆ ಸಬೀಲ್ ನೇರವಾಗಿ ದಾಳಿ ಮಾಡಿದ್ದ.
ಗಲ್ಲುಶಿಕ್ಷೆಗೆ ವಿಧಿಸಲಾದ ತೋಹಿದ್ವಾಲ್ ಜಿಹಾದ್ ಗುಂಪಿಗೆ ಸೇರಿದವರಾಗಿದ್ದ ನಾಲ್ವರು ಉಗ್ರರು ದಾಳಿ ನಡೆಸಿರುವುದನ್ನು ಒಪ್ಪಿಕೊಂಡಿದ್ದರು. 2014 ರ ಡಿಸೆಂಬರ್ 16 ರಂದು ನಡೆದ ದಾಳಿಯಲ್ಲಿ ವಿದ್ಯಾರ್ಥಿಗಳು ಸೇರಿದಂತೆ 150 ಜನರು ಸಾವನ್ನಪ್ಪಿದ್ದರು.

SCROLL FOR NEXT