ಬೀಜಿಂಗ್: ಬೀಜಿಂಗ್ ನಲ್ಲಿ ಕಳವಳಕಾರಿಯಾಗಿ ಹೆಚ್ಚಿರುವ ವಾಯುಮಾಲಿನ್ಯದ ಹೊಗೆಯಿಂಗಾಗಿ ತುರ್ತು ಕಾರ್ಯಾಚರಣೆ ಕೈಗೆತ್ತಿಕೊಂಡಿರುವ ಸರ್ಕಾರ ಕನಿಷ್ಠ ೨ ದಶಲಕ್ಷ ವಾಹನಗಳನ್ನು ರಸ್ತೆಗೆ ಇಳಿಯದಂತೆ ತಡೆದಿದೆ.
ದಟ್ಟ ಕಪ್ಪು ಬಣ್ಣದ ಹೊಗೆ ಮಿಶ್ರಿತ ಗಾಳಿ ಚೈನಾದ ರಾಜಧಾನಿಯಾದ್ಯಂತ ಮಂಗಳವಾರ ಕಂಡುಬಂದಿದ್ದು ಮಂಗಳವಾರ ಮಧ್ಯಾಹ್ನದಿಂದ ಗುರುವಾರದವರೆಗೆ ಈ ಕಾರ್ಯಾಚರಣೆ ಮುಂದುವರೆಯಲಿದೆ.
ಗಾಳಿಯ ಸಾಂದ್ರತೆ ಪಿಎಮ್ ೨.೫ ಇದ್ದು ಇದು ಕ್ಯೂಬಿಕ್ ಮೀಟರ್ ಗೆ ೨೩೪ ಮೈಕ್ರೋ ಗ್ರಾಂನಷ್ಟು ಹಚ್ಚು ಮಾಲಿನ್ಯ ಇದೆ ಎನ್ನಲಾಗಿದೆ.
ಶಾಲೆಗಳನ್ನು ಮುಚ್ಚಲಾಗಿದ್ದು, ಹೊರವಲಯದಲ್ಲಿ ಕಟ್ಟಡಗಳ ನಿರ್ಮಾಣವನ್ನು ತಡೆಯಲಾಗಿದೆ ಹಾಗೂ ಕಾರ್ಖಾನೆಗಳಲ್ಲಿ ಕೆಲಸ ಮಾಡದಂತೆ ನಿರ್ಭಂಧನೆ ಹಾಕಲಾಗಿದೆ. ಅಲ್ಲದೆ ಹಲವಾರು ಹೈವೇಗಳನ್ನು ಮುಚ್ಚಲಾಗಿದೆ.
ಸರಿ ಬೆಸ ಸಂಖ್ಯೆಯ ನೊಂದಣಿ ಸಂಖ್ಯೆ ಆಧಾರದ ಮೇಲೆ ಬದಲಿ ದಿನ ನಿರ್ಬಂಧನೆ ಏರಿರುವುದು ಸುಮಾರು ೨ ದಶಲಕ್ಷ ವಾಹನಗಳನ್ನು ರಸ್ತೆಗೆ ಇಳಿಯದಂತೆ ತಡೆದಿದೆ. ಅಲ್ಲದೆ ೩೦% ಸರ್ಕಾರಿ ವಾಹನಗಳನ್ನು ಓಡಾಡದಂತೆ ನೋಡಿಕೊಳ್ಳಲಾಗಿದೆ.
ಸಾರ್ವಜನಿಕ ಸಾರಿಗೆಯಲ್ಲೂ ಹೆಚ್ಚಿನ ಜನರಿಗೆ ಅವಕಾಶ ನೀಡಲು ಬೀಜಿಂಗ್ ಸಾರಿಗೆ ಅಧಿಕಾರಿಗಳು ಅವಿರತವಾಗಿ ಶ್ರಮಿಸುತ್ತಿದ್ದಾರೆ. 800 ಹೆಚ್ಚುವರಿ ಬಸ್ಸುಗಳನ್ನು ಸಾರ್ವಜನಿಕ ಪ್ರಯಾಣಕ್ಕೆ ಸೇರಿಸಲಾಗಿದೆ.