ವಾಷಿಂಗ್ಟನ್: ಕ್ಯಾಲಿಫೋರ್ನಿಯಾದಲ್ಲಿ ಗುಂಡಿನ ದಾಳಿ ನಡೆದ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಶ್ವೇತ ಭವನ ತಿಳಿಸಿದೆ.
ಭಯೋತ್ಪಾದನೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಬರಾಕ್ ಒಬಾಮ ಮಾತನಾಡಲಿದ್ದು, ಡಿ.2 ರಂದು ಕ್ಯಾಲಿಫೋರ್ನಿಯಾದಲ್ಲಿ ನಡೆದ ದಾಳಿ ಪ್ರಕರಣದ ತನಿಖೆ ಪ್ರಗತಿಯ ಬಗ್ಗೆ ಮಾಹಿತಿ ನೀಡಲಿದ್ದಾರೆ. ಅಮೆರಿಕ ಅಧ್ಯಕ್ಷ ಆದ್ಯತೆಯಾದ ಅಮೆರಿಕ ಜನರ ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಭಯೋತ್ಪಾದನೆ ನಿಗ್ರಹಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಮೆರಿಕದ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇಸ್ಲಾಮಿಕ್ ಸ್ಟೇಟ್ ಉಗ್ರರ ನಿರ್ನಾಮಕ್ಕೆ ಅಮೆರಿಕ ಬದ್ಧವಾಗಿದೆ ಎಂದು ಅಮೆರಿಕದ ಶ್ವೇತ ಭವನ ಪುನರುಚ್ಚರಿಸಿದೆ. ಡಿ.2 ರಂದು ಕ್ಯಾಲಿಫೋರ್ನಿಯಾದಲ್ಲಿ ಉಗ್ರರು ದಾಳಿ ನಡೆಸಿದ್ದರು. ದಾಳಿಯ ಹಿಂದೆ ಇಸಿಸ್ (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಸಿರಿಯಾ) ಹಾಗೂ ಅಲ್ ಕೈದಾ ನಂಟಿದೆ ಎಂದು ಅಮೆರಿಕದ ಉಗ್ರ ವಿಷಯ ತಜ್ಞರು ಶಂಕಿಸಿದ್ದಾರೆ.